Asianet Suvarna News Asianet Suvarna News

ಹುಚ್ಚು ಅಭಿಮಾನಿಗೆ ಸೂಪರ್‌ಸ್ಟಾರ್‌ ಬಹಿರಂಗ ಪತ್ರ

ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬ ಆಚರಿಸಿಲ್ಲ ಎಂದು ಅಭಿಮಾನಿ ಆತ್ಮಹತ್ಯೆ | ಈ ಘಟನೆಯಿಂದ ಮನನೊಂದ ಯಶ್ ಅಭಿಮಾನಿಗಳಲ್ಲಿ ಮನವಿ | ಆತ್ಮಹತ್ಯೆಯೇ ಎಲ್ಲದಕ್ಕೂ ಪರಿಹಾರವಲ್ಲ ಎಂದು ಬಹಿರಂಗ ಪತ್ರ ಬರೆದ ಯಶ್. 

Sandalwood superstar Yash open letter to fans
Author
Bengaluru, First Published Jan 11, 2019, 9:10 AM IST

ಹುಚ್ಚು ಅಭಿಮಾನಿಗಳೇ,

ನೀನೆಂದರೆ ನನಗೆ ಇಷ್ಟ. ನೀನು ನನ್ನ ಅನ್ನದಾತ. ನೀನಿಲ್ಲದೆ ನಾನಿಲ್ಲ. ನಿನ್ನನ್ನು ನೋಡುವುದಕ್ಕೆ ನಾನು ಕಾಯುತ್ತಿರುತ್ತೇನೆ. ನೀನು ನನಗೆ ಶುಭಾಶಯ ಕೋರಲು ಬಂದರೆ, ನೀನು ನನ್ನ ಸಿನಿಮಾ ನೋಡಿದರೆ, ನೀನು ನನ್ನ ಬಗ್ಗೆ ಜೈಕಾರ ಹಾಕಿದರೆ ನನಗೆ ಸಂತೋಷವಾಗುತ್ತದೆ.

ಹಾಗೆ ಮಾಡುವುದರಲ್ಲಿ ತಪ್ಪೇನೂ ಇಲ್ಲ. ಅನಾದಿಕಾಲದಿಂದಲೂ ನಿನ್ನಂಥ ಅಭಿಮಾನಿಗಳಿದ್ದರು. ಹರಿಶ್ಚಂದ್ರ ಕಾಡಿಗೆ ಹೋಗುವಾಗ ನಾಡಿನ ಜನರೆಲ್ಲ ಕಣ್ಣೀರು ಹಾಕಿದ್ದರು. ಶ್ರೀರಾಮಚಂದ್ರ ವನವಾಸಕ್ಕೆ ಹೊರಟು ನಿಂತಾಗ ತಾವೂ ಬರುತ್ತೇವೆ ಎಂದು ಪ್ರಜಾಭಿಮಾನಿಗಳು ಹಿಂದೆ ಬಿದ್ದಿದ್ದರು. ಈ ಕಾಲದಲ್ಲೂ ನಮ್ಮಂಥ ಸ್ಟಾರುಗಳಿಗೆ ನಿಮ್ಮಂಥ ಅಭಿಮಾನಿಗಳು ಇದ್ದೀರಿ ಎಂಬುದು ಸಂತೋಷದ ಸಂಗತಿ. ಅಷ್ಟಕ್ಕೂ ನೀವು ಜಾತಿ, ಮತ, ಧರ್ಮ, ಪಂಥ, ಪಕ್ಷಗಳನ್ನು ನಂಬಿಕೊಂಡು ಅಭಿಮಾನಿಗಳಾದವರಲ್ಲ. ನಿಮಗೆ ಯಾವ ಸ್ವಾರ್ಥವೂ ಇಲ್ಲ. ನೀವು ನಿಜಕ್ಕೂ ಕಲಾಭಿಮಾನಿಗಳು. ನೀವು ನಮ್ಮಿಂದ ದುಡ್ಡು ಕೇಳುವುದಿಲ್ಲ, ಊಟ ಕೇಳುವುದಿಲ್ಲ. ಹೆಚ್ಚೆಂದರೆ ಒಂದು ಸೆಲ್ಫಿ ಕೇಳುತ್ತೀರಿ. ಒಂದು ಮುಗುಳುನಗೆ ಬಿಸಾಕಿದರೆ ಸಂತೋಷಪಡುತ್ತೀರಿ. ಕೈಕುಲುಕಿದರೆ ಧನ್ಯರಾಗುತ್ತೀರಿ. ನೀವೆಷ್ಟುಒಳ್ಳೆಯವರು ಎನ್ನುವುದು ನಮಗೆ ಚೆನ್ನಾಗಿ ಗೊತ್ತಿದೆ.

ಇಂಥ ಅಭಿಮಾನದಿಂದ ನಿಮಗೇನು ಲಾಭ ಎಂದು ನೀವು ಯಾವತ್ತೂ ಕೇಳಿಕೊಳ್ಳುವುದೇ ಇಲ್ಲ. ನಮಗೋಸ್ಕರ ಜಗಳ ಆಡುತ್ತೀರಿ, ಮತ್ತೊಬ್ಬ ಸೂಪರ್‌ಸ್ಟಾರ್‌ ಅಭಿಮಾನಿಗಳ ಜೊತೆ ಕಾದಾಡುತ್ತೀರಿ. ನಮ್ಮ ಮೇಲಿನ ಅಭಿಮಾನವನ್ನು ಕಾಪಾಡಿಕೊಳ್ಳಲು ಏನೆಲ್ಲ ಸಾಧ್ಯವೋ ಅದನ್ನೆಲ್ಲ ಮಾಡುತ್ತೀರಿ. ನೀವೊಂಥರ ದೇಶಭಕ್ತರಂತೆ, ಅಪ್ಪಟ ಪ್ರೇಮಿಯಂತೆ. ದೇಶಭಕ್ತನಿಗೆ ಯಾರಾದರೂ ತನ್ನ ದೇಶದ ಬಗ್ಗೆ ಕೆಟ್ಟಮಾತಾಡಿದರೆ ಸಿಟ್ಟು ಬರುತ್ತದಲ್ಲ, ಆಗ ಅವನು ಒಂದು ಕ್ಷಣದ ಮಟ್ಟಿಗಾದರೂ ಸೈನಿಕ ಆಗುತ್ತಾನೆ. ನೀವೂ ಹಾಗೆಯೇ. ಅಪ್ಪಟ ಪ್ರೇಮಿಗೆ ತಾನು ಪ್ರೇಮಿಸುವ ಜೀವದ ಬಗ್ಗೆ ಯಾರಾದರೂ ಏನಾದರೂ ಅಂದರೆ ರೋಷ ಉಕ್ಕಿ ಬರುತ್ತದಲ್ಲ, ನೀವೂ ಅದೇ ಥರ. ಆ ಕ್ಷಣ ನೀವು ಪ್ರೇಮಿಯಾಗುತ್ತೀರಿ. ಇದೆಲ್ಲ ಕೆಟ್ಟದ್ದಲ್ಲ. ಉಪ್ಪುಹುಳಿಕಾರ ತಿನ್ನುವ, ಕನ್ನಡ ಸಿನಿಮಾ ನೋಡುವ ಎಲ್ಲರಿಗೂ ಇರುವಂಥ ಗುಣಗಳೇ.

ಆದರೆ, ಅಭಿಮಾನ ಆತ್ಮವನ್ನು ಆವರಿಸಿಕೊಳ್ಳಬಾರದು. ಆತ್ಮಕ್ಕಿಂತ ಅಭಿಮಾನ ದೊಡ್ಡದು ಅಂತ ನೀವು ಯಾವತ್ತೂ ಭಾವಿಸಲೇಬಾರದು. ನಮ್ಮಂಥ ಸೂಪರ್‌ಸ್ಟಾರುಗಳು ಹುಟ್ಟುತ್ತಾರೆ, ಬೆಳೆಯುತ್ತಾರೆ, ಅಳಿಯುತ್ತಾರೆ. ಆದರೆ ಬದುಕು ಸಾಗುತ್ತಲೇ ಇರುತ್ತದೆ. ಹದಿನೆಂಟರಿಂದ ಇಪ್ಪತ್ತೊಂದರ ವಯಸ್ಸಿನಲ್ಲಿ ಕ್ರಾಂತಿಕಾರಿ ಆಗದವನು ಮನುಷ್ಯನೇ ಅಲ್ಲ, ಆಮೇಲೂ ಕ್ರಾಂತಿಕಾರಿಯಾಗಿಯೇ ಉಳಿಯುವವನು ಕೂಡ ಮನುಷ್ಯನಲ್ಲ ಎಂಬ ಮಾತಿದೆ. ಅಭಿಮಾನಕ್ಕೂ ಅದೇ ಮಾತು ಹೊಂದುತ್ತದೆ. ನಿಮ್ಮ ಅಭಿಮಾನ ಹದಿಹರೆಯ ದಾಟಿ, ಸುಮಾರು ಮೂವತ್ತು ವರ್ಷದ ತನಕ ಇದ್ದೀತು. ಆಮೇಲೆ ಬದುಕು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ನೀವು ಬದುಕನ್ನು ಹುಡುಕುತ್ತಾ ಹೋಗುತ್ತೀರಿ. ಅಭಿಮಾನಕ್ಕಿಂತ ಮಾನಾಭಿಮಾನ ದೊಡ್ಡದು ಅನ್ನುವುದು ನಿಮಗೂ ಗೊತ್ತಾಗುತ್ತದೆ. ಅಲ್ಲಿಯ ತನಕ ಸೈರಿಸಿಕೊಳ್ಳಿ.

ನಿಜ ಹೇಳಬೇಕೆಂದರೆ ನೀವೇ ನಿಜವಾದ ಸೂಪರ್‌ಸ್ಟಾರ್‌. ನಿಮ್ಮನ್ನು ಜೀವಕ್ಕಿಂತ ಹೆಚ್ಚು ಪ್ರೀತಿಸುವ ಅಪ್ಪ, ಅಪ್ಪ, ಅಕ್ಕ, ತಂಗಿ, ತಮ್ಮ, ಅಣ್ಣ, ಚಿಕ್ಕಪ್ಪ, ದೊಡ್ಡಮ್ಮ, ಅತ್ತೆ, ಭಾವ, ಗೆಳೆಯರೆಲ್ಲರೂ ಇರುತ್ತಾರೆ. ಅವರು ನಿಮ್ಮನ್ನು ಹೀರೋ ಥರ ನೋಡುತ್ತಿರುತ್ತಾರೆ. ಮದುವೆ ಆಗಿದ್ದರಂತೂ ನಿಮ್ಮ ಸಂಗಾತಿಗೇ ನೀವೇ ಸರ್ವಸ್ವ. ನೀವು ಬರೀ ಹೀರೋ ಮಾತ್ರ ಅಲ್ಲ, ಎಲ್ಲವೂ ಹೌದು. ಮಕ್ಕಳು ನಿಮ್ಮನ್ನು ಥೇಟ್‌ ಹೀರೋ ಥರ ನೋಡುತ್ತಾರೆ. ನಿಮ್ಮ ಮಕ್ಕಳೋ, ಸಂಗಾತಿಯೋ, ಗೆಳೆಯರೋ, ಸಂಬಂಧಿಕರೋ ನೀವು ಮಾತಿಗೆ ಸಿಗಲಿಲ್ಲ ಅಂತ ಪ್ರಾಣ ಕಳಕೊಂಡರೆ ನಿಮಗೆ ಹೇಗನ್ನಿಸುತ್ತದೆ ಅಂತ ಒಮ್ಮೆ ಯೋಚಿಸಿ. ಸಂಕಟ ಆಗುತ್ತದೆ ಅಲ್ಲವೇ. ಹಾಗಿದ್ದರೆ ಎಚ್ಚರಿಕೆಯಿಂದ ವರ್ತಿಸಿ.

ನೀವು ಪ್ರಾಣ ಕಳಕೊಂಡರೆ ನಮಗೂ ನೋವಾಗುತ್ತದೆ. ನಿಮ್ಮ ಪ್ರಾಣ ಕೊಟ್ಟತಕ್ಷಣ ನಾವು ಸಂತೋಷವಾಗಿರುತ್ತೇವೆ ಎಂದು ನೀವಾದರೂ ಹೇಗೆ ಭಾವಿಸುತ್ತೀರಿ. ನೀವು ಸುಖದಿಂದ, ಖುಷಿಯಿಂದ, ಆರೋಗ್ಯದಿಂದ ಇರುವುದೇ ನೀವು ಅಭಿಮಾನಕ್ಕೆ ಸಲ್ಲಿಸುವ ನಿಜವಾದ ಗೌರವ. ನಿಮ್ಮ ಅಭಿಮಾನವನ್ನು ನಾವೂ ಅಭಿಮಾನಿಸುವಂತೆ ಬದುಕಿ, ವರ್ತಿಸಿ, ಪ್ರೀತಿಸಿ. ಅದು ನಮಗೆ ಹೊರೆಯಾಗುವುದು, ಕೋಳವಾಗುವುದು, ಹಿಂಸೆಯಾಗುವುದು ಬೇಡ.

ಅಭಿಮಾನ ಇಬ್ಬರನ್ನೂ ಬೆಳೆಸಬೇಕು. ಭಕ್ತಿ ದೇವರಿಗೂ ಭಕ್ತರಿಗೂ ಇಬ್ಬರಿಗೂ ನೆಮ್ಮದಿ ಕೊಡಬೇಕು. ಅತಿಯಾದರೆ ಎಲ್ಲವೂ ಹಿಂಸೆಯೇ. ನೀವು ಪ್ರಾಣಾರ್ಪಣೆ ಮಾಡುತ್ತೇನೆ ಎಂದಾಕ್ಷಣ ನಿಮ್ಮೊಳಗಿನ ಅಭಿಮಾನಿ ಸತ್ತು ಹೋಗುತ್ತಾನೆ, ಒಬ್ಬ ಮೂರ್ಖ ಮಾತ್ರ ನಿಮ್ಮೊಳಗೆ ಉಳಿಯುತ್ತಾನೆ. ಅಂಥ ಮೂರ್ಖ ಅಭಿಮಾನದಿಂದ ಯಾರಿಗೆ ತಾನೇ ಪ್ರಯೋಜನ.

ಅಭಿಮಾನ ಒಳ್ಳೆಯದು, ಹುಚ್ಚು ಕೆಟ್ಟದ್ದು. ಅಭಿಮಾನ ಮತ್ತು ಹುಚ್ಚು ಎರಡೂ ಸೇರಿದರೆ ಮತ್ತೂ ಕೆಟ್ಟದು. ಹಾಗೆಯೇ ಅಭಿಮಾನ ಮತ್ತು ಎಣ್ಣೆ ಎರಡೂ ಸೇರಿದರೆ ಅನಾಹುತ ಆಗುತ್ತದೆ. ಭಗ್ನಪ್ರೇಮ ಮತ್ತು ಎಣ್ಣೆ ಸೇರಿದಾಗ ಆಗುವಂಥದ್ದೇ ತಪ್ಪುಗಳಾಗುತ್ತವೆ. ಹೀಗಾಗಿ ಅಭಿಮಾನಿಯಾಗಿದ್ದರೆ ಕುಡಿಯುವುದು ಬಿಡಿ, ಕುಡಿದ ನಂತರ ಅಭಿಮಾನ ಬಿಡಿ. ನಿಮ್ಮ ಜೀವನ ಕಾಳಜಿ ನೋಡಿಕೊಳ್ಳಿ.

ಅಭಿಮಾನಿಗಳು ದೇವರು ಅಂತ ಅಣ್ಣಾವ್ರು ಹೇಳಿದ್ದರು. ದೇವರುಗಳು ಸಾಯಬಾರದು. ನಿಜವಾದ ಅಭಿಮಾನ ಎಲ್ಲಿದ್ದರೂ ಹೇಗಿದ್ದರೂ ಇದ್ದೇ ಇರುತ್ತದೆ. ಅದನ್ನು ನೀವು ನಮ್ಮ ಮನೆಯ ಮುಂದೆ ಬಂದು, ಕೇಕ್‌ ತಂದು, ಹಾರ ತಂದು, ಹಾಲು ಸುರಿದು ತೋರಿಸಬೇಕಾಗಿಲ್ಲ. ನಮಗೂ ನಮ್ಮ ಬದುಕಿದೆ. ನಾವು ಸಂತೋಷವಾಗಿದ್ದೇವೆ. ನಮ್ಮ ವೃತ್ತಿಯಿಂದ ಎಷ್ಟುದುಡಿಯಬಹುದೋ ಅಷ್ಟುದುಡಿದುಕೊಂಡಿದ್ದೇವೆ. ಒಂದು ಕಾಲದಲ್ಲಿ ನಾವೂ ಮತ್ತೊಬ್ಬ ಸೂಪರ್‌ಸ್ಟಾರ್‌ ಅಭಿಮಾನಿಗಳಾಗಿಯೇ ಇದ್ದವರು. ಅವರನ್ನು ನೋಡಿ ನಾವು ಬಾಳುವುದು ಕಲಿತೆವು, ಗೆಲ್ಲುವುದು ಕಲಿತೆವು. ಅವರಿಗೋಸ್ಕರ ಸಾಯಲಿಲ್ಲ.

ನೀವೂ ನಮ್ಮನ್ನು ನೋಡಿ ಬದುಕನ್ನು ಎದುರಿಸಿ ಎತ್ತರಕ್ಕೇರುವುದನ್ನು ಕಲಿಯಿರಿ. ಅದೇ ನಮ್ಮೆಲ್ಲರ ಮನವಿ.

ಇಂತೀ ನಿನ್ನ

ಸೂಪರ್‌ಸ್ಟಾರ್‌

Follow Us:
Download App:
  • android
  • ios