ಎಲ್ಲಾ ಕಡೆಯಿಂದಲೂ ಒಂದೇ ರಿಪೋರ್ಟ್...

ಚಿತ್ರ ಚೆನ್ನಾಗಿತ್ತು. ಹಾಗಾಗಿ ಇಂತಹದೊಂದು ರೆಸ್ಪಾನ್ಸ್ ಸಿಗಬಹುದು ಎನ್ನುವ ಅಂದಾಜಿತ್ತು. ಆದರೂ ಈಗ ಪ್ರೇಕ್ಷಕರ ಅಭಿರುಚಿ ಅರ್ಥ ಆಗೋದಿಲ್ಲ. ಅವರಿಗೆ ಏನ್ ಕೊಡ್ಬೇಕು ಅನ್ನೋದನ್ನು ಜಡ್ಜ್ ಮಾಡೋದು ತುಂಬಾ ಕಷ್ಟ. ಆದರೆ, ನಾನು ಈ ಸಿನಿಮಾ ಮಾಡುವುದಕ್ಕಿದ್ದ ಮೂಲ ಕಾರಣ ಕತೆ. ಅದು ತುಂಬಾ ಚೆನ್ನಾಗಿತ್ತು, ಜತೆಗೆ ವಿಭಿನ್ನವಾಗಿತ್ತು. ಮೇಲಾಗಿ ಎಲ್ಲಾ ವರ್ಗಕ್ಕೂ ಬೇಕಾದ ಅಂಶಗಳೂ ಕತೆಯಲ್ಲಿದ್ದವು. ಅದೇ ಧೈರ್ಯ ದಿಂದ ಈ ಸಿನಿಮಾ ಮಾಡಿದೆ. ಆಗ ನಾನೇನೂ ಅಂದುಕೊಂಡಿದ್ದೇನೋ ಆ ಪ್ರಕಾರವೇ ಇವತ್ತು ಚಿತ್ರಕ್ಕೆ ರೆಸ್ಪಾನ್ಸ್ ಸಿಕ್ಕಿದೆ. ಚಿತ್ರ ಬಿಡುಗಡೆಯಾದ ಪ್ರತಿ ಕೇಂದ್ರದಿಂದಲೂ ಒಂದೇ ತರಹದ ರಿಪೋರ್ಟ್ ಸಿಕ್ಕಿದೆ. ಪ್ರತಿಯೊಬ್ಬರಿಗೂ ಸಿನಿಮಾ ಒಂದೊಂದು ಕಾರಣಕ್ಕೆ ಇಷ್ಟವಾಗಿದೆ. ಚಿತ್ರದೊಳಗಿನ ಆ್ಯಕ್ಷನ್, ಹೊಸ ತೆರನಾದ ಸಂಗೀತ, ಹಾರರ್ ಎಲಿಮೆಂಟ್, ಫ್ಯಾಮಿಲಿ ಸೆಂಟಿಮೆಂಟ್ ಪ್ರತಿಯೊಂದು ಪ್ರೇಕ್ಷಕರಿಗೆ ಹಿಡಿಸಿದೆ. ಅದು ಚೆನ್ನಾಗಿಲ್ಲ, ಇದು ಚೆನ್ನಾಗಿಲ್ಲ ಅಂತೂ ಯಾರೂ ಕೂಡ ಹೇಳಿಲ್ಲ. ಪ್ರತಿ ಅಂಶಗಳ ಕೋಲಾಜ್ ನಂತಿದೆ ಸಿನಿಮಾ ಅಂತಿದ್ದಾರೆ. ಅದು ನಿಜಕ್ಕೂ ಖುಷಿ ತಂದಿದೆ.

ಕಂಪೇರ್ ಮಾಡೋದು ಸರಿಯಲ್ಲ...

ಹೌದು, ನಾವು ನಿರೀಕ್ಷಿಸಿದಷ್ಟು ಪ್ರತಿಕ್ರಿಯೆ ಸಿಕ್ಕಿದೆಯೆಂದರೆ ಕಲೆಕ್ಷನ್ ಕೂಡ ಚೆನ್ನಾಗಿದೆ ಎನ್ನುವುದರಲ್ಲಿ ಅನುಮಾನ ಬೇಡ. ಚಿತ್ರಕ್ಕೆ ಹಾಕಿದ ಬಂಡವಾಳ ವಾಪಸ್ ಬಂದಿದೆ. ಹಾಗಂತ ಒಂದೇ ದಿನದಲ್ಲಿ ದಾಖಲೆಯಷ್ಟು ಕಲೆಕ್ಷನ್ ಆಯ್ತು, ಇನ್ನಾವುದೋ ಸಿನಿಮಾದ ದಾಖಲೆ ಬ್ರೇಕ್ ಮಾಡಿತು ಅಂತೆಲ್ಲ ಹೇಳುವುದು ಸರಿಯಲ್ಲ. ನಾನೊಬ್ಬ ನಿರ್ಮಾಪಕ ಎನ್ನುವುದಕ್ಕಿಂತ ಚಿತ್ರೋದ್ಯಮದ ಜವಾಬ್ದಾರಿಯುತ ವ್ಯಕ್ತಿಯಾಗಿ ಹೇಳೊದಾದ್ರೆ ಆಯಾ ಸಿನಿಮಾಕ್ಕೆ ಅದರದ್ದೇ ಆದ ಸ್ಟಾಂಡರ್ಡ್ ಮತ್ತು ಮಹತ್ವ ಇರುತ್ತೆ. ‘ಕೆಜಿಎಫ್’ ಕನ್ನಡ ಚಿತ್ರೋದ್ಯಮವನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋದ ಸಿನಿಮಾ. ಅದರ ಸ್ಟಾಂಡರ್ಡ್ ಅದಕ್ಕಿದೆ. ಅದರ ಕಲೆಕ್ಷನ್‌ಗೆ ’ನಟಸಾರ್ವಭೌಮ’ ಚಿತ್ರದ ಕಲೆಕ್ಷನ್ ಕಂಪೇರ್ ಮಾಡುವುದು ಸರಿಯಲ್ಲ. ಮೇಲಾಗಿ ಒಂದು ಚಿತ್ರದ ಕಲೆಕ್ಷನ್ ವಿವರ ಮೊದಲ ದಿನವೇ ಅಧಿಕೃತವಾಗಿ ಸಿಗುವುದಿಲ್ಲ. ಅವತ್ತಿಗೆ ಅಂದಾಜು ಲೆಕ್ಕಾಚಾರ ಮಾತ್ರ. ಈಗ ಹಾಗೆಲ್ಲ ಅಂದಾಜು ಹೇಳುವಂತಿಲ್ಲ. ಈ ರೀತಿ ಕಂರ್ಪೇ ಮಾಡಿ ಇನ್ನೇನು ಅಧಿಕೃತವಲ್ಲದ ಮಾಹಿತಿ ಹೇಳಿದರೆ ತಪ್ಪಾಗುತ್ತದೆ. ಹಾಗೆಯೇ ಮತ್ತೊಂದು ಸಿನಿಮಾದ ಕಲೆಕ್ಷನ್‌ಗೆ ಕಂಪೇರ್ ಮಾಡುವುದು ಕೂಡ ಸರಿಯಲ್ಲ.

ಹಾಕಿದ ಬಂಡವಾಳಕ್ಕೆ ಮೋಸವಿಲ್ಲ...

ನಾನು ಸಿನಿಮಾ ಮಾಡುವ ರೀತಿಯೇ ಬೇರೆ. ಆಯಾ ಕತೆಗೆ ಎಷ್ಟು ಬೇಕೋ ಅಷ್ಟು ಬಂಡವಾಳ ಹಾಕಿ ಸಿನಿಮಾ ಮಾಡುವುದು ನನ್ನ ಸಿದ್ದಾಂತ. ಈ ಕತೆ ಏಷ್ಟು ಹಣ ಡಿಮ್ಯಾಂಡ್ ಮಾಡಿತ್ತೋ ಅಷ್ಟನ್ನು ಹಾಕಿದ್ದೆ. ನಮಗೆ ಬಂಡವಾಳ ಎಷ್ಟು ಎನ್ನುವುದಕ್ಕಿಂತ ಸಿನಿಮಾ ಚೆನ್ನಾಗಿ ಬರಬೇಕು ಎನ್ನುವುದೇ ಮುಖ್ಯವಾಗಿತ್ತು. ಅದಕ್ಕೆ ತಕ್ಕಂತೆ ಖರ್ಚು ಮಾಡಿದ್ದ ಬಂಡವಾಳ ಈಗಾಗಲೇ ಬಂದಿದೆ. ಹಾಕಿದ ಬಂಡವಾಳ ಮೋಸವೇನು ಆಗಿಲ್ಲ. ಹಾಗಂತ ಇಂತಿಷ್ಟೇ ಕಲೆಕ್ಷನ್ ಆಯ್ತು ಅಂತ ಈಗಲೇ ಅಧಿಕೃತವಾಗಿ ಹೇಳಲು ಆಗದು. ಒಂದೆರಡು ವಾರ ಕಳೆದ ಬಳಿಕ ಅದರ ಅಧಿಕೃತ ಮಾಹಿತಿ ಸಿಗಲಿದೆ. ಸಿಕ್ಕಾಗ ಬಹಿರಂಗ ಹೇಳಲಾಗದು. ಈಗೆಲ್ಲ ರಹಸ್ಯ ಅನ್ನೊದು ಯಾವುದು ಇಲ್ಲ. ಸಿನಿಮಾ ಟಿಕೆಟ್ ಕೂಡ ಆನ್‌ಲೈನ್ ಆಗಿದೆ. ಎಷ್ಟು,ಏನು ಎಲ್ಲವೂ ಗೊತ್ತಾಗಲಿದೆ. ಆಗ ನಾನೇ ಬಹಿರಂಗ ಪಡಿಸುತ್ತೇನೆ. ಅದರ ಒಂದು ಮಾತು, ನನ್ನ ಬ್ಯಾನರ್‌ನಲ್ಲಿ ಬಂದ ಸಿನಿಮಾಗಳ ಪೈಕಿ ಬಿಡುಗಡೆಯ ಮೊದಲ ದಿನ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾವಿದು ಎನ್ನುವುದು ನಿಜ. ಆದರೆ ಆಯಾ ಸಂದರ್ಭದಲ್ಲಿ ಸಿನಿಮಾ ನಿರ್ಮಾಣಕ್ಕೆ ಆದ ಖರ್ಚು ವೆಚ್ಚಗಳನ್ನು ಲೆಕ್ಕ ಹಾಕಿದರೆ ಇದು ಮಹತ್ವವೇ ಅಲ್ಲ.

ಮತ್ತಷ್ಟು ಸೆಂಟರ್‌ಗೆ ಸಿನಿಮಾ ....

ಮೊದಲ ದಿನ ಚಿತ್ರ ೩೫೦ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ತೆರೆಕಂಡಿತ್ತು. ಹಾಗೆಯೇ ಹೊರ ರಾಜ್ಯಗಳಲ್ಲಿ, ವಿದೇಶದಲ್ಲೂ ಬಿಡುಗಡೆ ಆಗಿತ್ತು. ಎಲ್ಲಾ ಕಡೆಯಿಂದಲೂ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಹಾಗಯೇ ಅಲೆಲ್ಲ ಹೆಚ್ಚುವರಿ ಪರದೆಗಳು ಸೇರ್ಪಡೆ ಆಗುತ್ತಿವೆ.ಎರಡನೇ ವಾರಕ್ಕೆ ಅಂದಾಜು ೨೫ ಹೆಚ್ಚುವರಿ ಚಿತ್ರಮಂದಿರಗಳಲ್ಲಿ ನಟಸಾರ್ವಭೌಮ ಪ್ರದರ್ಶನ ಗೊಳ್ಳಲಿದೆ. ಬೆಂಗಳೂರಿನಲ್ಲೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಹೆಚ್ಚಿನ ಬೇಡಿಕೆ ಬಂದಿದೆ. ಹೊರ ಊರುಗಳಲ್ಲೂ ಚಿತ್ರ ಮಂದಿರಗಳ ಸಂಖ್ಯೆ ಏರಿಕೆ ಆಗುವ ನಿರೀಕ್ಷೆಯಿದೆ. ಮೂವೀ ಮಾರ್ಟ್ ಮೂಲಕ ಅಮೆರಿಕ, ಕೆನಡಾ, ಆಸ್ಟ್ರೇಲಿಯಾದ ಲ್ಲೂಚಿತ್ರ ತೆರೆ ಕಂಡಿದೆ. ಈ ವಾರ ಇಂಗ್ಗೆಂಡ್‌ನಲ್ಲಿ ಬಿಡುಗಡೆ ಮಾಡಲು ಮಾತುಕತೆ ನಡೆದಿದೆ. ಇದು ಸಿನಿಮಾ ಸಕ್ಸ್‌ಸ್‌ನ ಮತ್ತೊಂದು ನೋಟ.

ಸಿನಿಮಾ ಇಷ್ಟವಾಗುವುದಕ್ಕೆ ಹಲವು ಕಾರಣ...

ನಾನು ಸಿನಿಮಾವನ್ನು ಕನಿಷ್ಟ ಐದಾರು ಬಾರಿ ನೋಡಿದ್ದೇನೆ. ಪ್ರತಿ ಸರಿಯೂ ನನಗೆ ಸಿನಿಮಾದ ಒಂದೊಂದು ಅಂಶ ಇಷ್ಟವಾಗಿದೆ. ಒಮ್ಮೆ ಆ್ಯಕ್ಷನ್, ಮತ್ತೊಮ್ಮೆ ಅಪ್ಪು ಅವರ ಡಾನ್ಸ್ ಮಗದೊಮ್ಮೆ ಸಂಗೀತ. ಹೀಗೆ ಸಿನಿಮಾ ಬಹುಕೋನಗಳಲ್ಲಿ ರಂಜಿಸುತ್ತದೆ. ಚಿತ್ರ ನೋಡಿದ ಪ್ರೇಕ್ಷಕರ ಅಭಿಪ್ರಾಯ ಹೀಗೆಯೇ ಇದೆ. ಫ್ಯಾಮಿಲಿ ಆಡಿಯನ್ಸ್‌ಗೆ ಅಪ್ಪು ಆ್ಯಕ್ಟಿಂಗ್, ಡಾನ್ಸ್ ಇಷ್ಟವಾದರೆ, ಮಾಸ್ ಆಡಿಯನ್ಸ್‌ಗೆ ಆ್ಯಕ್ಷನ್, ಹಾರರ್ ಎಲಿಮೆಂಟ್ ಇಷ್ಟವಾಗಿದೆ. ಜತೆಗೆ ಇಂತಹ ಸಿನಿಮಾಗಳಿಗೆ ಪ್ರೇಕ್ಷಕರು ಬರಬೇಕು. ಹಾಗಂತ ರಂಜನೆಯೇ ಇಲ್ಲದ ಸಿನಿಮಾಗಳನ್ನು ಜನ ನೋಡಬೇಕು ಅಂತಲ್ಲ. ರಂಜನೆ ಬಹು ವಿಧಗಳಲ್ಲಿ ಸಿಗುತ್ತದೆ ಎಂದರೆ ಕೊಟ್ಟ ಕಾಸಿಗೆ ಮೋಸವಿಲ್ಲ.್‌ಅಂತಹ ಸಿನಿಮಾ ನಟ ಸಾರ್ವಭೌಮ ಅನ್ನೋದು ಜನರ ಅಭಿಪ್ರಾಯವೂ ಆಗಿದೆ. ಆ ದೃಷ್ಟಿಯಲ್ಲಿ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಲಿ ಅಂತ ನಾನು ಕೇಳೊದ್ರಲ್ಲಿ ತಪ್ಪಿಲ್ಲ ಎನಿಸುತ್ತೆ.