‘ನನ್ನ ಪ್ರಕಾರ’ ಚಿತ್ರದ ನಂತರ ಕನ್ನಡದಲ್ಲಿ ‘ಡಾ.56’ ಹೆಸರಿನ ಚಿತ್ರದಲ್ಲಿ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದು, ಡಿಸೆಂಬರ್ ೮ ರಿಂದ ಅದರ ಚಿತ್ರೀಕರಣ ಶುರುವಾಗುತ್ತಿದೆ. ಇದರ ನಡುವೆಯೇ ಮತ್ತೆ ಟಾಲಿವುಡ್ ಕಡೆ ಮುಖ ಮಾಡಿರುವ ಅವರು, ‘ಬಾಹುಬಲಿ’ ಖ್ಯಾತಿಯ ನಿರ್ದೇಶಕ ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್’ ಚಿತ್ರಕ್ಕೆ ನಾಯಕಿ ಆಗಿದ್ದಾರೆನ್ನಲಾಗಿದೆ. ಇದು ರಾಮ್ ಚರಣ್ ತೇಜ ಹಾಗೂ ಜೂನಿಯರ್ ಎನ್‌ಟಿಆರ್ ಕಾಂಬಿನೇಷನ್ ಚಿತ್ರ ಎನ್ನುವುದು ವಿಶೇಷ.

ಟಾಲಿವುಡ್ ಮಟ್ಟಿಗೆ ಇದು ರಾಜಮೌಳಿ ನಿರ್ದೇಶನದ ಮತ್ತೊಂದು ಅದ್ಧೂರಿ ಚಿತ್ರ. ₹ 300 ಕೋಟಿ ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದ್ದು, ಮಲ್ಟಿಸ್ಟಾರ್ ಸಿನಿಮಾ ಅಂತಲೂ ಸುದ್ದಿ ಆಗುತ್ತಿದೆ. ಅದರಲ್ಲೂ ರಾಮ್‌ಚರಣ್ ತೇಜ ಹಾಗೂ ಜೂನಿಯರ್ ಅವರಂತಹ ಸ್ಟಾರ್ ನಟರ ಕಾಂಬಿನೇಷನ್ ಚಿತ್ರ ಎನ್ನುವುದು ತೀವ್ರ ಕುತೂಹಲ ಹುಟ್ಟಿಸಿದೆ. ಇದರಲ್ಲೀಗ ರಾಮ್ ಚರಣ್ ಹಾಗೂ ಜೂನಿಯರ್ ಎನ್‌ಟಿಆರ್ ಅವರೊಂದಿಗೆ ಪ್ರಿಯಾಮಣಿ ತೆರೆ ಹಂಚಿಕೊಳ್ಳುತ್ತಿದ್ದಾರೆನ್ನುವುದು ಅವರ ಪಾಲಿಗೆ ಅದೃಷ್ಟವೂ ಹೌದು.

ಹಾಗಂತ, ಪ್ರಿಯಾಮಣಿ ಈ ಸಿನಿಮಾಕ್ಕೆ ತಾವು ಆಯ್ಕೆಯಾಗಿರುವ ಸಂಗತಿಯನ್ನು ಖಚಿತ ಪಡಿಸಲು ಸಿದ್ಧರಿಲ್ಲ. ‘ರಾಜಮೌಳಿ ಅವರ ಚಿತ್ರದಲ್ಲಿ ನಾನು ಅಭಿನಯಿಸುತ್ತಿದ್ದೇನೆನ್ನುವ ಸುದ್ದಿ ಎಲ್ಲಿಂದ ಬಂತೋ, ಯಾರೋ ಹೇಳಿದ್ದಾರೋ ನಂಗೊತ್ತಿಲ್ಲ. ಅದು ಗ್ಯಾರಂಟಿಯಾದರೆ ನಾನೇ ವಿಷಯ ತಿಳಿಸುತ್ತೇನೆ. ಅವಕಾಶ ಸಿಕ್ಕರೆ ಅಭಿನಯಿಸುವುದಕ್ಕೆ ನಾನು ಕೂಡ ಉತ್ಸುಕಳಾಗಿದ್ದೇನೆ ’ ಎನ್ನುತ್ತಾರೆ ಪ್ರಿಯಾಮಣಿ.

ಮದುವೆ ನಂತರ ಪ್ರಿಯಾಮಣಿ ಸಿನಿಮಾದಲ್ಲಿ ಅಭಿನಯಿಸುತ್ತಾರೋ, ಇಲ್ಲವೋ ಎನ್ನುವ ಅನುಮಾನ ಇತ್ತಾದರೂ, ಮದುವೆಯ ನಂತರದ ಕೆಲವೇ ದಿನಗಳಲ್ಲಿ‘ನನ್ನ ಪ್ರಕಾರ’ ಚಿತ್ರದ ಮುಹೂರ್ತದಲ್ಲಿ ಕಾಣಿಸಿಕೊಂಡು ಕುತೂಹಲ ಮೂಡಿಸಿದರು. ಈಗಷ್ಟೇ ಆ ಚಿತ್ರಕ್ಕೆ ಮುಹೂರ್ತ ಮುಗಿದಿದೆ. ಈಗವರು ಹೊಸಬರೇ ನಿರ್ಮಿಸಿ, ನಿರ್ದೇಶಿಸುತ್ತಿರುವ ಡಾ.೫೬ ಚಿತ್ರದ ಚಿತ್ರೀಕರಣಕ್ಕೆ ರೆಡಿ ಆಗುತ್ತಿದ್ದಾರೆ. ಅವರ ಪ್ರಕಾರ ಇದೊಂದು ವಿಶೇಷವಾದ ಸಿನಿಮಾ.

‘ ಇದೊಂದು ವಿಶೇಷವಾದ ಕತೆ. ನನ್ನ ಮಟ್ಟಿಗೆ ಕನ್ನಡದಲ್ಲಿ ಇಂತಹ ಕತೆ ಕೇಳಿಲ್ಲ. ಕ್ರೈಮ್ ಥ್ರಿಲ್ಲರ್ ಜತೆಗೆ ಸೈನ್ಸ್ ಫಿಕ್ಷನ್ ಈ ಚಿತ್ರದ ವಿಶೇಷ. ನಾನಿಲ್ಲಿ ಸಿಬಿಐ ಅಧಿಕಾರಿ . ಎರಡನೇ ಬಾರಿಗೆ ಇಂತಹ ಪಾತ್ರಕ್ಕೆ ಬಣ್ಣ ಹಚ್ಚುವ ಅವಕಾಶ ಸಿಕ್ಕಿದೆ. ಒಂದೊಳ್ಳೆ ಕತೆ ಹಾಗೆಯೇ ವಿಶೇಷವಾದ ಪಾತ್ರ ಎನ್ನುವ ಕಾರಣಕ್ಕಾಗಿಯೇ ಈ ಸಿನಿಮಾ ಒಪ್ಪಿಕೊಂಡೆ’ ಎನ್ನುವ ಮೂಲಕ ಮದುವೆ ನಂತರ ಪ್ರಿಯಾಮಣಿ ಒಳ್ಳೆಯ ಕತೆ ಮತ್ತು ಪಾತ್ರ ಹುಡು ಕುತ್ತಿದ್ದಾರೆನ್ನುವುದನ್ನು ಖಾತರಿ ಪಡಿಸಿದರು.