ಕೊಡಗು (ಆ. 29): ಪ್ರವಾಹ ಸಂತ್ರಸ್ತರ ನೆರವಿಗೆ ಚಿತ್ರೋದ್ಯಮದ ಮಂದಿ ಸ್ಪಂದಿಸಿದ್ದಾರೆ. ಊರು ಕಟ್ಟಿಕೊಡುವ ಬಗ್ಗೆಯೂ ಮಾತುಗಳು ಕೇಳಿಬಂದಿವೆ. ಅದೆಲ್ಲ ಹೇಳಿದಷ್ಟು ಸುಲಭವಿಲ್ಲ. ಸಂಘದ ಮುಖ್ಯ ಸಭೆಗಳಿಗೆ ಇಲ್ಲದ ನೆಪ ಹೇಳಿ ತಪ್ಪಿಸಿಕೊಳ್ಳುವ ಕಲಾವಿದರೂ ನಮ್ಮಲ್ಲಿದ್ದಾರೆ.

ಇಂತಹ ಪರಿಸ್ಥಿತಿಯಲ್ಲಿ ಎಲ್ಲರೂ ಒಟ್ಟಾಗಿ ಅವರಿಗೆ ಊರು ಕಟ್ಟಿಕೊಡೋಣ ಎನ್ನುವುದು ಒಳ್ಳೆಯ ಚಿಂತನೆ– ಯಾದರೂ ಕಷ್ಟಸಾಧ್ಯ. ಹಾಗಂತ ಕೈ ಕಟ್ಟಿಕೊರಬೇಕಿಲ್ಲ. ಕಲಾವಿದರ ಸಂಘ ಅಲ್ಲಿನ ಸಂತ್ರಸ್ತರಿಗೆ ದೊಡ್ಡ ಮಟ್ಟದಲ್ಲಿ ನೆರವು ನೀಡಲು ಚಿಂತನೆ ನಡೆಸಿದೆ. ಶಾಶ್ವತವಾಗುಳಿವ ಪರಿಹಾರವೇ ಸೂಕ್ತ ಎನ್ನುವುದು ಸಂಘದ ಆಶಯ. ಎರಡ್ಮೂರು ದಿನಗಳಲ್ಲಿ ಹಿರಿಯ ನಟ ಅಂಬರೀಷ್ ನೇತೃತ್ವದಲ್ಲಿ ಸಭೆ ಕರೆದು ನಿರ್ಧಾರಿಸಲಾಗುವುದು. - ಹೀಗೆ ಹೇಳಿದ್ದು ರಾಕ್‌ಲೈನ್ ವೆಂಕಟೇಶ್.

ಕೊಡಗು ಪ್ರವಾಹ ಸಂತ್ರಸ್ತರಿಗೆ ಕಲಾವಿದರ ಸಂಘವು ದೊಡ್ಡ ಮಟ್ಟದಲ್ಲಿ ನೆರವು ನೀಡಲು ಚಿಂತನೆ ನಡೆಸಿದೆ. ಸಂತ್ರಸ್ತರಿಗೆ ಶಾಶ್ವತವಾಗಿ ಅನುಕೂಲವಾಗುವಂತಹ ಸಹಾಯ ಮಾಡುವುದು ಸಂಘದ ಆಶಯ ಎನ್ನುತ್ತಾರೆ ಸಂಘದ ಕಾರ್ಯದರ್ಶಿ ಹಾಗೂ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್.

ಕಲಾವಿದರ ಸಂಘದಲ್ಲಿ ನಟನಾ ತರಬೇತಿ ಸಂಸ್ಥೆ : ಬೆಂಗಳೂರಿನ ಚಾಮರಾಜ ಪೇಟೆಯಲ್ಲಿರುವ ಕಲಾವಿದರ ಸಂಘದ ಬೃಹತ್ ಕಟ್ಟಡದಲ್ಲಿ ಈಗ ಮೊದಲ ಮತ್ತು ಎರಡನೇ ಮಹಡಿ ಖಾಲಿ ಇವೆ. ಇಲ್ಲಿ ವ್ಯವಸ್ಥಿತವಾದ ಜಿಮ್ ಹಾಗೂ ಪುಣೆ ಫಿಲಂ ಇನ್‌ಸ್ಟಿಟ್ಯೂಟ್ ಮಾದರಿಯಲ್ಲಿ ಸುಸಜ್ಜಿತವಾದ ನಟನಾ ತರಬೇತಿ ಸಂಸ್ಥೆ ಆರಂಭಿಸುವ ಉದ್ದೇಶ ಕಲಾವಿದರ ಸಂಘಕ್ಕಿದೆ. ಈ ಸಂಸ್ಥೆ ಬೆಂಗಳೂರು ವಿಶ್ವ ವಿದ್ಯಾನಿಲಯದ ಮಾನ್ಯತೆ ಪಡೆದ ಸಂಸ್ಥೆಯಾಗಿರಬೇಕು, ಸಿನಿಮಾದ ಪ್ರತಿ ವಿಭಾಗಗಳಲ್ಲೂ ಉನ್ನತ ಮಟ್ಟದ ತರಬೇತಿ, ಅಧ್ಯಯನ ಸಿಗುವಂತಾಗಬೇಕು ಎನ್ನುವ ಆಲೋಚನೆಯೂ ಸಂಘದ್ದು ಎನ್ನುತ್ತಾರೆ ರಾಕ್‌ಲೈನ್.