ಬೆಂಗಳೂರು (ಡಿ. 26): ಕನ್ನಡಕ್ಕೆ ಇಬ್ಬರು ಸೂಪರ್‌ ಸ್ಟಾರ್‌ಗಳು ಬರುತ್ತಿದ್ದಾರೆ. ಅವರ ಮೂಲಕ ಡಬ್ಬಿಂಗ್‌ ಕನ್ನಡಕ್ಕೆ ಬಲಗಾಲಿಟ್ಟು ರಾಜಾರೋಷವಾಗಿ ಪ್ರವೇಶ ಪಡೆಯುತ್ತಿದೆ.

ಇದಕ್ಕೆ ನಾಂದಿ ಹಾಡುತ್ತಿರುವುದು ರಜನೀಕಾಂತ್‌ ಅಭಿನಯದ ಪೆಟ್ಟಾಮತ್ತು ನಂದಮೂರಿ ಬಾಲಕೃಷ್ಣ ಅಭಿನಯದ ಕಥಾನಾಯಕುಡು! ರಜನೀಕಾಂತ್‌ ಶೈಲಿಯ ಪೆಟ್ಟಾಮತ್ತು ಎನ್‌ಟಿಆರ್‌ ಬಯೋಪಿಕ್‌ ಆಧರಿಸಿದ ಕಥಾನಾಯಕುಡು- ಚಿತ್ರಗಳು ಇದೀಗ ಕನ್ನಡಕ್ಕೆ ಡಬ್ಬಿಂಗ್‌ ಆಗುವ ಹಂತದಲ್ಲಿವೆ.

ಇದು ಡಬ್ಬಿಂಗ್‌ ಅಧಿಕೃತವಾಗಿ ಕನ್ನಡಕ್ಕೆ ಕಾಲಿಡುವ ಮೊದಲ ಸೂಚನೆ. ಇಲ್ಲಿಯ ತನಕ ಹಳೆಯ ಸಿನಿಮಾಗಳನ್ನು ಡಬ್‌ ಮಾಡಿ ಅಲ್ಲೊಂದು ಇಲ್ಲೊಂದು ಥೇಟರುಗಳಲ್ಲಿ ಬಿಡುಗಡೆ ಮಾಡುತ್ತಿದ್ದರು. ಈಗ ಎಲ್ಲಾ ಭಾಷೆಗಳಲ್ಲೂ ಏಕಕಾಲಕ್ಕೆ ಬಿಡುಗಡೆಯಾಗುವ ಥರವೇ, ಕನ್ನಡಕ್ಕೂ ಡಬ್‌ ಆಗುತ್ತಿದೆ ಪೆಟ್ಟಾ. ಕಾರ್ತಿಕ್‌ ಸುಬ್ಬರಾಜು ನಿರ್ದೇಶನದ ‘ಪೆಟ್ಟ’ ಚಿತ್ರದ್ದು 70 ಮತ್ತು 80 ದಶಕದ ಕತೆ. ಈಗಾಗಲೇ ಚಿತ್ರದ ಟ್ರೇಲರ್‌ ಹಾಗೂ ಹಾಡುಗಳು ಬಿಡುಗಡೆಯಾಗಿವೆ.

ಮುತ್ತು, ಅರುಣಾಚಲ, ನರಸಿಂಹ, ಭಾಷಾ ಮುಂತಾದ ಚಿತ್ರಗಳ ಹಳೆಯ ರಜನಿಕಾಂತ್‌ ಮತ್ತೆ ವಾಪಸ್ಸು ಬಂದಿದ್ದಾರೆ ಎನ್ನುವಷ್ಟರ ಮಟ್ಟಿಗೆ ಕಲರ್‌ಫುಲ್‌ ಆಗಿದೆ ರಜನಿಕಾಂತ್‌ ಕ್ಯಾರೆಕ್ಟರ್‌. ಸದ್ಯ ಈ ಚಿತ್ರವನ್ನು ಕನ್ನಡಕ್ಕೆ ಡಬ್‌ ಮಾಡುವ ಪ್ಲಾನ್‌ ನಡೆಯುತ್ತಿದೆ. ಆ ಮೂಲಕ ಕನ್ನಡ ಮೂಲದ ತಮಿಳು ಚಿತ್ರರಂಗದ ರಜನಿಕಾಂತ್‌ ಅವರ ನಟನೆಯ ಚಿತ್ರವೊಂದು ಮೊದಲ ಬಾರಿಗೆ ಕನ್ನಡಕ್ಕೆ ಡಬ್‌ ಆಗುತ್ತಿದೆ. ಅಂದಹಾಗೆ ಕಾರ್ತಿಕ್‌ ಸುಬ್ಬರಾಜು ನಿರ್ದೇಶನದ ‘ಮಕ್ಯುರಿ’ ಎನ್ನುವ ಮೂಕಿ ಚಿತ್ರವನ್ನು ಕರ್ನಾಟಕದಲ್ಲಿ ವಿತರಣೆ ಮಾಡಿದ್ದು ನಿರ್ಮಾಪಕ ಪುಷ್ಕರ್‌ ಮಲ್ಲಿಕಾರ್ಜುನಯ್ಯ.

ಇನ್ನೊಂದು ದಕ್ಷಿಣ ಭಾರತದ ಮೊದಲ ಸೂಪರ್‌ ಸ್ಟಾರ್‌ ಎನ್‌ ಟಿ ರಾಮಾರಾವ್‌. ತೆಲುಗು ಚಿತ್ರರಂಗದಲ್ಲಿ ನಂದಮೂರಿ ಕುಟುಂಬದ್ದೇ ದೊಡ್ಡ ಹವಾ. ಈಗಲೂ ಇವರ ಮಕ್ಕಳು, ಮೊಮ್ಮಕ್ಕಳು ಚಿತ್ರರಂಗಲ್ಲಿ ಬಹು ಬೇಡಿಕೆಯಲ್ಲಿರುವ ಸ್ಟಾರ್‌ ನಟರು. ವೃತ್ತಿ ಮತ್ತು ವ್ಯಕ್ತಿಗತ ಜೀವನ ಸಾಕಷ್ಟುರೋಚಕತೆಯಿಂದ ಕೂಡಿದ್ದು, ಇಂಥ ವ್ಯಕ್ತಿಯ ಜೀವವನ್ನು ಆಧರಿಸಿ ಕ್ರಿಶ್‌ ನಿರ್ದೇಶಿಸುತ್ತಿರುವ ‘ಎನ್‌ಟಿಆರ್‌- ಕಥನಾಯಕಡು’ ಸಿನಿಮಾ ಕನ್ನಡಕ್ಕೆ ಡಬ್‌ ಆಗುತ್ತಿದೆ.

ವಿಶೇಷ ಅಂದರೆ ಇಲ್ಲಿ ಎನ್‌ ಟಿ ರಾಮಾರಾವ್‌ ಪಾತ್ರವನ್ನು ಅವರ ಪುತ್ರ ನಂದಮೂರಿ ಬಾಲಕೃಷ್ಣ ಅವರೇ ಮಾಡುತ್ತಿದ್ದಾರೆ. ಇನ್ನೂ ಪ್ರಮುಖ ವ್ಯಕ್ತಿಗಳ ಪಾತ್ರಗಳಲ್ಲಿ ರಾಣಾ ದಗ್ಗುಬಾಟಿ, ವಿದ್ಯಾ ಬಾಲನ್‌, ನಿತ್ಯಾ ಮೆನನ್‌, ರಕುಲ್‌ ಪ್ರೀತ್‌ಸಿಂಗ್‌, ಸುಮಂತ್‌ ಅಕ್ಕಿನೇನಿ, ಕಲ್ಯಾಣ್‌ ರಾಮ್‌ ದೊಡ್ಡ ತಾರಾಬಳಗವೇ ಇರುವ ಈ ಚಿತ್ರವನ್ನು ನಂದಮೂರಿ ಬಾಲಕೃಷ್ಣ ಅವರೇ ತಮ್ಮ ಎನ್‌ಬಿಕೆ ಬ್ಯಾನರ್‌ ಮೂಲ ನಿರ್ಮಾಣ ಮಾಡುತ್ತಿದ್ದಾರೆ. ಎರಡು ಭಾಗಗಳಲ್ಲಿ ಬರುತ್ತಿದೆ.

ಅಚ್ಚರಿ ಅಂದರೆ ಇದೇ ಎನ್‌ಟಿಆರ್‌ ಅವರ ಜೀವನ ಕತೆಯನ್ನು ಆಧರಿಸಿ ರಾಮ್‌ಗೋಪಾಲ್‌ ವರ್ಮಾ ಕೂಡ ‘ಲಕ್ಷ್ಮೀಸ್‌ ಎನ್‌ಟಿಆರ್‌’ ಹೆಸರಿನಲ್ಲೊಂದು ಸಿನಿಮಾ ಮಾಡುತ್ತಿದ್ದಾರೆ. ಸದ್ಯಕ್ಕೆ ಟಾಲಿವುಡ್‌ನಲ್ಲಿ ಈ ಎರಡೂ ಚಿತ್ರಗಳದ್ದೇ ವಾದ- ವಿವಾದಗಳು ನಡೆಯುತ್ತಿದ್ದು, ಎಲ್ಲರು ವರ್ಮಾ ಎನ್‌ಟಿಆರ್‌ ಸುತ್ತ ವಿವಾದ ಎಬ್ಬಿಸುತ್ತಿದ್ದಾರೆ.

ಒಬ್ಬ ವ್ಯಕ್ತಿ ಮೇಲೆ ಮೂರು ರೀತಿಯ ಬಯೋಪಿಕ್‌ಗಳು ಬರುವ ಜತೆಗೆ ತಮ್ಮ ತಂದೆಯ ಪಾತ್ರವನ್ನು ಮಗನೇ ಮಾಡುತ್ತಿರುವುದು ವಿಶೇಷ. ಇಂಥ ಬಹು ಕೋಟಿ ವೆಚ್ಚದ ಸಿನಿಮಾ ಕನ್ನಡಕ್ಕೆ ಡಬ್‌ ಆಗುತ್ತಿದೆ. ಸಿನಿಮಾ ನಟರಾಗಿ, ರಾಜಕೀಯ ವ್ಯಕ್ತಿಯಾಗಿ ಹಾಗೂ ವೈಯಕ್ತಿಕ ಜೀವನದ ಸುತ್ತ ಎನ್‌ಟಿಆರ್‌ ಸಿನಿಮಾ ಮೂಡಿಬರುತ್ತಿದೆ. ಈ ಎರಡೂ ಸಿನಿಮಾಗಳು ಕನ್ನಡಕ್ಕೆ ದೊಡ್ಡ ಮಟ್ಟದಲ್ಲಿ ಡಬ್‌ ಆಗಿ ಬರುತ್ತಿವೆ.