Asianet Suvarna News Asianet Suvarna News

ಕೊಡಗು ಮರು ನಿರ್ಮಾಣಕ್ಕೆ ರವಿಚಂದ್ರನ್ ಕೊಟ್ಟ 10 ಐಡಿಯಾಗಳು

ಚಿತ್ರರಂಗವೇ ಒಂದಾಗಿ ಕೊಡಗು ನೆರೆ ಸಂತ್ರಸ್ತರಿಗೆ ನೆರವಾಗಬೇಕು ಎಂಬ ರವಿಚಂದ್ರನ್ ಅವರ ಮಾತಿಗೆ ಇಡೀ ಚಿತ್ರರಂಗದಿಂದಲೇ ಪ್ರೋತ್ಸಾಹಕರ ಪ್ರತಿಕ್ರಿಯೆಗಳು ಹರಿದು ಬಂದಿವೆ. ರವಿಚಂದ್ರನ್ ಕೂಡ ಈ ಬಗ್ಗೆ ಸಕಾರಾತ್ಮಕ ಧೋರಣೆ ಹೊಂದಿದ್ದಾರೆ. 

Ravichandran 10 ideas of Kodagu Reconstruction
Author
Bengaluru, First Published Aug 22, 2018, 9:57 AM IST

ಬೆಂಗಳೂರು (ಆ. 22): ಚಿತ್ರರಂಗವೇ ಒಂದಾಗಿ ಕೊಡಗು ನೆರೆ ಸಂತ್ರಸ್ತರಿಗೆ ನೆರವಾಗಬೇಕು ಎಂಬ ರವಿಚಂದ್ರನ್ ಅವರ ಮಾತಿಗೆ ಇಡೀ ಚಿತ್ರರಂಗದಿಂದಲೇ ಪ್ರೋತ್ಸಾಹಕರ ಪ್ರತಿಕ್ರಿಯೆಗಳು ಹರಿದು ಬಂದಿವೆ. ರವಿಚಂದ್ರನ್ ಕೂಡ ಈ ಬಗ್ಗೆ ಸಕಾರಾತ್ಮಕ ಧೋರಣೆ ಹೊಂದಿದ್ದಾರೆ. ಚಿತ್ರರಂಗ ಹೇಗೆ ನೆರವಾಗಬಹುದು ಎಂಬ ಪ್ರಶ್ನೆಗೆ ಅವರು ಹೇಳುವುದಿಷ್ಟು: ಎಲ್ಲರೂ ಸಭೆ ಸೇರಿ, ಎಲ್ಲರ ಅನುಮತಿ ಪಡೆದುಕೊಂಡು ನಂತರ ನೆರವಾಗಬೇಕು ಎಂದರೆ ತಡವಾಗುತ್ತದೆ. ತಕ್ಷಣವೇ ನಿರ್ಧಾರ ತೆಗೆದುಕೊಳ್ಳುವುದು ಮುಖ್ಯ. ನಾವೀಗ ಏನು ಮಾಡಬಹುದು ಎಂದು ತಕ್ಷಣವೇ ನಿರ್ಧರಿಸಿ ಕಾರ್ಯೋನ್ಮುಖರಾಗಬೇಕು. ನಾವೀಗ ಮಾಡಬಹುದಾದದ್ದು ಇದು.

1.  ಚಿತ್ರೀಕರಣ ನಡೆಸುತ್ತಿರುವ ಸಿನಿಮಾಗಳು ತಲಾ ಹತ್ತು ಸಾವಿರ ರುಪಾಯಿಗಳನ್ನು ಪರಿಹಾರ ನಿಧಿಗೆ ನೀಡಬೇಕು.

2.  ಸಿನಿಮಾಗಳ ಟಿಕೆಟ್ ದರವನ್ನು ಇಮ್ಮಡಿಗೊಳಿಸಿ, ಒಂದು ಪಾಲನ್ನು ಪರಿಹಾರ ನಿಧಿಗೆ ಕೊಡಬೇಕು.

3.   ಸಿನಿಮಾ ನಟರು ಸ್ವಯಿಚ್ಛೆಯಿಂದ ತಮ್ಮ ಕೈಲಾಗುವ ಮೊತ್ತವನ್ನು ಪರಿಹಾರ ನಿಧಿಗೆ ದೇಣಿಗೆ ಕೊಡಬೇಕು. ತಾವು ಕೊಟ್ಟ ಮೊತ್ತವನ್ನು ಬಹಿರಂಗಪಡಿಸಲಿಕ್ಕೆ ಹೋಗಬಾರದು.

4.   ಯಾರ ಕೈಲಿ ಎಷ್ಟಾಗುತ್ತದೆಯೋ ಅಷ್ಟನ್ನೂ ಪರಿಹಾರ ನಿಧಿಗೆ ಹಾಕಬೇಕು.

5.   ದೇವಸ್ಥಾನಗಳಿಗೆ ಕೊಡುಗೆ ನೀಡುವವರು ಒಂದೊಂದು ಕಾರ್ಯಕ್ಕೆ ಹಣ ಕೊಡುತ್ತಾರೆ. ಇಲ್ಲಿಯೂ ಹಾಗೆಯೇ ಮಾಡಿ, ಕೆಲವರು ಮನೆಗೆ, ಕೆಲವರು ರಸ್ತೆಗೆ, ಕೆಲವರು ಇತರ ವಸ್ತುಗಳಿಗೆ ಹಣ ಕೊಡಬೇಕು.

6.   ಸಂತ್ರಸ್ತರಿಗೆ ಸರ್ಕಾರ ಸಮಾನವಾಗಿ ಭೂಮಿ ಹಂಚಿಕೆ ಮಾಡಬೇಕು. ಎಲ್ಲರೂ ಒಂದಾಗಿರುವಂತೆ, ಜಾತಿ, ಧರ್ಮಗಳ ಬೇಧವಿಲ್ಲದೇ ಎಲ್ಲರಿಗೂ ಒಳ್ಳೆಯ ಮನೆ ಕಟ್ಟಿಕೊಡಬೇಕು. ಅಲ್ಲಿ ಯಾವುದೇ ಧರ್ಮದ ದೇವಾಲಯ ಇರಕೂಡದು. ಮಾನವ ಧರ್ಮವೊಂದೇ ಮುಖ್ಯವಾಗಬೇಕು.

7.   ಟೋಲ್ ಗೇಟ್ ಸ್ಥಾಪಿಸಿ, ಆ ಹಾದಿಯಲ್ಲಿ ಹೋಗುವವರು ಕೊಡುವ ಹಣವನ್ನು ಪರಿಹಾರ ನಿಧಿಗೆ ಬಳಸಬೇಕು.

8.  ಇಲ್ಲಿ ಕೋಟ್ಯಂತರ ರುಪಾಯಿಗಳ ಅಗತ್ಯವಿದೆ. ಅವನ್ನು ಸರ್ಕಾರ ಒಂದೇ ಕೊಡಲಿಕ್ಕಾಗುವುದಿಲ್ಲ. ಎಲ್ಲರೂ ಜೊತೆಗೆ ಕೈಗೂಡಿಸಬೇಕು.

9.   ಮನೆ ಕಟ್ಟಿಕೊಡುವುದಕ್ಕಿಂತ ಬದುಕು ಕಟ್ಟಿಕೊಡುವುದು ಮುಖ್ಯ. ಅವರ ಸಂತೋಷ, ನೆಮ್ಮದಿಗಳನ್ನು ಮರಳಿಸುವುದು ಮುಖ್ಯ.

10. ಇಲ್ಲಿ ಕೈಗೊಳ್ಳುವ ಕಾರ್ಯಕ್ರಮಗಳು ಮುಂದೆ ನೈಸರ್ಗಿಕ ವಿಕೋಪ ಸಂಭವಿಸಿದಾಗ ಏನು ಮಾಡಬಹುದು ಅನ್ನುವುದಕ್ಕೆ ಮಾದರಿ ಆಗಬೇಕು. 

Follow Us:
Download App:
  • android
  • ios