ನಟ ರವಿಚಂದ್ರನ್‌ ಹೀಗೊಂದು ಸ್ಪಷನೆ ಕೊಟ್ಟರು. ಅವರು ಇಷ್ಟುಹೇಳಿದ್ದು ಅವರದೇ ನಿರ್ಮಾಣ, ನಿರ್ದೇಶನ ಹಾಗೂ ಅಭಿನಯದ ‘ರಾಜೇಂದ್ರ ಪೊನ್ನಪ್ಪ’ ಚಿತ್ರದ ಕುರಿತು. ‘ರಾಜೇಂದ್ರ ಪೊನ್ನಪ್ಪ’ ಚಿತ್ರೀಕರಣವೇ ತಡವಾಗಿದ್ದರ ಸುತ್ತ ಹಬ್ಬಿರುವ ಗಾಸಿಪ್‌ಗೆ ಕ್ರೇಜಿಸ್ಟಾರ್‌ ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸಿದರು. ಅವರ ಮಾತುಗಳು ಇಲ್ಲಿವೆ.

ನಿಜ, ತಡವಾಗಿದೆ. ಅದಕ್ಕೆ ಹಲವು ಕಾರಣಗಳಿವೆ. ಎಲ್ಲವನ್ನು ಒಟ್ಟಿಗೆ ಮಾಡೋದು ಬೇಡ ಅಂತ ಡಿಸೈಡ್‌ ಮಾಡ್ಕೊಂಡು ‘ದಶರಥ’ ಚಿತ್ರೀಕರಣದಲ್ಲಿ ಬ್ಯುಸಿ ಆದೆ. ಅದರ ಚಿತ್ರೀಕರಣ ಮುಗಿಯಿತು. ಇನ್ನೇನು ನನ್ನದೇ ಸಿನಿಮಾಕ್ಕೆ ಆದ್ಯತೆ ಅಂದುಕೊಂಡೆ. ‘ರವಿಚಂದ್ರ’ ಶುರುವಾಯಿತು. ಅದು ಹಳೇ ಕಮಿಟ್‌ಮೆಂಟ್‌. ಬೇಡ ಅನ್ನೋದಿಕ್ಕೆ ಆಗಲಿಲ್ಲ. ಅದರ ಜತೆಗೆ ‘ಆ ದೃಶ್ಯ’ ಹೆಸರಿನ ಸಿನಿಮಾ ಸ್ಟಾರ್ಟ್‌. ಒಂದಷ್ಟುಕಮರ್ಷಿಯಲ್‌ ಕೂಡ ಬೇಕಲ್ವಾ, ಹಾಗಾಗಿ ಆ ಕಡೆ ಗಮನ ಕೊಟ್ಟೆ. ನನ್ನದೇ ಸಿನಿಮಾ ಕಡೆ ಗಮನ ಕೊಡಲಾಗಿಲ್ಲ. ಹಾಗಾಗಿ ತಡವಾಯಿತು.

ಚಿತ್ರೋದ್ಯಮಕ್ಕೆ ಲೀಡರ್‌ಶೀಪ್‌ ಬೇಕು ಎನ್ನುವುದನ್ನು ನಾನು ಒಪ್ಪಿಕೊಳ್ಳುವುದಿಲ್ಲ. ಇಲ್ಲಿ ಸಮರ್ಥ ನಾಯಕತ್ವವನ್ನು ಒಪ್ಪಿಕೊಳ್ಳುವವರು ತುಂಬಾ ಕಮ್ಮಿ. ಪುಟ್ಟವಿವಾದ ಬಗೆಹರಿಸುವಷ್ಟುತಾಳ್ಮೆ ನಮಗೂ ಇಲ್ಲ. ನಾನು ಯಾವತ್ತೂ ನೇರ, ದಿಟ್ಟ. ನನ್ನಂತಹವರನ್ನು ಇಲ್ಲಿ ಬಹಳಷ್ಟುಜನ ಸಹಿಸಿಕೊಳ್ಳುವುದಿಲ್ಲ.

ಅರ್ಜೆಂಟಾಗಿ ಸಿನಿಮಾ ಮಾಡ್ಬೇಕು ಅಂತೇನಿಲ್ಲ. ಪ್ರಯೋಗಾತ್ಮಕ ಸಿನಿಮಾ ಮಾಡುವಷ್ಟುತಾಳ್ಮೆ ನನಗೂ ಈಗಿಲ್ಲ. ಹಂತ ಹಂತವಾಗಿ ಮಾಡೋಣ ಅಂದುಕೊಂಡಿದ್ದೇನೆ. ಶೇ. 50ರಷ್ಟುಶೂಟಿಂಗ್‌ ಆಗಿದೆ. ರಾಧಿಕಾ ಕುಮಾರಸ್ವಾಮಿ ಪಾತ್ರದ ಭಾಗದ ಶೂಟಿಂಗ್‌ ಕಂಪ್ಲೀಟ್‌ ಆಗಿದೆ. ಉಳಿದಿದ್ದು ನನ್ನದೇ ಪಾತ್ರದ ಶೂಟಿಂಗ್‌. ಅದಕ್ಕೊಂದಿಷ್ಟುಚೇಂಜಸ್‌ ಮಾಡಿಕೊಳ್ಳಲು ನಿರ್ಧರಿಸಿದ್ದೇನೆ. ನಾನು ಸಿನಿಮಾ ಮಾಡುವ ಶೈಲಿ ಅದು. ಮೊದಲು ಒಂದಷ್ಟುಬರೆದುಕೊಳ್ಳುತ್ತೇನೆ. ಕ್ರಮೇಣವಾಗಿ ಅದನ್ನು ಫಿಲ್ಟರ್‌ ಮಾಡ್ಕೊಂಡು ಸಿನಿಮಾ ಮಾಡ್ತೇನೆ. ‘ಮಲ್ಲ’ ಸಿನಿಮಾ ಮಾಡುವಾಗಲೂ ಹಾಗೆ ಆಯಿತು. ಅರ್ಧ ಸಿನಿಮಾ ಮುಗಿಸಿ, ಆರು ತಿಂಗಳು ಏನು ತಿಳಿಯದೆ ಮನೆಯಲ್ಲಿ ಕುಳಿತೆ. ಆಮೇಲೆ ಒಂದು ಐಡಿಯಾ ಬಂತು. ಅದನ್ನು ಸರಿಯಾಗಿ ಎಕ್ಸಿಕ್ಯೂಟ್‌ ಮಾಡಿದೆ. ಸಿನಿಮಾ ಸಕ್ಸಸ್‌ ಆಯ್ತು.

ನಾನ್ಯಾವತ್ತೂ ಅವಕಾಶ ಬೇಕು ಅಂತ ಕೇಳಲ್ಲ. ತಮ್ಮ ಸಿನಿಮಾಗಳಿಗೆ ನಾನು ಬೇಕು ಅಂತ ಯಾರು ಬರ್ತಾರೋ ಅವರ ಹತ್ತಿರ ಕತೆ ಕೇಳುತ್ತೇನೆ. ಪಾತ್ರ ಹಿಡಿಸಿದರೆ ಸಿನಿಮಾ ಮಾಡುತ್ತೇನೆ. ಅದು ಈಗಲೂ ನಾನು ಪಾಲಿಸುತ್ತಿರುವ ಸಿದ್ಧಾಂತ. ಮನಸ್ಸಿಗೆ ಹಿಡಿಸದೆ ಇದ್ದಿದ್ದನ್ನು ನಾನು ಮಾಡೋದಿಲ್ಲ. ಅದು ನನ್ನ ಸಿದ್ಧಾಂತ ಮತ್ತು ಪಾಲಿಸಿ. ಉಳಿದಂತೆ ಆ ಸಿನಿಮಾಗಳ ಬಗ್ಗೆ ನಾನು ಮಾತನಾಡೋದಿಲ್ಲ. ನಿರ್ದೇಶಕರು ಹೇಳಿದಂತೆ ಅಭಿನಯಿಸಿ, ಬರೋದು ನನ್ನ ಕೆಲಸ. ಕೆಲಸ ಮಾತನಾಡಬೇಕೆ ಹೊರತು ನಾವಲ್ಲ. ಈಗಂತೂ ಸಿನಿಮಾ ಮಾಡೋದೆ ಕಷ್ಟಬಿಡಿ. ಹಿಂದೆಲ್ಲ ಪ್ರೇಕ್ಷಕರಿಗೆ ಸಿನಿಮಾ ಮಾಡುತ್ತಿದ್ದೇವು. ಈಗ ವಿಮರ್ಶಕರಿಗೆ ಸಿನಿಮಾ ಮಾಡುವ ಸ್ಥಿತಿ ಬಂದಿದೆ. ಯಾರು ಹೊಗಳುತ್ತಾರೋ, ಇನ್ನಾರು ತೆಗಳುತ್ತಾರೋ ಒಂದೂ ತಿಳಿಯೋದಿಲ್ಲ. ಅದರ ಮಧ್ಯೆ ಸಿನಿಮಾ ಮಾಡಿ ಗೆಲ್ಲೋದು ಕಷ್ಟದ ಕೆಲಸ.

ಮಕ್ಕಳ ಮೇಲೆ ನಿರ್ಬಂಧ ಹಾಕೋನಲ್ಲ ನಾನು...

ಮಕ್ಕಳಿಬ್ಬರಿಗೂ ಅವರದ್ದೇ ಸ್ವತಂತ್ರವಿದೆ. ನಾನು ಎಂದಿಗೂ ಹೇಗೆ ಮಾಡಿ, ಇದನ್ನೇ ಮಾಡಿ ಅಂತ ನಿರ್ಬಂಧ ಹಾಕಿಲ್ಲ. ಅವರ ಪಾಡಿಗೆ ಅವರು ಸಿನಿಮಾ ಮಾಡ್ಕೊಂಡು ಹೋಗುತ್ತಿದ್ದಾರೆ. ಅವರ ಕೆಲಸಗಳಲ್ಲಿ ತಲೆ ಹಾಕೋದಿಲ್ಲ. ಮೇಲಾಗಿ ಅವರು ನನ್ನಿಂದ ಏನು ಕಲಿತ್ತಿಲ್ಲ. ಅವರದ್ದೇ ಜ್ಞಾನ, ಅವರದ್ದೇ ದಾರಿ ಎನ್ನುವ ಹಾಗೆಯೇ ಇರಬೇಕು ಅನ್ನೋದು ನನ್ನಾಸೆ. ಆ ಪ್ರಕಾರ ಅವರು ಸಿನಿಮಾ ಮಾಡ್ಕೊಂಡು ಹೋಗುತ್ತಿದ್ದಾರೆ. ತಾವು ದುಡಿಬೇಕು ಅನ್ನೋದು ಅವರಲ್ಲೂ ಇರೋದು ಸಹಜ. ಸೋಲ್ಲುವುದು, ಗೆಲ್ಲುವುದು ಇದ್ದೇ ಇರುತ್ತೆ.