ದಿ ವಿಲನ್ ದರ ಬಲು ದುಬಾರಿ | ಮೇಕಿಂಗ್‌ನಷ್ಟೇ ಟಿಕೆಟ್ ದರವೂ ಆಗಿದೆ ದುಬಾರಿ | ಬೆಲೆ ಕೇಳಿದ್ರೆ ಹುಬ್ಬೇರಿಸುವುದು ಗ್ಯಾರಂಟಿ | 

ಬೆಂಗಳೂರು (ಅ. 10): ದೊಡ್ಡ ಸಿನಿಮಾಗಳಿಗೆ ದೊಡ್ಡ ಬೆಲೆ! ಇಲ್ಲಿಯ ತನಕ ಕೇವಲ ಪರಭಾಷಾ ಚಿತ್ರಗಳಿಗೆ ಸೀಮಿತವಾಗಿದ್ದ ಈ ತರ್ಕವನ್ನು ಇದೀಗ ಕನ್ನಡ ಚಿತ್ರಕ್ಕೂ ಅನ್ವಯಿಸಲು ವಿತರಕರೂ ನಿರ್ಮಾಪಕರೂ ಸೇರಿ ನಿರ್ಧಾರ ಮಾಡಿದ್ದಾರೆ. ಈ ಟಿಕೆಟ್ ರೇಟ್ ಹೆಚ್ಚಳ ಎಂಬ ವಿಲನ್ ಕನ್ನಡ ಪ್ರೇಕ್ಷಕರಿಗೆ ದಿ ವಿಲನ್ ಚಿತ್ರದ ಮೂಲಕವೇ ಪರಿಚಯ ಆಗುತ್ತಿರುವುದು ಮಾತ್ರ ಕಾಕತಾಳೀಯ.

ಅಕ್ಟೋಬರ್ 18 ರಂದು ತೆರೆಕಾಣಲಿರುವ ದಿ ವಿಲನ್ ಚಿತ್ರ ಬಿಗ್ ಬಜೆಟ್ ಸಿನಿಮಾ. ಚಿತ್ರದ ಬಗ್ಗೆ ಇರುವ ನಿರೀಕ್ಷೆ ಕೂಡ ಬಿಗ್! ಅದನ್ನೇ ಕ್ಯಾಶ್ ಮಾಡಲು ಹೊರಟಿರುವ ಚಿತ್ರತಂಡ ಚಿತ್ರಮಂದಿರಗಳ ಪ್ರವೇಶ ದರವನ್ನೂ ಇದ್ದಕ್ಕಿದ್ದಂತೆ ಏರಿಸಿದೆ. ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಬಾಲ್ಕನಿಯ ದರ 50 ರೂಪಾಯಿ ಮತ್ತು ಸೆಕೆಂಡ್ ಕ್ಲಾಸ್ ದರ 18 ರೂಪಾಯಿ ಏರಿಕೆ ಕಂಡಿದೆ.

ಈ ಏರಿಕೆಯಿಂದಾಗಿ ಬಾಲ್ಕನಿ ಪ್ರೇಕ್ಷಕರು 200 ರೂಪಾಯಿ, ಸೆಕೆಂಡ್ ಕ್ಲಾಸ್‌ಗೆ ಹೋಗುವವರು 118 ರೂಪಾಯಿ ಕೊಟ್ಟು ಸಿನಿಮಾ ನೋಡಬೇಕು! ಮಲ್ಟಿಪ್ಲೆಕ್ಸ್‌ಗಳಲ್ಲಿ ಬುಕಿಂಗ್ ಇನ್ನೂ ಆರಂಭವಾಗಿಲ್ಲ. ಆದರೆ ಈಗಿರುವ ಸುದ್ದಿಯ ಪ್ರಕಾರ ಮಲ್ಟಿಪ್ಲೆಕ್ಸ್ ಟಿಕೆಟ್ ದರ 400 ರುಪಾಯಿ ನಿಗದಿ ಆಗಲಿದೆ. ಇದಕ್ಕೆ ಪ್ರೇಕ್ಷಕರಿಗೆ ವಿರೋಧವೂ ವ್ಯಕ್ತವಾಗಿದೆ.

ಆದರೆ ವಿತರಕರು ಈ ಬೆಲೆ ಏರಿಕೆಯನ್ನು ಹೀಗೆ ಸಮರ್ಥಿಸಿಕೊಳ್ಳುತ್ತಾರೆ. ‘ಕನ್ನಡ ಸಿನಿಮಾಗಳ ಮಾರುಕಟ್ಟೆ ಮೊದಲೇ ಸೀಮಿತ. ಪರಭಾಷಾ ಚಿತ್ರಗಳಿಗೆ ಕನ್ನಡಿಗರೇ ಹೆಚ್ಚುವರಿ ದುಡ್ಡು ಕೊಟ್ಟು ಸಿನಿಮಾ ನೋಡುವುದು ಹೊಸತೇನಲ್ಲ. ಅದಕ್ಕೆ ಹೋಲಿಸಿದರೆ, ಇದೊಂದು ಹೆಚ್ಚಳವೇ ಅಲ್ಲ. ಅದ್ಧೂರಿ ವೆಚ್ಚದಲ್ಲಿ ಸಿನಿಮಾ ಮಾಡಿದಾಗ ಅದನ್ನು ವಾಪಸ್ ಪಡೆಯುವುದು ಹೇಗೆ ಅನ್ನೋದು ನಿರ್ಮಾಪಕರ ಆತಂಕ. ಹಾಗಾಗಿ ಪ್ರೇಕ್ಷಕರಿಗೆ ಹೊರೆಯಾಗದಂತೆ ಒಂದಷ್ಟು ಟಿಕೆಟ್ ದರ ಹೆಚ್ಚಿಸುವುದು ಅನಿವಾರ್ಯ’ ಎನ್ನುತ್ತಾರೆ ವಿತರಕ ಜಾಕ್ ಮಂಜು.

ಕೇವಲ ನಾಲ್ಕು ದಿನದ ಮಟ್ಟಿಗೆ ಬೆಂಗಳೂರಿಗೆ ಮಾತ್ರ ದರ ಹೆಚ್ಚಿಸುವ ನಿರ್ಧಾರ ತಂಡದ್ದು. ಬಾಹುಬಲಿ, ಕಬಾಲಿ, ಸಂಜು ಮುಂತಾದ ಪರಭಾಷಾ ಚಿತ್ರಗಳನ್ನು ದುಬಾರಿ ಬೆಲೆ ಕೊಟ್ಟು ನೋಡುವ ಪ್ರೇಕ್ಷಕ ಕನ್ನಡ ಚಿತ್ರದ ಮಟ್ಟಿಗೂ ಉದಾರಿಯಾಗಲಿ ಎನ್ನುವುದು ಮಂಜು ಅವರ ಅಭಿಪ್ರಾಯ. ಆ ಚಿತ್ರಗಳ ಹಾಗೆ ಕನ್ನಡ ಚಿತ್ರಗಳೂ ಕೊಟ್ಟ ಹಣಕ್ಕೆ ಮೋಸ ಮಾಡದಿರಲಿ ಎಂಬುದು ಪ್ರೇಕ್ಷಕನ ಪ್ರಾರ್ಥನೆ!