ದಿ ವಿಲನ್‌ಗೆ ಶುರುವಾಯ್ತು ಕಂಟಕ | ಅಂಧ ಸಮುದಾಯದಿಂದ ಪ್ರತಿಭಟನಾ ಬೆದರಿಕೆ | 

ಬೆಂಗಳೂರು (ಅ. 17): ನಟ ಶಿವರಾಜ್‌ಕುಮಾರ್ ಹಾಗೂ ಸುದೀಪ್ ಅಭಿನಯದ ‘ದಿ ವಿಲನ್’ ಚಿತ್ರದ ಹಾಡಿನಲ್ಲಿ ‘ಗರುಡ್ನಂಗೆ ಇದ್ದೋನ್ ನೋಡ್ಲಾ ಕುರುಡ್ನಂಗ್ ಆಗೋದ್ನೋ’ ಎಂಬ ಸಾಲಿದೆ. ಅಲ್ಲಿಂದ ಕುರುಡ ಪದ ತೆಗೆಯದಿದ್ದರೆ ಚಿತ್ರ ಬಿಡುಗಡೆಯಂದು (ಅ.18) ನರ್ತಕಿ ಚಿತ್ರಮಂದಿರದ ಮುಂದೆ ಪ್ರತಿಭಟಿಸುವುದಾಗಿ ಅಂಧ ಸಮುದಾಯ ಎಚ್ಚರಿಕೆ ನೀಡಿದೆ.

ಅಂಧ ಸಮುದಾಯದ ಪ್ರತಿನಿಧಿ ಎಂ. ವೀರೇಶ್, ಈ ಹಾಡಿನಲ್ಲಿ ಬಳಸಿರುವ ಕುರುಡ ಎಂಬ ಪದವನ್ನು ತೆಗೆದು ಹಾಕಬೇಕು. ಚಲನಚಿತ್ರಗಳಲ್ಲಿ ಅಂಧತ್ವನ್ನು ಹೀನಾಯವಾಗಿ ಬಿಂಬಿಸುವುದನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿದರು. 

ತಮ್ಮ ಬೇಡಿಕೆಗೆ ಸೂಕ್ತ ಪ್ರತಿಕ್ರಿಯೆ ಸಿಗದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು. ಕಾಯ್ದೆ ಪ್ರಕಾರ ಯಾವುದೇ ವಿಕಲಚೇತನರ ನ್ಯೂನತೆಯನ್ನು ಎತ್ತಿ ತೋರಿಸಬಾರದು. ಅಂಧರ ಭಾವನೆಗಳಿಗೆ ಧಕ್ಕೆಯುಂಟಾಗಲು ಕಾರಣರಾದವರ ಬಗ್ಗೆ ಕಾನೂನು ಕ್ರಮಕ್ಕೆ ಅವಕಾಶವಿದೆ ಎಂದು ತಿಳಿಸಿದರು.