ಥ್ರಿಲ್ಲರ್ ಹಾಗೂ ಸಸ್ಪೆನ್ಸ್ ಕಥಾ ಹಂದರದ ಈ ಚಿತ್ರದಲ್ಲಿ ಯತಿರಾಜ್, ಸಿಬಿಐ ಸಹಾಯಕ ತನಿಖಾಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷ ಅಂದ್ರೆ, ಈ ಚಿತ್ರ ಕನ್ನಡದ ಜತೆಗೆ ತಮಿಳಿನಲ್ಲೂ ಬರುತ್ತಿದೆ.

ಆ ಮೂಲಕ ಯತಿರಾಜ್ ಮತ್ತೊಮ್ಮೆ ಕಾಲಿವುಡ್‌ಗೆ ಕಾಲಿಡುತ್ತಿದ್ದಾರೆ. ಈಗಾಗಲೇ ಸ್ಟಾರ್ ನಟ ಆರ್ಯ ಅಭಿನಯದ ‘ಕಡಂಬನ್ ’ಚಿತ್ರದಲ್ಲಿ ಫಾರೆಸ್ಟ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರು. ಈಗ ‘ಡಾ.56’ರಲ್ಲಿ ಅವರದ್ದು ಸಿಬಿಐ ತನಿಖಾಧಿಕಾರಿ ಪಾತ್ರ. ಪ್ರವೀಣ್ ರೆಡ್ಡಿ ನಿರ್ಮಿಸಿ, ನಾಯಕನಾಗಿ ಅಭಿನಯಿಸುತ್ತಿರುವ ‘ಡಾ. 56’ ನಲ್ಲಿ ನಟಿ ಪ್ರಿಯಾಮಣಿ ಅವರದ್ದೇ ಮುಖ್ಯ ಪಾತ್ರ. ಅವರಿಲ್ಲಿ ಸಿಬಿಐ ಅಧಿಕಾರಿ.

ಪ್ರಿಯಾಮಣಿ ಸಿನಿ ಜರ್ನಿಯಲ್ಲಿ ಸಿಬಿಐ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿರುವುದು ಇದು ಎರಡನೇ ಸಲ. ಹಾಗಂತ ಅಲ್ಲಿ ಕಾಣಿಸಿಕೊಂಡಿದ್ದ ಸಿಬಿಐ ಅಧಿಕಾರಿಗೂ ಇಲ್ಲಿರುವ ಅವರ ಪಾತ್ರಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಹೇಳಿ, ಕೇಳಿ ಇದು ಕ್ರೈಮ್, ಥ್ರಿಲ್ಲರ್ ಜತೆಗೆ ಸೈನ್ಸ್ ಆಧಾರಿತ ಕತೆ.

ಈ ಕತೆಯಲ್ಲಿ ತೀರಾ ವಿಭಿನ್ನ ಮತ್ತು ವಿಶೇಷ ರೀತಿಯ ಸಿಬಿಐ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರಂತೆ. ಅವರ ಜತೆಯಲ್ಲೇ ಸಾಗುವ ಪಾತ್ರದಲ್ಲಿ ಯತಿರಾಜ್ ಕಾಣಿಸಿಕೊಳ್ಳುತ್ತಿದ್ದು, ತಮಗೂ ಇದೊಂದು ವಿಶೇಷ ಪಾತ್ರವೇ ಹೌದು ಎನ್ನುತ್ತಾರೆ ನಟ ಯತಿರಾಜ್. ‘ ಚಿತ್ರದ ಕತೆಯೇ ಇಲ್ಲಿ ವಿಶೇಷ. ಸೈಕೋ, ಥ್ರಿಲ್ಲರ್ ಕಥಾ ಹಂದರದ ಚಿತ್ರಗಳಲ್ಲಿ ತನಿಖಾಧಿಕಾರಿಗಳಿಗೆ ಸಹಜವಾಗಿಯೇ ಹೆಚ್ಚು ಕೆಲಸವಿರುತ್ತದೆ. ಚಿತ್ರದ ಕತೆಯ ಒಟ್ಟು ಫೋಕಸ್ ಆ ಪಾತ್ರಗಳ ಸುತ್ತಲೇ ಇರುತ್ತದೆ. ಅಂತೆಯೇ ನನ್ನ ಪಾತ್ರಕ್ಕೂ ತಕ್ಕ ಮಟ್ಟಿಗಿನ ಮಹತ್ವವಿದೆ. ಅದರಲ್ಲೂ ಪ್ರಿಯಾಮಣಿ ಅವರಂತಹ ಪರಿಣಿತ ನಟಿಯೊಂದಿಗೆ ನಟಿಸುವುದೇ ಒಂದು ಖುಷಿ, ಸಂಭ್ರಮ’ ಎನ್ನುವುದು ಯತಿರಾಜ್ ಅನಿಸಿಕೆ.