ಬೆಂಗಳೂರು (ಫೆ. 15):  ನಿರ್ದೇಶಕ ಜಯತೀರ್ಥ ಈ ಬಾರಿ ಒಂದು ವಿಶೇಷವಾದ ಕಾಂಬಿನೇಷನ್‌ ಮೂಲಕ ಬರುತ್ತಿದ್ದಾರೆ. ರಿಷಬ್‌ ಶೆಟ್ಟಿ‘ಬೆಲ್‌ ಬಾಟಂ’ ಹೀರೋ ಎಂಬುದು ಈ ವಿಶೇಷತೆಗಳ ಮೊದಲ ಅಂಶ. ಆರು ಮಂದಿ ನಿರ್ದೇಶಕರು ಈ ಚಿತ್ರದಲ್ಲಿದ್ದಾರೆ. ಹರಿಪ್ರಿಯಾ ನಾಯಕಿ. ಟಿ ಕೆ ದಯಾನಂದ್‌ ಕತೆ ಬರೆದಿದ್ದಾರೆ. ಈ ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ರೆಟ್ರೋ ಲೋಕದ ಈ ಪತ್ತೆದಾರಿ ಸಿನಿಮಾ ಕುರಿತು ರಿಷಬ್‌ ಹೇಳಿದ್ದೇನು?

ಬೆಲ್‌ ಬಾಟಂ ಚಿತ್ರದ ಸ್ಕಿ್ರಪ್ಟ್‌ನಲ್ಲಿ ನಿಮ್ಮನ್ನು ಆಕರ್ಷಿಸಿದ ಅಂಶಗಳೇನು?

ಪಾತ್ರವೇ ನನಗೆ ಹೆಚ್ಚು ಸ್ಟೆ್ರೖಕ್‌ ಆಯಿತು. ಡಿಟೆಕ್ಟಿವ್‌ ದಿವಾಕರ ಅನ್ನೋ ಕ್ಯಾರೆಕ್ಟರ್‌ ನನಗೆ ಬಹು ಬೇಗ ಹತ್ತಿರವಾಯಿತು. ಜತೆಗೆ ರೆಟ್ರೋ ನೆರಳಿನಲ್ಲಿ ಸಾಗುವ ಪತ್ತೇದಾರಿ ಕತೆ ಅನ್ನೋದು ಮಜಾ. ಇಲ್ಲಿ ಡಿಟೆಕ್ಟಿವ್‌ ಡಿಫೆಕ್ಟ್ ಆಗಿರುತ್ತಾನೆ ಅನ್ನೋದು ಮತ್ತಷ್ಟಮಜಾ ಕೊಟ್ಟಿತು. ಆ ಕಾರಣಕ್ಕೆ ನಾನು ಕತೆಗೆ ಬಹು ಬೇಗ ಕನೆಕ್ಟ್ ಆದೆ. ಕಾಮಿಡಿ ಶೈಲಿಯಲ್ಲಿ ಹೊಸ ರೀತಿಯ ಕತೆ ಹೇಳಿರುವುದೇ ಈ ಚಿತ್ರದ ಮತ್ತೊಂದು ಪ್ಲಸ್‌ ಪಾಯಿಂಟ್‌.

ಈ ಚಿತ್ರಕ್ಕೆ ನೀವೇ ಹೀರೋ ಆಗಬೇಕು ಅನಿಸಿದ್ದು ಯಾಕೆ?

ನಾನು ಹೀರೋ ಆಗಬೇಕು ಅಂತ ಯೋಚಿಸಲಿಲ್ಲ. ಆದರೆ, ನಾನು ಬೇರೆ ಬೇರೆ ಚಿತ್ರಗಳಲ್ಲಿ ಸಣ್ಣಪುಟ್ಟಪಾತ್ರಗಳಲ್ಲಿ ನಟಿಸಿದ್ದೇನೆ. ಹೀಗಾಗಿ ಒಂದು ದೊಡ್ಡ ಪಾತ್ರ ಮಾಡಿದರೆ ಹೇಗಿರುತ್ತದೆ ಎಂದು ಯೋಚಿಸುತ್ತಿದ್ದಾಗ ಸಿಕ್ಕ ಅವಕಾಶ ಇದು. ದಿವಾಕರನ ಪಾತ್ರ ಮಾಡುವಂತೆ ‘ಬೆಲ್‌ ಬಾಟಂ’ ತಂಡ ನನ್ನ ಕೇಳಿತು. ನನಗೂ ಆಸೆ ಇದ್ದಿದ್ದರಿಂದ ಮಾಡಿದೆ. ಹಾಗಂತ ನಾನು ಇಲ್ಲಿ ಟಾಪ್‌ ಮಾಸ್‌ ಹೀರೋಗಳ ರೀತಿ ಕಾಣಿಸಿಕೊಂಡಿಲ್ಲ. ಕಾಮನ್‌ ಮ್ಯಾನ್‌ಗೆ ಹತ್ತಿರವಾಗುವ ನಾರ್ಮಲ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ.

ಇಲ್ಲಿ ಆರು ಮಂದಿ ನಿರ್ದೇಶಕರು ಕೆಲಸ ಮಾಡಿದ್ದಾರೆ. ಅವರೊಂದಿಗೆ ನೀವು ಹೀರೋ ಆಗಿ ಹೇಗನಿಸುತ್ತಿದೆ?

ಈ ಚಿತ್ರಕ್ಕೆ ಕತೆ ಬರೆದಿರುವ ಟಿ ಕೆ ದಯಾನಂದ ಡೈರೆಕ್ಟ್ರು. ಚಿತ್ರದಲ್ಲಿ ನಟಿಸಿರುವ ಶಿವಮಣಿ, ಯೋಗರಾಜ್‌ ಭಟ್‌, ಸುಜಯ್‌ ಶಾಸ್ತ್ರಿ, ಪಿ ಡಿ ಸತೀಶ್‌, ಜಯತೀರ್ಥ ಹೀಗೆ ಈ ತಂಡದಲ್ಲಿ ನಿರ್ದೇಶಕರ ಸಂಖ್ಯೆ ಹೆಚ್ಚಿದ್ದರು. ಸೆಟ್‌ನಲ್ಲಿ ಮಾತ್ರ ಇರುತ್ತಿದ್ದರು. ಯಾರೂ ಮಧ್ಯ ಪ್ರವೇಶ ಮಾಡುತ್ತಿರಲಿಲ್ಲ. ಆದರೆ, ಸಿನಿಮಾಗಳ ಸುತ್ತ ದೊಡ್ಡ ದೊಡ್ಡ ಚರ್ಚೆಗಳು ನಡೆಯುತ್ತಿದ್ದವು. ನಮ್ಮ ಸೆಟ್‌ನಲ್ಲಿ ಜಗತ್ತಿನ ಎಲ್ಲಾ ಸಿನಿಮಾಗಳು ಬಂದು ಹೋಗುತ್ತಿದ್ದವು. ಇದರ ಹೊರತಾಗಿ ಆರು ಮಂದಿ ನಿರ್ದೇಶಕರು ಇರುವ ತಂಡದ ಚಿತ್ರದ ನಾಯಕ ಅಂತ ನನಗೆ ಅನಿಸಲಿಲ್ಲ.

ನಿಮ್ಮಿಂದ ಹೆಚ್ಚು ಶ್ರಮ ಬೇಡಿ ಅಭಿನಯ ತೆಗೆಸಿದ ಮರೆಯಲಾಗದ ದೃಶ್ಯ ಯಾವುದು?

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದಲ್ಲಿ ಅನಂತ್‌ನಾಗ್‌ ಅವರ ಜತೆ ಕೆಲಸ ಮಾಡಿದ ಮೇಲೆ ಒಂದಿಷ್ಟುಕಲಿತೆ. ಪಾತ್ರದ ಗಾತ್ರ, ಅವಧಿ ಎಷ್ಟೇ ಇದ್ದರೂ ಅದನ್ನು ನೆಗ್ಲೆಕ್ಟ್ ಮಾಡಬಾರದು. ಸಣ್ಣ ಪಾತ್ರ, ಸಣ್ಣ ದೃಶ್ಯವೂ ಮಹತ್ವದ್ದು ಎಂದು ಅನಂತ್‌ ಅವರಿಂದ ಕಲಿತೆ. ಅವರೊಂದು ರೀತಿಯಲ್ಲಿ ಕಲಿಯುವವರ ಪಾಲಿಗೆ ಯೂನಿವರ್ಸಿಟಿ ಇದ್ದಂತೆ. ಅವರಿಂದ ನಾನು ಕಲಿತಿದ್ದನ್ನೇ ‘ಬೆಲ್‌ ಬಾಟಂ’ನಲ್ಲಿ ಫಾಲೋ ಮಾಡಿದೆ. ಹೀಗಾಗಿ ಇಡೀ ಸಿನಿಮಾ ಮತ್ತು ಅಲ್ಲಿ ಬರುವ ಪ್ರತಿಯೊಂದು ದೃಶ್ಯವೂ ನನಗೆ ಮಹತ್ವ ಅನಿಸಿತು. ಜತೆಗೆ ಎಲ್ಲ ದೃಶ್ಯಗಳಲ್ಲಿ ಅದೇ ಡಿಟೆಕ್ಟಿವ್‌ ದಿವಾಕರನಾಗಿ ನಟಿಸಿದ್ದೇನೆ.

ನಿರ್ದೇಶಕರಾಗಿ ನಾಯಕಿಯರಿಂದ ಕೆಲಸ ತೆಗೆಸಿದ್ದಕ್ಕೂ, ನಾಯಕನಾಗಿ ಕ್ಯಾಮೆರಾ ಮುಂದೆ ಅವರ ಜತೆ ನಟಿಸಿದ ಅನುಭವ ಹೇಗಿತ್ತು?

ಕ್ಯಾಮೆರಾ ಮುಂದೆ ನಾಯಕಿ ಜತೆ ನಿಂತಾಗ ಅವರ ಕಷ್ಟಮಾತ್ರವಲ್ಲ, ಅವರ ಜತೆ ಆ್ಯಕ್ಟ್ ಮಾಡುವ ನಾಯಕನ ಫಜೀತಿಗಳು ಕೂಡ ಅರ್ಥವಾಯಿತು. ಅದರಲ್ಲೂ ನನಗೆ ಹಾಡುಗಳ ಚಿತ್ರೀಕರಣದ ಸಂದರ್ಭದಲ್ಲಿ ತುಂಬಾ ನಾಚಿಕೆ ಆಗುತ್ತಿತ್ತು. ಸುತ್ತಲೂ ಹತ್ತಾರು ಮಂದಿ. ಮ್ಯೂಸಿಕ್‌ ಬೇರೆ. ನಾನು ಹುಡುಗಿ ಜತೆ ರೊಮ್ಯಾನ್ಸ್‌ ಮಾಡಬೇಕು. ನನ್ನ ಫಜೀತಿ ಹೇಗಿರಬೇಡ ನೀವೇ ಯೋಚಿಸಿ. ಸಾಲದಕ್ಕೆ ನನ್ನ ಮನೆಯವರು ಬೇರೆ ಸೆಟ್‌ನಲ್ಲೇ ಇರುತ್ತಿದ್ದರು. ‘ಇನ್ನೂ ಚೆನ್ನಾಗಿ ಮಾಡಪ್ಪ’ ಅಂತ ಕಾಲೆಳೆಯೋರು. ನನಗೇ ಒಳಗೊಳಗೆ ನಾಚಿಕೆ. ನನ್ನ ನಾಚಿಕೆಯನ್ನು ದೂರ ಮಾಡಕ್ಕೆ ಒಂದಿಷ್ಟುಜೋಕ್ಸ್‌ ಮಾಡೋರು.

ಚಿತ್ರದ ಕತೆಯ ಬಗ್ಗೆ ಹೇಳುವುದಾದರೆ?

ಒಂದು ಸಾಲು ಹೇಳಿದರೂ ಕತೆ ಗೊತ್ತಾಗುತ್ತದೆ. ಆದರೆ, ಸಿನಿಮಾಗಳಿಂದ ಪ್ರಭಾವಿತನಾಗಿ ಡಿಟೆಕ್ಟಿವ್‌ ಆಗಬೇಕು ಅಂತ ಹೊರಡುವ ಒಬ್ಬ ಪೊಲೀಸ್‌ ಪೇದೆಯ ಸುತ್ತ ಕತೆ ಸಾಗುತ್ತದೆ. ಡಾ ರಾಜ್‌ಕುಮಾರ್‌ ಅವರು ಬಾಂಡ್‌ ಸಿನಿಮಾಗಳನ್ನು ನೋಡಿ ಪತ್ತೇದಾರಿಕೆ ಮಾಡಕ್ಕೆ ಹೋದರೆ ಹೇಗಿರುತ್ತದೆ ನೀವೇ ಹೇಳಿ. ಅಂಥ ಮಜಾವಾಗಿ ಸಾಗುವ ದೃಶ್ಯಗಳ ಸುತ್ತ ಕತೆ ನಡೆಯುತ್ತದೆ.

ಈ ಸಿನಿಮಾ ನೋಡಕ್ಕೆ ನೀವು ಕೊಡುವ ಟಾಪ್‌ 5 ಕಾರಣಗಳೇನು?

- ದುಡ್ಡು ಕೊಟ್ಟು ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕನಿಗೆ ಯಾವ ಕಾರಣಕ್ಕೂ ಬೇಸರ ತರಿಸಲ್ಲ. ತುಂಬಾ ನಗಿಸುವ ಕತೆ.

- ನಗಿಸುತ್ತಲೇ ಪ್ರೇಕ್ಷಕನೊಳಗೊಂದು ಪತ್ತೆದಾರಿಕೆಯ ಮನಸ್ಸು ಹುಟ್ಟು ಹಾಕುತ್ತದೆ. ಒಂದೇ ಒಂದು ಕ್ಲ್ಯೂ ಕೂಡ ಇಲ್ಲದೆ ಹೇಗೆ ಪ್ರಕರಣವನ್ನು ಬಗೆಹರಿಸುತ್ತಾನೆಂಬ ಕುತೂಹಲ ಮೂಡಿಸುತ್ತದೆ.

- ಕತೆಗೆ ಪೂರಕವಾಗುವ ಪ್ರಕರಣ ತುಂಬಾ ಆಸಕ್ತಿಕರವಾಗಿದೆ. ಅಂದರೆ ಒಂದು ಪೊಲೀಸ್‌ ಸ್ಟೇಷನ್‌ ಕಳ್ಳತನ ಆಗುತ್ತದೆ ಎಂದರೆ ಅದರ ಡಾರ್ಕ್ ಕಾಮಿಡಿ ಬಗ್ಗೆ ಹೇಳಬೇಕಿಲ್ಲ.

- 80ರ ದಶಕ ಕನ್ನಡ ಚಿತ್ರರಂಗದ ಗೋಲ್ಡನ್‌ ದಿನಗಳನ್ನು ಮತ್ತೆ ನೆನಪಿಸುವ ಸಿನಿಮಾ. ಆ ದಿನಗಳು, ಆಗ ಬರುತ್ತಿದ್ದ ಬಾಂಡ್‌ ಸಿನಿಮಾಗಳು ಈಗಿಲ್ಲ. ಆ ದಿನಗಳಿಗೆ ನಮ್ಮ ಚಿತ್ರ ಕರೆದುಕೊಂಡು ಹೋಗುತ್ತದೆ.

- ಚಿತ್ರಕ್ಕೆ ಅದ್ಭುತವಾದ ಸಂಗೀತ ನೀಡಿದ್ದಾರೆ. ಹಿನ್ನೆಲೆ ಸಂಗೀತವಂತೂ ಸೂಪರ್‌ ಆಗಿದೆ. ಇನ್ನೂ ದಿವಾಕರನ ಸುತ್ತ ಬರುವ ಪಾತ್ರಗಳು ಒಂದಕ್ಕಿಂತ ಒಂದು ಚೆನ್ನಾಗಿ ಬಂದಿವೆ.

ಬೆಲ್‌ ಬಾಟಂ ಚಿತ್ರದ ಬಗ್ಗೆ ನಿರೀಕ್ಷೆಗಳು ಹೆಚ್ಚಾಗಲು ಕಾರಣಗಳೇನು?

ಬಹುಶಃ ನಮ್ಮ ಚಿತ್ರದ ಮೇಲೆ ಪ್ರೇಕ್ಷಕರಿಗೆ ಕುತೂಹಲ ಹೆಚ್ಚಾಗಿರುವುದಕ್ಕೆ. ಅಂದರೆ ಸಿನಿಮಾ ಆರಂಭದಲ್ಲಿ ನಾರ್ಮಲ್ಲಾಗಿಯೇ ಶುರುವಾಯಿತು. ಮುಂದೆ ಪೋಸ್ಟರ್‌, ಕ್ಯಾರೆಕ್ಟರ್‌ ಪರಿಚಯದ ಟೀಸರ್‌, ಟ್ರೇಲರ್‌, ಹಾಡು, ನಮ್ಮ ಚಿತ್ರದ ಕತೆಗಾರ ದಯಾನಂದ ಅವರು ರೂಪಿಸುತ್ತಿದ್ದ ಪೋಸ್ಟರ್‌ಗಳು... ಹೀಗೆ ಬೇರೆ ಬೇರೆ ರೂಪದಲ್ಲಿ ಕಟೆಂಟ್‌ ಹೊರ ಬರುತ್ತಿದ್ದಾಗ ಜನಕ್ಕೆ ಚಿತ್ರದ ಮೇಲೆ ಕುತೂಹಲ ಮತ್ತು ನಂಬಿಕೆ ಹೆಚ್ಚಾಯಿತು. ಇದೇ ಬೆಲ್‌ ಬಾಟಂ ಸಿನಿಮಾ ಬಗ್ಗೆ ನಿರೀಕ್ಷೆಗೆ ಕಾರಣವಾಯಿತು.

ನೀವು ನಿರ್ದೇಶಕರಾಗಿ ಮತ್ತೊಬ್ಬ ನಿರ್ದೇಶಕರ ಚಿತ್ರದಲ್ಲಿ ನಟಿಸುವುದರ ಉಪಯೋಗ ಏನು?

ಒಂದೇ ಮಾತಿನಲ್ಲಿ ಹೇಳುವುದಾದರೆ ಕಲಿಯುವುದಕ್ಕೆ ತುಂಬಾ ಅವಕಾಶ ಸಿಕ್ಕಿತು. ಒಬ್ಬೊಬ್ಬ ನಿರ್ದೇಶಕನಿಗೂ ಒಂದೊಂದು ರೀತಿಯ ಪ್ರತಿಭೆ ಇರುತ್ತದೆ. ಕತೆ ಆಯ್ಕೆ ಮಾಡಿಕೊಳ್ಳುವುದರಿಂದ ಅದನ್ನು ತೆರೆ ಮೇಲೆ ತರುವ ತನಕ ಅವರು ಅನುಸರಿಸುವ ವಿಧಾನಗಳು ಹೇಗಿರುತ್ತವೆ ಎಂಬುದನ್ನು ತಿಳಿದುಕೊಂಡು. ನಾನು ನಿರ್ದೇಶಕ ಎನ್ನುವುದನ್ನು ಮರೆತು ಇಲ್ಲಿ ನಟಿಸುವುದಕ್ಕೆ ಸಾಧ್ಯವಾಯಿತು.

- ಆರ್. ಕೇಶವಮೂರ್ತಿ