Asianet Suvarna News Asianet Suvarna News

ರಕ್ಷಿತ್ ಶೆಟ್ಟಿ ಪುಣ್ಯಕೋಟಿ ಚಿತ್ರದ ಬಜೆಟ್ ಎಷ್ಟು ಕೋಟಿ?

ಪುಣ್ಯಕೋಟಿ ಹೆಸರಿನಲ್ಲಿ ಸೆಟ್ಟೇರುತ್ತಿರುವ ಚಿತ್ರದಲ್ಲಿ 300ವರ್ಷಗಳ ಹಿಂದಿನ ಕತೆಯನ್ನು ನೋಡಬಹುದು. 300ವರ್ಷಗಳ ಹಿಂದೆ ನಡೆದ ಒಂದು ಯುದ್ಧವನ್ನು ಆಧಾರವಾಗಿಟ್ಟುಕೊಂಡು ಈ ಚಿತ್ರವನ್ನು ರೂಪಿಸಲಾಗುತ್ತಿದೆ.

 

Rakshith shetty punyakoti cinema budget 100 crores
Author
Bengaluru, First Published Nov 10, 2018, 9:03 AM IST

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರ ‘ಪುಣ್ಯಕೋಟಿ’ ಚಿತ್ರಕ್ಕೆ ಅಧಿಕೃತವಾಗಿ ಚಾಲನೆ ಸಿಕ್ಕಿದೆ. ಇದು ರಕ್ಷಿತ್ ನಿರ್ದೇಶನದ ಎರಡನೇ ಸಿನಿಮಾ.. ‘ಪುಣ್ಯಕೋಟಿ’ಯಲ್ಲಿ ರಕ್ಷಿತ್ ಶೆಟ್ಟಿ ಅವರೇ ನಾಯಕ ಮತ್ತು ನಿರ್ದೇಶಕ. ಈ ಚಿತ್ರವನ್ನು ದಕ್ಷಿಣ ಭಾರತದಲ್ಲೇ ಅತಿ ದೊಡ್ಡ ಬಜೆಟ್‌ನ ಸಿನಿಮಾ ರೀತಿಯಲ್ಲಿ ಮೇಕಿಂಗ್ ಮಾಡುವುದಕ್ಕೆ ಚಿತ್ರತಂಡ ಹೊರಟಿದೆ. ಈಗಾಗಲೇ ಕತೆ ಸಿದ್ಧವಾಗಿದ್ದು, ರಕ್ಷಿತ್ ಶೆಟ್ಟಿ ಚಿತ್ರಕಥೆ ಬರೆಯುವುದರಲ್ಲಿ ತೊಡಗಿಸಿಕೊಂಡಿದ್ದಾರೆ. 

300 ವರ್ಷಗಳ ಹಿಂದಿನ ಕತೆ
ಪುಣ್ಯಕೋಟಿ ಚಿತ್ರವನ್ನು 300 ವರ್ಷಗಳ ಹಿಂದೆ ನಡೆದ ಒಂದು ಯುದ್ಧವನ್ನು ಆಧಾರವಾಗಿಟ್ಟುಕೊಂಡು ರೂಪಿಸಲಾಗುತ್ತಿದೆ. ಇದರ ಜತೆಗೆ ನಾವೆಲ್ಲ ಪುಸ್ತಕದಲ್ಲಿ ಓದಿದ, ಕೇಳಿದ ಹುಲಿ ಮತ್ತು ಗೋವಿನ ಕತೆಯನ್ನು ಹೇಳುವ ಪುಣ್ಯಕೋಟಿಯ ಪದ್ಯವನ್ನೂ ಸಹ ಈ ಕತೆಗೆ ಅಳವಡಿಸಕೊಳ್ಳಲಾಗಿದೆ. ಒಂದು ಯುದ್ಧ ಮತ್ತು ಒಂದು ಪದ್ಯವನ್ನು ಒಳಗೊಂಡ ಸಿನಿಮಾ ಇದಾಗಿದೆ. ಪಕ್ಕಾ ಆ್ಯಕ್ಷನ್ ಸಿನಿಮಾ. ಹೀಗಾಗಿ ಇದು ಕಲ್ಪನೆ ಮತ್ತು ನೈಜತೆಯ ಕತೆಯನ್ನು ಹೇಳುವ ಸಿನಿಮಾ. 

80 ರಿಂದ 100 ಕೋಟಿ ವೆಚ್ಚ
ಮೇಕಿಂಗ್ ಹಾಗೂ ಬಜೆಟ್ ವಿಚಾರದಲ್ಲಿ ತೆಲುಗಿನ ಬಾಹುಬಲಿಯನ್ನೂ ಮೀರಿಸುತ್ತದೆ ಎಂಬುದು ಪುಣ್ಯಕೋಟಿಯಿಂದ ಕೇಳಿಬರುತ್ತಿರುವ ಸುದ್ದಿ. 200 ದಿನಗಳ ಚಿತ್ರೀಕರಣ, 300 ವರ್ಷಗಳ ಹಿಂದಿನ ವಾತಾವರಣವನ್ನು ಮರು ನಿರ್ಮಾಣ, ಬಹುಭಾಷಾ ಕಲಾವಿದರು, ದಕ್ಷಿಣ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತಹ ಅದ್ದೂರಿತನದ ಕತೆಯನ್ನು ಒಳಗೊಂಡ ಈ ಚಿತ್ರದ ಒಟ್ಟು ಬಜೆಟ್ 80 ರಿಂದ 100 ಕೋಟಿ ಎಂದು ಅಂದಾಜಿಸಲಾಗಿದೆ. ಈ ನಿಟ್ಟಿನಲ್ಲಿ ನಟ ರಕ್ಷಿತ್ ಶೆಟ್ಟಿ ಕೂಡ ತಯಾರಿ ನಡೆಸಿಕೊಂಡಿದ್ದಾರೆ. 

ಮುಂದಿನ ವರ್ಷ ಚಿತ್ರ ಆರಂಭ
ರಕ್ಷಿತ್ ಶೆಟ್ಟಿ ಈಗ ‘ಅವನೇ ಶ್ರೀಮನ್ನಾರಾಯಣ’, ‘777ಚಾರ್ಲಿ’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಎರಡು ಸಿನಿಮಾ ಮುಗಿಸಿಕೊಂಡು ಮತ್ತೊಂದು ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದು ಈ ಚಿತ್ರ ಮುಗಿಸಿದ ಮೇಲೆ ‘ಪುಣ್ಯಕೋಟಿ’ ಸಿನಿಮಾ ಶುರುವಾಗಲಿದೆ. ಅಂದರೆ 2019.ರ ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಚಿತ್ರೀಕರಣ ಪ್ರಾರಂಭಿಸಲಾಗುವುದು. ಇದಕ್ಕೂ ಮುನ್ನ ಅದ್ದೂರಿಯಾಗಿ ಚಿತ್ರಕ್ಕೆ ಮುಹೂರ್ತ ಮಾಡಲಾಗುವುದು. ಒಟ್ಟು ಮೂರು ಸಿನಿಮಾಗಳಿಗೆ ನಟರಾಗಿ ಬುಕ್ ಆಗಿರುವ ರಕ್ಷಿತ್ ಶೆಟ್ಟಿ ಈ ಮೂರು ಮುಗಿಸಿಕೊಂಡು ತಮ್ಮ ಎರಡನೇ ನಿರ್ದೇಶನದ ಕತೆಗೆ ಚಾಲನೆ ಕೊಡುತ್ತಿದ್ದಾರೆ. ‘ಉಳಿದವರು ಕಂಡಂತೆ’ ಚಿತ್ರದ ಮೂಲಕ ಹೊಸ ಪ್ರೇಕ್ಷಕ ವರ್ಗವನ್ನು ತಲುಪಿದವರು ರಕ್ಷಿತ್ ಶೆಟ್ಟಿ, ಅದೇ ರೀತಿ ‘ಪುಣ್ಯಕೋಟಿ’ ಚಿತ್ರದ ಮೂಲಕ ಮಾಸ್ ಹಾಗೂ ಕಮರ್ಷಿಯಲ್ ಆಗಿ ದೊಡ್ಡ ಮಟ್ಟದಲ್ಲಿ ಮಾರುಕಟ್ಟೆಗೆ ತಲುಪಬೇಕು ಎನ್ನುವ ಉದ್ದೇಶದೊಂದಿಗೆ ‘ಪುಣ್ಯಕೋಟಿ’ ಚಿತ್ರವನ್ನು ರೂಪಿಸಲಾಗುತ್ತಿದೆಯಂತೆ. 

 

 

Follow Us:
Download App:
  • android
  • ios