-ಪುನೀತ್ ರಾಜ್‌ಕುಮಾರ್ ಹೊಸ ಚಿತ್ರ ಶುರು -ಚಿತ್ರದ ಟೈಟಲ್ ಇನ್ನು ಅಧಿಕೃತವಾಗಬೇಕಿದೆ-ಅಪ್ಪನ ಕನಸನ್ನು ನನಸು ಮಾಡಲು ಹೊರಟಿದ್ದಾರೆ ಪುನೀತ್
ಬೆಂಗಳೂರು (ಆ. 08): ಪುನೀತ್ ರಾಜ್‌ಕುಮಾರ್ ಹಾಗೂ ಸಂತೋಷ ಆನಂದ್‌ರಾಮ್ ಕಾಂಬಿನೇಷನ್‌ನಲ್ಲಿ ಸಿದ್ಧಗೊಳ್ಳಲಿರುವ ಹೊಸ ಚಿತ್ರಕ್ಕೆ ‘ಪರುಶುರಾಮ’ ಎನ್ನುವ ಹೆಸರು ಅಂತಿಮಗೊಂಡಿದೆ ಎನ್ನಲಾಗುತ್ತಿದೆ.
1989 ರಲ್ಲಿ ತೆರೆಗೆ ಬಂದಿದ್ದ ‘ಪರಶುರಾಮ’ ಚಿತ್ರದಲ್ಲಿ ಡಾ. ರಾಜ್‌ಕುಮಾರ್ ಸೈನಿಕನ ಪಾತ್ರ ಮಾಡಿದ್ದರು. ಈಗ ಅದೇ ಹೆಸರಿನಲ್ಲಿ ಸಂತೋಷ್ ಆನಂದ್‌ರಾಮ್ ಚಿತ್ರ ಮಾಡುತ್ತಿದ್ದಾರೆ ಎನ್ನಲಾಗಿದೆ. ಸಂತೋಷ್ ಆನಂದ್‌ರಾಮ್ ಸಮಾಜದಲ್ಲಿ ನಡೆಯುತ್ತಿರುವ ಒಂದು ಸಮಸ್ಯೆಗೆ ಸಿನಿಮಾ ರೂಪ ಕೊಡಲಿದ್ದು, ಅಂಥ ಕತೆಗೆ ‘ಪರುಶುರಾಮ’ ಹೆಸರು ಸೂಕ್ತವಂತೆ. ಅಣ್ಣಾವ್ರ ‘ಪರಶುರಾಮ’ ಚಿತ್ರದಲ್ಲಿ ಪುನೀತ್‌ರಾಜ್ ಕುಮಾರ್ ಬಾಲ ನಟನಾಗಿ ಕಾಣಿಸಿಕೊಂಡಿದ್ದರು. ಆದರೆ, ‘ಪರುಶುರಾಮ’ ಎನ್ನುವ ಹೆಸರೇ ಅಂತಿಮ ಅಥವಾ ಅಧಿಕೃತ ಎಂಬುದನ್ನು ಚಿತ್ರತಂಡ ಎಲ್ಲೂ ಬಿಟ್ಟು ಕೊಡುತ್ತಿಲ್ಲ.
ಸದ್ಯಕ್ಕೆ ಇದು ಗಾಂಧಿನಗರದಲ್ಲಿ ಓಡಾಡುತ್ತಿರುವ ಸುದ್ದಿ. ಈ ಬಗ್ಗೆ ನಿರ್ದೇಶಕರನ್ನು ಕೇಳಿದರೆ ‘ಗಣೇಶನ ಹಬ್ಬಕ್ಕೆ ಎಲ್ಲವನ್ನೂ ಹೇಳುತ್ತೇನೆ’ ಎನ್ನುವ ಉತ್ತರ ನಿರ್ದೇಶಕರಿಂದ ಬರುತ್ತದೆ. ಚಿತ್ರತಂಡದ ಒಳಗೆ ಮಾತ್ರ ಇದೇ ಹೆಸರಿನ ಸುತ್ತ ಹೆಚ್ಚು ಚರ್ಚೆಯಾಗುತ್ತಿದೆಯಂತೆ.
ಹೀಗಾಗಿ ಹೊಂಬಾಳೆ ಫಿಲಮ್ಸ್ ಬ್ಯಾನರ್‌ನಲ್ಲಿ ಮತ್ತೆ ಜತೆಯಾಗಿರುವ ಅಪ್ಪು ಮತ್ತು ಆನಂದ್‌ರಾಮ್ ಕಾಂಬಿನೇಷನ್‌ಗೆ ಇದೇ ಹೆಸರು ಪಿಕ್ಸ್ ಆದರೂ ಅಚ್ಚರಿ ಪಡಬೇಕಿಲ್ಲ. ಅಲ್ಲದೆ ಪರುಶುರಾಮ ಹೆಸರಿನ ಜತೆಗೆ ಮತ್ತೊಂದು ಹೆಸರು ಕೂಡ ಚಾಲ್ತಿಯಲ್ಲಿದೆ. ಅದು ಕೂಡ ಡಾ ರಾಜ್‌ಕುಮಾರ್ ಅಭಿನಯದ ಸಿನಿಮಾ ಎಂಬುದು ವಿಶೇಷ. ಅದೇ ‘ದೇವತಾ ಮನುಷ್ಯ’. ಆದರೆ, ಎಲ್ಲರ ಮನಸು ‘ಪರಶುರಾಮ’ ಕಡೆಗಿದೆಯಂತೆ.
