ಸಿನಿಮಾಗಳಲ್ಲಿ ತನ್ನ ಅದ್ಭುತ ನಟನೆಗಾಗಿಯೇ ಗುರುತಿಸಿಕೊಳ್ಳುವ ನಟಿ ರಾಧಿಕಾ ಆಪ್ಟೆ ತನ್ನ ಬಳಿ ಚಿನ್ನದ ಹಾಗೂ ವಜ್ರದ ಆಭರಣಗಳಿಲ್ಲ ಎಂದು ಹೇಳಿಕೊಂಡಿದ್ದಾರೆ. ತನ್ನ ಬಳಿ ಇರುವ ಚಿನ್ನದ ಆಭರಣವೆಂದರೆ ಅದು ಕೇವಲ ಕೈ ಬೆರಳಲ್ಲಿರುವ ಉಂಗುರವಷ್ಟೇ, ಅದನ್ನು ತಾನು ಖುದ್ದಾಗಿ ಖರೀದಿಸಿದ್ದು ಎಂದಿದ್ದಾರೆ. 'ನನ್ನ ತಾಯಿ ನನಗಾಗಿ ಮಂಗಳಸೂತ್ರ ಖರೀದಿಸಿದ್ದರು. ಆದರೀಗ ಅದು ಎಲ್ಲಿದೆ ಎಂದು ನನಗೂ ತಿಳಿದಿಲ್ಲ' ಎಂದಿದ್ದಾರೆ ನಟಿ.

ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ರಾಧಿಕಾ ಅಪ್ಟೆ 'ನಾನು ಆರಿಸಿಕೊಂಡಿರುವ ವೃತ್ತಿಯಲ್ಲಿ ವಿವಿಧ ಆಭರಣಗಳನ್ನು ಧರಿಸುವ ಅವಕಾಶ ಸಿಗುತ್ತದೆ. ಈ ವಿಚಾರದಲ್ಲಿ ನಾನು ನಿಜಕ್ಕೂ ಅದೃಷ್ಟಶಾಲಿಯಾಗಿದ್ದೇನೆ' ಎಂದಿದ್ದಾರೆ.

'ನಾನು ಪ್ರತಿದಿನ ಡ್ರೆಸ್ಸಿಂಗ್ ಮಾಡಿಕೊಳ್ಳುತ್ತೇನೆ. ಅದ್ಭುತ ಮತ್ತು ಸ್ಪೂರ್ತಿದಾಯಕ ಜನರ ಪರಿಚಯ ನನಗಿದೆ. ಇವರೆಲ್ಲರ ಬದುಕಿನ ಕಥೆಗಳನ್ನು ನಾನು ಕೇಳುತ್ತೇನೆ. ಹೀಗಾಗಿ ಚಿನ್ನದ ಆಭರಣಗಳ ಕುರಿತು ನನ್ನ ಜ್ಞಾನ ವೃದ್ಧಿಸುತ್ತಿದೆ. ಚಿನ್ನದ ಆಭರಣಗಳ ಕುರಿತಾಗಿ ನನ್ನ ಜ್ಞಾನ ವೃದ್ಧಿಸುತ್ತಾ ಹೋದಂತೆ, ಚಿನ್ನ ಖರೀದಿಸುವ ಕುರಿತಾಗಿ ಆಲೋಚಿಸುತ್ತೇನೆ' ಎಂದಿದ್ದಾರೆ ರಾಧಿಕಾ.

ಅವರ ಸಿನಿಮಾಗಳನ್ನು ಗಮನಿಸಿದರೆ ಇತ್ತೀಚೆಗಷ್ಟೇ ತೆರೆಕಂಡ ಅವರ ಎರಡು ಸಿನಿಮಾಗಳು ಯಶಸ್ಸು ಕಂಡಿವೆ. ಇವುಗಳಲ್ಲಿ 'ಅಂಧಾದುನ್' ಸಿನಿಮಾಗದಲ್ಲಿ ಅವರು ಆಯುಷ್ಯಮಾನ್ ಖುರಾನಾರೊಂದಿಗೆ ನಟಿಸಿದ್ದರೆ, 'ಬಾಜಾರ್'ನಲ್ಲಿ ಸೈಫ್ ಅಲಿ ಖಾನ್ ರೊಂದಿಗೆ ನಟಿಸಿದ್ದಾರೆ.