ಪುನೀತ್ ರಾಜ್‌ಕುಮಾರ್ ಮಾಲೀಕತ್ವದ ಕಂಪನಿ ಸದಾ ಕನ್ನಡ ಚಿತ್ರಗಳ ಬೆನ್ನಿಗೆ ನಿಲ್ಲುವುದು ಗೊತ್ತು. ಆದರೆ, ಇದೀಗ ತೆಲಗು ಚಿತ್ರಗಳಲ್ಲಿಯೂ ಸೇವೆ ಸಲ್ಲಿಸಲು ಮುಂದಾಗಿದ್ದು, ಯಾವ ಸಿನಿಮಾ ಎಂಬುದನ್ನು ತಿಳಿಯಲು ಈ ಸುದ್ದಿ ಓದಿ.

ಪುನೀತ್‌ರಾಜ್‌ಕುಮಾರ್ ಸಾರಥ್ಯದ ಪಿಆರ್‌ಕೆ ಆಡಿಯೋ ಕಂಪನಿ ಕನ್ನಡ ಸಿನಿಮಾಗಳ ಆಡಿಯೋ ಬೆನ್ನಿಗೆ ನಿಲ್ಲುವ ಜತೆಗೆ ಈಗ ತೆಲುಗಿಗೂ ಹೊರಟಿದೆ. ವೇಲು ಅವರ ಲಹರಿ ಸಂಸ್ಥೆ ನಂತರ ಈಗ ಪಿಆರ್‌ಕೆ ಟಾಲಿವುಡ್‌ಗೆ ಎಂಟ್ರಿಯಾಗಿದೆ. ಅದು ಕೂಡ ಕನ್ನಡ ಚಿತ್ರದ ಮೂಲಕ. ಮುಸ್ಸಂಜೆ ಮಹೇಶ್ ನಿರ್ದೇಶನದ 'ಎಂಎಂಸಿಎಚ್' ಸಿನಿಮಾ ಈಗ ತೆಲುಗು ಭಾಷೆಗೂ ಡಬ್ ಆಗುತ್ತಿದೆ.

ಕನ್ನಡದಲ್ಲಿ ಆಡಿಯೋ ಬಿಡುಗಡೆ ಮಾಡಿಕೊಂಡ ಬೆನ್ನಲ್ಲೇ 'ಎಂಎಂಸಿಎಚ್' ತೆಲುಗಿನಲ್ಲೂ ಆಡಿಯೋ ಬಿಡುಗಡೆ ಮಾಡಿಕೊಂಡಿದೆ. ತೆಲುಗಿನಲ್ಲಿ ಬೇರೆ ಆಡಿಯೋ ಸಂಸ್ಥೆಗೆ ಕೊಡುವ ಬದುಲು ಪಿಆರ್‌ಕೆ ಸಂಸ್ಥೆಯಿಂದಲೇ ತೆಲುಗು ವರ್ಷನ್ ಆಡಿಯೋ ಬಿಡುಗಡೆ ಮಾಡಲಾಗಿದೆ. 

ಟ್ರೇಲರ್ ಕೂಡ ಪಿಆರ್‌ಕೆ ಸಂಸ್ಥೆಯ ಯೂಟ್ಯೂಬ್‌ನಲ್ಲಿ ಅನಾವರಣಗೊಂಡಿದೆ. ಕನ್ನಡದ ಚಿತ್ರದ ಮೂಲಕ ಪಿಆರ್‌ಕೆ ತೆಲುಗು ಆಡಿಯೋ ಕ್ಷೇತ್ರಕ್ಕೂ ಕಾಲಿಟ್ಟಿದೆ. 'ಎಂಎಂಸಿಎಚ್'ಗೆ ತೆಲುಗಿನಲ್ಲಿ 'ರಿಯಲ್ ದಂಡುಪಾಳ್ಯಂ' ಎನ್ನುವ ಹೆಸರಿಡಲಾಗಿದೆ. 'ಎಂಎಂಸಿಎಚ್' ನಾಲ್ವರು ಹುಡುಗಿಯರ ಕ್ರೈಮ್ ಕತೆಯಾಗಿದ್ದು, ಇದಕ್ಕೆ 'ರಿಯಲ್ ದಂಡುಪಾಳ್ಯಂ' ಎನ್ನುವ ಹೆಸರೇ ಸೂಕ್ತ ಎನ್ನುವುದು ನಿರ್ದೇಶಕರ ನಂಬಿಕೆ. 

ಮೇಘನಾ ರಾಜ್, ಸಂಯುಕ್ತಾ ಹೊರನಾಡು, ದೀಪ್ತಿ, ಪ್ರಥಮ್ ವಿನಯಾ ಪ್ರಸಾದ್, ರಾಗಿಣಿ ನಟಿಸಿದ್ದಾರೆ. ಪುರುಷೋತ್ತಮ್, ಜಾನಕಿರಾಮ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.