ನನ್ನ ಹೆಂಡತಿ ನನ್ನ ರಕ್ಷಣೆಯಲ್ಲಿ ಇರಬೇಕು ಅನ್ನೋದು ರಘುವರನ್ ಮನಸ್ಥಿತಿಯಾಗಿತ್ತು. ಮದುವೆಯಾದ 7 ವರ್ಷಗಳ ಕಾಲ ನಾನು ಯಾಕೆ ಸಿನಿಮಾದಿಂದ ದೂರ ಉಳಿದಿದ್ದೆ ಅನ್ನೋದಕ್ಕೆ ಇದೇ ಕಾರಣ ಅಂತ ನಟಿ ರೋಹಿಣಿ ಇದೀಗ ಸತ್ಯ ಬಿಚ್ಚಿಟ್ಟಿದ್ದಾರೆ.
ನಟಿ ರೋಹಿಣಿ ಮತ್ತು ದಿವಂಗತ ನಟ ರಘುವರನ್ ಮದುವೆ ಒಂದು ಕಾಲದಲ್ಲಿ ದೊಡ್ಡ ಸಂಭ್ರಮದ ಸುದ್ದಿಯಾಗಿತ್ತು. 1996ರಲ್ಲಿ ಇಬ್ಬರೂ ಮದುವೆಯಾಗಿದ್ದರು. ಆದರೆ, ಏಳು ವರ್ಷಗಳ ದಾಂಪತ್ಯದ ನಂತರ ಇಬ್ಬರೂ ಬೇರೆಯಾದರು. ಆದರೆ ಇವತ್ತಿಗೂ ಸೋಶಿಯಲ್ ಮೀಡಿಯಾದಲ್ಲಿ ರೋಹಿಣಿ ಅವರನ್ನು 'ರಘುವರನ್ ಹೆಂಡತಿ' ಅಂತಾನೇ ಗುರುತಿಸಲಾಗುತ್ತೆ. ಒಬ್ಬ ಅದ್ಭುತ ಕಲಾವಿದೆಯಾಗಿ ಅವರ ಸಾಧನೆಗಳು ಈ ಹಣೆಪಟ್ಟಿಯ ಹಿಂದೆ ಮರೆಯಾಗುತ್ತಿವೆ. ಇದೀಗ ಇದೇ ವಿಚಾರವಾಗಿ ರೋಹಿಣಿ ಬೇಸರ ವ್ಯಕ್ತಪಡಿಸಿದ್ದಾರೆ.
"ರಘುವರನ್ ನನ್ನ ಸಿನಿಮಾ ಕೆರಿಯರ್‌ಗೆ ಯಾವತ್ತೂ ಸಪೋರ್ಟ್ ಮಾಡಲಿಲ್ಲ. ನಾನು ಕೆಲಸ ಮಾಡುವುದು ಅವರಿಗೆ ಇಷ್ಟವಿರಲಿಲ್ಲ. ನಾನು ಒಬ್ಬಳು ಗೃಹಿಣಿಯಾಗಿರಬೇಕು ಅಂತಾನೇ ಅವರು ಬಯಸಿದ್ದರು. ಇದೇ ಕಾರಣಕ್ಕೆ ಮದುವೆಯಾದ ಮೇಲೆ 7 ವರ್ಷಗಳ ಕಾಲ ನಾನು ಯಾವುದೇ ಸಿನಿಮಾ ಮಾಡಲಿಲ್ಲ," ಎಂದು ರೋಹಿಣಿ ಹೇಳಿದ್ದಾರೆ.
"ರಘು ಬೆಳೆದ ವಾತಾವರಣವೇ ಹಾಗಿತ್ತು. ಅವರ ಕುಟುಂಬದಲ್ಲಿ ಹೆಣ್ಣುಮಕ್ಕಳು ಯಾರೂ ಹೊರಗೆ ಹೋಗಿ ಕೆಲಸ ಮಾಡುತ್ತಿರಲಿಲ್ಲ. 'ನನ್ನ ಹೆಂಡತಿ ನನ್ನ ರಕ್ಷಣೆಯಲ್ಲೇ ಇರಬೇಕು' ಅನ್ನೋದು ಅವರ ಮನಸ್ಥಿತಿಯಾಗಿತ್ತು. ಆ ಯೋಚನೆಯಿಂದ ಹೊರಬರಲು ನನಗೆ ತುಂಬಾ ಸಮಯ ಬೇಕಾಯ್ತು. ಆಮೇಲೆ ಬಹಳಷ್ಟು ಹೋರಾಟ ಮಾಡಿ ನಾನು ಮತ್ತೆ ನಟನೆಗೆ ಬಂದೆ, ಸಿನಿಮಾ ಕೂಡ ನಿರ್ದೇಶನ ಮಾಡಿದೆ," ಅಂತ ರೋಹಿಣಿ ವಿವರಿಸಿದ್ದಾರೆ.
‘ರಘುವರನ್ ಜೊತೆ ನಾನು ಬದುಕಿದ್ದು ಕೇವಲ ಏಳು ವರ್ಷ’
"ನಾನು ಈ ಇಂಡಸ್ಟ್ರಿಗೆ ಬಂದು 52 ವರ್ಷಗಳಾಯ್ತು. ರಘುವರನ್ ಜೊತೆ ನಾನು ಬದುಕಿದ್ದು ಕೇವಲ ಏಳು ವರ್ಷ ಮಾತ್ರ. ಖಂಡಿತವಾಗಿಯೂ ಅವರು ನನ್ನ ಮಾಜಿ ಪತಿ, ನನ್ನ ಮಗನ ತಂದೆ. ಆದರೆ ನನ್ನ ಇಡೀ ಸಿನಿಮಾ ಬದುಕನ್ನು, ನನ್ನೆಲ್ಲಾ ಸಾಧನೆಗಳನ್ನು ಒಬ್ಬ ವ್ಯಕ್ತಿಯ ಹೆಸರಿಗೆ ಕಟ್ಟಿಹಾಕುವುದು ನನಗೆ ನೋವು ಕೊಡುತ್ತದೆ. ನಾವು ಏಳು ವರ್ಷ ಒಟ್ಟಿಗೆ ಇದ್ದಿದ್ದು, ಯಾಕೆ ಬೇರೆಯಾದ್ವಿ ಅನ್ನೋದರ ಬಗ್ಗೆ ಎಲ್ಲವನ್ನೂ ನಾನು ಈಗಾಗಲೇ ಹೇಳಿ ಆಗಿದೆ.
'ಇನ್ನು ಮುಂದೆ ನನ್ನ ಸಿನಿಮಾಗಳ ಬಗ್ಗೆ ಕೇಳಿ, ನನ್ನ ಬಗ್ಗೆ ಕೇಳಿ' ಅಂತ ನಾನು ಈಗ ಹೇಳೋಕೆ ಇಷ್ಟಪಡುತ್ತೇನೆ. ಒಬ್ಬ ವ್ಯಕ್ತಿಯಾಗಿ, ಒಬ್ಬ ನಟಿಯಾಗಿ ನಾನು ಅದಕ್ಕೆ ಅರ್ಹಳು. ನನಗಾಗಿಯೇ ಒಂದು ಗುರುತು ಬೇಕು," ಎಂದು ರೋಹಿಣಿ ಮನದಾಳದ ಮಾತು ಹಂಚಿಕೊಂಡಿದ್ದಾರೆ. ಗಲಾಟಾ ತಮಿಳ್‌ಗೆ ನೀಡಿದ ಸಂದರ್ಶನದಲ್ಲಿ ರೋಹಿಣಿ ಈ ವಿಚಾರಗಳನ್ನು ಹಂಚಿಕೊಂಡಿದ್ದಾರೆ.


