Asianet Suvarna News Asianet Suvarna News

ಒನ್'ಟೈಮ್ ಸಿನಿಮಾ ವಿಮರ್ಶೆ: ಫುಲ್'ಟೈಮ್ ಕಾಡುವ ಒನ್'ಟೈಮ್ ಪ್ರೀತಿ

ಚಿತ್ರದ ಜೀವಾಳ ಅಂದ್ರೆ ಸಂಗೀತ ನಿರ್ದೇಶಕ ಅಭಿಮಾನ್‌ ರಾಯ್‌. ಚಿತ್ರದಲ್ಲಿರುವ ನಾಲ್ಕು ಹಾಡುಗಳಲ್ಲೂ ಅವರ ಕೈ ಚಳಕ ಆಪ್ತವಾಗುತ್ತದೆ. ಸೂರ್ಯಕಾಂತ್‌ ಹೊನ್ನಾಳ್ಳಿ ಕ್ಯಾಮೆರಾ ಕೂಡ ಅಷ್ಟಕಷ್ಟೆ. ಇಷ್ಟಾಗಿಯೂ ಹೊಸಬರ ಪ್ರಯತ್ನವನ್ನು ಕಡೆಗಣಿಸುವಂತಿಲ್ಲ. ತಾಂತ್ರಿಕ ಲೋಪದೋಷಗಳ ನಡುವೆಯೂ ಇಲ್ಲಿನ ಪ್ರೀತಿ ಕಾಡುತ್ತದೆ.

one time kannada movie review

ಚಿತ್ರ: ಒನ್'ಟೈಮ್

ಭಾಷೆ: ಕನ್ನಡ
ತಾರಾಗಣ: ತೇಜಸ್‌, ನೇಹಾ ಸಕ್ಸೆನಾ, ನಾಗಾಭರಣ, ರಾಧಾಕೃಷ್ಣ ಪಲ್ಲಕ್ಕಿ, ವಿಕ್ಟರಿ ವಾಸು, ಭಗವಾನ್‌, ಪಿ ಎನ್‌ ಸತ್ಯ, ಗಡ್ಡ ವಿಜಿ
ನಿರ್ದೇಶನ: ಬಿ ಎನ್‌ ರಾಜು
ಸಂಗೀತ: ಅಭಿಮಾನ್‌ ರಾಯ್‌
ಛಾಯಾಗ್ರಹಣ: ಸೂರ್ಯಕಾಂತ್‌ ಹೊನ್ನಾಳಿ
ನಿರ್ಮಾಣ: ಡಿಯೋಕ್ಸ್‌ ಎಂಟರ್ಟೈನ್‌'ಮೆಂಟ್‌

ರೇಟಿಂಗ್: **

- ದೇಶಾದ್ರಿ ಹೊಸ್ಮನೆ, ಕನ್ನಡಪ್ರಭ

ಪ್ರೀತಿ ಪ್ರತಿಯೊಬ್ಬರಿಗೂ ಆಪ್ತ. ಅದರಲ್ಲೂ ಯವ್ವನಕ್ಕೆ ಕಾಲಿಟ್ಟಹುಡುಗ- ಹುಡುಗಿಯರಿಗೆ ಅದು ಹೆಚ್ಚು ಆಕರ್ಷಣೆ. ಆದರೆ, ಆ ಪ್ರೀತಿಯನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ಸಂದರ್ಭ ಬಂದಾಗ ಅನೇಕರು ತಪ್ಪು ನಿರ್ಧಾರಗಳಿಗೆ ಬಲಿಯಾಗುವುದೂ ಅಷ್ಟೇ ಸಹಜ. ಕೆಲವರು ಪೋಷಕರನ್ನೇ ಮರೆತು ಮನೆ ಬಿಟ್ಟು ಓಡಿ ಹೋಗುತ್ತಾರೆ. ಇನ್ನು ಕೆಲವರು ವಿರೋಧಗಳಿಗೆ ಸಿಲುಕಿ ಸಾವಿಗೆ ಶರಣಾಗುತ್ತಾರೆ. ಹಾಗಾದ್ರೆ ನಿಜವಾದ ಪ್ರೀತಿ ಅಂದ್ರೆ ಏನು? ಅದನ್ನು ಉಳಿಸಿಕೊಳ್ಳುವುದು ಹೇಗೆ? ಇದಕ್ಕೊಂದು ಸಣ್ಣ ಸಂದೇಶ ನೀಡುವ ನಿಟ್ಟಿನಲ್ಲಿ ಬಂದ ಚಿತ್ರವೇ ಒನ್‌'ಟೈಮ್‌. 

ಪ್ರೀತಿಸಿ, ಆದರೆ ಸಾಕಿ ಸಲುಹಿದ ಪೋಷಕರನ್ನು ಮರೆಯಬೇಡಿ ಎನ್ನುವ ಎಳೆಯೊಂದರ ಮೇಲೆ ಮೂಡಿದ ಈ ಚಿತ್ರದಲ್ಲಿ ಕತೆಯ ತಿರುಳಿಗೆ ಸಿಕ್ಕ ಆದ್ಯತೆ ಚಿತ್ರಕತೆಗೆ ನೀಡಿಲ್ಲ. ಚಿತ್ರದ ಮೊದಲರ್ಧ ಸಾಕಷ್ಟುನಿಧಾನ. ನಾಯಕ ವಿಜಯ್‌ ಮಧ್ಯಮ ವರ್ಗದ ಹುಡುಗ. ಬೈಕ್‌ರೇಸ್‌ನಲ್ಲಿ ಚಾಂಪಿಯನ್‌ ಆಗಬೇಕೆನ್ನುವ ಕನಸು. ಆದರೆ, ತನ್ನ ಬಾಳಿನಲ್ಲಿ ಅಕಸ್ಮಿಕವಾಗಿ ಬಂದ ಶ್ರೀಮಂತ ಕುಟುಂಬದ ಹುಡುಗಿ ನಂದಿನಿಯ ಪ್ರೀತಿ ಹಿತವೆನಿಸುತ್ತದೆ. ಆದರೆ ಅವರಿಬ್ಬರ ಪ್ರೀತಿಗೆ ನಂದಿನಿ ಮನೆಯವರ ವಿರೋಧ. ಇಲ್ಲಿಗೆ ಚಿತ್ರದ ಮೊದಲಾರ್ದ ಖತಂ. ‘ಪ್ರೀತಿ ಉಳಿಯಬೇಕಾದರೆ ಸಾಧಿಸಿ ತೋರಿಸು' ಎನ್ನುವ ನಂದಿನಿ ತಂದೆಯ ಮಾತು, ವಿಜಯ್‌ಗೆ ಸವಾಲಾಗುತ್ತದೆ. ದ್ವಿತೀಯಾರ್ಧ ಕುತೂಹಲ ಹುಟ್ಟಿಸುವುದೇ ಆ ಕಾರಣಕ್ಕೆ. ಆ ಮಾತನ್ನು ಸವಾಲಾಗಿ ತೆಗೆದುಕೊಳ್ಳುವ ವಿಜಯ್‌ ಕೆಲಸಕ್ಕೆ ಸೇರುತ್ತಾನೆ. ಅಲ್ಲಿಂದಲೇ ಆತನ ಕನಸು ನನಸಾಗುವ ಕಾಲ ಸನ್ನಿಹಿತವಾಗುತ್ತದೆ. ಅದು ನನಸಾಗುತ್ತೋ ಅಥವಾ ಇಲ್ಲವೋ ಎನ್ನುವುದೇ ಕತೆಯ ಉಳಿದ ಭಾಗದ ಸಸ್ಪೆನ್ಸ್‌.

ನಾಯಕ ತೇಜಸ್‌ಗೆ ಇದು ಮೊದಲ ಚಿತ್ರ. ಆದರೂ ನಟನೆಯಲ್ಲಿ ಪಕ್ವತೆಯಿದೆ. ಮಾತು, ನಟನೆ, ನೃತ್ಯದಲ್ಲೂ ಭರವಸೆ ಮೂಡುತ್ತದೆ. ನಾಯಕಿ ನೇಹಾ ಸಕ್ಸೆನಾ ಇಲ್ಲಿ ಮೈನಸ್‌. ಹದಿಹರೆಯದವರ ಪ್ರೀತಿಯ ಕತೆ ಅಂದಾಕ್ಷಣ, ಕಾಲೇಜು ಹಂತದ ಹುಡುಗ- ಹುಡುಗಿಯರೇ ಕಣ್ಮುಂದೆ ಬರುವುದು ಸಹಜ. ಆ ಪಾತ್ರಕ್ಕೆ ನೇಹಾರನ್ನು ಕಲ್ಪಿಸಿಕೊಳ್ಳುವುದಕ್ಕೆ ಕಷ್ಟ. ಉಳಿದಂತೆ 14 ನಿರ್ದೇಶಕರು ಈ ಚಿತ್ರದ ಮತ್ತೊಂದು ಆಕರ್ಷಣೆ. ನಾಯಕ ವಿಜಯ್‌ ತಂದೆಯಾಗಿ ನಾಗಾಭರಣ, ವೈದ್ಯರಾಗಿ ಭಗವಾನ್‌, ಟ್ರಾಫಿಕ್‌ ಪೊಲೀಸ್‌ ಪಾತ್ರದಲ್ಲಿ ಗಡ್ಡವಿಜಿ, ಚಿತ್ರ ನಿರ್ದೇಶಕರಾಗಿ ನಾಗೇಂದ್ರ ಪ್ರಸಾದ್‌, ರೌಡಿಯಾಗಿ ಸತ್ಯ, ಉಪನ್ಯಾಸಕರಾಗಿ ವಿಕ್ಟರಿ ವಾಸು, ನಾಯಕಿ ತಂದೆಯಾಗಿ ರಾಧಾಕೃಷ್ಣ ಪಲ್ಲಕ್ಕಿ- ಹೀಗೆ ಎಲ್ಲರೂ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ಹಾಗೆ ನೋಡಿದರೆ ಚಿತ್ರದ ಜೀವಾಳ ಅಂದ್ರೆ ಸಂಗೀತ ನಿರ್ದೇಶಕ ಅಭಿಮಾನ್‌ ರಾಯ್‌. ಚಿತ್ರದಲ್ಲಿರುವ ನಾಲ್ಕು ಹಾಡುಗಳಲ್ಲೂ ಅವರ ಕೈ ಚಳಕ ಆಪ್ತವಾಗುತ್ತದೆ. ಸೂರ್ಯಕಾಂತ್‌ ಹೊನ್ನಾಳ್ಳಿ ಕ್ಯಾಮೆರಾ ಕೂಡ ಅಷ್ಟಕಷ್ಟೆ. ಇಷ್ಟಾಗಿಯೂ ಹೊಸಬರ ಪ್ರಯತ್ನವನ್ನು ಕಡೆಗಣಿಸುವಂತಿಲ್ಲ. ತಾಂತ್ರಿಕ ಲೋಪದೋಷಗಳ ನಡುವೆಯೂ ಇಲ್ಲಿನ ಪ್ರೀತಿ ಕಾಡುತ್ತದೆ.

(epaper.kannadaprabha.in)

Latest Videos
Follow Us:
Download App:
  • android
  • ios