ಶಿವಣ್ಣ ಯಾವುದೇ ಸಿನಿಮಾ ಕಾರ್ಯಕ್ರಮಗಳಲ್ಲಿ ಮಾತನಾಡುವಾಗ ಪುನೀತ್‌ ಒಳ್ಳೆಯ ನಟ. ನಾನು ಚಿತ್ರರಂಗಕ್ಕೆ ಬರುವುದಕ್ಕೆ ಒಂದು ರೀತಿಯಲ್ಲಿ ಅಪ್ಪುನೇ ಸ್ಫೂರ್ತಿ. ಬಾಲ ನಟನಾಗಿ ಬಂದವನು. ಅದ್ಭುತ ನಟ. ನಾನು ಅವರ ಅಭಿಮಾನಿ ಎಂದಿರುವುದನ್ನು ಕೇಳಿದ್ದೇವೆ. ಆದರೆ, ಈಗ ಪುನೀತ್‌, ಏನಂತಾರೆ ಗೊತ್ತಾ?

ನಟ ಪುನೀತ್‌ರಾಜ್‌ಕುಮಾರ್‌ ಅವರ ‘ರಾಜಕುಮಾರ' ಸಿನಿಮಾ ರಾಜ್ಯದ 250ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ತುಂಬಾ ವರ್ಷಗಳಿಂದ ಥಿಯೇಟರ್‌ಗಳ ಕಡೆ ಮುಖ ಮಾಡಿದ ಹಿರಿಯರು ಕೂಡ ‘ರಾಜಕುಮಾರ'ನನ್ನು ಕಣ್ಣು ತುಂಬಿಕೊಳ್ಳುವುದಕ್ಕೆ ಬರುತ್ತಿದ್ದಾರೆ. ಹೆಸರಿನಲ್ಲೇ ಸಂತೋಷ ಇಟ್ಟುಕೊಂಡಿರುವ ಸಂತೋಷ್‌ ಆನಂದ್‌ರಾಮ್‌ ಅವರು ಫುಲ್‌ ಖುಷಿಯಾಗಿದ್ದಾರೆ. ನಿರ್ಮಾಪಕ ವಿಜಯ್‌ ಕಿರಗಂದೂರು ಅವರ ಮುಖದಲ್ಲಿ ನಗುವಿದೆ. ಪ್ರೇಕ್ಷಕರ ಕೊಟ್ಟಈ ಗೆಲುವಿಗೆ ಪುನೀತ್‌ ಸಮಾಧಾನಗೊಂಡಿದ್ದಾರೆ. ಈ ನಡುವೆ ನಟ ಶಿವರಾಜ್‌ಕುಮಾರ್‌ ಚಿತ್ರ ನೋಡಿದ್ದಾರೆ. ಬೆಂಗಳೂರಿನ ಓರಾಯನ್‌ ಮಾಲ್‌ನಲ್ಲಿ ಚಿತ್ರ ನೋಡಿ ಮಾಧ್ಯಮಗಳ ಮುಂದೆ ಭಾವುಕರಾಗಿ ಮಾತನಾಡಿದ್ದಾರೆ. ಕಣ್ಣೀರು ಸುರಿಸುತ್ತಲೇ ‘ಸೂಪರ್‌ ಸಿನಿಮಾ. ಮನಸ್ಸಿಗೆ ನಾಟಿದ ಕತೆ' ಎನ್ನುತ್ತ ಅತ್ತಿದ್ದಾರೆ. ಶಿವಣ್ಣ ಅವರ ಈ ಭಾವುಕ ಮಾತುಗಳಿಗೆ ಪುನೀತ್‌ರಾಜ್‌ಕುಮಾರ್‌ ಪ್ರತಿಕ್ರಿಯಿಸಿದ್ದಾರೆ. ಚಿತ್ರದ ಯಶಸ್ಸಿನ ಹಿನ್ನೆಲೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತಿಗೆ ನಿಂತ ಅಪ್ಪು ಹೇಳಿದ್ದೇನು?

‘ರಾಜಕುಮಾರ' ಚಿತ್ರವನ್ನು ನೋಡಿದ ಮೇಲೆ ಶಿವಣ್ಣ ಭಾವುಕರಾಗಿ ಮಾತನಾಡಿದ್ದಾರೆ. ಚಿತ್ರವನ್ನು ಮೆಚ್ಚಿ ಮಾತನಾಡಿದ್ದಾರೆ. ಅವರು ಏನೇ ಮಾತನಾಡಿದರು ಹೃದಯದಿಂದ ಮಾತಾಡುತ್ತಾರೆ. ಯಾರನ್ನೂ ಮೆಚ್ಚಿಸುವುದಕ್ಕೆ, ಸುಖಾಸುಮ್ಮನೆ ಹೊಗಳುವುದಕ್ಕಾಗಿ ಅವರು ಮಾತಾಡಲ್ಲ. ಅವರಲ್ಲಿರುವ ತುಂಬಾ ದೊಡ್ಡ ಗುಣ ಅಂದರೆ ನೇರವಂತಿಕೆ. ಜತೆಗೆ ಒಳ್ಳೆಯದನ್ನು ಒಳ್ಳೆಯತನದಿಂದಲೇ ಗುರುತಿಸುವುದು. ಶಿವಣ್ಣ ಅದ್ಭುತವಾದ ಕಲಾವಿದ ಎನ್ನುವುದರಲ್ಲಿ ಎರಡು ಮಾತಿನಲ್ಲ. ಅವರ ನಟನೆ, ಅವರ ಸಿನಿಮಾಗಳ ಬಗ್ಗೆ ಹೆಚ್ಚು ಹೇಳಬೇಕಿಲ್ಲ. ನಾನು ಅವರ ಸೋದರ ಎನ್ನುವುದಕ್ಕೆ ಹೆಮ್ಮೆ ಇದೆ. ಅಲ್ಲದೆ ನಾನು ಅವರ ದೊಡ್ಡ ಅಭಿಮಾನಿ. ಅದನ್ನು ತುಂಬಾ ಹೆಮ್ಮೆ­ಯಿಂದಲೇ ಹೇಳಿ­ಕೊಳ್ಳು­ತ್ತೇನೆ. ಈಗಲೂ ಅವರ ನಟನೆಯನ್ನು ಅಚ್ಚರಿ­ಯಿಂದಲೇ ನೋಡುತ್ತೇನೆ. ಶಿವಣ್ಣ ಅವ­ರನ್ನು ನೋಡಿದರೆ ನನಗೆ ಅಪ್ಪಾಜಿ ಅವರೇ ನೆನಪಾ­ಗುತ್ತಾರೆ. ಯಾಕೆಂದರೆ ತಂದೆಯ­ವರನ್ನು ಶಿವಣ್ಣ ಅವರಲ್ಲಿ ನೋಡು­ತ್ತೇನೆ. ನನ್ನ ಪಾಲಿಗೆ ನಿಜವಾದ ರಾಜ­ಕುಮಾರ ಶಿವಣ್ಣ ಅವರೇ. ಅವರು ‘ರಾಜಕುಮಾರ' ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ ಅಂದರೆ ಅದು ಅಪ್ಪಾಜಿ ಮೆಚ್ಚಿ­ಕೊಂಡಷ್ಟೇ ಸಂತೋ­ಷ­ವಾಗು­ತ್ತದೆ.

ಇನ್ನು ಚಿತ್ರದ ಯಶಸ್ಸಿನ ಬಗ್ಗೆ ಹೇಳಬೇಕು ಅಂದರೆ ಇದು ಕನ್ನಡ ಸಿನಿಮಾ ಪ್ರೇಕ್ಷಕರ ಗೆಲುವು. ಸಿನಿಮಾ ನೋಡಿವರ ಅಭಿ­ಪ್ರಾಯ­ಗಳನ್ನು ಕೇಳುತ್ತಿದ್ದರೆ ತುಂಬಾ ಖುಷಿಯಾಗುತ್ತದೆ. ನಿಜ ನನಗೂ ‘ರಾಜಕುಮಾರ' ಎನ್ನುವ ಹೆಸರಿಟ್ಟುಕೊಂಡು ಸಿನಿಮಾ ಮಾಡುತ್ತೇವೆ ಅಂದಾಗ ಕೊಂಚ ಭಯ ಆಯಿತು. ಕಾರಣ ಆ ಹೆಸರಿನ ಹಿಂದಿರುವ ವ್ಯಕ್ತಿ. ಹೀಗಾಗಿ ಈ ಹೆಸರು ಬೇಕಾ ಅಂತ ಪ್ರಶ್ನಿಸಿದ್ದು ಆಯಿತು. ಆದರೆ, ನಿರ್ದೇಶಕರು ಒಂದು ಪೋಸ್ಟರ್‌ ತಂದು ತೋರಿಸಿದರು. ಧೈರ್ಯ ಬಂತು. ಹೆಸರಿಗೆ ಯಾವುದೇ ರೀತಿಯ ಕುತ್ತು ಬಾರದಂತೆ ಸಿನಿಮಾ ಮಾಡಿದ್ದಾರೆ. ಅದೇ ಈಗಿನ ಸಂಭ್ರಮ. ನಮ್ಮ ಭಯವನ್ನು ಮೀರಿ ಸಿನಿಮಾ ಗೆದ್ದಿದೆ ಎಂಬುದು ಪುನೀತ್‌ ಅವರ ಮಾತು. ಇನ್ನು ಚಿತ್ರದ ಮೂರನೇ ವಾರದಿಂದ ಮೈಸೂರು, ಕೋಲಾರ, ಹಾಸನ, ಶಿವಮೊಗ್ಗ ಮುಂತಾದ ಜಿಲ್ಲೆಗಳಿಗೆ ರಾಜಕುಮಾರ ಚಿತ್ರತಂಡ ಪ್ರವಾಸ ಕೈಗೊಳ್ಳಲಿದೆ. ‘ಅವಕಾಶ ಸಿಕ್ಕರೆ ಪುನೀತ್‌ ಅವರೊಂದಿಗೆ ಮತ್ತೊಂದು ಸಿನಿಮಾ ಮಾಡುವುದಕ್ಕೆ ನಾವು ರೆಡಿ' ಎಂದರು ನಿರ್ಮಾಪಕರು.
ನಿರ್ದೇಶಕ ಸಂತೋಷ್‌ ಆನಂದ್‌ರಾಮ್‌ ಅವರಿಗೆ ಈ ಚಿತ್ರದಿಂದ ಸಾಕಷ್ಟುಉತ್ಸಾಹ ಬಂದಿದೆಯಂತೆ. ‘ರಾಜಕುಮಾರ-2' ಸಿನಿಮಾ ಮಾಡುವ ಯೋಚನೆ ಜತೆಗೆ ಈ ಚಿತ್ರಕ್ಕಾಗಿ ಚಿತ್ರೀಕರಣ ಮಾಡಿರುವ ಕೆಲವು ದೃಶ್ಯಗಳು ಚಿತ್ರದಲ್ಲಿ ಇಲ್ಲ. ಅಂಥ ದೃಶ್ಯಗಳನ್ನು ಸೇರಿಸಿಕೊಂಡು ‘ಡೈರೆಕ್ಟರ್‌ ಕಟ್ಸ್‌' ಹೆಸರಿನಲ್ಲಿ ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡುವ ಯೋಚನೆಯಲ್ಲಿದ್ದಾರೆ. ‘ಒಂದು ಕಮರ್ಷಿಯಲ್‌ ಸಿನಿಮಾದಲ್ಲಿ ಸಂದೇಶ ಹೇಳುವುದು ಹೇಗೆ ಎನ್ನುವ ಗೊಂದಲ ನಮಗೂ ಇತ್ತು. ವಯಸ್ಸಾದ ತಂದೆ- ತಾಯಿಗಳನ್ನು ವೃದ್ಧಾಶ್ರಮಕ್ಕೆ ಬಿಡದೆ ಮನೆಯಲ್ಲೇ ಸಾಕಿ ಎಂಬುದು ಯಾವುದೇ ಬೋಧನೆ ಇಲ್ಲದೆ ಹೇಳಬೇಕಿತ್ತು. ಅದನ್ನು ಹೇಳಿದ್ದೇವೆ. ಜನ ಕೂಡ ಸ್ವೀಕರಿಸಿದ್ದಾರೆ. ಚಿತ್ರದ ಗಳಿಕೆ ಹಿಂದಿನ ಎಲ್ಲ ಚಿತ್ರಗಳ ಗಳಿಕೆಯ ದಾಖಲೆಯನ್ನು ಮೀರಿದೆ. ಕನ್ನಡದ ಪ್ರತಿಷ್ಠಿತ ಚಿತ್ರವಾಗಿ ಹೊರ ರಾಜ್ಯಗಳಲ್ಲೂ ಪ್ರದರ್ಶನ ಕಂಡಿದೆ. ಮಲ್ಟಿಪ್ಲೆಕ್ಸ್‌ಗಳಲ್ಲೇ ಒಂದು ಸಾವಿರದ ಐನೂರಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿದೆ. ಮೈಸೂರಿನಲ್ಲಂತೂ ಸಿನಿಮಾ ಬಿಡುಗಡೆಯಾದಾಗಿನಿಂದಲೂ ಹೌಸ್‌ ಫುಲ್‌ ಓಡುತ್ತಿದೆ. ವಿಶೇಷವಾಗಿ ಮೈಸೂರಿನ ಜನತೆಗೆ ಕೃತಜ್ಞತೆಗಳು' ಎಂದರು ಸಂತೋಷ್‌ ಆನಂದ್‌ರಾಮ್‌

ಆರ್. ಕೇಶವಮೂರ್ತ, ಕನ್ನಡಪ್ರಭ