ಕನ್ನಡದ ‘ಪ್ರೇಮದ ಊರಲಿ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಯಶಸ್ಸು ಕಂಡಿದ್ದು, ಚಿತ್ರದ ಗಳಿಕೆ 150 ಕೋಟಿ ರೂಪಾಯಿ ದಾಟಿದೆ ಎಂಬ ಚರ್ಚೆ ನಡೆಯುತ್ತಿದೆ. ಈ ನಡುವೆ ಸಿನಿಮಾದ ಯಶಸ್ಸಿನಿಂದ ನಾಯಕ ನಟ ಶ್ರೀರಾಮ್ ಅವರಿಗೆ ಎಷ್ಟು ಸಂಭಾವನೆ ಸಿಕ್ಕಿದೆ?
ಕನ್ನಡದ ‘ಪ್ರೇಮದ ಊರಲಿ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಯಶಸ್ಸು ಕಂಡಿದ್ದು, ಚಿತ್ರದ ಗಳಿಕೆ 150 ಕೋಟಿ ರೂಪಾಯಿ ದಾಟಿದೆ ಎಂಬ ಚರ್ಚೆ ನಡೆಯುತ್ತಿದೆ. ಈ ನಡುವೆ ಸಿನಿಮಾದ ಯಶಸ್ಸಿನಿಂದ ನಾಯಕ ನಟ ಶ್ರೀರಾಮ್ ಅವರಿಗೆ ಎಷ್ಟು ಸಂಭಾವನೆ ಸಿಕ್ಕಿದೆ? ಚಿತ್ರದ ಲಾಭದಲ್ಲಿ ಪಾಲು ಬಂದಿದೆಯೇ? ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ. ಇದಕ್ಕೆ ಸ್ವತಃ ನಟ ಶ್ರೀರಾಮ್ ಸಂದರ್ಶನ]ದಲ್ಲಿ ಉತ್ತರ ನೀಡಿದ್ದು, ನಿರ್ಮಾಪಕರ ಕಷ್ಟ ಮತ್ತು ಅವರ ತ್ಯಾಗದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ಸಿನಿಮಾ ಯಶಸ್ಸಿನ ಬಳಿಕ ಸಂಭಾವನೆ ಹೆಚ್ಚಾಯಿತೇ ಎಂಬ ಪ್ರಶ್ನೆಗೆ ಉತ್ತರಿಸಿದ ಶ್ರೀರಾಮ್, "ಇನ್ನೂ ಯಾವುದೇ ಒಪ್ಪಂದಕ್ಕೆ ಸಹಿ ಹಾಕಿಲ್ಲ. ಸಂಭಾವನೆ ವಿಚಾರದಲ್ಲಿ ಯಾವುದನ್ನೂ ಒಪ್ಪಿಕೊಂಡಿಲ್ಲ. ‘ಪ್ರೇಮದ ಊರಲಿ’ ಸಿನಿಮಾ ಇಷ್ಟು ದೊಡ್ಡ ಹಿಟ್ ಆದ ಬಳಿಕ ನಿರ್ಮಾಪಕರಿಂದ ಲಾಭದಲ್ಲಿ ಏನಾದರೂ ಪಾಲು ಸಿಕ್ಕಿದೆಯೇ ಎಂದು ಹಲವರು ಕೇಳುತ್ತಿದ್ದಾರೆ. ಆದರೆ ಸದ್ಯಕ್ಕೆ ಅದರ ಬಗ್ಗೆ ಯೋಚನೆ ಮಾಡಿಲ್ಲ. ಪ್ರೀತಿಯಲ್ಲಿ ನನಗೆ ಹೆವಿ ಶೇರ್ ಸಿಗುತ್ತಿದೆ. ಆ ಪ್ರೀತಿಯ ಲೆಕ್ಕಾಚಾರದಲ್ಲೇ ಇದ್ದೇನೆ" ಎಂದು ನಗುತ್ತಾ ಹೇಳಿದ್ದಾರೆ.
ನಿರ್ಮಾಪಕರಿಗೆ ಮೊದಲು ಲಾಭ ಸಿಗಬೇಕು
ಚಿತ್ರದ ಯಶಸ್ಸಿನ ಲಾಭ ಮೊದಲು ನಿರ್ಮಾಪಕರಿಗೆ ಸಿಗಬೇಕು ಎನ್ನುವುದು ಶ್ರೀರಾಮ್ ಅವರ ಅಭಿಪ್ರಾಯ. ಸಿನಿಮಾ ನಿರ್ಮಾಣದ ಸಂದರ್ಭದಲ್ಲಿ ನಿರ್ಮಾಪಕರು ಅನುಭವಿಸಿದ ಕಷ್ಟಗಳನ್ನು ನೆನಪಿಸಿಕೊಂಡ ಅವರು, "ಏನೂ ಇಲ್ಲದ ಸಮಯದಲ್ಲಿ ಎಲ್ಲಿಂದಲೋ ಹಣ ಹೊಂದಿಸಿಕೊಂಡು, ತಮ್ಮ ಸೈಟ್ ಮಾರಿ, ಒಡವೆಗಳನ್ನು ಅಡವಿಟ್ಟು ಹಣ ತಂದು ಸಿನಿಮಾ ಮಾಡಿದ್ದಾರೆ. ನಮ್ಮನ್ನೆಲ್ಲ ಚೆನ್ನಾಗಿ ನೋಡಿಕೊಂಡು ಚಿತ್ರೀಕರಣ ಮುಗಿಸಿದ್ದಾರೆ. ಆ ಕಷ್ಟ ಅವರಿಗೆ ಮಾತ್ರ ಗೊತ್ತು. ನಮಗೆ ಯಾವುದರಲ್ಲೂ ಅವರು ಕಡಿಮೆ ಮಾಡಿಲ್ಲ. ಈಗ ಸಿನಿಮಾ ಎಷ್ಟೇ ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡಿದರೂ ನಮಗೆ ಖುಷಿಯಾಗುವುದು ಅವರಿಗೇ ಹೆಚ್ಚು ಹಣ ಸಿಕ್ಕಾಗ. ಯಾಕೆಂದರೆ ಅದಕ್ಕೆ ಅವರು ಅರ್ಹರು" ಎಂದು ಹೇಳಿದ್ದಾರೆ.
ನಿರ್ಮಾಪಕರ ಮೇಲಿದ್ದ ಒತ್ತಡ ನನಗೂ ಇತ್ತು
ಸಿನಿಮಾ ನಿರ್ಮಾಣಕ್ಕೆ ನಿರ್ಮಾಪಕರು ತಮ್ಮ ಆಸ್ತಿ ಮತ್ತು ಒಡವೆಗಳನ್ನು ಬಳಸಿಕೊಂಡಿದ್ದರಿಂದ ಚಿತ್ರದ ಆರಂಭದ ದಿನಗಳಲ್ಲಿ ತಮಗೂ ಸಾಕಷ್ಟು ಒತ್ತಡವಿತ್ತು ಎಂದು ಶ್ರೀರಾಮ್ ಹೇಳಿದ್ದಾರೆ. "ಒಂದು ಸಿನಿಮಾಗೆ ನಿರ್ದೇಶಕ ಮತ್ತು ನಟ ಇಬ್ಬರೂ ಎರಡು ತಕ್ಕಡಿಗಳಿದ್ದಂತೆ. ಇಬ್ಬರ ಮೇಲೂ ಸಿನಿಮಾದ ಭವಿಷ್ಯ ನಿಂತಿರುತ್ತದೆ. ನಿರ್ದೇಶಕನ ಭವಿಷ್ಯವೂ ಇದರೊಂದಿಗೆ ಬೆಸೆದುಕೊಂಡಿರುತ್ತದೆ. ಹೀಗಾಗಿ ಸಿನಿಮಾ ಗೆಲ್ಲಲೇಬೇಕು ಎನ್ನುವ ಒತ್ತಡ ಇತ್ತು. ನಿರ್ಮಾಪಕರು ನಮ್ಮ ಮೇಲೆ ನಂಬಿಕೆ ಇಟ್ಟು ಹಣ ಹಾಕಿರುತ್ತಾರೆ. ಅವರ ನಂಬಿಕೆಯನ್ನು ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿ" ಎಂದು ತಿಳಿಸಿದ್ದಾರೆ.
ತಮ್ಮ ಜವಾಬ್ದಾರಿಯನ್ನು ವಿವರಿಸಲು ಶಾಲಾ ದಿನಗಳ ಉದಾಹರಣೆಯನ್ನೂ ನೀಡಿದ್ದಾರೆ. ಚಿಕ್ಕವರಿದ್ದಾಗ ತಂದೆ-ತಾಯಿ ಶಾಲಾ ಫೀಸ್, ಪುಸ್ತಕ, ಬ್ಯಾಗ್, ಶೂ, ಯೂನಿಫಾರ್ಮ್ ಸೇರಿದಂತೆ ಎಲ್ಲದಕ್ಕೂ ಹಣ ಖರ್ಚು ಮಾಡುತ್ತಿರುವುದು ಮಕ್ಕಳಿಗೆ ಅಷ್ಟಾಗಿ ಅರ್ಥವಾಗುವುದಿಲ್ಲ. ಆದರೆ ಕಾಲೇಜಿಗೆ ಹೋದಾಗ ಮನೆಯವರು ಎಷ್ಟು ಖರ್ಚು ಮಾಡುತ್ತಿದ್ದಾರೆ ಎಂಬ ಅರಿವು ಬರುತ್ತದೆ. ಆಗ ಚೆನ್ನಾಗಿ ಓದಿ ಒಳ್ಳೆಯ ಅಂಕ ಗಳಿಸಬೇಕು ಎಂಬ ಜವಾಬ್ದಾರಿ ಮೂಡುತ್ತದೆ. ಅದೇ ರೀತಿ ನಿರ್ಮಾಪಕರು ತಮ್ಮ ಮೇಲೆ ಬಂಡವಾಳ ಹೂಡಿರುವುದರಿಂದ ಅವರ ನಂಬಿಕೆಗೆ ತಕ್ಕಂತೆ ನಡೆದುಕೊಳ್ಳಬೇಕು ಎಂಬ ಭಾವನೆ ನನಗಿತ್ತು ಎಂದಿದ್ದಾರೆ.
'ಬ್ಯಾಂಕಬಲ್ ಸ್ಟಾರ್ ಆಗಬೇಕು'
ತಾನು ಕೇವಲ ಸ್ಟಾರ್ ಆಗಬೇಕು ಎನ್ನುವುದಕ್ಕಿಂತ ನಿರ್ಮಾಪಕರು ನಂಬಿಕೆಯಿಂದ ಹಣ ಹೂಡಬಹುದಾದ ಬ್ಯಾಂಕಬಲ್ ಸ್ಟಾರ್ ಆಗಬೇಕು ಎಂಬ ಆಸೆ ಇದೆ ಎಂದು ಶ್ರೀರಾಮ್ ಹೇಳಿದ್ದಾರೆ. "ನನ್ನನ್ನು ಹಾಕಿಕೊಂಡು ಸಿನಿಮಾ ಮಾಡಿದರೆ ಸೇಫ್ ಎಂಬ ನಂಬಿಕೆ ನಿರ್ಮಾಪಕರಿಗೆ ಬರಬೇಕು. ಯಾಕೆಂದರೆ ನಿರ್ಮಾಪಕರು ಉಳಿದರೆ ಮಾತ್ರ ನಮ್ಮಂತಹ ಹೀರೋಗಳು ಸ್ಟಾರ್ ಆಗಲು ಸಾಧ್ಯ. ನಿರ್ದೇಶಕರಿಗೂ ತಮ್ಮ ಕನಸಿನ ಕಥೆಗಳನ್ನು ಬರೆಯುವ ಧೈರ್ಯ ಬರುತ್ತದೆ. ನಮಗೆ ಬಂಡವಾಳ ಹಾಕುವ ನಿರ್ಮಾಪಕರು ಸಿಕ್ಕಿದ್ದಾರೆ ಎಂಬ ವಿಶ್ವಾಸದಿಂದ ಅವರು ತಮ್ಮ ಕಲ್ಪನೆಗಳನ್ನು ತೆರೆಯ ಮೇಲೆ ತರಬಹುದು. ಅವರು ಉಳಿದರೆ ಮಾತ್ರ ನಾವು ಉಳಿಯುತ್ತೇವೆ ಎಂಬ ವಿಚಾರ ಯಾವಾಗಲೂ ನನ್ನ ಮನಸ್ಸಿನಲ್ಲಿದೆ" ಎಂದು ಹೇಳಿದ್ದಾರೆ.
ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆದಿದ್ದೆ!
‘ಪ್ರೇಮದ ಊರಲಿ’ ಸಿನಿಮಾ ಗೆಲ್ಲಬೇಕೆಂದು ಸಾಕಷ್ಟು ಆತಂಕದಲ್ಲಿದ್ದೆ. ಸಿನಿಮಾ ಸೋತರೆ ತಮ್ಮನ್ನು ನಂಬಿ ಹಣ ಹೂಡಿದ ನಿರ್ಮಾಪಕರು ಮತ್ತು ನಿರ್ದೇಶಕರಿಗೆ ಏನು ಉತ್ತರ ನೀಡುವುದು ಎಂಬ ಚಿಂತೆ ಕಾಡುತ್ತಿತ್ತು ಎಂದು ಶ್ರೀರಾಮ್ ತಿಳಿಸಿದ್ದಾರೆ. "ನಾನು ಈ ಸಿನಿಮಾ ಗೆಲ್ಲಿಸಿದ್ದೇನೆಯೋ ಅಥವಾ ಸೋಲಿಸಿದ್ದೇನೆಯೋ ಎಂಬ ಪ್ರಶ್ನೆ ಕಾಡುತ್ತಿತ್ತು. ಕಲಾವಿದರಿಗೆ ಸಿನಿಮಾ ಮೂಲಕ ಒಂದಲ್ಲ ಒಂದು ಅವಕಾಶ ಸಿಗಬಹುದು. ನಮ್ಮ ಮುಖ, ಅಭಿನಯ ನೋಡಿ ಬೇರೆ ಯಾರಾದರೂ ಅವಕಾಶ ಕೊಡಬಹುದು. ಆದರೆ ಹಣ ಹೂಡಿದ ನಿರ್ಮಾಪಕರಿಗೆ ನಷ್ಟವಾದರೆ ಅವರ ಕಷ್ಟ ಯಾರಿಗೆ ಗೊತ್ತಾಗುತ್ತದೆ? ಅವರು ಎಷ್ಟೋ ರಾತ್ರಿಗಳು ನಿದ್ದೆ ಮಾಡದೆ ಕಷ್ಟಪಟ್ಟಿರುತ್ತಾರೆ. ಸಿನಿಮಾದಲ್ಲಿ ಹೆಸರು ನಮಗೆ ಬರುತ್ತದೆ, ಆದರೆ ಹಣ ಹಾಕಿದವರಿಗೆ ಒಳ್ಳೆಯದಾಗಬೇಕು ಎಂಬ ಆಸೆ ನನಗಿತ್ತು" ಎಂದು ಮನದಾಳದ ಮಾತು ಹಂಚಿಕೊಂಡಿದ್ದಾರೆ.
‘ಪ್ರೇಮದ ಊರಲಿ’ ಯಶಸ್ಸಿನಿಂದ ನಿರ್ಮಾಪಕರಿಗೆ ಉತ್ತಮ ಲಾಭವಾಗಿರುವುದಕ್ಕೆ ಸಂತೋಷ ವ್ಯಕ್ತಪಡಿಸಿರುವ ಶ್ರೀರಾಮ್, ಎಲ್ಲ ಕಡೆ ಹೆಮ್ಮೆಯಿಂದ ನಮ್ಮ ನಿರ್ಮಾಪಕರ ಬಗ್ಗೆ ಹೇಳಿಕೊಳ್ಳಬಹುದು ಎಂದು ಖುಷಿ ಹಂಚಿಕೊಂಡಿದ್ದಾರೆ.












