Asianet Suvarna News Asianet Suvarna News

ಮಗಳು ಖುಷ್‌ ನಾನೂ ಖುಷ್‌: ಸುದೀಪ್‌

ಸುದೀಪ್‌ ನಟನೆಯ ಪೈಲ್ವಾನ್‌ ಚಿತ್ರ ಥೇಟರ್‌ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಈ ಸಂದರ್ಭದಲ್ಲಿ ಕಿಚ್ಚನ ಜತೆ ಮಾತುಕತೆ.

Sandalwood actor kiccha sudeep pailwaan exclusive interview after Release
Author
Bangalore, First Published Sep 13, 2019, 7:56 AM IST

ದೇಶಾದ್ರಿ ಹೊಸ್ಮನೆ

- ನೀವು ಎಂದಾದ್ರೂ ಈ ಥರ ‘ಪೈಲ್ವಾನ್‌’ ಆಗ್ತೀನಿ ಅಂಥ ಅಂದ್ಕೊಂಡಿದ್ರಾ?

ದೇವರಾಣೆಗೂ ಇಲ್ಲ. ಹೋಗ್ಲಿ ಕೆಟ್ಟಕನಸಲ್ಲೂ ಹಾಗೆಲ್ಲ ಯೋಚಿಸಿರಲಿಲ್ಲ. ಆದ್ರೇನು ಮಾಡೋದು, ನಿರ್ದೇಶಕ ಕಿಟ್ಟಪ್ಪ ನನ್‌ ಮೇಲೆ ಇದೆಲ್ಲ ಪ್ರಯೋಗ ಮಾಡಿಬಿಟ್ಟ. ರುಚಿ ಎನಿಸಿದ್ದೆಲ್ಲ ತಿನ್ನೋದಿಕ್ಕೆ ಬ್ರೇಕ್‌ ಹಾಕಿಸಿಬಿಟ್ಟ. ಮೊದಲೆಲ್ಲ ಕಷ್ಟಎನಿಸಿತು. ಆ ಮೇಲೆ ರೂಢಿ ಆಯ್ತು. ಐ ಆ್ಯಮ್‌ ಹ್ಯಾಪಿ.

- ವಿಶೇಷವಾಗಿ ನಿಮ್ಮ ‘ಪೈಲ್ವಾನ್‌’ ಗೆಟಪ್‌ಗೆ ಮಗಳ ಪ್ರತಿಕ್ರಿಯೆ ಹೇಗಿತ್ತು?

ಬೇಕಾದ್ರೆ ಎಲ್ಲರನ್ನು ಮೆಚ್ಚಿಸಿ ಬಿಡಬಹುದು, ಆದ್ರೆ ಮಕ್ಕಳನ್ನು ಮೆಚ್ಚಿಸೋದು ತುಂಬಾ ಕಷ್ಟ. ಫಸ್ಟ್‌ ಟೈಮ್‌ ‘ಪೈಲ್ವಾನ್‌’ ಫಸ್ಟ್‌ ಲುಕ್‌ ಲಾಂಚ್‌ ಆಗಿದ್ದಾಗ, ಮಗಳ ರಿಯಾಕ್ಷನ್‌ಗೆ ಉತ್ತರಿಸಲಾಗದೆ ಒದ್ದಾಡಿಬಿಟ್ಟೆ. ವಾಹ್‌.. ಇದು ನಿಜಕ್ಕೂ ನೀವಾ? ಅಚ್ಚರಿಯಿಂದಲೇ ಕೇಳಿದ್ದಳು. ಹೌದು, ಅದು ನಾನೇ ಅಂತ ಉತ್ತರಿಸಿದ್ದೆ. ತಿರುಗುಮುರುಗ ಎರಡ್ಮೂರು ಸಲ ಅದೇ ಪ್ರಶ್ನೆ, ನನ್ನಿಂದ ಅದೇ ಉತ್ತರ. ಕೊನೆಗೆ ಜಿಮ್‌ಗೆ ಹೋಗಿ ವರ್ಕೌಟ್‌ ಮಾಡಿ ತೋರಿಸಿ, ಇದು ನಾನೇ ಅಂತ ಹೇಳಬೇಕಾಯಿತು. ಈಗ ಸಿನಿಮಾ ನೋಡಿಯೂ ಖುಷಿ ಆಗಿದ್ದಾಳೆ. ವಂಡರ್‌ಫುಲ್‌ ಅಂತ ಶಹಬ್ಬಾಶ್‌ಗಿರಿ ಕೊಟ್ಟಿದ್ದಾಳೆ.

ಛೇ..ಬಿಡುಗಡೆ ದಿನವೇ ಪೈಲ್ವಾನ್ ಫುಲ್ ಮೂವಿ ಲೀಕ್..

- ಚಿತ್ರವೀಗ ಇಷ್ಟುದೊಡ್ಡ ಮಟ್ಟದಲ್ಲಿ ಮೂಡಿ ಬಂದಿದ್ದು ಹೇಗೆ, ಅದಕ್ಕಿರುವ ಶಕ್ತಿ ಏನು?

ಮೊದಲಿಗೆ ಕಂಟೆಂಟ್‌, ಆನಂತರ ಟೀಮ್‌ ವರ್ಕ್. ಇವೆರಡು ಇದರ ದೊಡ್ಡ ಶಕ್ತಿ. ಯಾಕಂದ್ರೆ, ಒಂದು ಸಿನಿಮಾವನ್ನು ಬಹುಭಾಷೆಗಳಲ್ಲಿ ತರಲು ಹೊರಟರೆ, ಅದರ ಕತೆ ಎಂಥದ್ದು, ಅದರ ಶಕ್ತಿ ಏನು, ಅದರ ಸ್ಟಾರ್‌ ಯಾರು, ಅವರು ಹೊಸಬರೇ, ಹಳಬರೇ ಎನ್ನುವಂತಹ ಹಲವು ಅಂಶಗಳು ಮುಖ್ಯವಾಗುತ್ತೆ. ಆ ವಿಚಾರದಲ್ಲಿ ‘ಪೈಲ್ವಾನ್‌’ ತುಂಬಾ ಸ್ಪೆಷಲ್‌. ಮೇಲ್ನೋಟಕ್ಕೆ ಸ್ಪೋಟ್ಸ್‌ರ್‍ ಕುರಿತ ಸಿನಿಮಾ, ಒಳಗಡೆ ಹಲವು ಅಂಶಗಳಿವೆ. ಅವೆಲ್ಲ ನಮ್ಮೊಳಗಿನ ಭಾವನೆಗಳಿಗೆ ಸಂಬಂಧಿಸಿದ್ದು. ಅವು ಎಲ್ಲಾ ಭಾಷೆಯ ಪ್ರೇಕ್ಷಕರಿಗೂ ಕನೆಕ್ಟ್ ಆಗುತ್ತವೆ. ಇನ್ನು ಆ ಕತೆಗೆ ತಕ್ಕಂತೆ ಕೃಷ್ಣ ಅವರು ನಿರ್ಮಾಣ ಮಾಡಿದ ರೀತಿಯೂ ಕೂಡ ಅತ್ಯದ್ಭುತ.

- ಬಾಲಿವುಡ್‌ನಲ್ಲಿ ‘ಪೈಲ್ವಾನ್‌’ ಪ್ರಮೋಷನ್‌ಗೆ ಸಿಕ್ಕ ರೆಸ್ಪಾನ್ಸ್‌ ಹೇಗಿತ್ತು?

ಮೊದಲಿಗೆ ಖುಷಿ ಆಗೋದು ಅಲ್ಲಿ ಅವರು ನಮಗೆ ನೀಡುವ ಗೌರವದ ಕಾರಣಕ್ಕೆ. ಬಾಲಿವುಡ್‌ ಮಾತ್ರವೇ ಅಲ್ಲ, ಅಂಥದ್ದೇ ವಾತಾವರಣ ಇವತ್ತು ತೆಲುಗು, ತಮಿಳು ಹಾಗೂ ಮಲಯಾಳಂನಲ್ಲೂ ಇದೆ. ಎಲ್ಲೂ ನಾವು ಒಂದು ಪ್ರೆಸ್‌ಮಿಟ್‌ ಅಂತ ನಡೆಸಿ ಬಂದಿಲ್ಲ. ಅಲ್ಲಿನವರ ಸಹಕಾರದಿಂದಲೇ ಪ್ರಚಾರ ನಡೆದಿದೆ. ಇದು ಇವತ್ತಿನ ಹೊಸ ಬೆಳವಣಿಗೆ. ಈಗ ಯಾವುದೇ ಸಿನಿಮಾಕ್ಕೆ ಭಾಷೆಯ ಗಡಿ ಇಲ್ಲ. ನಾವೆಲ್ಲ ಒಂದೇ ಎನ್ನುವ ಮನೋಭಾವ ಬಂದಿದೆ. ನನ್ನ ಮಟ್ಟಿಗೆ ಈ ಒಡನಾಟ ಬೆಳೆದಿದ್ದು ಒಂದು ಸಣ್ಣ ಸಿಸಿಎಲ್‌ ಎನ್ನುವ ಕ್ರೀಡೆಯ ಮೂಲಕ.

- ಸುನೀಲ್‌ ಶೆಟ್ಟಿಜತೆಗೆ ಅಭಿನಯಿಸಿದ ಅನುಭವ ಹೇಗಿತ್ತು?

‘ಮಾಣಿಕ್ಯ’ ಸಿನಿಮಾ ಮಾಡುವಾಗ ರವಿ ಸರ್‌ ಜತೆಗೆ ಕೆಲಸ ಮಾಡಿದ್ದೆ. ಅವರು ನನಗೆ ಅಣ್ಣನಂತೆ. ನನ್ನನ್ನು ಅವರು ಮಗನಂತೆ ಟ್ರೀಟ್‌ ಮಾಡುತ್ತಾರೆ. ಹಾಗಾಗಿ ಆ ಸಿನಿಮಾ ಚೆನ್ನಾಗಿ ಬಂತು. ಸಿನಿಮಾ ಅಂತ ಬಂದಾಗ ಕಲಾವಿದರ ನಡುವೆ ಅಂತಹ ಬಾಂಡಿಂಗ್‌ ಮುಖ್ಯ. ಈ ವಿಚಾರದಲ್ಲಿ ನನಗೆ ತುಂಬಾ ಹತ್ತಿರವಾಗಿದ್ದವರು ಸುನೀಲ್‌ ಶೆಟ್ಟಿ. ಸಿಸಿಎಲ್‌ನಲ್ಲೂ ಜತೆಗಿದ್ದರು. ಬೇರೆಯವರಿಗೆ ಅವರು ನೀಡುವ ಗೌರವ, ಮಾತನಾಡಿಸುವಾಗ ತೋರುವ ಆತ್ಮೀಯತೆ ತುಂಬಾ ಆಪ್ತ ಎನಿಸುತ್ತದೆ. ಅವರೊಳಗೊಬ್ಬ ಅಂತಃಕರಣದ ವ್ಯಕ್ತಿ ಇದ್ದಾನೆ. ಆ ಒಡನಾಟ ಇದ್ದ ಕಾರಣಕ್ಕೆ ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ ಎಂದರೆ ತಪ್ಪಿಲ್ಲ.

ಚಿತ್ರ ವಿಮರ್ಶೆ; ಪೈಲ್ವಾನ್!

- ಪೈಲ್ವಾನ್‌ ನಾಲ್ಕು ಭಾಷೆಯ ಅವತರಣಿಕೆಗೂ ನೀವೇ ವಾಯ್‌್ಸ ಡಬ್‌ ಮಾಡಿದ್ದು, ಇದು ಸಾಧ್ಯವಾಗಿದ್ದು ಹೇಗೆ?

ಡಬ್ಬಿಂಗ್‌ ಒಂದು ಅದ್ಭುತ ಕಲೆ. ಈ ಹಿಂದೆ ತೆಲುಗಿನ ‘ಈಗ’ ಚಿತ್ರಕ್ಕೆ ಮೂರು ಭಾಷೆಗಳಿಗೆ ನಾನೇ ಡಬ್‌ ಮಾಡಿದ್ದೆ. ಈಗ ಆ ಸಂಖ್ಯೆ ನಾಲ್ಕು ಭಾಷೆಗೆ ಏರಿಕೆ ಆಗಿದೆ. ಮಲಯಾಳಂನಲ್ಲಿ ಅದು ಸಾಧ್ಯವಾಗಿಲ್ಲ. ಅದ್ಯಾಕೋ ನನಗೆ ಈಗಲೂ ಮಲಯಾಳಂನಲ್ಲಿ ಮಾತನಾಡೋದಕ್ಕೆ ಆಗ್ತಿಲ್ಲ. ಉಳಿದಂತೆ ನಾಲ್ಕು ಭಾಷೆಯಲ್ಲೂ ಡಬ್‌ ಮಾಡೋದಂದ್ರೆ ಕಷ್ಟದ ಕೆಲಸ. ತುಂಬಾ ತಾಳ್ಮೆ ಬೇಕು. ಹಾಗೆಯೇ ಆ ಒತ್ತಡ ಸಹಿಸಿಕೊಳ್ಳಬೇಕು. ಹಾಗೊಂದು ವೇಳೆ ನೀವು ಅದನ್ನು ಎಂಜಾಯ್‌ ಮಾಡುತ್ತಾ ಹೊರಟರೆ, ಭಾಷೆ ಮೇಲೆ ಇನ್ನಷ್ಟುಹಿಡಿತ ಸಿಗುತ್ತೆ. ಪಾತ್ರದ ಸಣ್ಣ ಸಣ್ಣ ಭಾವನೆಗಳಿಗೂ ಜೀವ ತುಂಬುವ ಅವಕಾಶ ಸಿಗುತ್ತೆ.

- ಸಿನಿಮಾ ರಿಲೀಸ್‌ ಆಗಿದೆ, ಈಗಲಾದ್ರೂ ‘ಪೈಲ್ವಾನ್‌’ ಹ್ಯಾಂಗೋವರ್‌ನಿಂದ ಹೊರ ಬಂದ್ರಾ?

ಅದೇನು ಹ್ಯಾಂಗೋವರ್‌ ಗೊತ್ತಿಲ್ಲ, ನಾನು ಸಿನಿಮಾ ಹ್ಯಾಂಗೋವರ್‌ನ್ನು ಮನೆ ತನಕ ತೆಗೆದುಕೊಂಡು ಹೋಗಲ್ಲ. ಹಾಗೊಂದು ವೇಳೆ ನಾನೇನಾದ್ರೂ ಒಂದು ಸಿನಿಮಾದ ಹ್ಯಾಂಗೋವರ್‌ನಲ್ಲಿ ಇರೋದಾದ್ರೆ ಅದರ ಹಾರ್ಡ್‌ವರ್ಕ್ ಮತ್ತು ಶಿಸ್ತಿನ ವಿಚಾರದಲ್ಲಿ ಮಾತ್ರ. ಪೈಲ್ವಾನ್‌ ನನಗೆ ಅಂತಹ ಶಿಸ್ತು ಮೂಡಿಸಿದೆ. ಅದು ಬಿಟ್ಟರೆ ಕಲಾವಿದ ಒಂದೇ ಪಾತ್ರದ ಹ್ಯಾಂಗೋವರ್‌ನಲ್ಲಿ ಹೆಚ್ಚು ದಿನ ಉಳಿಯೋದಕ್ಕೆ ಆಗೋದಿಲ್ಲ. ನನಗೀಗ ಬೇರೆಯದೇ ಆದ ಸಿನಿಮಾಗಳಿವೆ. ದಬಾಂಗ್‌ ಸೆಟ್‌ಗೆ ಹೋದಾಗ ಆ ಪಾತ್ರಕ್ಕೆ ತಕ್ಕಂತಿರಬೇಕು. ಕೋಟಿಗೊಬ್ಬ 3 ಅಂತ ಬಂದಾಗ ಅಲ್ಲಿ ಪಾತ್ರಧಾರಿ ನಾನಾಗಿರಬೇಕು. ಹಾಗಾಗಿ ಬೆಳಗ್ಗೆ ಎದ್ದರೆ ನಾನೊಬ್ಬ ಖಾಲಿ ಹಾಳೆ.

- ಪೈಲ್ವಾನ್‌ ಚಿತ್ರದ ಅಷ್ಟುದೃಶ್ಯಗಳಲ್ಲಿ, ನೀವೇ ನಿರ್ದೇಶನ ಮಾಡಬೇಕಿನಿಸಿದ್ದ ದೃಶ್ಯ ಯಾವುದು, ಮತ್ತು ಯಾಕಾಗಿ?

ಚಿತ್ರಕ್ಕೆ ಕಿಟ್ಟಪ್ಪ ಡೈರೆಕ್ಟರ್‌, ನಾನು ನಾಯಕ ನಟ. ಆತ ನಿರ್ದೇಶನ ಮಾಡಿದ್ರೇನು, ನಾನು ನಿರ್ದೇಶನ ಮಾಡಿದ್ರೇನು, ಅಂತಹ ವ್ಯತ್ಯಾಸವೇನು ಇಲ್ಲ. ನಿಜ, ನಾನು ನಿರ್ದೇಶಕನಾಗಿರಬಹುದು, ಆದರೆ ಈ ಸಿನಿಮಾಕ್ಕೆ ನಾನು ನಟ ಮಾತ್ರ. ಸಿನಿಮಾ ವಿಚಾರದಲ್ಲಿ ಕೃಷ್ಣ ಮತ್ತು ನಾನು ಸಾಕಷ್ಟುಚರ್ಚಿಸಿದ್ದೇವೆ, ಮಾತುಕತೆ ನಡೆಸಿದ್ದೇವೆ. ಆದರೆ ಅದು ಹೀಗೆ ಇರಬೇಕಿತ್ತು ಅಂತ ಯಾವತ್ತಿಗೂ ನಾನು ಮೂಗು ತೂರಿಸಿಲ್ಲ. ಯಾಕಂದ್ರೆ, ಸಿನಿಮಾ ಅನ್ನೋದು ನಿರ್ದೇಶಕನ ಮೇಲಿರುತ್ತದೆ. ಆತನ ಮೂಸೆಯಲ್ಲಿ ಸಿನಿಮಾ ಬಂದರೆ ಚೆಂದ.

ಪೈಲ್ವಾನ್‌ ಗೆಲ್ಲಿಸುವ ತೂಕ ದೊಡ್ಮಗ ಸುದೀಪ್‌ಗೆ ಇದೆ: ರವಿಚಂದ್ರನ್‌

- ಪೈಲ್ವಾನ್‌ ಆಗ್ಬೇಕು ಅಂದಾಗ, ನಿಮಗೆ ಯಾರಾದ್ರೂ ಕುಸ್ತಿ ಪಟು ಮಾದರಿ ಎನಿಸಿದ್ರಾ?

ಕ್ಷಮಿಸಿ, ನನಗೆ ಅಂತಹ ಯಾವುದೇ ಥ್ಸಾಟ್ಸ್‌ ಬಂದಿರಲಿಲ್ಲ. ನನಗೆ ಬಂದಿದ್ದು ಈ ಸಿನಿಮಾ ಸೋಲಬಾರದು ಅಂತ. ಅದಕ್ಕೆ ತಕ್ಕಂತೆ ನಾನೇನು ಆಗ್ಬೇಕು, ಹೇಗೆ ಸಿದ್ಧತೆ ಮಾಡ್ಕೋಬೇಕು ಎನ್ನುವುದಷ್ಟೇ ನನ್ನ ತಲೆಯಲ್ಲಿತ್ತು. ನಿಜ, ಸಾಮಾನ್ಯವಾಗಿ ನಮಗೆ ಗೊತ್ತಿಲ್ಲದ ಒಂದು ವಿಷಯ, ಪಾತ್ರ ಅಂತಂದುಕೊಂಡಾಗ ಅದಕ್ಕೆ ಪೂರಕವಾದ ಅಂಶಗಳನ್ನು ಹುಡುಕುವುದು ಸಹಜ. ಈ ಪಾತ್ರಕ್ಕೆ ಸಿದ್ಧತೆ ಶುರುವಾದಾಗ, ಕುಸ್ತಿ ಬಗೆಗಿನ ಒಂದಷ್ಟುವಿಡಿಯೋಗಳನ್ನು ಯೂಟ್ಯೂಬ್‌ಗಳಲ್ಲಿ ನೋಡುತ್ತಾ ಬಂದೆ. ವಿಶೇಷವಾಗಿ ಮಹಮದ್‌ ಅಲಿ ಅವರ ವಿಷ್ಯುವಲ್ಸ್‌ ನೋಡಿದ್ದೆ. ಅದು ಬಿಟ್ಟರೆ, ಈ ಪಾತ್ರದ ಬೇಡಿಕೆ ಏನಿತ್ತೋ ಅದನ್ನೇ ಗಮನದಲ್ಲಿಟ್ಟುಕೊಂಡಿದ್ದೆ. ಅದನ್ನು ಫುಲ್‌ಫಿಲ್‌ ಮಾಡುವ ಕಡೆ ಶ್ರಮ ಹಾಕಿದ್ದೆ.

- ಸಲ್ಮಾನ್‌ ಖಾನ್‌ ಅವರಿಗೆ ಸಿನಿಮಾ ತೋರಿಸುವ ಪ್ರಯತ್ನ ಇದೆಯಾ?

ಈಗಾಗಲೇ ಅವರು ಸಿನಿಮಾ ನೋಡ್ಬೇಕಿತ್ತು. ಸಮಯ ಕೂಡ ಫಿಕ್ಸ್‌ ಆಗಿತ್ತು. ಅಪರೂಪ ಎನ್ನುವ ಹಾಗೆ ಅವರೇ ಸಿನಿಮಾ ನೋಡ್ಬೇಕು ಅಂತ ಹೇಳಿದ್ದರು. ಅದಕ್ಕೆ ಪೂರಕವಾಗಿ ಟೈಮ್‌ ಕೂಡ ನಿಗದಿ ಆಗಿತ್ತು. ಕಾರಣಾಂತರಗಳಿಂದ ಅದೀಗ ಸಾಧ್ಯವಾಗಿಲ್ಲ. ಇಂದೋ ಅಥವಾ ನಾಳೆಯೋ ಅವರು ಸಿನಿಮಾ ನೋಡಲಿದ್ದಾರೆ. ನಾನು ಕೂಡ ಅವರ ರಿಯಾಕ್ಷನ್‌ಗೆ ಕಾತರದಲ್ಲಿದ್ದೇನೆ.

- ಪೈಲ್ವಾನ್‌ ಈಗ ಕೇವಲ ಕನ್ನಡದ ಸಿನಿಮಾವಾಗಿ ಉಳಿದುಕೊಂಡಿಲ್ಲ, ಭಾರತೀಯ ಸಿನಿಮಾ ಆಗಿದೆ. ಈ ಕುರಿತು ಏನು ಹೇಳುತ್ತಿರಿ?

ಪೈಲ್ವಾನ್‌ ಶುರುವಿಗೆ ನಾವೆಲ್ಲ ಇದನ್ನು ಕೇವಲ ಕನ್ನಡದಲ್ಲಿ ಮಾತ್ರ ಮಾಡೋಣ ಅಂತ ನಿರ್ಧಾರ ಮಾಡಿದ್ದೆವು. ನಂತರದ ದಿನಗಳಲ್ಲೆ ಅದು ಇಂಡಿಯನ್‌ ಸಿನಿಮಾವಾಗಿ ಬದಲಾಗಿದ್ದು. ಮೇಕಿಂಗ್‌, ಕಥೆ, ತಯಾರಿ, ಕಲಾವಿದರು, ತಂತ್ರಜ್ಞರು ಹೀಗೆ ಒಂದೊಂದೇ ಅಂಶಗಳು ಸೇರುತ್ತಾ ಸೇರುತ್ತಾ ಬಹುಭಾಷೆಯ ಸಿನಿಮಾವಾಗಿ ರೂಪ ಪಡೆಯಿತು. ಟೀಸರ್‌ ರಿಲೀಸ್‌ ಆದ ನಂತರ ನಮ್ಮ ನಿರ್ಧಾರಕ್ಕೆ ಮತ್ತಷ್ಟುಬಲ ಬಂದಿತು.

- ಭವಿಷ್ಯದಲ್ಲಿ ಇಂತಹದೇ ಸ್ಪೋಟ್ಸ್‌ರ್‍ ಆಧಾರಿತ ಕತೆಗಳು ಬಂದ್ರೆ ಸಿನಿಮಾ ಮಾಡ್ತೀರಾ?

ನನಗೂ ಆಸೆಯಿದೆ. ರುಚಿ ಎನಿಸಿದ್ದನ್ನು ತಿನ್ನಬೇಕು, ದಪ್ಪ ಆಗ್ಬೇಕು ಅಂತೆನಿಸುತ್ತಿದೆ. ಈ ಸಿನಿಮಾಗಳೆಲ್ಲ ಹೇಳಿದಷ್ಟುಸುಲಭ ಅಲ್ಲ. ತುಂಬಾ ಶ್ರಮ ಇರುತ್ತೆ. ವರ್ಷಗಟ್ಟಲೆ ಅದಕ್ಕೆ ಶ್ರಮ ಹಾಕಬೇಕು, ಮತ್ತೆ ನಮ್ಮನ್ನೇ ನಂಬ್ಕೊಂಡು ಬಂಡವಾಳ ಹಾಕುವವರನ್ನು ಉಳಿಸಬೇಕು. ಇದೆಲ್ಲ ಸದ್ಯಕ್ಕೆ ನಂಗೆ ಸಾಕು. ನೋಡೋಣ ಮುಂದೆ, ಇಂತಹ ಕತೆಯ ಸಿನಿಮಾ ಬಂದಾಗ.

- ಕನ್ನಡ ಸಿನಿಮಾಗಳೀಗ ಪ್ಯಾನ್‌ ಇಂಡಿಯಾ ರಿಲೀಸ್‌ಗೆ ರೆಡಿ ಆಗುತ್ತಿರುವ ಬಗ್ಗೆ ಏನ್‌ ಹೇಳ್ತೀರಾ?

ಪ್ಯಾನ್‌ ಇಂಡಿಯಾ ರಿಲೀಸ್‌ ಅನ್ನೋದನ್ನು ಅಷ್ಟುಸುಲಭವಾಗಿ ತೆಗೆದುಕೊಳ್ಳಬೇಡಿ. ಇದಕ್ಕೆ ದೊಡ್ಡ ಮಟ್ಟದ ಬಂಡವಾಳ ಬೇಕಾಗುತ್ತದೆ. ಸಿನಿಮಾ ಮಾಡ್ತೀವಿ ನಿಜ, ಅದರ ಪ್ರಚಾರ ಅಷ್ಟುಸುಲಭವಲ್ಲ. ಮುಂಬೈಗೆ ಹೋದ್ರೆ, ಕೋಟ್ಯಂತರ ರೂಪಾಯಿ ಬೇಕಾಗುತ್ತದೆ. ಅದೇ ಪರಿಸ್ಥಿತಿ ತೆಲುಗು, ತಮಿಳು ಹಾಗೂ ಮಲಯಾಳಂಗೂ ಇದೆ. ಈ ಪ್ರಯತ್ನ ಒಳ್ಳೆಯದೇ. ಕನ್ನಡ ಚಿತ್ರೋದ್ಯಮ ಕಮ್ಮಿ ಇಲ್ಲ ಅಂತ ತೋರಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಆದರೆ ಅದಕ್ಕೆ ದೊಡ್ಡ ಶ್ರಮ ಬೇಕಾಗುತ್ತದೆ. ಮುಖ್ಯವಾಗಿ ಹಣಕಾಸಿನ ಶಕ್ತಿ ಬೇಕಾಗುತ್ತದೆ.

Follow Us:
Download App:
  • android
  • ios