ಕೆಲವು ಚಿತ್ರಗಳ ಶೀರ್ಷಿಕೆಗಳೇ ಆ ಚಿತ್ರದ ಹಣೆಬರಹ ಹೇಳುತ್ತವೆ. ಇದೂ ಒಂಥರಾ ಅದೇ ಸಾಲಿಗೆ ಸೇರುವ ಚಿತ್ರ.
ಇಲ್ಲೊಬ್ಬ ನಾಯಕನಿದ್ದಾನೆ. ಜಗದೇಕವೀರ. ಅನಾಥ ಬಂಧು. ದಾನಶೂರ. ಮಹಾಮಹಿಮ. ಹೀಗೆ ಏನು ಬೇಕಾದರೂ ವಿಶೇಷಣಗಳನ್ನು ಹೆಸರಿನ ಹಿಂದೆ ಮುಂದೆ ಎಲ್ಲಿ ಬೇಕಾದರೂ ಅಂಟಿಸಬಹುದು. ಅವನು ಯಾರಿಗಾದರೂ ಒಂದು ಪಂಚ್ ಕೊಟ್ಟರೆ ಪೆಟ್ಟು ತಿಂದವ ಮಾರುದೂರ. ಸಿಟ್ಟು ಬಂದ್ರೆ ಪೊಲೀಸ್ ಸ್ಟೇಷನನ್ನೇ ಪುಡಿ ಮಾಡಿ ಬಿಸಾಕೋ ವೀರಾಗ್ರೇಸರ. ಇವನೊಂಥರ ಲೋಕಲ್ ಸೂಪರ್‌ಮ್ಯಾನ್ ಆಗಿರುವುದರಿಂದ ಆತ ಏನು ಮಾಡುತ್ತಾನೆ, ಎಲ್ಲಿ ಹೋಗುತ್ತಾನೆ, ಯಾಕೆ ಮಾಡುತ್ತಾನೆ, ಯಾರಿಗಾಗಿ ಬದುಕುತ್ತಿದ್ದಾನೆ ಅನ್ನುವುದನ್ನು ಕೇಳಿದರೆ ತಲೆ ಸಿಡಿದು ಸಾವಿರ ಹೋಳಾದೀತು ಜೋಕೆ. ಈಗ ಏನಾದರೂ ಆಗುತ್ತದೆ, ಒಂಚೂರು ಹೊತ್ತಾದ ಮೇಲೆ ಏನೋ ನಡೆಯುತ್ತದೆ ಅಂತ ಸಂಯಮ ವಹಿಸಿ ಕಾದು ಕೂತಿರುವಾಗಲೇ ಇಂಟರ್ವಲ್ ಬರುತ್ತದೆ. ಇಂಟರ್ವಲ್ ನಂತರವಾದರೂ ಖಂಡಿತಾ ಏನಾದರೂ ಜರುಗುತ್ತದೆ ಎಂದುಕೊಂಡರೆ ನಿಮ್ಮ ಊಹೆ ತಪ್ಪು. ಇಲ್ಲೂ ವೀರಾಗ್ರೇಸರನ ಪ್ರತಾಪವೇ. ಇಬ್ಬರು ಹುಡುಗಿಯರನ್ನು ಪಟಾಯಿಸಿರುತ್ತಾನೆ. ಆ ಇಬ್ಬರಲ್ಲಿ ಯಾರನ್ನು ಕೈ ಹಿಡಿಯುತ್ತಾನೆ ಅನ್ನುವ ಸಸ್ಪೆನ್ಸ್ ಅನ್ನು ನಿರ್ದೇಶಕರು ಪಾಪ ಕಡೆಯವರೆಗೂ ಉಳಿಸಿದ್ದಾರೆ. ಹಾಗಾಗಿ ಅವರಿಗೆ ಒಂಚೂರು ಮೆಚ್ಚುಗೆ ಸಲ್ಲಬೇಕು. ಇಂಟರೆಸ್ಟಿಂಗ್ ಅಂದ್ರೆ ಫೈಟಿಂಗ್, ಕಳ್ಳತನ, ಡ್ರಾಮಾ ಇತ್ಯಾದಿಗಳ ಮಧ್ಯೆ ಅನಾಥರಿಗೆ ಸಹಾಯ ಮಾಡುವುದು, ಕಷ್ಟದಲ್ಲಿರುವ ಮಕ್ಕಳಿಗೆ ದುಡ್ಡು ಕೊಟ್ಟು ನೆರವಾಗುವುದು ಇತ್ಯಾದಿ ಕೆಲಸಗಳನ್ನು ಮಾಡಿ ದೇವತಾಮನುಷ್ಯನಾಗುವ ಪ್ರಯತ್ನವನ್ನೂ ಮಾನ್ಯ ನಾಯಕರು ಮಾಡುತ್ತಾರೆ. ಹಾಗಾಗಿ ಒಂಚೂರು ಸಂದೇಶ,ನೆಂಚಿಕೊಳ್ಳುವುದಕ್ಕೆ ಸೆಂಟಿಮೆಂಟು ಅಲ್ಲಲ್ಲಿ ಉಂಟು. ಆದರೆ ಸಹನೆ, ತಾಳ್ಮೆ ಇತ್ಯಾದಿ ಒಳ್ಳೆಯ ಗುಣಗಳು ಯಾವುದೂ ನಿಮಗೆ ಇಲ್ಲದೇ ಹೋದರೆ ಮುಸುಕಿದಾ ಮಬ್ಬಿನಲಿ ಚೂರುಪಾರು ಬೆಳಕೇ ನಿಮ್ಮನ್ನು ಕೈಹಿಡಿದು ನಡೆಸಬೇಕು.
ಚಿತ್ರ: ಧೂಳಿಪಟ
ನಿರ್ದೇಶನ: ರಶ್ಮಿ ಪಿ ಕಾರ್ಚಿ
ತಾರಾಗಣ: ರೂಪೇಶ್ ಜಿ ರಾಜ್, ಅರ್ಚನಾ, ಐಶ್ವರ್ಯಾ
ರೇಟಿಂಗ್: **
