ನೂರಾರು ಕೋಟಿಯ ಒಡೆಯ ತನ್ನ ಮೂವರು ಗಂಡು ಮಕ್ಕಳ ಮೇಲೆ ನಂಬಿಕೆ ಇರಿಸದೇ ತನ್ನೆಲ್ಲಾ ಆಸ್ತಿಯನ್ನು ಇದ್ದ ಒಬ್ಬಳೇ ಮಗಳ ಹೆಸರಿಗೆ ಮಾಡಿರುತ್ತಾನೆ. ಆದರೆ ಆ ಹೆಣ್ಣು ಮಗಳು ಪ್ರೀತಿ ಮಾಡಿ ಮದುವೆಯಾದ ತಪ್ಪಿಗಾಗಿ ಮನೆಯಿಂದ ಹೊರದಬ್ಬಲ್ಪಟ್ಟು ಲಂಡನ್‌ಗೆ ಹಾರಿರುತ್ತಾಳೆ. ಈಗ ಆಸ್ತಿ ಇವರ ಪಾಲಿಗೆ ದಕ್ಕಬೇಕು ಎಂದರೆ ದೂರದ ಲಂಡನ್‌ನಲ್ಲಿರುವ ತಂಗಿ ಮತ್ತು ತಂಗಿಯ ಮಗ ಬರಬೇಕು.

ಕೆಂಡಪ್ರದಿ

ಇನ್ನೊಂದು ಕಡೆ ಮೂವರು ರೌಡಿ ಬ್ರದರ್ಸ್‌. ಇವರಲ್ಲಿ ಒಬ್ಬ ನಾಯಕ ವಿಜಯ ರಾಘವೇಂದ್ರನಿಂದ ಪೆಟ್ಟು ತಿಂದು ಕೋಮಾ ತಲುಪಿರುತ್ತಾನೆ. ಅದರ ಸೇಡು ತೀರಿಸಿಕೊಳ್ಳಲು ಇನ್ನಿಬ್ಬರು ಹಂಬಲಿಸುತ್ತಿರುತ್ತಾರೆ. ಇವರ ಸೇಡು ತಣಿಯಲು ನಾಯಕನ ಪ್ರಾಣ ಬೇಕು.

ಇತ್ತ ನಾಯಕ ಜ್ಯೂನಿಯರ್‌ ಆರ್ಟಿಸ್ಟ್‌ ಆಗಿದ್ದ ವಿಜಯ ರಾಘವೇಂದ್ರ ಮತ್ತು ಆತನ ಸ್ನೇಹಿತ ಪ್ರಶಾಂತ್‌ ಸಿದ್ದಿಗೆ ಈ ರೌಡಿ ಬ್ರದರ್ಸ್‌ನಿಂದ ತಪ್ಪಿಸಿಕೊಂಡರೆ ಸಾಕು ಎನ್ನಿಸಿರುತ್ತೆ.

ಈ ಮೂರು ಕೋನಗಳು ಒಂದಾಗುವುದು ಸುಂದರವಾದ ಹಳ್ಳಿಯೊಂದರಲ್ಲಿ. ಒಂದು ಮಾಡುವುದು ಲಾಯರ್‌ ಸುಚೇಂದ್ರ ಪ್ರಸಾದ್‌. ಒಬ್ಬ ಜ್ಯೂನಿಯರ್‌ ಆರ್ಟಿಸ್ಟ್‌ ಆಗಿದ್ದ ನಾಯಕ ನಂತರದಲ್ಲಿ ಲಂಡನ್‌ನಿಂದ ಬಂದಿಳಿಯುವ ಅತಿಥಿಯಾಗುತ್ತಾನೆ. ಆಮೇಲಿನದು ಅಪ್ಪಟ ಡ್ರಾಮವಾದರೂ ಒಂದಷ್ಟುಸ್ವಾರಸ್ಯವಿದೆ. ಆಸ್ತಿಗಾಗಿ ಕಿತ್ತಾಟ ನಡೆಯುವ ನಡುವಲ್ಲೇ ಮಧುರವಾದ ಪ್ರೇಮ ಅರಳುತ್ತದೆ. ಅದರ ನೆರಳಿನಲ್ಲಿ ಸಾಗುವ ಚಿತ್ರವನ್ನು ತುಸು ಆಸಕ್ತಿಯಿಂದ ನೋಡಬಹುದು.

ಒಂದಕ್ಕೊಂದು ಸುತ್ತಿಕೊಂಡು ನಾಟಕ ಸಾಗುತ್ತಾ ಹೋಗುತ್ತಿರುವಾಗ ಸುದೀರ್ಘ ಎನ್ನಿಸುವ ಸೀನ್‌ಗಳು, ಅದೇ ಅದೇ ಹೊಸತನವಿಲ್ಲದ ಡೈಲಾಗ್‌ಗಳು, ಕಣ್ಣು ತಣಿಸದ ಕ್ಯಾಮರಾ ಎಲ್ಲವೂ ಸೇರಿ ಬೋರು ಹೊಡೆಸುತ್ತಿವೆ ಎನ್ನುವ ಹೊತ್ತಿಗೆ ಒಂದು ಟ್ವಿಸ್ಟ್‌ ಎದುರಾಗುತ್ತೆ. ಆ ಟ್ವಿಸ್ಟ್‌ ಚಿತ್ರದ ಮುಖ್ಯ ಘಟ್ಟ. ಅದಾದ ಮೇಲೆ ಪ್ರೀತಿಗೆ ವಿರಹದ ಪರಿಚಯವಾಗುತ್ತದೆ. ನಾವು ಮಾಡುತ್ತಿರುವುದು ತಪ್ಪೋ, ಸರಿಯೋ ಎನ್ನುವ ಗೊಂದಲಕ್ಕೆ ಮುಖ್ಯ ಪಾತ್ರಗಳು ಬೀಳುತ್ತವೆ. ನಾಯಕ ಇನ್ನಿಲ್ಲದಂತೆ ಗೊಂದಲಕ್ಕೆ ಸಿಕ್ಕುತ್ತಾನೆ ಮತ್ತು ಹೊರಗೆ ಬರುತ್ತಾನೆ. ಈ ನಡುವಿನ ಸಂದರ್ಭವೇ ಚಿತ್ರದ ಜೀವಾಳ. ಅದೇನು ಎಂದು ತಿಳಿಯಲು ಚಿತ್ರ ನೋಡಬಹುದು. ನಿರ್ದೇಶಕ ರಾಜಶೇಖರ್‌ ಸಾಧಾರಣ ಮಟ್ಟದಿಂದ ಚಿತ್ರವನ್ನು ಮೇಲೆತ್ತಲೂ ಪ್ರಯತ್ನಿಸಬಹುದಿದ್ದು. ಸಂಗೀತ, ಛಾಯಾಗ್ರಹಣಕ್ಕೆ ನೆನಪಿನಲ್ಲಿ ಉಳಿಯುವ ಶಕ್ತಿ ಇಲ್ಲ.

ಚಿತ್ರ: ಪರದೇಸಿ ಕೇರ್‌ ಆಫ್‌ ಲಂಡನ್‌

ತಾರಾಗಣ: ವಿಜಯ್‌ ರಾಘವೇಂದ್ರ, ಸ್ನೇಹ, ಪೂಜಾ, ರಂಗಾಯಣ ರಘು, ಶೋಭ್‌ ರಾಜ್‌, ಸುಚೇಂದ್ರ ಪ್ರಸಾದ್‌, ತಬಲ ನಾಣಿ, ಡ್ಯಾನಿಲ್‌ ಕುಟ್ಟಪ್ಪ, ಪ್ರಶಾಂತ್‌ ಸಿದ್ಧಿ

ನಿರ್ದೇಶನ: ಎಂ. ರಾಜಶೇಖರ್‌

ನಿರ್ಮಾಣ: ಬಿ. ಭದ್ರಿ ನಾರಾಯಣ

ಸಂಗೀತ: ವೀರ್‌ ಸಮಥ್‌ರ್‍

ರೇಟಿಂಗ್‌: ***