ಈ ಸಲದ ಗೌರಿ-ಗಣೇಶ ಹಬ್ಬಕ್ಕೆ ಸರ್ಪ್ರೈಸ್ ಕೊಟ್ಟಿದ್ದು ರಕ್ಷಿತ್ ಶೆಟ್ಟಿ, ಹೇಮಂತ್ ರಾವ್, ಮತ್ತು ಮಲ್ಲಿಕಾರ್ಜುನಯ್ಯ ಟೀಂ. ಹಬ್ಬದ ದಿನ ಎಲ್ಲರೂ ಸಂಭ್ರಮದಲ್ಲಿರುವಾಗ ಈ ಟೀಂ ತಮ್ಮ ಹೊಸ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಿತು.
ಒಂದು ಹಳೇ ಕಾಲದ ಫೋನು, ಪುರಾತನ ಕನ್ನಡಿ, ಅದರ ಮುಂದೆ ಕೋಟು-ಕ್ಯಾಪು ಧರಿಸಿ ಹಳೇ ಕಾಲದ ಗೆಟಪ್ಪಿನಲ್ಲಿ ನಿಂತ ರಕ್ಷಿತ್ ಶೆಟ್ಟಿ. ಅವರ ಈ ಅವತಾರದ ಹೆಸರೇ ತೆನಾಲಿ. ಹೇಮಂತ್ ರಾವ್ ನಿರ್ದೇಶನದ ಮೂರನೇ ಚಿತ್ರ. ಗೋಧಿಬಣ್ಣ ಸಾಧಾರಣ ಮೈಕಟ್ಟು ಚಿತ್ರದಿಂದಾಗಿ ರಕ್ಷಿತ್ ಶೆಟ್ಟಿ ಮತ್ತು ಹೇಮಂತ್ ರಾವ್ ಒಂದಾಗಿದ್ದರು. ಸಮಾನ ಮನಸ್ಕರಾಗಿದ್ದರಿಂದ ಜೊತೆಯಾಗಿ ಸಿನಿಮಾ ಮಾಡುವ ಆಸೆ ಇತ್ತು. ಒನ್ ಫೈನ್ ಡೇ ಹೇಮಂತ್ ಫೋನ್ ಮಾಡಿ ರಕ್ಷಿತ್ ಶೆಟ್ಟಿ ಅವರಿಗೆ ಒಂದು ಐಡಿಯಾ ಹೇಳಿದ್ದಾರೆ. ಆ ಐಡಿಯಾ ಕೇಳಿ ರಕ್ಷಿತ್ ಶೆಟ್ಟಿ ಖುಷಿಯಾಗಿದ್ದಾರೆ. ಆ ಐಡಿಯಾನೇ ಈ ಚಿತ್ರ ‘ತೆನಾಲಿ’.
ಹೇಮಂತ್ ಸದ್ಯ ‘ಕವಲುದಾರಿ’ ಚಿತ್ರದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ರಕ್ಷಿತ್ ಶೆಟ್ಟಿ ‘ಅವನೇ ಶ್ರೀಮನ್ನಾರಾಯಣ’, ‘777 ಚಾರ್ಲಿ’ ಚಿತ್ರೀಕರಣದಲ್ಲಿ ಮತ್ತು ‘ರಿಚ್ಚಿ’ ಚಿತ್ರಕತೆಯಲ್ಲಿ ಬ್ಯುಸಿಯಾಗಿದ್ದಾರೆ. ಹೇಮಂತ್ ಕವಲುದಾರಿ ಮುಗಿಸಿ ಸ್ಕ್ರಿಪ್ಟ್ ಕೆಲಸಕ್ಕೆ ಕೂರಲಿದ್ದಾರೆ. ಸ್ಕ್ರಿಪ್ಟ್ ಮುಗಿದ ತಕ್ಷಣ ರಕ್ಷಿತ್ ಶೆಟ್ಟಿ ಸಮಯ ನೋಡಿಕೊಂಡು ಚಿತ್ರೀಕರಣ ಶುರು.
1947ರ ಸಮಯದಲ್ಲಿ ನಡೆಯುವ ಕತೆಯನ್ನು ಹೇಮಂತ್ ಹೇಳಲಿದ್ದಾರೆ. ಈ ನಮ್ಮ ತೆನಾಲಿ ಷೆರ್ಲಾಕ್ ಹೋಮ್ಸ್ ಥರದ ಒಂದು ಪಾತ್ರ. ಭಾರಿ ಬುದ್ಧಿವಂತ. ಈ ಚಿತ್ರ ಒಂದು ಡಿಟೆಕ್ಟಿವ್ ಕಥೆ.
ತೆನಾಲಿ ಭಾರಿ ಬುದ್ಧಿವಂತ. ಅವನ ಕಥೆ ಇದು. ಸ್ವಾತಂತ್ರ ಸಂಗ್ರಾಮದ ಸಂದರ್ಭದಲ್ಲಿ ಈ ಕಥೆ ನಡೆಯುತ್ತದೆ. ಡಿಟೆಕ್ಟಿವ್ ಕಥೆಯನ್ನು ತುಂಬಾ ಎಕ್ಸೈಟಿಂಗ್ ಆಗಿ ಹೇಳಬೇಕು ಅನ್ನುವುದು ನನ್ನ ಆಸೆ. ರಕ್ಷಿತ್ ಮತ್ತು ನಾನು ಜೊತೆಗೆ ಕೆಲಸ ಮಾಡಬೇಕು ಅನ್ನುವ ಆಸೆಯ ಫಲವೇ ‘ತೆನಾಲಿ’ - ಹೇಮಂತ್ ರಾವ್
