ಪುನೀತ್‌ ರಾಜ್‌ಕುಮಾರ್‌ ಅಭಿನಯದ ಬಹುನಿರೀಕ್ಷಿತ ಚಿತ್ರ ‘ನಟಸಾರ್ವಭೌಮ’ ಫೆ.7ಕ್ಕೆ ತೆರೆಗೆ ಬರುತ್ತಿದೆ. ಇದು ತೆರೆ ಕಂಡ ನಂತರ ‘ಯವರತ್ನ’ದಲ್ಲಿ ಬ್ಯುಸಿ ಆಗುತ್ತಿದ್ದಾರೆ. ಫೆ.14ರಿಂದ ಅದಕ್ಕೆ ಚಿತ್ರೀಕರಣ ಶುರು. 2019ರಲ್ಲೇ ಅವರು ಮತ್ತೆರಡು ಬಿಗ್‌ಬಜೆಟ್‌ ಸಿನಿಮಾಗಳಿಗೆ ಫಿಕ್ಸ್‌ ಆಗಲಿದ್ದಾರೆ.

‘ಆಫರ್‌ಗಳಿಗೇನು ಕಮ್ಮಿ ಇಲ್ಲ ಬಿಡಿ. ಸಾಕಷ್ಟುನಿರ್ದೇಶಕರು ನಿತ್ಯವೂ ಭೇಟಿ ಮಾಡಿ, ಕತೆ ಹೇಳುವ ಪ್ರಕ್ರಿಯೆ ನಡೆದೇ ಇದೆ. ಆದ್ರೆ ನನಗಿರುವ ಆಸಕ್ತಿ ಮತ್ತು ಕುತೂಹಲ ಏನಂದ್ರೆ, ಹೊಸ ತರಹದ ಕತೆ ಮತ್ತು ಪಾತ್ರಗಳು ಬೇಕು ಎನ್ನುವುದು. ಅಂತಹ ಕತೆ ಮತ್ತು ಪಾತ್ರ ಇತ್ತು ಎನ್ನುವ ಕಾರಣಕ್ಕಾಗಿಯೇ ‘ಯುವರತ್ನ’ ಒಪ್ಪಿಕೊಂಡೆ. ಮತ್ತೆರಡು ಸಿನಿಮಾಗಳು ಮಾತುಕತೆ ಹಂತದಲ್ಲಿವೆ. ಕತೆ ಕೇಳಿದ್ದೇನೆ. ಕತೆ ಮತ್ತು ಪಾತ್ರಗಳ ವಿಚಾರದಲ್ಲಿ ನಾನೇನು ನಿರೀಕ್ಷೆ ಮಾಡುತ್ತಿದ್ದೇನೋ ಅಂತಹ ಕತೆ ಮತ್ತು ಪಾತ್ರ ಅಲ್ಲಿವೆ. ಜತೆಗೆ ದೊಡ್ಡ ಪ್ರೊಡಕ್ಷನ್‌ ಹೌಸ್‌ಗಳೇ ಅವೆರಡು ಸಿನಿಮಾಗಳ ನಿರ್ಮಾಣಕ್ಕೆ ಮುಂದೆ ಬಂದಿವೆ. ಅವು ಈ ವರ್ಷದ ಒಳಗಾಗಿಯೇ ಶುರುವಾಗಬಹುದು. ಇದರ ಜೊತೆ ಪಿಆರ್‌ಕೆ ಬ್ಯಾನರ್‌ನ ನಾಲ್ಕನೇ ಚಿತ್ರದಲ್ಲೂ ನಾನು ನಟಿಸಲಿದ್ದೇನೆ’ ಎನ್ನುತ್ತಾರೆ ಪುನೀತ್‌.

2018ರಲ್ಲಿ ನನ್ನ ಸಿನಿಮಾ ಯಾವುದು ಬರಲಿಲ್ಲ. ಸ್ಟಾರ್‌ ನಟರು ಅಷ್ಟುಗ್ಯಾಪ್‌ ತೆಗೆದುಕೊಳ್ಳುವುದನ್ನು ನಾನು ಒಪ್ಪಿಕೊಳ್ಳುವುದಿಲ್ಲ. ಉದ್ಯಮ ಉಳಿಯಬೇಕಾದ್ರೆ, ಹೊಸಬರ ಸಿನಿಮಾಗಳ ಜತೆಗೆ ಸ್ಟಾರ್‌ ನಟರ ಸಿನಿಮಾಗಳು ಬರಬೇಕು. ಅದೇನೋ ಗೊತ್ತಿಲ್ಲ, ನನಗೂ ಅಂತಹದೊಂದು ಗ್ಯಾಪ್‌ ಬಂದು ಹೋಯಿತು. ಆದ್ರೆ ಈ ವರ್ಷ ಅಂತಹ ಗ್ಯಾಪ್‌ ಆಗೋದಿಲ್ಲ.

- ಪುನೀತ್‌ ರಾಜ್‌ಕುಮಾರ್‌