ಸಿನಿಮಾಗಳಲ್ಲಿನ ಖಡಕ್‌ ಡೈಲಾಗ್‌ ಮೂಲಕ ಡೈಲಾಗ್‌ ಕಿಂಗ್‌ ಎನಿಸಿಕೊಂಡವರು ನಟ ಸಾಯಿಕುಮಾರ್‌. ಈಗವರು ಮತ್ತೆ ಅಂತಹದೇ ಒಂದು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಆ ಚಿತ್ರದ ಹೆಸರು ಜಗ್ಗಿ ಜಗನ್ನಾಥ್‌.

ಇದು ಓಂ ಸಾಯಿಪ್ರಕಾಶ್‌ ನಿರ್ದೇಶನದ ಸಿನಿಮಾ. ಬಹು ದಿನಗಳ ನಂತರ ಅವರು ಪಕ್ಕಾ ಆ್ಯಕ್ಷನ್‌ ಕಮ್‌ ಲವ್‌ ಸ್ಟೋರಿ ಆಧರಿಸಿ ಕಮರ್ಷಿಯಲ್‌ ಸಿನಿಮಾ ಮಾಡಿದ್ದಾರೆ. ಇದೀಗ ಈ ಚಿತ್ರ ಟ್ರೇಲರ್‌ ಮೂಲಕ ಸದ್ದು ಮಾಡುತ್ತಿದೆ. ಸೋಷಲ್‌ ಮೀಡಿಯಾದಲ್ಲಿ ಇದರ ಟ್ರೇಲರ್‌ ವೈಲರ್‌ ಆಗಿದೆ.

ವಿಶೇಷವಾಗಿ ಸಾಯಿಕುಮಾರ್‌ ಮತ್ತೊಮ್ಮೆ ಖಡಕ್‌ ಡೈಲಾಗ್‌ ಮೂಲಕ ಕುತೂಹಲ ಮೂಡಿಸಿದ್ದಾರೆ. ‘ಅಗ್ನಿ ಐಪಿಎಸ್‌’,‘ಪೊಲೀಸ್‌ ಸ್ಟೋರಿ’ ಸಿನಿಮಾಗಳಲ್ಲಿದ್ದ ಡೈಲಾಗ್‌ ಶೈಲಿಯ ಸಂಭಾಷಣೆ ಜಗ್ಗಿ ಜಗನ್ನಾಥ್‌ ಚಿತ್ರದ ಟ್ರೇಲರ್‌ನಲ್ಲೂ ಇವೆ. ಇವು ಆನ್‌ಲೈನ್‌ ವೀಕ್ಷಕರ ಮನ ಗೆದ್ದಿವೆ.

 

ಅದರಲ್ಲೂ ಚಿತ್ರದ ನಾಯಕ ನಟ ಲಿಖಿತ್‌ರಾಜ್‌ ಹಾಗೂ ಪ್ರಮುಖ ಪಾತ್ರಧಾರಿ ಸಾಯಿ ಪ್ರಕಾಶ್‌ ಜುಗಲ್‌ಬಂದಿಯಲ್ಲಿ ಮೂಡಿ ಬಂದಿರುವ ಡೈಲಾಗ್‌ ಇವು.ಸದ್ಯಕ್ಕೆ ಟ್ರೇಲರ್‌ನಲ್ಲಿರುವ ಡೈಲಾಗ್‌ಗೆ ವೀಕ್ಷಕರು ಫುಲ್‌ ಮಾರ್ಕ್ ನೀಡಿದ್ದಾರೆ. ಇಷ್ಟುಖಡಕ್‌ ಡೈಲಾಗ್‌ ಕೇಳಿ ಬರುವುದಕ್ಕೆ ಕಾರಣ ಚಿತ್ರದ ಕತೆ. ಇದೊಂದು ಭೂಗತ ಜಗತ್ತಿನ ಕತೆ.

ಹಾಗಿದ್ದರೂ ತಾಯಿ-ಮಗನ ಸೆಂಟಿಮೆಂಟ್‌ ಜತೆಗೆ ಲವ್‌ ಸ್ಟೋರಿಯ ಅಂಶಗಳೂ ಹೆಚ್ಚಾಗಿರುವಂತಹ ಚಿತ್ರ. ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್‌ ಇದೇ ಮೊದಲು ಇಂತಹದೊಂದು ಕತೆ ಇಟ್ಟುಕೊಂಡು ಸಿನಿಮಾ ಮಾಡಿದ್ದಾರಂತೆ. ಚಿತ್ರೀಕರಣದ ಜತೆಗೆ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಮುಗಿದಿವೆ. ಇತ್ತೀಚೆಗೆ ಸೆನ್ಸಾರ್‌ ಕೂಡ ಆಗಿದೆ. ಇನ್ನೇನು ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿದೆ ಚಿತ್ರತಂಡ.

ಶ್ರೀಮೈಲಾರಲಿಂಗೇಶ್ವರ ಮೂವೀಸ್‌ ಲಾಂಛನದಲ್ಲಿ ಹೆಚ್‌.ಜಯರಾಜು ಹಾಗೂ ಜಿ.ಶಾರದ ನಿರ್ಮಾಣದ ಚಿತ್ರವಿದು. ಎ.ಎಂ.ನೀಲ್‌ ಸಂಗೀತ ನೀಡಿದ್ದಾರೆ. ರೇಣುಕುಮಾರ್‌ ಛಾಯಾಗ್ರಹಣವಿದ್ದು, ಯೋಗರಾಜ್‌ ಭಟ್‌, ಜಯಂತ್‌ ಕಾಯ್ಕಿಣಿ, ಸಾಯಿ ಸರ್ವೇಶ್‌ ಸಾಹಿತ್ಯ ಒದಗಿಸಿದ್ದಾರೆ.

ಬಾಬು ಸಂಕಲನ ಮಾಡಿದ್ದಾರೆ. ಸಾಯಿ ಕುಮಾರ್‌ ಹಾಗೂ ಲಿಖಿತ್‌ ರಾಜ್‌ ಜತೆಗೆ ತಬಲಾ ನಾಣಿ, ಪದ್ಮಜಾ ರಾವ್‌, ಲಯ ಕೋಕಿಲ, ಮೈಕೋ ನಾರಗಾಜ್‌, ಪೆಟ್ರೋಲ್‌ ಪ್ರಸನ್ನ, ಕಡ್ಡಿಪುಡಿ ಚಂದ್ರು ಸೇರಿದಂತೆ ದೊಡ್ಡ ತಾರಾಬಳಗವೇ ಇದೆ.