ನಟ ರಾಮ್ ಚರಣ್‌ ಇತ್ತೀಚೆಗೆ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ಸುದ್ದಿಯಿಂದ ಅಭಿಮಾನಿಗಳು ತೀವ್ರ ಆತಂಕಗೊಂಡಿದ್ದಾರೆ. ಮೆಗಾ ಪವರ್ ಸ್ಟಾರ್‌ಗೆ ಯಾಕೆ ಹೀಗೆಲ್ಲಾ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಹಾಗಾದರೆ ರಾಮ್ ಚರಣ್‌ಗೆ ನಿಜಕ್ಕೂ ಕೆಟ್ಟ ಸಮಯ ನಡೆಯುತ್ತಿದೆಯೇ?

ಆರ್‌ಆರ್‌ಆರ್‌ (RRR) ಸಿನಿಮಾ ಮೂಲಕ ರಾಮ್ ಚರಣ್ ಗ್ಲೋಬಲ್ ಸ್ಟಾರ್ ಆಗಿ ಮಿಂಚಿದರು. ಆದರೆ ಸದ್ಯ ಅವರ ವೃತ್ತಿಜೀವನ ಒಂದು ವಿಚಿತ್ರವಾದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಆಸ್ಕರ್ ವೇದಿಕೆಯಂತಹ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ನಟನಿಗೆ, ಅದರ ನಂತರ ಸವಾಲುಗಳು ಎದುರಾಗುತ್ತಿವೆ. ಸತತ ಹಿನ್ನಡೆಗಳು ಮತ್ತು ಅನಿರೀಕ್ಷಿತ ಗಾಯಗಳನ್ನು ನೋಡಿದರೆ, "ಚರಣ್‌ಗೆ ಸದ್ಯಕ್ಕೆ ಕೆಟ್ಟ ಸಮಯ ನಡೆಯುತ್ತಿದೆಯೇ?" ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ.

ಆರ್‌ಆರ್‌ಆರ್‌ ಯಶಸ್ಸಿನ ನಂತರ ರಾಮ್ ಚರಣ್ ಅವರ ಇಮೇಜ್ ಗಗನಕ್ಕೇರಿತ್ತು. ಶಂಕರ್ ನಿರ್ದೇಶನದ 'ಗೇಮ್ ಚೇಂಜರ್' ಚಿತ್ರದ ಮೇಲೆ ಭಾರಿ ನಿರೀಕ್ಷೆಗಳಿದ್ದವು. ಆದರೆ, ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ನಿರೀಕ್ಷಿತ ಫಲಿತಾಂಶ ನೀಡದೆ ಡಿಸಾಸ್ಟರ್ ಆಗಿ ಉಳಿಯಿತು. ಶಂಕರ್ ಅವರ ಕಮರ್ಷಿಯಲ್ ಅಂಶಗಳು ಮತ್ತು ಚರಣ್ ನಟನೆ ಗಮನ ಸೆಳೆದರೂ, ಕಥೆಯಲ್ಲಿನ ದೌರ್ಬಲ್ಯ, ಸಿನಿಮಾ ವಿಳಂಬದಂತಹ ಕಾರಣಗಳು ಚಿತ್ರದ ಫಲಿತಾಂಶದ ಮೇಲೆ ಗಂಭೀರ ಪರಿಣಾಮ ಬೀರಿದವು. ಗ್ಲೋಬಲ್ ಇಮೇಜ್ ಬಂದ ನಂತರ ಸಿಕ್ಕ ಈ ಮೊದಲ ಹೊಡೆತ ಅಭಿಮಾನಿಗಳನ್ನು ತೀವ್ರ ನಿರಾಸೆಗೊಳಿಸಿತು.

'ಗೇಮ್ ಚೇಂಜರ್' ಕೊಟ್ಟ ಆಘಾತದಿಂದ ಚೇತರಿಸಿಕೊಳ್ಳುವ ಮುನ್ನವೇ, ಬುಚ್ಚಿಬಾಬು ಸಾನಾ ನಿರ್ದೇಶನದ 'ಪೆದ್ದಿ' ಸಿನಿಮಾ ಮೇಲೆ ಎಲ್ಲರೂ ಭರವಸೆ ಇಟ್ಟಿದ್ದರು. ಆದರೆ ಈ ಸಿನಿಮಾದ ಪಯಣವೂ ಚರಣ್‌ಗೆ ಸುಲಭವಾಗಿರಲಿಲ್ಲ. ಈ ಚಿತ್ರದ ಶೂಟಿಂಗ್ ಸಮಯದಲ್ಲಿ ರಾಮ್ ಚರಣ್ ಅವರ ಕಣ್ಣಿಗೆ ಗಂಭೀರ ಗಾಯವಾಗಿತ್ತು. ಇದರಿಂದಾಗಿ ಕೆಲವು ದಿನಗಳ ಕಾಲ ಶೂಟಿಂಗ್‌ಗೆ ವಿರಾಮ ನೀಡಬೇಕಾಯಿತು. ಚಿರಂಜೀವಿ, ಮೆಗಾ ಕುಟುಂಬ ಹಾಗೂ ಅಭಿಮಾನಿಗಳು ಚರಣ್ ಕಣ್ಣಿಗೆ ಏನಾಗುವುದೋ ಎಂದು ತುಂಬಾ ಭಯಪಟ್ಟಿದ್ದರು. ಆದರೆ ಆ ಗಾಯದಿಂದ ಚೇತರಿಸಿಕೊಂಡು ರಾಮ್ ಚರಣ್ ಸಿನಿಮಾ ಪೂರ್ಣಗೊಳಿಸಿದರು.

'ಪೆದ್ದಿ' ಸಿನಿಮಾವನ್ನು ತಂಡ ಬಹಳ ಕಷ್ಟಪಟ್ಟು ನಿರ್ಮಿಸಿತ್ತು. ಈ ಚಿತ್ರದಲ್ಲಿ ಚರಣ್ ನಟನೆಗೆ ಉತ್ತಮ ಅಂಕಗಳು ಸಿಕ್ಕವು, ವಿಮರ್ಶಕರಿಂದಲೂ ಪ್ರಶಂಸೆ ವ್ಯಕ್ತವಾಯಿತು. ಆದರೂ, 'ಪೆದ್ದಿ' ಸಿನಿಮಾ ಕಮರ್ಷಿಯಲ್ ಆಗಿ ನಿರೀಕ್ಷಿತ ಮಟ್ಟದ ಕಲೆಕ್ಷನ್ ಮಾಡಲು ವಿಫಲವಾಯಿತು. ಆರ್‌ಆರ್‌ಆರ್‌, ಪುಷ್ಪ ರೇಂಜ್ ಹಿಟ್ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಇದು ಮತ್ತೊಂದು ನಿರಾಸೆ ತಂದಿತು. ಸದ್ಯ ಎಲ್ಲರ ಚಿತ್ತ ಸುಕುಮಾರ್ ಮತ್ತು ರಾಮ್ ಚರಣ್ ಕಾಂಬಿನೇಷನ್ ಮೇಲಿದೆ. ಮೆಗಾ ಅಭಿಮಾನಿಗಳು ಈ ಸಿನಿಮಾದ ಮೇಲೆ ಎಲ್ಲಾ ಭರವಸೆ ಇಟ್ಟುಕೊಂಡಿದ್ದಾರೆ.

ಇತ್ತೀಚೆಗೆ ರಾಮ್ ಚರಣ್ ಕೈ ಸರ್ಜರಿಗಾಗಿ ಕೊಯಮತ್ತೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಈ ಸುದ್ದಿ ನೆಟ್ಟಿಗರಲ್ಲಿ ಹಲ್‌ಚಲ್ ಸೃಷ್ಟಿಸಿದ್ದು, ಅಭಿಮಾನಿಗಳ ಆತಂಕವನ್ನು ದುಪ್ಪಟ್ಟುಗೊಳಿಸಿದೆ. ಸತತ ಫ್ಲಾಪ್‌ಗಳು, ಅದಕ್ಕೆ ಕಣ್ಣಿನ ಗಾಯ, ಈಗ ಕೈಗೆ ಸರ್ಜರಿ... ಹೀಗೆ ಒಂದರ ಹಿಂದೆ ಒಂದರಂತೆ ಎದುರಾಗುತ್ತಿರುವ ನಕಾರಾತ್ಮಕ ಸನ್ನಿವೇಶಗಳನ್ನು ನೋಡಿ, "ಚರಣ್‌ಗೆ ಏನಾಗಿದೆ? ನಿಜವಾಗಿಯೂ ಕಾಲ ಕೈಕೊಟ್ಟಿದೆಯಾ?" ಎಂದು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚಿಸುತ್ತಿದ್ದಾರೆ. ಚರಣ್ ಜಾತಕದ ಪ್ರಕಾರ ಈಗ ಸಮಯ ಸರಿ ಇಲ್ಲವೇನೋ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ. ಇದರಲ್ಲಿ ಸತ್ಯ ಎಷ್ಟಿದೆಯೋ ಗೊತ್ತಿಲ್ಲ.

ಸಿನಿಮಾ ಇಂಡಸ್ಟ್ರಿಯಲ್ಲಿ ಗೆಲುವು-ಸೋಲು, ಗಾಯಗಳು ಸಹಜ. ಚಿರಂಜೀವಿ ಅವರ ಪುತ್ರನಾಗಿ ಇಂಡಸ್ಟ್ರಿಗೆ ಕಾಲಿಟ್ಟ ರಾಮ್ ಚರಣ್, ತಮ್ಮ ವೃತ್ತಿಜೀವನದಲ್ಲಿ ಈಗಾಗಲೇ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ. 'ಮಗಧೀರ'ದಂತಹ ಇಂಡಸ್ಟ್ರಿ ಹಿಟ್ ನಂತರವೂ 'ಆರೆಂಜ್' ನಂತಹ ಸೋಲು, 'ತುಫಾನ್' ನಂತಹ ಡಿಸಾಸ್ಟರ್‌ಗಳನ್ನು ದಾಟಿ 'ರಂಗಸ್ಥಳಂ', 'ಆರ್‌ಆರ್‌ಆರ್‌' ನಂತಹ ಅದ್ಭುತ ಸಿನಿಮಾಗಳ ಮೂಲಕ ತಮ್ಮನ್ನು ತಾವು ಸಾಬೀತುಪಡಿಸಿಕೊಂಡಿದ್ದಾರೆ. ಈಗಿನ ಪರಿಸ್ಥಿತಿ ಕೇವಲ ತಾತ್ಕಾಲಿಕ ವಿರಾಮವಷ್ಟೇ. ದೈಹಿಕವಾಗಿ ಚೇತರಿಸಿಕೊಂಡು, ಸರಿಯಾದ ಕಥೆಗಳನ್ನು ಆಯ್ಕೆ ಮಾಡಿದರೆ, ರಾಮ್ ಚರಣ್ ಬಾಕ್ಸಾಫೀಸ್‌ನಲ್ಲಿ ಮತ್ತೆ ಹೊಸ ದಾಖಲೆಗಳನ್ನು ಬರೆಯುವುದು ಖಚಿತ ಎಂದು ಅಭಿಮಾನಿಗಳು ನಂಬಿದ್ದಾರೆ.

ಸುಕುಮಾರ್ ಸಿನಿಮಾ ಮೇಲೆ ಅಭಿಮಾನಿಗಳ ಭರವಸೆ..

ಶೀಘ್ರದಲ್ಲೇ ರಾಮ್ ಚರಣ್ ಜೊತೆ ಸುಕುಮಾರ್ ಸಿನಿಮಾ ಶುರುವಾಗಲಿದೆ ಎನ್ನಲಾಗುತ್ತಿದೆ. 'ರಂಗಸ್ಥಳಂ' ಸಿನಿಮಾದಲ್ಲಿ ಈ ಜೋಡಿ ಸೃಷ್ಟಿಸಿದ ಇತಿಹಾಸ ಎಲ್ಲರಿಗೂ ಗೊತ್ತಿದೆ. ಈ ಬಾರಿ ಅದಕ್ಕಿಂತ ದೊಡ್ಡ ಮಟ್ಟದ ಸಿನಿಮಾ ಮಾಡಲು ಹೊರಟಿದ್ದಾರೆ ಎಂಬ ಮಾಹಿತಿ ಇದೆ. ಸುಕುಮಾರ್ ಮೇಕಿಂಗ್‌ನಲ್ಲಿ 'ಪುಷ್ಪ' ಸರಣಿ ಯಾವ ರೇಂಜ್ ಹಿಟ್ ಆಯ್ತು ಅನ್ನೋದು ಎಲ್ಲರಿಗೂ ತಿಳಿದಿದೆ. ಈ ಸಿನಿಮಾದಿಂದಾದರೂ ಚರಣ್ ಅದೃಷ್ಟ ಬದಲಾಗಲಿದೆ ಎಂಬ ನಂಬಿಕೆಯಲ್ಲಿ ಎಲ್ಲರೂ ಇದ್ದಾರೆ. ಈ ಬಾರಿ ಮೆಗಾ ಪವರ್ ಸ್ಟಾರ್‌ನನ್ನು ಸುಕುಮಾರ್ ಯಾವ ರೇಂಜ್‌ನಲ್ಲಿ ತೋರಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕು.