ಮುಂಬೈ (ಆ. 21): ನಿಮ್ಮ ಬಾಲ್ಯದ ಗೆಳತಿ ಹಸೆಮಣೆಯಲ್ಲಿ ಕೂರುವ ಹೊತ್ತಿನಲ್ಲಿರುವಾಗ ನೀವು ಏನೆಂದು ಹರಸಬಲ್ಲಿರಿ? ಒಂದು ಪತ್ರ ಬರೆಯಿರಿ ಎಂದರೆ, ಏನು ಬರೆಯಬಲ್ಲಿರಿ? ಅದು ನಿಮಗೆ ಬಿಟ್ಟ ವಿಚಾರ. ಇಲ್ಲಿ ತನ್ನ ಬಾಲ್ಯದ ಗೆಳತಿ, ಸೋದರ ಸಂಬಂಧಿ ಪ್ರಿಯಾಂಕಾ ಚೋಪ್ರಾಗೆ ಪರಿಣಿತಿ ಚೋಪ್ರಾ ಮನ ಮುಟ್ಟುವಂತಹ ಪತ್ರವೊಂದನ್ನು ಬರೆದಿದ್ದಾರೆ ಓದಿ.

‘ನಿನಗೆ ಗೊತ್ತಾ ಪ್ರಿಯಾಂಕಾ, ನಾವಿಬ್ಬರೂ ಒಟ್ಟಿಗೆ ಆಟವಾಡಿಕೊಂಡು ಬೆಳೆದವರು. ಮಮ್ಮಿ, ಡ್ಯಾಡಿ ಆ ಕಾಲದಲ್ಲಿಯೇ ನಮ್ಮ ಮದುವೆ, ಗಂಡಂದಿರ ಬಗ್ಗೆ ರೇಗಿಸುತ್ತಿದ್ದರು. ಆಗ ನಾವು ನಾಚಿಕೊಳ್ಳುತ್ತಿದ್ದೆವು. ಬಾಲ್ಯದಲ್ಲಿಯೇ ನಮ್ಮಿಬ್ಬರಿಗೂ ಒಂದು ಕನಸಿತ್ತು. ಒಟ್ಟಿಗೆ ಮದುವೆಯಾಗಿ, ನಮಗೆ ಗಂಡನಾಗಿ ಬರುವವನಿಗೆ ಒಟ್ಟಿಗೆ ಟೀ ಕೊಡಬೇಕು ಎಂದು. ಅದು ಈಗ ನಿನ್ನ ಪಾಲಿಗೆ ಸಾಧ್ಯವಾಗುತ್ತಿದೆ. ನಿನಗೆ ನಿನ್ನ ಕನಸಿನ ರಾಜ ಸಿಕ್ಕಿದ್ದಾನೆ. ನನ್ನ ಪ್ರಕಾರ ಅವನಿಗಿಂತ ಸರಿಯಾದ ಜೋಡಿ ನಿನಗೆ ಬೇರೆ ಇಲ್ಲವೇ ಇಲ್ಲವೇನೋ. ಸೋ ಯುವರ್ ಲಕ್ಕಿ.

ನನ್ನ ಪ್ರಕಾರ ಒಬ್ಬ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳಬೇಕಾದರೆ ಎರಡು ಮಾರ್ಗಗಳಿವೆ. ಒಂದು ಅವರೊಂದಿಗೆ ಊಟ ಮಾಡಬೇಕು. ಮತ್ತೊಂದು ಅವರೊಂದಿಗೆ ಟ್ರಾವೆಲ್ ಮಾಡಬೇಕು. ನಿಕ್ ನಾನು ನಿನ್ನೊಂದಿಗೆ ಇವೆರಡನ್ನೂ ಮಾಡಿದ್ದೇನೆ. ಈ ವೇಳೆ ನಿನ್ನ ಒಳ್ಳೆಯತನದ ಪರಿಚಯವಾಗಿದೆ. ನೀನು ನನ್ನ ಅಕ್ಕನಿಗೆ ಸರಿಯಾದ ಜೋಡಿ. ಅಲ್ಲದೇ ಅವಳು ನೋಡಲಷ್ಟೇ ಒರಟು. ಆದರೆ ಅವಳ ಮನಸ್ಸು ಮಗುವಿನ ರೀತಿ. ಅವಳನ್ನು ಪ್ರೀತಿಯಿಂದ ನೋಡಿಕೋ. ಲವ್ ಯು ಬೋತ್, ಯಾವಾಗಲೂ ಖುಷಿಯಾಗಿರಿ’