ಸಾಲು ಮರದ ತಿಮ್ಮಕ್ಕ ಅವರ ಜೀವನ ಕಥೆ ಆಧರಿಸಿ ಸೆಟ್ಟೇರಿರುವ ‘ವೃಕ್ಷಮಾತೆ’ ಚಿತ್ರಕ್ಕೆ ನಮ್ಮ ಅನುಮತಿ ಇಲ್ಲ -ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು

ಬೆಂಗಳೂರು: ‘ಸಾಲು ಮರದ ತಿಮ್ಮಕ್ಕ ಅವರ ಜೀವನ ಕಥೆ ಆಧರಿಸಿ ಸೆಟ್ಟೇರಿರುವ ‘ವೃಕ್ಷಮಾತೆ’ ಚಿತ್ರಕ್ಕೆ ನಮ್ಮ ಅನುಮತಿ ಇಲ್ಲ. ಹೀಗಾಗಿ ಈ ಚಿತ್ರದ ಚಿತ್ರೀಕರಣಕ್ಕೆ ಅವಕಾಶ ನೀಡಬಾರದು’ ಎಂದು ಸಾಲುಮರದ ತಿಮ್ಮಕ್ಕ ಹಾಗೂ ಅವರ ಸಾಕು ಮಗ ಉಮೇಶ್‌ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ.

 ಸೋಮವಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಆಗಮಿಸಿದ ತಿಮ್ಮಕ್ಕ ಮತ್ತು ಉಮೇಶ್‌ ಅವರು, ‘ಶ್ರೀಲಕ್ಷ್ಮಿ ವೆಂಕಟೇಶ್ವರ ಪಿಕ್ಚರ್ಸ್‌ ಬ್ಯಾನರ್‌ ಮೂಲಕ ‘ವೃಕ್ಷಮಾತೆ’ ಹೆಸರಿನಲ್ಲಿ ದಿಲೀಪ್‌ ಕುಮಾರ್ ಎಚ್‌ಆರ್‌, ಸೌಜನ್ಯ ಡಿ ವಿ, ಎ ಸಂತೋಷ್‌ ಮುರಳಿ ಹಾಗೂ ಒರಟ ಶ್ರೀ ಅವರು ತಿಮ್ಮಕ್ಕ ಜೀವನ ಕಥೆಯನ್ನು ಆಧರಿಸಿ ಸಿನಿಮಾ ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ನಮ್ಮಿಂದ ಯಾರೂ ಅನುಮತಿ ಪಡೆದಿಲ್ಲ. ನಮ್ಮ ಅನುಮತಿ ಇಲ್ಲದೆ ಶೂಟಿಂಗ್‌ ಮಾಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ನರಸಿಂಹಲು ಅವರು, ‘ಚಿತ್ರತಂಡವನ್ನು ಕರೆಸಿ ಮಾತನಾಡುತ್ತೇವೆ’ ಎಂದು ಹೇಳಿದ್ದಾರೆ.

 ತಮ್ಮ ಒಪ್ಪಿಗೆ ಇಲ್ಲದೆ ತಮ್ಮ ಕುರಿತು ಸಿನಿಮಾ ಮಾಡುತ್ತಿರುವುದಕ್ಕೆ ಸಾಲುಮರದ ತಿಮ್ಮಕ್ಕ ಅವರು ವಾಣಿಜ್ಯ ಮಂಡಳಿಗೆ ಬಂದು ದೂರು ನೀಡಿದ್ದಾರೆ. ನಮ್ಮ ವಾಣಿಜ್ಯ ಮಂಡಳಿಯಲ್ಲಿ ವೃಕ್ಷಮಾತೆ ಹೆಸರಿನ ಶೀರ್ಷಿಕೆ ನೋಂದಣಿ ಆಗಿಲ್ಲ. ಆದರೂ ಚಿತ್ರತಂಡವನ್ನು ಕರೆಸಿ ಮಾತನಾಡುತ್ತೇವೆ.

- ನರಸಿಂಹಲು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು