Asianet Suvarna News Asianet Suvarna News

ರಾಮಾ ರಾಮಾ ರೇ ವಿಮರ್ಶೆ: ಬದುಕಿನ ದಾರಿ, ಇದು ಪ್ರೀತಿಯ ಸವಾರಿ

ಕತೆ, ಚಿತ್ರಕತೆ, ಸಂಗೀತ, ಛಾಯಾಗ್ರಹಣ ಮತ್ತು ಕಲಾವಿದರ ಅಭಿನಯ ಎಲ್ಲದರಲ್ಲೂ ಹೊಸತನಕ್ಕೆ ಸಾಕ್ಷಿಗಳಿವೆ. ಇದೇ ಈ ಚಿತ್ರದ ಬಹುದೊಡ್ಡ ಯಶಸ್ಸು ಎನ್ನುವುದು ಮೇಲ್ನೋಟದಲ್ಲೇ ಕಾಣುತ್ತದೆ. ಹೀಗಾಗಿಯೇ ಈ ಚಿತ್ರದ ನೋಟಕ್ಕೆ ಕ್ಲಾಸ್‌, ಮಾಸ್‌ ಎನ್ನುವ ಯಾವುದೇ ಸೀಮಾರೇಖೆಗಳಿಲ್ಲ.

rama rama re kannada movie review

- ದೇಶಾದ್ರಿ ಹೊಸ್ಮನೆ, ಕನ್ನಡಪ್ರಭ

ಚಿತ್ರ: ರಾಮಾ ರಾಮಾ ರೇ
ಭಾಷೆ: ಕನ್ನಡ
ತಾರಾಗಣ: ಕೆ ಜಯರಾಂ, ನಟರಾಜ್‌, ಧರ್ಮಣ್ಣ ಕಡೂರು, ಬಿಂಬಿಶ್ರೀ ನೀನಾಸಂ, ಎಂ ಕೆ ಮಠ, ರಾಧಾ ರಾಮಚಂದ್ರ
ನಿರ್ದೇಶನ: ಡಿ ಸತ್ಯಪ್ರಕಾಶ್‌
ಸಂಗೀತ: ವಾಸುಕಿ ವೈಭವ್‌
ಛಾಯಾಗ್ರಹಣ: ಲಿವಿತ್‌
ನಿರ್ಮಾಣ: ಕನ್ನಡ ಕಲರ್ಸ್‌ ನಿಮಾಸ್‌

ರೇಟಿಂಗ್: ****

ಸಿನಿಮಾ ಸಂಸ್ಕೃತಿ ಬದಲಾಗುತ್ತಿದೆ ಎನ್ನುವ ಮಾತಿನಲ್ಲಿ ಮತ್ತಷ್ಟು ನಂಬಿಕೆ ಹುಟ್ಟಿಕೊಳ್ಳುತ್ತಿದೆ. ನೈಜಕತೆಯ ಚಿತ್ರಗಳು ತಾಜಾತನದ ಮೂಲಕ ಪ್ರೇಕ್ಷಕರನ್ನು ರಂಜಿಸಬಲ್ಲವು ಎನ್ನುವುದಕ್ಕೀಗ ‘ರಾಮಾ ರಾಮಾ ರೇ' ಚಿತ್ರ ಮತ್ತೊಂದು ಸಾಕ್ಷಿ. ಯುವ ನಿರ್ದೇಶಕ ಡಿ. ಸತ್ಯಪ್ರಕಾಶ್‌ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರ, ರಂಜನೆಯ ಜನಪ್ರಿಯ ಸಿದ್ಧ ಸೂತ್ರಗಳಲ್ಲಿಯೇ ತೆರೆಗೆ ಬಂದಿದೆ. ಆದರೆ, ಅಲ್ಲಿನ ಕತೆ, ಚಿತ್ರಕತೆ, ಸಂಗೀತ, ಛಾಯಾಗ್ರಹಣ ಮತ್ತು ಕಲಾವಿದರ ಅಭಿನಯ ಎಲ್ಲದರಲ್ಲೂ ಹೊಸತನಕ್ಕೆ ಸಾಕ್ಷಿಗಳಿವೆ. ಇದೇ ಈ ಚಿತ್ರದ ಬಹುದೊಡ್ಡ ಯಶಸ್ಸು ಎನ್ನುವುದು ಮೇಲ್ನೋಟದಲ್ಲೇ ಕಾಣುತ್ತದೆ. ಹೀಗಾಗಿಯೇ ಈ ಚಿತ್ರದ ನೋಟಕ್ಕೆ ಕ್ಲಾಸ್‌, ಮಾಸ್‌ ಎನ್ನುವ ಯಾವುದೇ ಸೀಮಾರೇಖೆಗಳಿಲ್ಲ.

ಒಬ್ಬ ಅಪರಾಧಿ, ಜತೆಗೆ ಯುವ ಪ್ರೇಮಿಗಳು, ಅವರೊಂದಿಗೆ ತಾತ, ಅವರೆಲ್ಲರನ್ನು ಹೊತ್ತು ನಿಂತ ಒಂದು ಜೀಪು. ಕತೆಯ ಪ್ರಮುಖ ಆಕರ್ಷಣೆಗಳಿವು. ಇಷ್ಟುಪಾತ್ರಗಳ ಮೂಲಕ ವಾಸ್ತವ ಬದುಕಿನ ವಿವಿಧ ಮುಖಗಳನ್ನು ಮನೋಜ್ಞವಾಗಿ ತೆರೆಗೆ ತಂದಿರುವ ನಿರ್ದೇಶಕರ ಜಾಣ್ಮೆಗೆ ರಾಮಾಯಣ ಮತ್ತು ಮಹಾಭಾರತದ ಸನ್ನಿವೇಶಗಳು ಸಾಂದರ್ಭಿಕವಾಗಿ ಬಳಕೆಯಾಗಿವೆ. ಬದುಕುವ ಆಸೆಯಿಂದ ಜೈಲಿನಿಂದ ಪರಾರಿಯಾಗುವ ಕೈದಿ ಸ್ಯಾಂಡಲ್‌ ರಾಜ ಈ ಚಿತ್ರದ ಕಥಾನಾಯಕ. ಆತ ಅಲ್ಲಿಂದ ತಪ್ಪಿಸಿಕೊಂಡು ಬಂದ ನಂತರ ಮಾಧ್ಯಮದ ಸುದ್ದಿಯ ಹಸಿವನ್ನು ನಿರ್ದೇಶಕರು ವ್ಯಂಗ್ಯವಾಡಿದ ಪರಿ ವಾಸ್ತವದ ಚಿತ್ರಣ. ಅಲ್ಲಿಂದ ಕೈದಿ ಕೋಣೆಯ ವಾಸ್ತು ನೋಡುವ ಜ್ಯೋತಿಷಿ ಕೂಡ ಪ್ರೇಕ್ಷಕರ ದೃಷ್ಟಿಯಲ್ಲಿ ವಿದೂಷಕ. ಇಂತಹ ಆರಂಭಿಕ ದೃಶ್ಯಗಳ ಮೂಲಕ ಕತೆಯಲ್ಲಿ ಆಕರ್ಷಣೆ ಹುಟ್ಟಿಸಿರುವ ನಿರ್ದೇಶಕರು, ಅಲ್ಲಿಂದ ಕತೆಯ ಓಟಕ್ಕೆ ಜೀಪ್‌ ಬಳಸಿಕೊಂಡಿದ್ದಾರೆ. ಇದು ಕೂಡ ಪಾತ್ರದ ರೂಪಕ. ಜೈಲಿನಲ್ಲಿ ಪಾಸಿ ಹಾಕಬೇಕಾದ ತಾತ ಮತ್ತು ಜೈಲಿನಿಂದ ಪರಾರಿಯಾದ ಸ್ಯಾಂಡಲ್‌ರಾಜ ಒಂದೇ ಜೀಪ್‌ನಲ್ಲಿ ಪ್ರಯಾಣಿಸುವ ಮೂಲಕ ಕತೆಯಲ್ಲಿ ಮೂರ್ನಾಲ್ಕು ಉಪ ಕತೆಗಳು ಹುಟ್ಟಿಕೊಳ್ಳುತ್ತವೆ. ಬಹುತೇಕ ಕತೆ ಜೀಪ್‌ನಲ್ಲಿಯೇ ನಡೆದುಹೊಗುತ್ತದೆ. ‘ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ' ಎನ್ನುವ ಹಾಗೆ, ಜೀಪ್‌ನಲ್ಲಿ ಸಾಗುವವರ ಬದುಕೂ ಅದೇ ರೂಪದಲ್ಲಿ ಕಾಣುತ್ತದೆ. ಜೀಪಿನ ನಡೆಯಲ್ಲೇ ಸಿನಿಮಾವನ್ನು ಕೊಂಡೊಯ್ಯುವ ಕ್ರಮ ವಿಭಿನ್ನವಾಗಿದೆ. ಗಂಭೀರತೆಯ ನಡುವೆಯೂ ತಿಳಿ ಹಾಸ್ಯವಿದೆ. ಸಿದ್ದಗಂಗಯ್ಯ ಅವರ ಸಂಭಾಷಣೆಯಲ್ಲಿ ತೂರಿಬರುವ ಕೆಲವು ಮಾತುಗಳು ನೇರವಾಗಿ ಹೃದಯಕ್ಕೆ ನಾಟುತ್ತವೆ. ‘ಮನುಷ್ಯ ಭೂಮಿ ಬಿಟ್ಟರೂ ಜಾತಿ ಬಿಡುತ್ತಿಲ್ಲ' ಎನ್ನುವ ಮಾತು ಇಲ್ಲಿನ ಪ್ರೇಮಿಗಳ ಒದ್ದಾಟಕ್ಕೆ ಸಾಕ್ಷಿ. ಜೀಪ್‌ನಲ್ಲಿಯೇ ಹೆರಿಗೆ ನಡೆಸುವ ಪರಿ, ಮನ ಕಲುಕುವಂತಿದೆ.
ಕತೆಯ ಪರಿ ಇದಾದರೆ, ಚಿತ್ರದ ಕಲಾವಿದರ ಬಗ್ಗೆ ಹೇಳಲೇಬೇಕು. ಯಾಕೆಂದ್ರೆ, ಸಿನಿಮಾ ಎಂದಾಕ್ಷಣ ಗಾಂಧಿನಗರದ ಚಿತ್ತ ಸ್ಟಾರ್‌ ನಟ- ನಟಿಯರತ್ತ ತಿರುಗುತ್ತದೆ. ಹಾಗೆ ನೋಡಿದರೆ ಇಲ್ಲಿ ಯಾರೂ ಸ್ಟಾರ್‌ ನಟ- ನಟಿಯರಿಲ್ಲ. ಇಲ್ಲಿದ್ದವರೆಲ್ಲ ಬಹುತೇಕ ಹೊಸಬರು. ಪ್ರತಿಯೊಬ್ಬರು ತಮ್ಮ ಪಾತ್ರಗಳಲ್ಲಿ ನಟಿಸಿದ್ದಾರೆನ್ನುವುದಕ್ಕಿಂತ ಆ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಕಲಾವಿದರ ನಟನೆಯ ಮೂಲಕವೂ ಮತ್ತಷ್ಟುಸುಂದರವಾಗಿ ಅರಳಿ ನಿಂತಿದೆ ಈ ಸಿನಿಮಾ. ಜೀಪ್‌ ಚಾಲಕ ರಾಮಣ್ಣನಾಗಿ ಕೆ ಜಯರಾಂ, ಕಥಾನಾಯಕ ಸ್ಯಾಂಡಲ್‌ರಾಜನಾಗಿ ನಟರಾಜ್‌, ಯುವ ಪ್ರೇಮಿಗಳಾಗಿ ಧರ್ಮಣ್ಣ ಕಡೂರು ಮತ್ತು ಬಿಂಬಶ್ರೀ ನೀನಾಸಂ ಅವರ ಅಭಿನಯ ಕಣ್ಣಿಗೆ ಕಟ್ಟಿದಂತಿದೆ. ಅಪರಾಧಿ ಪಾತ್ರದಲ್ಲಿ ನಟರಾಜ್‌ ಸರಿ ಸುಮಾರು 20 ಕೆಜಿ ದೇಹದ ತೂಕ ಕಡಿಮೆ ಮಾಡಿಕೊಂಡಿದ್ದು ಇಲ್ಲಿ ವರ್ಕೌಟ್‌ ಆಗಿದೆ. 

ನೈಜತೆಯೋ ಅಥವಾ ಕಾಲ್ಪನಿಕವೋ ಯಾವುದೇ ಕತೆಗೆ ದೃಶ್ಯರೂಪ ನೀಡುವಾಗ, ಅದರ ಹಿನ್ನೆಲೆಗೆ ಬಳಸಿಕೊಳ್ಳುವ ಚಿತ್ರೀಕರಣದ ಸ್ಥಳಗಳಿಗೂ ಅಷ್ಟೇ ಆದ್ಯತೆ ಇರುತ್ತದೆ. ಇದನ್ನು ಅದ್ಭುತವಾಗಿ ಅರ್ಥ ಮಾಡಿಕೊಂಡಿದ್ದಾರೆ ನಿರ್ದೇಶಕರು. ಇಡೀ ಚಿತ್ರ ಉತ್ತರ ಕರ್ನಾಟಕ ಪರಿಸರದಲ್ಲಿಯೇ ರೂಪ ತಳೆದಿದೆ. ಬೋಳು ಗುಡ್ಡಗಾಡು ಪ್ರದೇಶ, ವಿಶಾಲವಾಗಿ ಹರಡಿಕೊಂಡ ಬಂಜರು ಭೂಮಿ, ಕಣ್ಣಿಗೆ ಕಾಣುವಷ್ಟುದೂರ ಹರಿದುಹೋದ ರಸ್ತೆಯ ನೋಟಗಳು ತಾಜಾತನದ ಕತೆಯನ್ನು ಮತ್ತಷ್ಟುಗಟ್ಟಿಗೊಳಿಸಿವೆ. ಇದು ಸಾಧ್ಯವಾಗಿದ್ದು ಲಿವಿತ್‌ ಛಾಯಾಗ್ರಹಣದಿಂದ. ಆ ಮಟ್ಟಿಗೆ ಬೋಳು ಪರಿಸರವನ್ನು ಹೊಸನೆಲೆಯಲ್ಲಿ ತೋರಿಸಿರುವ ಅವರ ಪ್ರಯತ್ನಕ್ಕೆ ಹ್ಯಾಟ್ಸಾಫ್‌ ಹೇಳಲೇಬೇಕು. ಹಾಗೆಯೇ ಸಂಗೀತ. ಚಿತ್ರದಲ್ಲಿರುವುದು ಕೇವಲ ನಾಲ್ಕು ಹಾಡು. ಎಲ್ಲ ಹಾಡುಗಳಿಗೂ ಸಾಹಿತ್ಯ ಮತ್ತು ಸಂಗೀತ ಸೊಗಸಾಗಿದೆ. ‘ಸಾವಂತೆ, ನೋವಂತೆ ಆತ್ಮಕ್ಕೆ ಏನಂತೆ, ಪ್ರತಿ ಮರಣ ಹೊಸ ಜನನಕೂ...' ಎನ್ನುವ ಹಾಡಿನ ಸಾಹಿತ್ಯಕ್ಕೆ ಎಂಥವರನ್ನೂ ಸೆಳೆಯುವ ತಾಕತ್ತಿದೆ. ಆ ಮಟ್ಟಿಗೆ ವಾಸುಕಿ ವೈಭವ್‌ ಸಂಗೀತ ಗಮನ ಸೆಳೆಯುತ್ತದೆ. ಸಂಕಲನದಲ್ಲಿ ಕೆಂಪರಾಜು ಕೂಡ ವಿಶೇಷ ಆಸಕ್ತಿ ವಹಿಸಿದ್ದಾರೆ. 200ನೇ ಚಿತ್ರ ಎನ್ನುವ ಕಾರಣವೋ ಏನೋ ಅವರ ಕತ್ತರಿ ಪ್ರಯೋಗ ಕತೆಯ ಓಘವನ್ನು ಅಚ್ಚುಕಟ್ಟುಗೊಳಿಸಿದೆ. ಒಟ್ಟಿನಲ್ಲಿ ಅಪರಾಧಿಯೊಬ್ಬನ ಹಿನ್ನೆಲೆಯನ್ನು ಹೇಳದೆ, ಆತನ ಎಸ್ಕೇಪ್‌ ಪ್ರಕರಣದ ಮೂಲಕ, ಒಂದು ಒಳ್ಳೆಯ ಕತೆಯನ್ನು ಪ್ರೇಕ್ಷಕರ ಮುಂದೆ ತಂದಿರುವ ನಿರ್ದೇಶಕ ಸತ್ಯಪ್ರಕಾಶ್‌ ಮತ್ತವರ ತಂಡದ ಶ್ರಮ ಸಾರ್ಥಕವಾಗಬೇಕಾದರೆ, ಪ್ರೇಕ್ಷಕ ಸಹಕಾರ ಅಗತ್ಯ.

Follow Us:
Download App:
  • android
  • ios