ಇತ್ತೀಚೆಗೆ ಅಲ್ಲಿ ಚಿತ್ರೀಕರಣಗೊಂಡ ಸಿನಿಮಾಗಳ ಜತೆಗೆ ಈಗ ಅಲ್ಲಿ ಚಿತ್ರೀಕರಣಕ್ಕೆ ಬೀಡು ಬಿಟ್ಟಿರುವ ಕನ್ನಡದ ಅದ್ಧೂರಿ ಸಿನಿಮಾಗಳ ಸಂಖ್ಯೆಯೇ ಅದಕ್ಕೆ ಸಾಕ್ಷಿ. ಸದ್ಯ ಅಲ್ಲಿ ಕೃಷ್ಣ ನಿರ್ದೇಶನದ ‘ಪೈಲ್ವಾನ್’, ನಂದಕಿಶೋರ್ ನಿರ್ದೇಶನದ ‘ಪೊಗರು’, ಚೇತನ್ ನಿರ್ದೇಶನದ ‘ಭರಾಟೆ’ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಸುದೀಪ್, ಶ್ರೀಮುರಳಿ, ಧ್ರುವ ಸರ್ಜಾ ಎಲ್ಲರೂ ಒಂದೇ ಕಡೆ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.

ಕಿಚ್ಚ ಸುದೀಪ್ ಅಭಿನಯದ ‘ಪೈಲ್ವಾನ್’ ಚಿತ್ರೀಕರಣಶುರುವಾಗಿದೆ ತಿಂಗಳು ಕಳೆದಿವೆ. ವಿಶೇಷವಾದ ಸೆಟ್‌ನಲ್ಲಿಚಿತ್ರೀಕರಣ ನಡೆಸಲು ಚಿತ್ರತಂಡ ಪ್ಲ್ಯಾನ್ ಹಾಕಿಕೊಂಡಿತ್ತು.ಆದರೆ, ಬೆಂಗಳೂರಿನಲ್ಲಿ ಅಂತಹ ಸೆಟ್ ಹಾಕುವುದಕ್ಕೆ ಜಾಗಸಿಗದ ಪರಿಣಾಮ ಚಿತ್ರತಂಡ ಹೈದರಾಬಾದ್‌ಗೆ ಹಾರಿತು.ಚಿತ್ರಕ್ಕೆ ಈಗಲೂ ಅಲ್ಲಿಯೇ ಚಿತ್ರೀಕರಣ ನಡೆಯುತ್ತಿದ್ದು,ಬಹುತೇಕ ಕ್ಲೈಮ್ಸಾಕ್ಸ್ ಹಂತಕ್ಕೆ ಕಾಲಿಟ್ಟಿದೆ.

ಧ್ರುವ ಸರ್ಜಾ ಅಭಿನಯದ ‘ಪೊಗರು’ ಚಿತ್ರತಂಡಇದೀಗ ತಾನೇ ಅಲ್ಲಿಗೆ ಕಾಲಿಟ್ಟಿದೆ. ಬಿ.ಕೆ. ಗಂಗಾಧರ್ ನಿರ್ಮಾಣದಲ್ಲಿ ನಂದ ಕಿಶೋರ್ ಆ್ಯಕ್ಷನ್ ಕಟ್ ಹೇಳುತ್ತಿರುವ ಚಿತ್ರವಿದು. ಚಿತ್ರ ತಂಡ ಹೇಳುವ ಪ್ರಕಾರ ಚಿತ್ರದ ಪ್ರಮುಖ ಸೀಕ್ವೆನ್ಸ್‌ಗಳ ಚಿತ್ರೀಕರಣ ಅಲ್ಲಿಯೇ ನಡೆಯಲಿದೆ. ಅಲ್ಲಿ ಉಗ್ರ ನರಸಿಂಹನ ಮೂರ್ತಿ ಇರುವ ಸೆಟ್ ಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ.

ಶ್ರೀಮುರಳಿ ಅಭಿನಯದ ‘ಭರಾಟೆ ’ಚಿತ್ರತಂಡ ಕೂಡ ಅಲ್ಲಿಗೆ ಪ್ರಯಾಣ ಬೆಳೆಸಿದೆ. ಫೆ.12 ಮತ್ತು 13 ಎರಡು ದಿನಗಳ ಕಾಲ ಅಲ್ಲಿ ಚಿತ್ರೀಕರಣ ನಡೆಯಲಿದೆ. ‘ರೈಲ್ವೆ ಸ್ಟೇಷನ್ ಸೀಕ್ವೇನ್ಸ್ ಚಿತ್ರೀಕರಣಕ್ಕಾಗಿ ನಾವು ಅಲ್ಲಿಗೆ ಹೊರಟಿದ್ದೇವೆ. ಅಂತಹ ವ್ಯವಸ್ಥೆ ಇಲ್ಲಿ ಎಲ್ಲೂ ಲಭ್ಯವಿಲ್ಲ. ರಿಯಲ್ ಆಗಿ ಯಾವುದಾದರೂ ರೈಲ್ವೆ ಸ್ಟೇಷನ್‌ನಲ್ಲೇ ಚಿತ್ರೀಕರಣ ಮಾಡೋಣ ಅಂದುಕೊಂಡರೆ, ರೈಲ್ವೆ ಇಲಾಖೆ ಅನುಮತಿ ಪಡೆಯುವುದಕ್ಕೂ ಹೆಣಗಾಡಬೇಕು. ಅಲ್ಲಾದ್ರೆ, ಅದಕ್ಕೆಲ್ಲ ಪರದಾಡಬೇಕಿಲ್ಲ. ಬಾಡಿಗೆ ಕಟ್ಟಿದರೆ ಸಾಕು. ಸುಲಭವಾಗಿ ಚಿತ್ರೀಕರಣ ಮುಗಿಸಿಕೊಂಡು ಬರಬಹುದು’ ಎನ್ನುವ ಮೂಲಕ ಕನ್ನಡ ಚಿತ್ರೋದ್ಯಮ ಎದುರಿಸುತ್ತಿರುವ ವ್ಯವಸ್ಥಿತ ಸ್ಟುಡಿಯೋ ಸಮಸ್ಯೆಯನ್ನು ನೋವಿನಿಂದ ಹೇಳಿಕೊಳ್ಳುತ್ತಾರೆ ನಿರ್ದೇಶಕ ಚೇತನ್ ಕುಮಾರ್.

ಇವಿಷ್ಟೇ ಅಲ್ಲದೆ, ದರ್ಶನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಮುನಿರತ್ನ ಕುರುಕ್ಷೇತ್ರ’ ಚಿತ್ರಕ್ಕೆ ಪೂರ್ಣ ಪ್ರಮಾಣ ಚಿತ್ರೀಕರಣ ನಡೆದಿದ್ದೇ ರಾಮೋಜಿ ಫಿಲ್ಮ್ ಸಿಟಿಯಲ್ಲಿ. ಹಿಂದೆ ಬಾಹುಬಲಿ ಚಿತ್ರೀಕರಣಕ್ಕಾಗಿ ಅಲ್ಲಿ ಅದ್ಧೂರಿ ಆಗಿ ಹಾಕಲಾಗಿದ್ದ ಸೆಟ್‌ನಲ್ಲೇ ‘ಕುರುಕ್ಷೇತ್ರ’ಕ್ಕೂ ಚಿತ್ರೀಕರಣ ನಡೆಯಿತು. ಒಂದಲ್ಲ, ಎರಡಲ್ಲ ಸರಿ ಸುಮಾರು ಎರಡೂವರೆ ತಿಂಗಳ ಕಾಲ ಚಿತ್ರೀಕರಣಕ್ಕಾಗಿಯೇ ಚಿತ್ರ ತಂಡ ಅಲ್ಲಿ ಬೀಡು ಬಿಟ್ಟಿತ್ತು. ಅದಕ್ಕಾಗಿಯೇ ಚಿತ್ರತಂಡದ ಅಷ್ಟು ಕಲಾವಿದರು ಇಲ್ಲಿಂದ ಅಲ್ಲಿಗೆ ಹೋಗಿ ಬಂದರು. 

ಬೆಂಗಳೂರಿನಲ್ಲಿ ಸ್ಟುಡಿಯೋ ಇಲ್ಲದಿರುವುದೇ ಸಮಸ್ಯೆ!

ಬೆಂಗಳೂರಿನಲ್ಲಿ ಸಿನಿಮಾ ಶೂಟಿಂಗ್ ಸ್ಟುಡಿಯೋ ಇಲ್ಲ ಅಂತಲ್ಲ. ಸರ್ಕಾರಿ ಸ್ವಾಮ್ಯದ ಕಂಠೀರವ ಸ್ಟುಡಿಯೋ ಸೇರಿ ಖಾಸಗಿ ವಲಯದ ಹಲವು ಸ್ಟುಡಿಯೋ ಇವೆ. ಆದರೆ ಇರುವ ಸ್ಟುಡಿಯೋಗಳಲ್ಲಿ ಕಿರುತೆರೆಯ ರಿಯಾಲಿಟಿ ಶೋಗಳಿಗೆ ಚಿತ್ರೀಕರಣ ನಡೆಯುತ್ತಿವೆ. ಕೆಲವು ಸ್ಟುಡಿಯೋಗಳು ಖಾಯಂ ಕಿರುತೆರೆ ಶೋಗಳಿಗೆ ಫಿಕ್ಸ್ ಆಗಿವೆ. ದೊಡ್ಡ ಮಟ್ಟದಲ್ಲೆ ಸೆಟ್ ಹಾಕಿ ಚಿತ್ರೀಕರಣ ನಡೆಸುವಷ್ಟು ವಿಶಾಲ ಜಾಗ ಹೊಂದಿದ ಸ್ಟುಡಿಯೋಗಳ ಸಮಸ್ಯೆಯಿಂದಾಗಿಯೇ ಕನ್ನಡ ಸಿನಿಮಾ ಮಂದಿ ಚಿತ್ರೀಕರಣಕ್ಕಾಗಿ ಪರ ಊರುಗಳಿಗೆ ಹೋಗಬೇಕಾಗಿದೆ ಎನ್ನುವ ನೋವು ಸಿನಿಮಾ ಮಂದಿಯದ್ದು.