Asianet Suvarna News Asianet Suvarna News

’ಬಟರ್ ಫ್ಲೈ’ ಆಗಿ ಹಾರಲು ರೆಡಿಯಾಗಿದ್ದಾರೆ ಪಾರುಲ್ ಯಾದವ್

ಬಹಳ ಸಮಯದ ನಂತರ ‘ಬಟರ್ ಫ್ಲೈ’ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಪಾರೂಲ್ ಯಾದವ್ |  ಬಾಲಿವುಡ್ ‘ಕ್ವೀನ್’ ಕನ್ನಡ ಅವತರಣಿಕೆ ಇದು | 

Parul Yadav upcoming movie 'Butter Fly' ready to release
Author
Bengaluru, First Published Oct 1, 2018, 11:43 AM IST

ಬೆಂಗಳೂರು (ಅ. 01): ‘ಜೆಸ್ಸಿ’ ಬಂದು ಹೋದ ಬಹಳ ಸಮಯದ ನಂತರ ಪಾರುಲ್ ಯಾದವ್ ‘ಬಟರ್ ಫ್ಲೈ’ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಾಲಿವುಡ್ ‘ಕ್ವೀನ್’ ಕನ್ನಡ ಅವತರಣಿಕೆ ಇದು. ಜತೆಗೆ ಸಹ ನಿರ್ಮಾಪಕಿ ಕೂಡ. ‘ಬಟರ್ ಫ್ಲೈ’ ರಿಲೀಸ್‌ಗೆ ರೆಡಿ ಆಗಿದೆ. ಚಿತ್ರದ ವಿಶೇಷತೆ, ಎರಡು ವರ್ಷದ ಗ್ಯಾಪ್, ಇತ್ಯಾದಿ ಕುರಿತು ಪಾರುಲ್ ಜತೆಗೆ ಮಾತುಕತೆ.  

ಪಾರುಲ್ ಎಲ್ಲಿ ಎನ್ನುವಂತಾಗಿದೆ ನಿಮ್ಮ ಆನ್‌ಸ್ಕ್ರೀನ್ ಅನುಪಸ್ಥಿತಿ?

ಖಂಡಿತಾ ಹೌದು. ನಟಿಯಾಗಿ ಒಂದಷ್ಟು ಕಾಲ ತೆರೆ ಮೇಲೆ ಕಾಣಿಸಿಕೊಳ್ಳಲಿಲ್ಲ ಅಂದ್ರೆ ಆಡಿಯನ್ಸ್‌ಗೆ ಈ ಪ್ರಶ್ನೆ ಎದುರಾಗುವುದು ಸಹಜ. ಆದ್ರೆ ಅದಕ್ಕೆ ಕಾರಣ ‘ಬಟರ್ ಫ್ಲೈ’.

ಬಟರ್ ಫ್ಲೈ’ಗೆ ಮಾತ್ರವೇ ಎರಡು ವರ್ಷ ಮೀಸಲಿಟ್ಟಿದ್ದು ಯಾಕೆ?

ಅದಕ್ಕೆ ಹಲವು ಕಾರಣಗಳಿವೆ. ಮೊದಲಿಗೆ ಇದು ಬಿಗ್ ಬಜೆಟ್ ಸಿನಿಮಾ. ಹಾಗೆಯೇ ಬಹು ಭಾಷೆಗಳಲ್ಲಿ ನಿರ್ಮಾಣವಾದ ಚಿತ್ರ. ಇಷ್ಟು ದೊಡ್ಡ ಸಿನಿಮಾಕ್ಕೆ ನಾನೂ ಕೂಡ ಸಹ ನಿರ್ಮಾಪಕಿ. ಮೇಲಾಗಿ ಕನ್ನಡಕ್ಕೆ ನಾನು ನಾಯಕಿ. ಒಟ್ಟಿಗೆ ಎರಡು ಜವಾಬ್ದಾರಿಗಳು. ಬೇರೆ ಇನ್ನಾವುದೇ ಸಿನಿಮಾಕ್ಕೆ ಕಾಲ್‌ಶೀಟ್ ಕೊಟ್ಟು ಬೇರೆಯವರು ಕಿರಿಕಿರಿ ಅನುಭವಿಸುವಂತೆ ಮಾಡುವುದು ನನಗಿಷ್ಟ ಇರಲಿಲ್ಲ. ಅಂತಹ ಕಿರಿಕಿರಿ ನಡುವೆ ಈ ಸಿನಿಮಾ ಮಾಡುವುದಕ್ಕೂ ಮನಸ್ಸಿರಲಿಲ್ಲ.

ಅಂಥದ್ದೇನು ವಿಶೇಷ ಈ ಸಿನಿಮಾದ್ದು?

‘ಕ್ವೀನ್’ ರಿಮೇಕ್ ‘ಬಟರ್ ಫ್ಲೈ’. ಇಲ್ಲಿನ ನೇಟಿವಿಟಿಗೆ ತಕ್ಕಂತೆ ಈ ಸಿನಿಮಾ ಮೂಡಿ ಬಂದಿದೆ. ಪಾರ್ವತಿ ಈ ಚಿತ್ರದ ಕಥಾ ನಾಯಕಿ. ಗೋಕರ್ಣದ ಹುಡುಗಿ. ಆಕೆ ಈ ಕಾಲದ ಎಲ್ಲಾ ಹುಡುಗಿಯ ಪ್ರತಿನಿಧಿ. ಪಾತ್ರವೇ ಅದ್ಭುತವಾಗಿದೆ. ಅಷ್ಟೇ
ಸೊಗಸಾದ ಕತೆ. ಅದಕ್ಕೆ ತಕ್ಕಂತೆ ಅದ್ದೂರಿಯಾಗಿ ನಿರ್ಮಾಣವಾಗಿದೆ ಈ ಚಿತ್ರ. ಶೇಕಡಾ 80 ರಷ್ಟು ಭಾಗ ವಿದೇಶದಲ್ಲೇ ಚಿತ್ರೀಕರಣಗೊಂಡಿದೆ.

ಸುಂದರವಾದ ಲೋಕೇಷನ್ ಈ ಚಿತ್ರದಲ್ಲಿವೆ. ಅಮಿತ್ ತ್ರಿವೇದಿ ಅವರೇ ‘ಬಟರ್ ಫ್ಲೈ’ಗೂ ಸಂಗೀತ ಸಂಯೋಜನೆ ನೀಡಿದ್ದಾರೆ.

ಕ್ವೀನ್ ಕನ್ನಡಕ್ಕೆ ತರಬೇಕು, ಅದರಲ್ಲೀ ನೀವೇ ಅಭಿನಯಿಸಬೇಕು ಅಂತಂದುಕೊಂಡಿದ್ದೇಕೆ?

ನಾನಲ್ಲ, ಇದಕ್ಕೆ ಮೂಲ ಕಾರಣ ನಿರ್ಮಾಪಕ ಮನು ಕುಮಾರ್. ಅವರು ಬಹುಭಾಷೆಗಳಲ್ಲಿ ತರಲು ಹೊರಟರು. ಒಂದೊಳ್ಳೆ ಪ್ರಾಜೆಕ್ಟ್ ಅದು, ಕನ್ನಡಕ್ಕೆ ಬರುವುದಾದರೆ ಅದಕ್ಕೆ ನನ್ನ ಪಾತ್ರವೂ ಇರಲಿ ಅಂತ ಕೈ ಜೋಡಿಸಿದೆ. ಮೊದಲು ಸಹ ನಿರ್ಮಾಪಕಿ ಅಂತ ಗುರುತಿಸಿಕೊಂಡೆ. ಆನಂತರ ನಿರ್ದೇಶಕ ರಮೇಶ್ ಅರವಿಂದ್ ಮತ್ತು ನಿರ್ಮಾಪಕ ಮನು ಕುಮಾರ್ ಸಲಹೆಯಂತೆ ನಾಯಕಿ ಆದೆ.

ರಮೇಶ್ ಅರವಿಂದ್ ನಿರ್ದೇಶನದಲ್ಲಿ ಅಭಿನಯಿಸಿದ ಅನುಭವದ ಬಗ್ಗೆ ಹೇಳಿ...

ಮೊದಲಿಗೆ ನಾವಿಬ್ಬರು ಬೆಸ್ಟ್ ಫ್ರೆಂಡ್ಸ್. ತುಂಬಾ ಸೂಕ್ಷ್ಮ ಸಂವೇದನೆಯ ನಟ, ನಿರ್ದೇಶಕ ಅವರು. ಮನುಕುಮಾರ್ ಈ ಸಿನಿಮಾ ಮಾಡಲು ಹೊರಟಾಗ ‘ಬಟರ್ ಫ್ಲೈ’ಗೆ ಅವರೇ ಸೂಕ್ತ ಅಂತ ಹೇಳಿದ್ದು ನಾನು. ನಿರ್ಮಾಪಕರ ನಿರೀಕ್ಷೆಗಿಂತ ಹೆಚ್ಚಾಗಿ ಅವರೇ ಕಾಳಜಿ ವಹಿಸಿ ಈ ಸಿನಿಮಾ ನಿರ್ದೇಶಿಸಿದ್ದಾರೆ. ಅವರ ನಿರ್ದೇಶನದಲ್ಲಿ ಅಭಿನಯಿಸುವುದೇ ಖುಷಿ.

ರಿಲೀಸ್ ಪ್ಲ್ಯಾನ್ ಏನು, ಹೇಗೆಲ್ಲ ಸಿದ್ಧತೆ ನಡೆದಿದೆ?

ಡಿಸೆಂಬರ್‌ನಲ್ಲಿ ರಿಲೀಸ್ ಗ್ಯಾರಂಟಿ. ತೆಲುಗು, ತಮಿಳು, ಮಲಯಾಳಂ ಜತೆಗೆ ಕನ್ನಡದಲ್ಲೂ ಅದು ಏಕ ಕಾಲದಲ್ಲೇ ತೆರೆಗೆ ಬರುತ್ತಿದೆ. ಈಗ ಅದರ ಸಿದ್ಧತೆಯಲ್ಲೇ ಬ್ಯುಸಿ ಆಗಿದ್ದೇವೆ. ಅಕ್ಟೋಬರ್ 19 ಕ್ಕೆ ಪೋಸ್ಟರ್ ಲಾಂಚ್. ಆ ನಂತರ ರಿಲೀಸ್ ಸಿದ್ಧತೆ.

ಒಂದೇ ಚಿತ್ರದಲ್ಲಿ ತಮನ್ನಾ, ಕಾಜಲ್, ಮಂಜಿಮ್ ಮೋಹನ್ ನಡುವೆ ನೀವು.. ಹೇಗನಿಸುತ್ತೆ?

ಒಬ್ಬರಿಗಿಂತ ಒಬ್ಬರು ಚೆನ್ನಾಗಿ ಅಭಿನಯಿಸಬೇಕು ಅನ್ನೋದು ಇದ್ದೇ ಇತ್ತು. ಅದು ಆರೋಗ್ಯಪೂರ್ಣವಾದ ಪೈಪೋಟಿಯೇ ಆಗಿತ್ತೇನ್ನುವುದು ವಿಶೇಷ. ಸೆಟ್‌ನಲ್ಲಿ ನಾವೆಲ್ಲ ಬೇರೆ ಬೇರೆ ಭಾಷೆಗೆ ಅಭಿನಯಿಸಲು ನಿಂತಾಗ ಸಹಜವಾಗಿಯೇ ಚೆನ್ನಾಗಿ ನಟಿಸಬೇಕೆಂದುಕೊಳ್ಳುತ್ತಿದ್ದೇವು. ಅದಕ್ಕೂ ಮೊದಲು ಸೆಟ್‌ನಲ್ಲಿ ಮಾತನಾಡಿಕೊಳ್ಳುತ್ತಿದ್ದೇವು. ಹಾಗಲ್ಲ, ಹೀಗೆ ಅಂತ ಚರ್ಚಿಸುತ್ತಿದ್ದೆವು. ಒಂಥರ ಖುಷಿ, ಮತ್ತೊಂದು ಕಡೆ ಭಯ . ಅವೆರೆಡರ ನಡುವೆ ನಾವೆಲ್ಲ ಅಭಿನಯಿಸಿದ್ದೇವೆ. 

- ದೇಶಾದ್ರಿ ಹೊಸ್ಮನೆ 

Follow Us:
Download App:
  • android
  • ios