ಮದ್ವೆಯ ಅನುಭವವೇ ಅದ್ಭುತ....!
ಕೆಂಪು ಗಲ್ಲಗಳ ಮೇಲೆ ಕಡಲ ಅಲೆಗಳು ಎದ್ದಂತೆ ನಗೆಯ ಬುಗ್ಗೆಗಳನ್ನೆಬ್ಬಿಸಿ ಹೀಗೆಂದರು ಈ ಚೆಲುವೆ. ಹೆಸರು ಆರೋಹಿ ಗೌಡ. ಮೃದುವಾದ ಮಾತು, ಹಿತವಾದ ನಗೆ. ಅವರು ಹಾಗೆಂದು ನಕ್ಕಾಗ ಶುರುವಾದ ಅನುಮಾನ, ಇದು ಅವರದೇ ಮದ್ವೆ ಯ ಅನುಭವದ ಮಾತೇ ಅಂತ. ಆದರೆ, ಅದು ಹಾಗಲ್ಲ. ಇದೇ ಮೊದಲು ಅವರು ನಾಯಕಿಯಾಗಿ ಅಭಿನಯಿಸಿದ ‘ಮದ್ವೆ’ ಹೆಸರಿನ ಚಿತ್ರದ ಚಿತ್ರೀಕರಣದ ಅನುಭವದ ಕುರಿತ ಮಾತು. ಮೊನ್ನೆ ಮೊನ್ನೆ ಇದರ ಮೊದಲ ಟ್ರೇಲರ್ ಲಾಂಚ್ ಆಗಿದೆ. ಮಂಡ್ಯ ಭಾಷೆ, ಹಳ್ಳಿ ಪ್ರತಿಭೆಗಳೇ ಇರುವ ಈ ಟೀಸರ್ ವೈರಲ್ ಆಗಿದೆ. ಹಾಗೆ, ಸಣ್ಣಗೆ ತಣ್ಣಗೆ ಸುದ್ದಿ ಆಗುತ್ತಿರುವ ದುಂಡು ಮಲ್ಲಿಗೆಯಂತಹ ಈ ಚೆಲುವೆ ಮಾತಿಗೆ ಸಿಕ್ಕಾಗ ಊರು- ಕೇರಿ, ನಟನೆ ನಂಟು- ಅಂಟು... ಇತ್ಯಾದಿ ಸಂಗತಿ ಹಂಚಿಕೊಂಡರು.

ಯಾರು ಈ ಆರೋಹಿ ಗೌಡ?
ನಾನು ಮೈಸೂರು ಹುಡುಗಿ. ಹುಟ್ಟಿದ್ದು, ಬೆಳೆದಿದ್ದು ಎಲ್ಲವೂ ಮೈಸೂರು. ಬಿಎಸ್ಸಿ ಅನಿಮೇಷನ್ ಕೋರ್ಸ್ ಕಂಪ್ಲೀಟ್ ಆಗಿದೆ. ಓದೋದು ನಂಗೆ ಇಷ್ಟವಿರಲಿಲ್ಲ. ಅಪ್ಪನಿಗೋಸ್ಕರ ಓದಿದೆ. ಮಾಡೆಲಿಂಗ್ ಮೇಲೆ ಹೆಚ್ಚು ಆಸಕ್ತಿ. ಒಂದಷ್ಟು ರ‌್ಯಾಂಪ್‌ಗಳಲ್ಲಿ ಹೆಜ್ಜೆ ಹಾಕಿದೆ. ಹೆಸರು ಕೂಡ ಬಂತು. ಆ ಮೂಲಕವೇ ಸಿಕ್ಕಿದ್ದು ‘ಮದ್ವೆ’ ಚಿತ್ರದಲ್ಲಿ ಅಭಿನಯಿಸುವ ಅವಕಾಶ.

ನಟಿ ಆಗ್ತೇನೆ ಅಂತ ಅಂದುಕೊಂಡಿದ್ರಾ?
ಹಾಗೊಂದು ಕನಸಿತ್ತು ಅಷ್ಟೇ. ಸಹಜವಾಗಿಯೇ ಇಂತಹ ಆಸೆ, ಕನಸು ಎಲ್ಲರಿಗೂ ಇದ್ದೇ ಇರುತ್ತದೆ. ನಂಗೂ ಅದೇ ತರಹದ ಆಸೆ ಅನ್ನಿ. ಅದು ಇಷ್ಟು ಬೇಗ ಈಡೇರುತ್ತೆ ಅಂದುಕೊಂಡಿರಲಿಲ್ಲ. ಫ್ರೆಂಡ್ಸ್ ಮದ್ವೆ ಚಿತ್ರದ ಆಡಿಷನ್ ಬಗ್ಗೆ ಹೇಳಿದರು. ಡೈರೆಕ್ಟರ್ ಮೇಲ್ ಅಡ್ರೆಸ್‌ಗೆ ಫೋಟೋಸ್ ಕಳುಹಿಸಿದ್ದೆ. ಒಂದು ದಿನ ಆಡಿಷನ್‌ಗೆ ಬರಲು ಹೇಳಿದ್ದರು. ಅಲ್ಲಿಗೆ ಹೋದಾಗ ಆಡಿಷನ್ ಮೂಲಕ ನಾನೇ ‘ಮದ್ವೆ’ ಚಿತ್ರಕ್ಕೆ ಆಯ್ಕೆ ಆದಾಗ ನಿರ್ದೇಶಕರೇ ಮನೆಗೆ ಬಂದು ಅಪ್ಪನನ್ನು ಒಪ್ಪಿಸಿದ್ರು. ಹಾಗಾಗಿ ನಾನು ನಟಿಯಾದೆ.

ಚಿತ್ರೀಕರಣದ ಅನುಭವ ಹೇಗಿತ್ತು?
ಇಡೀ ತಂಡ ನನ್ನ ಮಗಳಂತೆ ಅಕ್ಕರೆಯಿಂದ ನೋಡಿಕೊಂಡರು. ಶೂಟಿಂಗ್ ಮುಗಿದ್ದೇ ಗೊತ್ತಾಗಲಿಲ್ಲ. ಈ ರೀತಿಯ ಸಂಪ್ರದಾಯ ಮತ್ತು ಸರಳ ಮದುವೆ ನಾನು ನೋಡಿರಲಿಲ್ಲ. ಅದರಲ್ಲೂ ಹಳ್ಳಿ ಮದುವೆಗಳಲ್ಲಿ ಅಷ್ಟೇಲ್ಲ ಸಂಭ್ರಮ ನೋಡಿದ್ದು ಅದೇ ಮೊದಲು.

ಮುಂದೆ ಹೆಂಗೆ?
ಹಾಗೇನೂ ಫ್ಲ್ಯಾನ್ ಇಲ್ಲ. ನಟಿ ಆಗಿದ್ದೇ ಆಕಸ್ಮಿಕವಾಗಿ. ಮದ್ವೆ ಚಿತ್ರದ ನಿರ್ದೇಶಕರು, ನಿರ್ಮಾಪಕರು ಒಂದು ಅವಕಾಶ ಕೊಟ್ಟರು. ಪಾತ್ರವೂ ಚೆನ್ನಾಗಿತ್ತು. ಹಾಗಾಗಿ ಒಪ್ಪಿಕೊಂಡೆ. ಮುಂದೆ ಬ್ಯುಸಿ ನಟಿ ಎನಿಸಿಕೊಳ್ಳುವ ಆಸೆಯಂತೂ ಇಲ್ಲ. ಒಳ್ಳೆಯ ಪಾತ್ರಗಳು ಸಿಕ್ಕರೆ ಅಭಿನಯಿಸುತ್ತಾ ಹೋಗೋಣ ಅಂದುಕೊಂಡಿದ್ದೇನೆ. ಅವಕಾಶಗಳು ಬರಬೇಕಾದ್ರೆ ಮದ್ವೆ ಚಿತ್ರ ತೆರೆಗೆ ಬರಬೇಕು. ಯಾಕಂದ್ರೆ ಅದೇ ನನ್ನ ಮೊದಲ ಚಿತ್ರ. ಆ ಮೇಲೆ ಹೇಗೆ, ಏನು ಅಂತ ಡಿಸೈಡ್ ಆಗುತ್ತೆ.

ಚಿತ್ರದಲ್ಲಿ ‘ಮದ್ವೆ’ ಹುಡುಗಿ ನೀವೇ ಅಂತೆ?
ಚಿತ್ರದ ಶೀರ್ಷಿಕೆಯೇ ಹೇಳುವ ಹಾಗೆ ಇದು ಮದ್ವೆ ಸಿನಿಮಾ. ಅಂದ್ರೆ ಹೆಣ್ಣು- ಗಂಡು ನೋಡುವ ಶಾಸ್ತ್ರ ದಿಂದ ಮದ್ವೆ ಆಗುವರೆಗಿನ ಕತೆಯೇ ಈ ಚಿತ್ರ. ಪಕ್ಕಾ ಗ್ರಾಮೀಣ ಸೊಗಡಿನ ಕತೆ. ಹಳ್ಳಿಗಳಲ್ಲಿ 80ರ ದಶಕದಲ್ಲಿದ್ದ ಮದುವೆ
ಸಂಭ್ರಮವೇ ಈ ಚಿತ್ರ. ಸಹಜವಾಗಿಯೇ ಚಿತ್ರದ ಕಥಾ ನಾಯಕಿ ಮದುವಣಗಿತ್ತಿ. ಆ ಪಾತ್ರಕ್ಕೆ ಬಣ್ಣ ಹಚ್ಚುವ ಅವಕಾಶ ನನಗೆ ಸಿಕ್ಕಿದೆ. ಈ ಹುಡುಗಿ ಸಂಪ್ರದಾಯಸ್ಥ ಮನೆ ತನದ ಹುಡುಗಿ. ಆಚರಣೆ, ನಂಬಿಕೆ ಮೇಲೆ ಆಕೆಗೆ ನಂಬಿಕೆ. ಆ ಪ್ರಕಾರ ನಡೆಯುವ ಮದುವೆ ಆಕೆಗೂ ಇಷ್ಟ. ಅದೆಲ್ಲ ತುಂಬಾನೆ ಸೊಗಸಾಗಿದೆ. ಮೊದಲ ಎಂಟ್ರಿಯಲ್ಲೇ ಇಂತಹದೊಂದು ಗ್ರಾಮೀಣ ಸೊಗಡಿನ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದ್ದೆ ಅದೃಷ್ಟ.