ನಟಿ ನೀತೂ ಶೆಟ್ಟಿಮತ್ತೊಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಶೇ.75 ಭಾಗ ಚಿತ್ರೀಕರಣ ಮುಗಿಸಿರುವ ಈ ಚಿತ್ರದ ಹೆಸರು ಕೂಡ ಭಿನ್ನವಾಗಿದೆ. ಈ ಚಿತ್ರವನ್ನು ಮಾಡುತ್ತಿರುವುದು ಸಾಫ್ಟ್‌ವೇರ್ ಉದ್ಯೋಗಿಗಳು. ಬಹುತೇಕ ಎಲ್ಲರಿಗೂ ಮೊದಲ ಚಿತ್ರವಾಗಿರುವ ಇಲ್ಲಿ, ನೀತೂ ಅವರೇ ಸ್ಟಾರ್ ನಟಿ. ಚಿತ್ರದ ಹೆಸರು ‘1888’.
ಸೌರಭ್ ಶುಕ್ಲಾ ಈ ಚಿತ್ರದ ನಿರ್ದೇಶಕರು. ಪ್ರತಾಪ್ ಹಾಗೂ ಮಂಜು ಈ ಚಿತ್ರದ ಮೂಲಕ ಹೊಸದಾಗಿ ಪರಿಚಯವಾಗುತ್ತಿದ್ದಾರೆ.
ಕನ್ನಡದ ಟಾಪ್ ನಟಿ: ನಟ ಶ್ರೀಮುರಳಿ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿರುವ ಈ ಚಿತ್ರದಲ್ಲಿ ನೀತೂ ಕನ್ನಡದ ಟಾಪ್ ನಟಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಪಾತ್ರದ ಹೆಸರು ಸಂಧ್ಯಾ ಶೆಟ್ಟಿ. ‘ನನ್ನ ಮಟ್ಟಿಗೆ ಇದೊಂದು ರೀತಿಯ ಪಾತ್ರ. ಒಬ್ಬ ನಟಿಯ ಸುತ್ತ ಸಾಗುವ ಈ ಕತೆಯಲ್ಲಿ ನಾನೇ ಆ ನಟಿಯಾಗಿ ಕಾಣಿಸಿಕೊಂಡಿದ್ದೇನೆ. ಕುತೂಹಲದ ಜತೆಗೆ ಗ್ರೇ ಶೇಡ್ ಇರುವ ಪಾತ್ರ ನನ್ನದು’ ಎನ್ನುತ್ತಾರೆ ನೀತೂ.
#MeToo ಟೀಕಾಕಾರರಿಗೆ ಖಡಕ್ ಉತ್ತರ ಕೊಟ್ಟ ನಟಿ ನೀತೂ ಶೆಟ್ಟಿ
ಹಾಡು ಬರೆದ ನೀತೂ: ನಟನೆ ಜತೆಗೆ ಈ ಚಿತ್ರಕ್ಕಾಗಿ ನೀತೂ ಒಂದು ಹಾಡು ಬರೆಯುವ ಮೂಲಕ ಗೀತ ರಚನೆಯಲ್ಲೂ ತಮ್ಮ ಅದೃಷ್ಟಪರೀಕ್ಷೆಗೆ ಇಳಿದ್ದಾರೆ. ಹಾಗೆ ನೋಡಿದರೆ ತಾವೇ ನಟಿಸುತ್ತಿರುವ ಈ ಚಿತ್ರದಲ್ಲಿ ನೀತೂ ಬರೆದಿರುವ ಹಾಡಿನಲ್ಲಿ ಬೇರೆ ಜೋಡಿ ಕಾಣಿಸಿಕೊಳ್ಳುತ್ತಿದೆ. ಅಂದರೆ ಇಲ್ಲಿ ಪ್ರತಾಪ್ ಹಾಗೂ ಅದ್ವಿತಿ ಶೆಟ್ಟಿಜೋಡಿಗಾಗಿ ನೀತು ಹಾಡು ಬರೆದಿದ್ದಾರಂತೆ. ಇದೊಂದು ಡ್ಯೂಯೆಟ್ ಅಂತೆ. ಇವರು ಬರೆದಿರುವ ಹಾಡನ್ನು ವಿಕಾಸ್ ವಸಿಷ್ಠ ಹಾಗೂ ಈಶ ಸುಚಿ ಹಾಡಿದ್ದಾರೆ.
ಸ್ನೇಹ ಬಳಗದ ಸಿನಿಮಾ: ಈ ಚಿತ್ರದಲ್ಲಿ ನಟಿಸುತ್ತಿರುವ ಹಾಗೂ ತೆರೆ ಹಿಂದೆ ಕೆಲಸ ಮಾಡುತ್ತಿರುವ ಬಹುತೇಕರು ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಸ್ನೇಹಿತರು. ತಾವೇ ಒಂದು ತಂಡವನ್ನು ಕಟ್ಟಿಕೊಂಡು ಈ ಸಿನಿಮಾ ಮಾಡುತ್ತಿದ್ದಾರೆ. ಪ್ರದೀಪ್ ಎಂಬುವವರು ಈ ಚಿತ್ರಕ್ಕೆ ಕ್ಯಾಮೆರಾ ಹಿಡಿದ್ದಾರೆ.
