ಪೊಲೀಸ್ ಆಫೀಸರ್ ಲುಕ್‌ನಲ್ಲಿ ಖಡಕ್ ಆಗಿ ಕಾಣಿಸಿಕೊಂಡಿರುವ ಅವರಿಗೆ ಈ ಪಾತ್ರ ಹೊಸ ಇಮೇಜ್ ನೀಡುವ ನಿರೀಕ್ಷೆಯಿದೆ. ವಿಲನ್ ಪಾತ್ರಗಳಲ್ಲೇ ಮಿಂಚುತ್ತಿರುವ ಲೋಕಿ ಈಗ ಹೊಸ ಪಾತ್ರಗಳತ್ತ ಮುಖ ಮಾಡಿದ್ದಕ್ಕೆ ಕಾರಣ ನಟನಾಗಿ ಎಲ್ಲಾ ಬಗೆಯ ಪಾತ್ರಗಳಲ್ಲೂ ಕಾಣಿಸಿಕೊಳ್ಳಬೇಕೆನ್ನುವ ಹಂಬಲವಂತೆ.

‘ನಾನೊಬ್ಬ ನಟ. ಕಲಾವಿದ ಎನಿಸಿಕೊಳ್ಳುವವರು ಎಲ್ಲಾ ರೀತಿಯ ಪಾತ್ರಗಳಿಗೂ ಬಣ್ಣ ಹಚ್ಚಿ ಸೈ ಎನಿಸಿಕೊಳ್ಳಬೇಕೆನ್ನುವ ಪಾಠ. ಆದ್ರೆ ಸಿನಿಮಾ ಅಂತ ಬಂದಾಗ ನನಗೆ ಹೆಚ್ಚು ಫೋಕಸ್ ಸಿಕ್ಕಿದ್ದು ವಿಲನ್ ಪಾತ್ರಗಳ ಮೂಲಕವೇ. ಅದಕ್ಕೆ ಕಾರಣ ಭಜರಂಗಿ ಚಿತ್ರ. ಅಲ್ಲಿ ನಾನು ಕಾಣಿಸಿಕೊಂಡ ವಿಲನ್ ಪಾತ್ರಕ್ಕೆ ಹೆಚ್ಚು ಜನಪ್ರಿಯತೆ ಬಂತು. ಈಗ ಬೇರೆ ಬೇರೆ ರೀತಿಯ ಪಾತ್ರಗಳಲ್ಲೂ ಪ್ರಯೋಗಕ್ಕೆ ಒಡ್ಡಿಕೊಳ್ಳಬೇಕು ಅನ್ನಿಸಿತ್ತು. ಅದೇ ಸಮಯದಲ್ಲಿ ಸಿಕ್ಕಿದ್ದು ಸ್ಟ್ರೈಕರ್ ಸಿನಿಮಾದ ಅವಕಾಶ’ ಅಂತಾರೆ ನಟ ಸೌರವ್ ಲೋಕೇಶ್ ಅಲಿಯಾಸ್ ಭಜರಂಗಿ ಲೋಕಿ. ‘ಸ್ಟ್ರೈಕರ್’ ಪವನ್ ತ್ರಿವಿಕ್ರಮ್ ನಿರ್ದೇಶನದ ಮೊದಲ ಚಿತ್ರ. ಇದೊಂದು ಥ್ರಿಲ್ಲರ್ ಸಿನಿಮಾ. ‘ಪೊಲೀಸ್ ಆಫೀಸರ್ ಪಾತ್ರ. ಪಾಸಿಟಿವ್ ಆಗಿದೆ. ಆ ಪಾತ್ರಕ್ಕೆ ನಾನು ಸೂಟ್ ಆಗ್ತೇನಾ ಅಂತ ಅನುಮಾನವಿತ್ತು. ಆ ಪಾತ್ರದಲ್ಲಿ ಅಭಿನಯಿಸಿದ ನಂತರ ಎಲ್ಲರಿಗೂ ಅದು ಇಷ್ಟವಾಯಿತು’ ಎನ್ನುತ್ತಾರೆ ಲೋಕಿ. ಈ ನಡುವೆ ಟಕ್ಕರ್ ಹಾಗೂ ‘ದಮಯಂತಿ’ ಚಿತ್ರಗಳಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ.