ನಿರ್ಮಾಪಕರು ಹೀಗೇಕೆ ಮಾಡಿದರು: ಚೇತನ್ ಕುಮಾರ್ ಸಾರಥ್ಯದಲ್ಲಿ ‘ಭರ್ಜರಿ’ ಚಿತ್ರಕ್ಕೆ ಕೆಲಸ ಮಾಡಿದ ಬಹುತೇಕ ತಂತ್ರಜ್ಞರಿಗೆ ಸಂಭಾವನೆ ಕೊಟ್ಟಿಲ್ಲ. ಸ್ವತಃ ನಿರ್ದೇಶಕರಿಗೂ ಕನಕಪುರ ಶ್ರೀನಿವಾಸ್ ಹಣ ಕೊಟ್ಟಿಲ್ಲ. ಹೋಗಲಿ ನೂರರ ಸಂಭ್ರಮ ಹತ್ತಿರ ಬರುತ್ತಿದೆ. ಈಗಲಾದರು ಕೊಡುತ್ತಾರೆ ಬಿಡಿ ಎಂದು ಎಲ್ಲರೂ ‘ಭರ್ಜರಿ’ ಶತ ದಿನೋತ್ಸವಕ್ಕೆ ತಯಾರಿಮಾಡಿಕೊಂಡಿದ್ದರು.
‘ಭರ್ಜರಿ’. ಹಂಡ್ರೆಡ್ ಡೇಸ್ ಕ್ಲಬ್‌ಗೆ ಸೇರಿರುವ ಮತ್ತೊಂದು ಕನ್ನಡ ಸಿನಿಮಾ. ಒಂದು ಸಿನಿಮಾ 100 ದಿನದ ಪ್ರದರ್ಶನ ಕಂಡರೆ ಆ ಚಿತ್ರತಂಡಕ್ಕೆ ಮಾತ್ರವಲ್ಲ, ಚಿತ್ರೋದ್ಯಮದ ಪಾಲಿಗೂ ಸಂಕ್ರಾಂತಿ ಹಾಗೂ ದೀಪಾವಳಿ ಹಬ್ಬವನ್ನು ಒಟ್ಟಿಗೆ ಆಚರಿಸಿದಷ್ಟು ಸಂಭ್ರಮ. ಚಿತ್ರಕ್ಕೆ ದುಡಿದ ಕಲಾವಿದರು, ತಂತ್ರಜ್ಞರು, ನಿರ್ಮಾಪಕರು ಹಾಗೂ ಚಿತ್ರೋದ್ಯಮ ಹೀಗೆ ಏಕಕಾಲಕ್ಕೆ ಎಲ್ಲರಿಗೂ ಸಂಭ್ರಮ ಮೂಡಿಸುವ ಶಕ್ತಿ ಒಂದು ಚಿತ್ರದ ಹಂಡ್ರೆಡ್ ಡೇಸ್ ಕಾರ್ಯಕ್ರಮಕ್ಕೆ ಇರುತ್ತದೆ. ಆದರೆ, ಈ
ಎಲ್ಲದರಿಂದಲೂ ಧ್ರುವ ಸರ್ಜಾ ಅಭಿನಯದ ‘ಭರ್ಜರಿ’ ಚಿತ್ರತಂಡ ವಂಚಿತವಾಗುತ್ತಿದೆಯೇ? ನಿರ್ಮಾಪಕ ಹಾಗೂ ಚಿತ್ರತಂಡದ ನಡುವೆ ವ್ಯಾವಹಾರಿಕ ಅಸಮಾಧಾನಗಳಿಗೆ ನೂರರ ಸಂಭ್ರಮ ಬಲಿಯಾಯಿತೇ? ಸದ್ಯ ‘ಭರ್ಜರಿ’ ಚಿತ್ರದ ಸುತ್ತ ಇದೇ ಪ್ರಶ್ನೆಗಳು ಕೇಳುತ್ತಿವೆ. ಇದಕ್ಕೆ ಕಾರಣವೂ ಇದೆ. ಯಾಕೆಂದರೆ..
1) ಚಿತ್ರತಂಡ ನೂರರ ಸಂಭ್ರಮ ಮಾಡುವುದಕ್ಕೆ ಮುಂದಾಗಿತ್ತು. ಅದಕ್ಕೆ ಮಾಧ್ಯಮಗಳು ಸೇರಿದಂತೆ ಚಿತ್ರರಂಗದ ಬೇರೆ ಬೇರೆ ಗಣ್ಯರು, ಚಿತ್ರಕ್ಕೆ ಕೆಲಸ ಮಾಡಿದ ಎಲ್ಲರನ್ನು ಆಹ್ವಾನಿಸಲಾಗಿತ್ತು. ಆದರೆ, ಇದಕ್ಕಿದ್ದಂತೆ ನೂರರ ಸಂಭ್ರಮವನ್ನು ರದ್ದು ಮಾಡಲಾಗಿದೆ.
2) ಈ ಚಿತ್ರದ ನಿರ್ಮಾಪಕ ಕನಕಪುರ ಶ್ರೀನಿವಾಸ್ ‘ಭರ್ಜರಿ’ ಚಿತ್ರಕ್ಕೂ ಮೊದಲೇ ‘ದನ ಕಾಯೋನು’ ಚಿತ್ರವನ್ನು ತೆರೆಗೆ ತಂದವರು. ಆ ಸಿನಿಮಾ ಬಿಡುಗಡೆಯಾದ ಮೇಲೆ ಗೊತ್ತಾಗಿದ್ದು, ನಿರ್ದೇಶಕ ಯೋಗರಾಜ್ ಭಟ್ ಅವರಿಗೆ ಸಂಭಾವನೆ ಕೊಟ್ಟಿಲ್ಲ ಅನ್ನುವುದು. ‘ಭರ್ಜರಿ’ ಸಿನಿಮಾ ತೆರೆಗೆ ಬಂದು ಅದರಲ್ಲಿ ಬರುವ ಹಣದಲ್ಲಿ ‘ದನ ಕಾಯೋನು’ ಚಿತ್ರಕ್ಕೆ ಕೆಲಸ ಮಾಡಿದವರ ಬಾಕಿ ಚುಕ್ತ ಮಾಡಬೇಕೆಂಬ ಒಪ್ಪಂದಕ್ಕೆ ಬರಲಾಯಿತು. ವಿಪರ್ಯಾಸ ಎಂದರೆ ‘ಭರ್ಜರಿ’ ಚಿತ್ರತಂಡಕ್ಕೂ ಸೇಮ್ ಟು ಸೇಮ್ ‘ದನ ಕಾಯೋನು’ ಚಿತ್ರತಂಡದ ಪರಿಸ್ಥಿತಿಯೇ ಬಂದಿದೆ.
ನಿರ್ಮಾಪಕರು ಹೀಗೇಕೆ ಮಾಡಿದರು: ಚೇತನ್ ಕುಮಾರ್ ಸಾರಥ್ಯದಲ್ಲಿ ‘ಭರ್ಜರಿ’ ಚಿತ್ರಕ್ಕೆ ಕೆಲಸ ಮಾಡಿದ ಬಹುತೇಕ ತಂತ್ರಜ್ಞರಿಗೆ ಸಂಭಾವನೆ ಕೊಟ್ಟಿಲ್ಲ. ಸ್ವತಃ ನಿರ್ದೇಶಕರಿಗೂ ಕನಕಪುರ ಶ್ರೀನಿವಾಸ್ ಹಣ ಕೊಟ್ಟಿಲ್ಲ. ಹೋಗಲಿ ನೂರರ ಸಂಭ್ರಮ ಹತ್ತಿರ ಬರುತ್ತಿದೆ. ಈಗಲಾದರು ಕೊಡುತ್ತಾರೆ ಬಿಡಿ ಎಂದು ಎಲ್ಲರೂ ‘ಭರ್ಜರಿ’ ಶತ ದಿನೋತ್ಸವಕ್ಕೆ ತಯಾರಿಮಾಡಿಕೊಂಡಿದ್ದರು. ಆದರೂ ನಿರ್ಮಾಪಕರು ನಯಾ ಪೈಸೆ ಕೊಡುವ ಲಕ್ಷಣಗಳು ಕಾಣಲಿಲ್ಲ. ಇಂಥ ಸಮಯದಲ್ಲಿ ನೂರರ ಸಂಭ್ರಮ ಮಾಡಿ ಮುಗಿಸಿದರೆ ಮತ್ತೆ ನಿರ್ಮಾಪಕರು ಕೈಗೆ ಸಿಗಲ್ಲ. ನಮಗೆ ಸಂಭಾವನೆ ಸಿಗಲ್ಲ ಎಂದು ನೂರರ ಸಂಭ್ರಮವನ್ನು ದಿಢೀರ್ ಎಂದು ರದ್ದು ಮಾಡಲಾಗಿದೆಯಂತೆ. ನಿರ್ಮಾಪಕರು ಹಣ ಕೊಡುವ ತನಕ ‘ಭರ್ಜರಿ’ ಚಿತ್ರಕ್ಕೆ ಶತದಿನೋತ್ಸವ ಆಚರಿಸಿಕೊಳ್ಳುವ ಭಾಗ್ಯ ಇಲ್ಲ ಎನ್ನುತ್ತಿವೆ ನಂಬಲರ್ಹ ಮೂಲಗಳು.
ನಿಜ, ವ್ಯವಹಾರಿಕವಾಗಿ ಚಿತ್ರತಂಡದಲ್ಲಿ ಸಮಸ್ಯೆ ಇದೆ. ಅದನ್ನು ಬಗೆಹರಿಸಿಕೊಳ್ಳಬೇಕಿರುವುದು ನಿರ್ಮಾಪಕರು. ಆ ಸಮಸ್ಯೆಯ ಸಾಲಿನಲ್ಲಿ ನಾನು, ನಿರ್ದೇಶಕ ಚೇತನ್ ಕುಮಾರ್, ಛಾಯಾಗ್ರಾಹಕ ಶ್ರೀಶ ಕೂದವಳ್ಳಿ ಇದ್ದೇವೆ. ಹಣಕಾಸಿನ ವಿಚಾರದಲ್ಲಿ ನಾವು ಮೂವರು ರಾಜಿಯಾಗಬಹುದು. ಆದರೆ, ಇಡೀ ತಂಡ ರಾಜಿಯಾಗಬೇಕು. ಅವರಿಗೆ ಸಿಗಬೇಕಾದ ಸಂಭಾವನೆ ಸಿಗದಿದ್ದರೂ ಪರ್ವಾಗಿಲ್ಲ ಎಂದುಕೊಳ್ಳುವುದು ತಪ್ಪಾಗುತ್ತದೆ. ಹಾಗಂತ ನಾವ್ಯಾರೂ ಇದನ್ನು ವಿವಾದ ಮಾಡಕ್ಕೆ ಹೋಗುತ್ತಿಲ್ಲ. ಈ ಸಮಸ್ಯೆ ಯನ್ನು ಮುಂದಿಟ್ಟುಕೊಂಡು ಈ ಹಿಂದೆಯೇ ಮಾತನಾಡಬಹುದಿತ್ತು. ಆದರೆ, ಚಿತ್ರಕ್ಕೆ ತೊಂದರೆ ಆಗಬಾರದು ಎನ್ನುವ ಉದ್ದೇಶ ನಮ್ಮದು. ಅದನ್ನು ನಿರ್ಮಾಪಕರು ಅರ್ಥ ಮಾಡಿಕೊಳ್ಳಬೇಕು. ಒಂದು ಸಿನಿಮಾಗೆ ಕೆಲಸ ಮಾಡಿದ ತಂಡಕ್ಕೆ ಏನು ಸಿಗಬೇಕೋ ಅದನ್ನು ಕೊಡುವುದು ನಿರ್ಮಾಪಕರ ಕರ್ತವ್ಯ.
- - ಧ್ರುವ ಸರ್ಜಾ, ನಟ
ಚಿತ್ರತಂಡದಲ್ಲಿ ಏನೇ ಸಮಸ್ಯೆಗಳಿದ್ದರೂ ಅದನ್ನು ಬಗೆಹರಿಸುವುದಕ್ಕೆ ಚಲನಚಿತ್ರ ವಾಣಿಜ್ಯ ಮಂಡಳಿ ಇದೆ. ಚಿತ್ರರಂಗದಲ್ಲಿ ದೊಡ್ಡವರು ಇದ್ದಾರೆ. ಸಮಸ್ಯೆ ಹೇಳಿಕೊಂಡು ಯಶಸ್ವಿಯಾಗಿ ಪ್ರದರ್ಶನವಾಗುತ್ತಿರುವ ಚಿತ್ರಕ್ಕೆ ಕಪ್ಪು ಚುಕ್ಕೆ ಇಡುವ ಉದ್ದೇಶ ನನಗೆ ಇಲ್ಲ. ಮುಂದಿನ ವಾರ ಗಣ್ಯರ ಸಮ್ಮುಖದಲ್ಲಿ ‘ಭರ್ಜರಿ’ ಚಿತ್ರದ ಶತಮಾನೋತ್ಸವ ನಡೆಯಲಿದೆ. ಅದರ ತಯಾರಿಯಲ್ಲಿದ್ದೇನೆ. ಉಳಿದಂತೆ ಏನೇ ಅಪಸ್ವರಗಳಿದ್ದರೂ ಸದ್ಯ ಮುಖ್ಯ ಅಲ್ಲ.
- ಚೇತನ್ ಕುಮಾರ್, ನಿರ್ದೇಶಕ
