ನಟಿ ಶ್ರುತಿ ಹಾಸನ್ ಮದುವೆ, ಪ್ರೀತಿ ಮತ್ತು ಸಂಬಂಧಗಳ ಬಗ್ಗೆ ತಮ್ಮ ವಿಭಿನ್ನ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮದುವೆ ಸರ್ಟಿಫಿಕೇಟ್ ಅಗತ್ಯವಿಲ್ಲ, ತಾಯಿಯಾಗುವ ಆಸೆಯಿದೆ ಹಾಗೂ ಮಾಜಿ ಪ್ರೇಮಿಯೊಂದಿಗಿನ ಸಂಬಂಧದ ಬಗ್ಗೆಯೂ ಮಾತನಾಡಿದ್ದಾರೆ.
ನಟಿ ಹಾಗೂ ಗಾಯಕಿ ಶ್ರುತಿ ಹಾಸನ್ ತಮ್ಮ ವೈಯಕ್ತಿಕ ಜೀವನ, ಪ್ರೀತಿ ಮತ್ತು ಮದುವೆಯ ವಿಚಾರವಾಗಿ ಮುಕ್ತವಾಗಿ ಮಾತನಾಡಿದ್ದಾರೆ. ಇತ್ತೀಚೆಗೆ ಎಸ್ಎಸ್ ಮ್ಯೂಸಿಕ್ಗೆ ನೀಡಿದ ಸಂದರ್ಶನದಲ್ಲಿ ಮದುವೆ ಕುರಿತ ಪ್ರಶ್ನೆಗಳಿಗೆ ಉತ್ತರಿಸಿರುವ ಅವರು, ಜೀವನದಲ್ಲಿ ಮದುವೆ ಎಂಬುದಕ್ಕೆ ಯಾವುದೇ ಗಡುವು ಅಥವಾ ನಿಗದಿತ ಸಮಯವನ್ನು ಇಟ್ಟುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲ, ಪ್ರೀತಿ ಮತ್ತು ಸಂಬಂಧಗಳ ಬಗ್ಗೆ ತಮ್ಮದೇ ಆದ ವಿಭಿನ್ನ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಮದುವೆ ಬಗ್ಗೆ ಮಾತನಾಡಿರುವ ಶ್ರುತಿ ಹಾಸನ್, ತನಗೆ ಕುಟುಂಬದ ಪರಿಕಲ್ಪನೆ ಇಷ್ಟ ಎಂದು ಹೇಳಿದ್ದಾರೆ. ಮುಂದೊಂದು ದಿನ ತಾಯಿಯಾಗುವ ಆಸೆಯೂ ಇದೆ ಎಂದು ಒಪ್ಪಿಕೊಂಡಿದ್ದಾರೆ. ಆದರೆ, ಒಬ್ಬರ ಮೇಲಿನ ಪ್ರೀತಿ ಹಾಗೂ ಬದ್ಧತೆಯನ್ನು ಸಾಬೀತುಪಡಿಸಲು ಮದುವೆಯ ಪ್ರಮಾಣಪತ್ರವೇ ಬೇಕೆಂದಿಲ್ಲ ಎಂಬುದು ಅವರ ಅಭಿಪ್ರಾಯ. ನಿಜವಾದ ಸಂಬಂಧ ಎಂದರೆ ಪ್ರತಿದಿನವೂ ಸಂಗಾತಿಯನ್ನು ಪ್ರೀತಿಯಿಂದ ಆಯ್ಕೆ ಮಾಡಿಕೊಳ್ಳುವುದು ಮತ್ತು ಆ ಸಂಬಂಧವನ್ನು ಮನಃಪೂರ್ವಕವಾಗಿ ಮುಂದುವರಿಸುವುದು ಎಂದು ಹೇಳಿದ್ದಾರೆ.
ಇನ್ನು ಮದುವೆ ವಿಚಾರದಲ್ಲಿ ತಮ್ಮ ತಂದೆ-ತಾಯಿ ಎಂದಿಗೂ ಒತ್ತಡ ಹೇರಿಲ್ಲ ಎಂಬುದನ್ನೂ ಶ್ರುತಿ ಬಹಿರಂಗಪಡಿಸಿದ್ದಾರೆ. ತಾವು ಸಂತೋಷವಾಗಿರಬೇಕು ಎಂಬುದಷ್ಟೇ ಅವರ ಪೋಷಕರ ಬಯಕೆ. ಹೀಗಾಗಿ, ಮದುವೆಯಾಗಲೇಬೇಕು ಎಂಬ ಯಾವುದೇ ಒತ್ತಡವಿಲ್ಲದೆ ತಮ್ಮ ಜೀವನದ ನಿರ್ಧಾರಗಳನ್ನು ತಾವೇ ತೆಗೆದುಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.
ನನ್ನ ಬಳಿ ಯಾರೂ ಫ್ಲರ್ಟ್ ಮಾಡಲ್ಲ!
ಸಂದರ್ಶನದಲ್ಲಿ ತಮ್ಮ ಡೇಟಿಂಗ್ ಅನುಭವಗಳ ಬಗ್ಗೆಯೂ ಶ್ರುತಿ ಹಾಸನ್ ತಮಾಷೆಯಾಗಿ ಮಾತನಾಡಿದ್ದಾರೆ. ಅಚ್ಚರಿಯ ಸಂಗತಿಯೆಂದರೆ, ತಮ್ಮ ಬಳಿ ಯಾರೂ ಬಂದು ಮಾತನಾಡುವುದಿಲ್ಲ, ಫ್ಲರ್ಟ್ ಮಾಡುವುದಿಲ್ಲ ಅಥವಾ ಪ್ರಪೋಸ್ ಕೂಡ ಮಾಡುವುದಿಲ್ಲ ಎಂದು ನಗುತ್ತಲೇ ಹೇಳಿದ್ದಾರೆ. ಬಹುಶಃ ಜನರಿಗೆ ತಾವು ಸ್ವಲ್ಪ ಭಯ ಹುಟ್ಟಿಸುವ ವ್ಯಕ್ತಿಯಂತೆ ಕಾಣಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ, ತಮ್ಮ ಒಳಗಿನ ವ್ಯಕ್ತಿತ್ವ ಹಾಗಿಲ್ಲ. ತಾವು ಒಳಗಿನಿಂದ ತುಂಬಾ ‘ಹಲೋ ಕಿಟ್ಟಿ’ ಮತ್ತು ‘ಕುರೋಮಿ’ ಸ್ವಭಾವದವರು ಎಂದು ತಮಾಷೆಯಾಗಿ ವಿವರಿಸಿದ್ದಾರೆ.
ಪ್ರೀತಿ ಎಂದರೆ ಸದಾ ಜೊತೆಯಲ್ಲಿರುವುದಲ್ಲ!
ಪ್ರೀತಿ ಮತ್ತು ರೊಮ್ಯಾನ್ಸ್ ಬಗ್ಗೆ ತಮ್ಮದೇ ಆದ ನಿಲುವು ಹೊಂದಿರುವ ಶ್ರುತಿ, ಪ್ರೀತಿ ಎಂದರೆ ಸಾಂಪ್ರದಾಯಿಕವಾಗಿ ಡಿನ್ನರ್ ಡೇಟ್ಗೆ ಹೋಗುವುದು ಅಥವಾ ಪ್ರತಿಕ್ಷಣವೂ ಒಟ್ಟಿಗೆ ಕಳೆಯುವುದು ಮಾತ್ರವಲ್ಲ ಎಂದಿದ್ದಾರೆ. ಸಂಬಂಧದಲ್ಲಿ ಒಬ್ಬರಿಗೊಬ್ಬರು ವೈಯಕ್ತಿಕ ಸ್ವಾತಂತ್ರ್ಯ ಮತ್ತು ಸ್ಪೇಸ್ ನೀಡುವುದು ಕೂಡ ಅಷ್ಟೇ ಮುಖ್ಯ ಎಂದು ಹೇಳಿದ್ದಾರೆ. ತಮ್ಮದೇ ಆದ ವ್ಯಕ್ತಿತ್ವವನ್ನು ಉಳಿಸಿಕೊಂಡು, ಪರಸ್ಪರ ಸ್ವಾತಂತ್ರ್ಯಕ್ಕೆ ಗೌರವ ನೀಡುತ್ತಾ ಬದುಕಬೇಕು. ಆ ಸ್ವಾತಂತ್ರ್ಯದ ನಡುವೆಯೂ ಮತ್ತೆ ಮತ್ತೆ ಒಬ್ಬರ ಬಳಿಗೆ ಮತ್ತೊಬ್ಬರು ಸಹಜವಾಗಿ ಮರಳುವಂತಿರಬೇಕು. ಅಂತಹ ಸಂಬಂಧವೇ ಅರ್ಥಪೂರ್ಣವಾದದ್ದು ಎಂಬುದು ಶ್ರುತಿ ಅಭಿಪ್ರಾಯ.
ಮಾಜಿ ಪ್ರೇಮಿಯ ಜೊತೆ ಈಗಲೂ ಉತ್ತಮ ಸಂಬಂಧ!
ಇನ್ನು ತಮ್ಮ ಇತ್ತೀಚಿನ ಮಾಜಿ ಸಂಗಾತಿಯೊಂದಿಗಿನ ಸಂಬಂಧದ ಬಗ್ಗೆಯೂ ನಟಿ ಮುಕ್ತವಾಗಿ ಮಾತನಾಡಿದ್ದಾರೆ. ಆತ ಒಳ್ಳೆಯ ವ್ಯಕ್ತಿ ಹಾಗೂ ಪ್ರತಿಭಾವಂತ ಕಲಾವಿದ ಎಂದು ಮೆಚ್ಚುಗೆ ವ್ಯಕ್ತಪಡಿಸಿರುವ ಶ್ರುತಿ, ಇಬ್ಬರೂ ಈಗಲೂ ಪರಸ್ಪರ ಗೌರವದಿಂದ ನಡೆದುಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಆದರೆ, ಬ್ರೇಕಪ್ ಆದ ಬಳಿಕ ಮಾಜಿ ಪ್ರೇಮಿಗಳು ಮತ್ತೆ ಬೆಸ್ಟ್ ಫ್ರೆಂಡ್ಸ್ ಆಗಿರಲು ಸಾಧ್ಯವಿಲ್ಲ ಎಂಬುದು ತಮ್ಮ ನಂಬಿಕೆ ಎಂದು ತಿಳಿಸಿದ್ದಾರೆ. ಸಂಬಂಧ ಮುಗಿದ ಬಳಿಕವೂ ಆರೋಗ್ಯಕರ ಅಂತರ ಮತ್ತು ಮಿತಿಗಳನ್ನು ಕಾಪಾಡಿಕೊಳ್ಳುವುದು ಮುಖ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಮಾಜದ ದೊಡ್ಡ ಸಮಸ್ಯೆಯೇ ನಿರ್ಲಕ್ಷ್ಯ!
ಪ್ರೀತಿ, ಮದುವೆ ವಿಚಾರಗಳ ಜೊತೆಗೆ ಸಮಾಜದ ಬಗ್ಗೆಯೂ ಶ್ರುತಿ ಹಾಸನ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇಂದಿನ ಸಮಾಜದಲ್ಲಿ ಎಲ್ಲರೂ ತೋರಿಸುತ್ತಿರುವ ಸಾಮೂಹಿಕ ನಿರ್ಲಕ್ಷ್ಯವೇ ದೊಡ್ಡ ಸಮಸ್ಯೆ ಎಂದು ಹೇಳಿದ್ದಾರೆ. ಜಗತ್ತಿನಲ್ಲಿ ನಡೆಯುವ ದುರಂತಗಳು, ಜನರ ನೋವು ಮತ್ತು ಸಂಕಷ್ಟಗಳನ್ನು ಕಂಡರೂ ಅವುಗಳ ಬಗ್ಗೆ ಕಾಳಜಿ ತೋರಿಸದೆ ಸುಮ್ಮನೆ ಸಾಮಾಜಿಕ ಜಾಲತಾಣಗಳಲ್ಲಿ ಸ್ಕ್ರಾಲ್ ಮಾಡಿಕೊಂಡು ಹೋಗುವ ಮನೋಭಾವವನ್ನು ಟೀಕಿಸಿದ್ದಾರೆ.
ಇನ್ನು ಮಾನವೀಯ ಸಂಕಷ್ಟಗಳನ್ನು ಮತ್ತೊಂದು ಸಾಮಾನ್ಯ ಸುದ್ದಿಯಂತೆ ಪರಿಗಣಿಸಿ ಮರೆತುಬಿಡುವುದು ಸರಿಯಲ್ಲ ಎಂಬ ಸಂದೇಶ ನೀಡಿದ್ದಾರೆ. ಮದುವೆ, ಪ್ರೀತಿ, ವೈಯಕ್ತಿಕ ಸ್ವಾತಂತ್ರ್ಯ ಹಾಗೂ ಜೀವನದ ಆಯ್ಕೆಗಳ ಬಗ್ಗೆ ಶ್ರುತಿ ಹಾಸನ್ ತಮ್ಮದೇ ಆದ ಸ್ವತಂತ್ರ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಸಮಾಜದ ಸಾಂಪ್ರದಾಯಿಕ ನಿರೀಕ್ಷೆಗಳಿಗೆ ಬದ್ಧರಾಗದೆ, ತಮಗೆ ಇಷ್ಟವಾದ ರೀತಿಯಲ್ಲಿ ಬದುಕುವುದು ಮುಖ್ಯ ಎಂಬ ಅವರ ಮಾತುಗಳು ಇದೀಗ ಗಮನ ಸೆಳೆಯುತ್ತಿವೆ.














