ಈ ಮೂವರದ್ದು ಒಂದೊಂದು ಕತೆ. ಇವರು ಜತೆಯಾದರೆ ಹೇಗಿರುತ್ತದೆ ಎನ್ನುವ ಕುತೂಹಲದ ದಾರಿಯಲ್ಲಿ ನೋಡುಗನನ್ನು ಕರೆದುಕೊಂಡು ಹೋಗುವ ಪ್ರಯತ್ನ ಮಾಡುತ್ತದೆ ‘ಲೈಫ್ ಜೊತೆ ಒಂದ್ ಸೆಲ್ಫಿ’. ಅಂದಹಾಗೆ ಇವರ ಕತೆಗಳು ತೆರೆದುಕೊಳ್ಳುವುದು ಗೋವಾದ ಕಡಲ ತೀರದಲ್ಲಿ. ಆರಂಭದಲ್ಲಿ ಇವು ಅವರವರ ಸೆಲ್ಫಿ ಕತೆಗಳೆನಿಸಿಕೊಂಡರೂ ವಿರಾಮದ ಹೊತ್ತಿಗೆ ಇವು ಎಲ್ಲರಿಗೂ ಅನ್ವಯಿಸುವ ಸ್ಟೋರಿಗಳು ಅನಿಸುತ್ತವೆ. ನಾವು ಕಾಣುವ ಕನಸು ಹಾಗೂ ಅದಕ್ಕೆ ತದ್ವಿರುದ್ಧ ಎನಿಸುವ ಜೀವನ. ಈ ಎರಡರ ನಡುವೆ ಇರುವ ಗೋಡೆಯನ್ನು ತೋರಿಸುತ್ತಲೇ ಕನಸು ಮತ್ತು ವಾಸ್ತವದ ಬದುಕನ್ನು ಹೇಗೆ ಸರಿದೂಗಿಸಿಕೊಂಡು ಹೋಗಬೇಕೆಂಬುದನ್ನು ಅಚ್ಚುಕಟ್ಟಾಗಿ ಹೇಳುತ್ತದೆ ಸಿನಿಮಾ. ಈ ವಿಚಾರದಲ್ಲಿ ಕತೆಗಾರ್ತಿಯಾಗಿ ಮಾನಸ ದಿನಕರ್ ಮೊದಲ ಪ್ರಯತ್ನದಲ್ಲೇ ಭರವಸೆ ಮೂಡಿಸಿದ್ದಾರೆ. ಮನರಂಜನೆ, ಈಗಿನ ಯುವ ಪೀಳಿಗೆಯ ಯೋಚನೆಗಳು, ಟ್ರೆಂಡಿ ಲೈಫ್ ಇವುಗಳ ನೆರಳಿನಲ್ಲೇ ಕತೆ ಸಾಗುವುದರಿಂದ ಸಿನಿಮಾ ಯೂತ್‌ಫುಲ್ಲಾಗಿದೆ.

ಮೂರು ಪಾತ್ರಗಳು. ನಕುಲ್ ಸಾಫ್ಟ್‌ವೇರ್ ಕಂಪನಿಯ ಉದ್ಯೋಗಿ. ಅವನಿಗೆ ಸಿನಿಮಾ ನಿರ್ದೇಶಕನಾಗುವ ಕನಸಿಗಾಗಿ ಮನೆ ಬಿಡುತ್ತಾನೆ. ಶ್ರೀಮಂತ ಮನೆತನದ ಕುಡಿ ವಿರಾಟ್. ತನ್ನ ತಾಯಿಯನ್ನು ಪತ್ನಿ ಎಂದು ಒಪ್ಪಿಕೊಳ್ಳದ ಅಪ್ಪನ ವಿರುದ್ಧ ಸಿಡಿದೆದ್ದು ಮನೆ ತೊರೆಯುತ್ತಾನೆ. ಈಕೆಯ ಹೆಸರು ರಶ್ಮಿ. ಪಕ್ಕದ ಮನೆ ಹುಡುಗನನ್ನು ಪ್ರೀತಿಸಲು ದಿನಾ ಕಾಂಪೌಂಡ್ ಹಾರುವ ಹುಡುಗಿಯ ಪ್ರೀತಿಗೆ ಮನೆಯವರಿಂದ ಒಪ್ಪಿಗೆ ಸಿಗುತ್ತದೆ. ಆದರೆ, ಪ್ರಿಯಕರನ ತಾಯಿಯ ಮಾತು, ಜೀವನ ಶೈಲಿ ರಶ್ಮಿಗೆ ಬಂಧನದಂತೆ ಕಾಣುತ್ತದೆ. ಹೆಸರಿಗೆ ರಶ್ಮಿಯಾದರೂ ರ‌್ಯಾಶ್ ಎಂದು ಕರೆಸಿಕೊಳ್ಳುವ ಈಕೆ ‘ನನ್ ಲೈಫು, ನನ್ ಇಷ್ಟ’ ಎಂದು ಮನೆ ತೊರೆಯುತ್ತಾಳೆ.

ಈ ಎಲ್ಲ ಕತೆಗಳು ಫ್ಲ್ಯಾಷ್ ಬ್ಯಾಕ್‌ನಿಂದ ತೆರೆದುಕೊಳ್ಳುವಷ್ಟರಲ್ಲಿ ವಿರಾಮ. ಆನಂತರ ಕತೆ ಪೂರ್ವಾರ್ಧಕ್ಕೆ ಹೋಲಿಸಿದರೆ ಕೊಂಚ ಜಾಳು. ಆದರೆ, ಮೂರು ಕತೆಗಳ ಜತೆ ಮೂರು ಸಂದೇಶಗಳನ್ನು ಹೊತ್ತು ತಂದಿರುವ ‘ಲೈಫ್ ಜೊತೆ ಒಂದ್ ಸೆಲ್ಫಿ’, ಹೆಸರಿಗೆ ತಕ್ಕಂತೆ ಲೈಫ್ ಸ್ಟೋರಿಯೇ. ಇಲ್ಲಿ ನಕುಲ್ ಪಾತ್ರ ಮತ್ತು ಆ ಪಾತ್ರವನ್ನು ಪರಿಚಯಿಸುವ ರೀತಿ ನಿರ್ದೇಶಕ ದಿನಕರ್ ತೂಗುದೀಪ ಅವರ ಆರಂಭದ ದಿನಗಳನ್ನು ಅವರ ಆಪ್ತರಿಗೆ ನೆನಪಿಸಿದರೂ ಅಚ್ಚರಿ ಪಡಬೇಕಿಲ್ಲ. ಇನ್ನೂ ನಕುಲ್ ಪಾತ್ರದಲ್ಲಿ ಪ್ರೇಮ್, ವಿರಾಟ್ ಪಾತ್ರದಲ್ಲಿ ಪ್ರಜ್ವಲ್, ರಶ್ಮಿಯಾಗಿ ಹರಿಪ್ರಿಯಾ ಪಾತ್ರಗಳು ಕತೆಗೆ ಪೂಕವಾಗಿವೆ. ನಿರಂಜನ್ ಬಾಬು ಕ್ಯಾಮೆರಾ ಕತೆಯನ್ನು ಶ್ರೀಮಂತಗೊಳಿಸಿದರೆ, ಸಾಧು ಕೋಕಿಲ ಕಾಮಿಡಿ ಮಾಡಲು ಪ್ರಯತ್ನಿಸಿದ್ದಾರೆ. 

ಚಿತ್ರ:  ಲೈಫ್ ಜೊತೆ ಒಂದ್ ಸೆಲ್ಫಿ

ತಾರಾಗಣ:  ಪ್ರೇಮ್, ಪ್ರಜ್ವಲ್ ದೇವರಾಜ್, ಹರಿಪ್ರಿಯಾ, ಧನಂಜಯ್, ಸುಧಾರಾಣಿ, ಸಾಧು ಕೋಕಿಲಾ

ನಿರ್ದೇಶನ: ಶೀನಕರ್

ರೇಟಿಂಗ್: ***