‘ನನಗೆ ಸೋಲು-ಗೆಲುವು ಹೊಸತಲ್ಲ. ನಟ ಎನಿಸಿಕೊಂಡವನಿಗೆ ಇವೆಲ್ಲ ಸಹಜ. ಆದರಾಚೆ ಜನರಿಗೆ ಒಳ್ಳೆಯ ಸಿನಿಮಾ ಕೊಡಬೇಕು ಅನ್ನೋದಷ್ಟೇ ನನ್ನ ತಲೆಯಲ್ಲಿರುತ್ತೆ. ಈಗಲೂ ಅಷ್ಟೆ, ‘ರಾಜಕುಮಾರ’ ಚಿತ್ರದ ಸಕ್ಸಸ್ ನನ್ನ ನಟನೆಯ ಜವಾಬ್ದಾರಿಯನ್ನು ಹೆಚ್ಚಿಸಿದೆ ಹೊರತು ಆ ಭಾರವನ್ನು ಮುಂದಿನ ಚಿತ್ರಕ್ಕೂ ಹೊತ್ತುಕೊಂಡು ಬರುವಂತೆ ಮಾಡಿಲ್ಲ.

ಯಾವುದೇ ಚಿತ್ರದ ಸಕ್ಸಸ್‌ನ ಭಾರವನ್ನು ಹೆಗಲ ಮೇಲೆ ಹೊತ್ತುಕೊಂಡು ಬಂದವನಲ್ಲ ನಾನು...! - ಇದು ಪುನೀತ್ ರಾಜ್‌ಕುಮಾರ್ ಬಿಚ್ಚುಮಾತು.

‘ರಾಜಕುಮಾರ’ ಚಿತ್ರದ ಬಹುದೊಡ್ಡ ಸಕ್ಸಸ್‌ನ ಬೆನ್ನಲೇ ಈಗವರು ‘ಅಂಜನಿಪುತ್ರ’ದೊಂದಿಗೆ ಮತ್ತೆ ತೆರೆ ಮೇಲೆ ಬರುತ್ತಿದ್ದಾರೆ. ಡಿ. 21 ರಂದು ಎಂ.ಎನ್. ಕುಮಾರ್ ನಿರ್ಮಾಣದ, ಹರ್ಷ ನಿರ್ದೇಶನದ ಈ ಚಿತ್ರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ‘ರಾಜಕುಮಾರ’ ಈ ವರ್ಷದ ಬ್ಲಾಕ್‌ಬಸ್ಟರ್. ಹಾಗೆಯೇ ಗಾಂಧಿನಗರದ ಬಾಕ್ಸಾಫೀಸ್ ಚಿಂದಿ ಉಡಾಯಿಸಿದ ಹೆಗ್ಗಳಿಕೆ ಇದರದ್ದು. ತುಂಬಾ ದಿನಗಳಿಂದ ದೊಡ್ಡದೊಂದು ಸಕ್ಸಸ್ ಕಾಣದೇ ಇದ್ದ ಪುನೀತ್ ರಾಜ್ ಕುಮಾರ್ ಅವರಿಗೂ ಬಹು ದೊಡ್ಡ ಸಕ್ಸಸ್ ತಂದು ಕೊಟ್ಟ ಚಿತ್ರ.

ಆ ಚಿತ್ರದ ನಂತರವೀಗ ‘ಅಂಜನಿಪುತ್ರ’ದೊಂದಿಗೆ ತೆರೆ ಮೇಲೆ ಬರುತ್ತಿದ್ದಾರೆಂದರೆ ಆ ಚಿತ್ರಕ್ಕಿಂತ ಇದು ಹೇಗೆ ಭಿನ್ನ? ಈ ಚಿತ್ರದಲ್ಲಿನ ಅವರ ಪಾತ್ರ ಎಂಥದ್ದು? ಪ್ರೇಕ್ಷಕರನ್ನು ಇದು ಹೇಗೆ ರಂಜಿಸುತ್ತೆ? ಆ ಸಕ್ಸಸ್‌ನ ಜವಾಬ್ದಾರಿ ಹೇಗಿದೆ ಅಂತ ಕೇಳಿದ ಪ್ರಶ್ನೆಗೆ ತಮ್ಮದೇ ಉತ್ತರ ‘ಸಕ್ಸಸ್ ಭಾರವನ್ನು ನಾನು ಎಂದಿಗೂ ಮತ್ತೊಂದು ಚಿತ್ರಕ್ಕೆ ಹೊತ್ತುಕೊಂಡು ಬಂದವನಲ್ಲ’ ಎಂದಿದ್ದು.

‘ನನಗೆ ಸೋಲು-ಗೆಲುವು ಹೊಸತಲ್ಲ. ನಟ ಎನಿಸಿಕೊಂಡವನಿಗೆ ಇವೆಲ್ಲ ಸಹಜ. ಆದರಾಚೆ ಜನರಿಗೆ ಒಳ್ಳೆಯ ಸಿನಿಮಾ ಕೊಡಬೇಕು ಅನ್ನೋದಷ್ಟೇ ನನ್ನ ತಲೆಯಲ್ಲಿರುತ್ತೆ. ಈಗಲೂ ಅಷ್ಟೆ, ‘ರಾಜಕುಮಾರ’ ಚಿತ್ರದ ಸಕ್ಸಸ್ ನನ್ನ ನಟನೆಯ ಜವಾಬ್ದಾರಿಯನ್ನು ಹೆಚ್ಚಿಸಿದೆ ಹೊರತು ಆ ಭಾರವನ್ನು ಮುಂದಿನ ಚಿತ್ರಕ್ಕೂ ಹೊತ್ತುಕೊಂಡು ಬರುವಂತೆ ಮಾಡಿಲ್ಲ. ಪ್ರೇಕ್ಷಕರ ನಿರೀಕ್ಷೆ ಹಾಗಿರಬಹುದು. ಆದರೆ ನಾನು ಸೋಲು-ಗೆಲುವನ್ನು ನೋಡುವುದಕ್ಕಿಂತ ಒಳ್ಳೆಯ ಸಿನಿಮಾ ಕೊಡುತ್ತಾ ಬರಬೇಕು ಅನ್ನೋದನ್ನು ಬಿಟ್ಟರೆ, ಅಂಥದ್ದೇ ಸಿನಿಮಾ ಮಾಡಬೇಕು, ಅಷ್ಟೇ ಸಕ್ಸಸ್ ಕಾಣಬೇಕು ಎನ್ನುವ ಉಮೇದು ಇಲ್ಲ. ಒಳ್ಳೆಯ ಸಿನಿಮಾ ಮಾಡಬೇಕು ಅನ್ನೋದು ಜವಾಬ್ದಾರಿ. ಅದರ ಸೋಲು-ಗೆಲುವು ಜನರ ಕೈಯಲ್ಲಿರುತ್ತೆ. ಆ ನಿಟ್ಟಿನಲ್ಲಿ ಎಂದಿಗೂ ಒಂದು ಸಿನಿಮಾದ ಸಕ್ಸಸ್‌ನ ಭಾರವನ್ನು ಮತ್ತೊಂದು ಸಿನಿಮಾಕ್ಕೆ ಹೊತ್ತು ಕೊಂಡು ಬಂದನಲ್ಲ’ ಎನ್ನುತ್ತಾರೆ ಪುನೀತ್ ರಾಜ್‌ಕುಮಾರ್.