ಬೆಂಗಳೂರು (ಜು. 20): 1972 ರಲ್ಲಿ ತೆರೆ ಕಂಡ ನಾಗರಹಾವು ಚಿತ್ರ ಯಾರಿಗೆ ತಾನೇ ಗೊತ್ತಿಲ್ಲ? ಸಾಹಸಸಿಂಹ ವಿಷ್ಣುವರ್ಧನ್, ರೆಬೆಲ್‌ಸ್ಟಾರ್ ಅಂಬರೀಶರನ್ನು ಚಿತ್ರರಂಗಕ್ಕೆ ಕೊಡುಗೆ ನೀಡಿದ ಶ್ರೇಯಸ್ಸು ಈ ಚಿತ್ರಕ್ಕೆ ಸಲ್ಲುತ್ತದೆ.

ಈ ಚಿತ್ರವನ್ನು ಇದೀಗ ನಿರ್ಮಾಪಕ ದಿ.ಎನ್. ವೀರಾಸ್ವಾಮಿ ದ್ವಿತೀಯ ಪುತ್ರ ಬಾಲಾಜಿ ವಿನೂತನ ತಂತ್ರಜ್ಞಾನ ಬಳಸಿ ಮರುಪ್ರದರ್ಶನ ಮಾಡಲು ಮುಂದಾಗಿರುವುದು ಸಿನಿ ಪ್ರಿಯರಲ್ಲಿ ಭಾರೀ ಕುತೂಹಲ ಕೆರಳಿಸಿದೆ. ನಾಗರಹಾವು ಚಿತ್ರ ಎಂದೊಡನೆ ತಟ್ಟನೆ ನೆನಪಾಗುವುದು ರಾಮಾಚಾರಿ ಪಾತ್ರ. ರಾಮಾಚಾರಿ ಪಾತ್ರದಲ್ಲಿನ ಸಿಟ್ಟು, ಸೆಡವು ಪ್ರದರ್ಶಿಸಿದ್ದ ವಿಷ್ಣುವರ್ಧನ ಭಾವಾವೇಶದ ಮಾತುಗಳು.

ರಾಮಾಚಾರಿಯ ಯುವಕನ ಪಾತ್ರಧಾರಿಯಾಗಿ ವಿಷ್ಣು ನಟಿಸಿದ್ದರೆ, ಅದರ ಬಾಲ್ಯಾವಸ್ಥೆಯ ಪಾತ್ರಧಾರಿಯಾಗಿ ನಟಿಸಿದ್ದು ಉತ್ತರ ಕರ್ನಾಟಕದ ರಂಗಭೂಮಿಯ ಕಲಾವಿದ ಎಂಬುದು ಬಹಳ ಜನರಿಗೆ ಗೊತ್ತಿಲ್ಲ. ಅಂದು ಹಾವು ಹಿಡಿದು ಓಡಿ ಹೋದ ಬಾಲನಟ ಇದೀಗ ಹಾವೇರಿ ಜಿಲ್ಲೆ ಹಂಸಬಾವಿಯಲ್ಲಿ ಪತ್ತೆಯಾಗಿದ್ದಾರೆ.  ಹೆಸರು ಹೇಮಚಂದ್ರ ಹೊಸಮನಿ. ಆತನಿಗೀಗ 60 ರ ಹರೆಯ. ಹಂಸಬಾವಿಯಲ್ಲಿ ‘ಮನೆ ಊಟ’ ಎಂಬ ಹೆಸರಿನ ಖಾನಾವಳಿ ಇಟ್ಟುಕೊಂಡು ಬದುಕು ಸಾಗಿಸುತ್ತಿದ್ದಾರೆ ಹೇಮಚಂದ್ರ!

ಪುಟ್ಟಣ್ಣ ಗುರ್ತಿಸಿದರು:

ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕಿನ ಶ್ರೀಶಾರದಾ ಸಂಗೀತ ನಾಟಕ ಮಂಡಳಿಯ ಮಾಲೀಕ ಬಸವರಾಜ ಹೊಸಮನಿ ಅವರ ಪುತ್ರ ಈ ಹೇಮಚಂದ್ರ. ಇವರ ನಾಟಕ ಮಂಡಳಿ ಊರೂರು ಅಲೆದಾಡಿ ನಾಟಕ ಪ್ರದರ್ಶನ ಮಾಡುತ್ತಿತ್ತು. ಸುಮಾರು 150 ಜನರು ಈ ನಾಟಕ ಕಂಪನಿಯಲ್ಲಿ ಆಗ ಕೆಲಸ ಮಾಡುತ್ತಿದ್ದರು, ಅವರಲ್ಲಿ ಈ ಬಾಲ ನಟನೂ ಒಬ್ಬ. ಬೆಂಗಳೂರಿನಲ್ಲಿ ಕ್ಯಾಂಪ್ ಹಾಕಿದ್ದಾಗ ಬಾಲಕನ ತಂದೆ ಬಸವರಾಜ ಅವರ ಸ್ನೇಹಿತ ಹಾಗೂ ನಿರ್ಮಾಪಕ ಎನ್. ವೀರಾಸ್ವಾಮಿ ಅವರಲ್ಲಿ ಕೆಲಸ ಮಾಡುತ್ತಿದ್ದ ಬಿ.ವಿ.ರಂಗಣ್ಣ ಅವರು ಈತನ ಕಲೆಯನ್ನು ನೋಡಿದ್ದರು.

ಅದೇ ಸಂದರ್ಭದಲ್ಲಿ ನಾಗರಹಾವು ಚಿತ್ರದಲ್ಲಿ ವಿಷ್ಣುವರ್ಧನ ಸಣ್ಣವನಿದ್ದಾಗಿನ ಪಾತ್ರಕ್ಕಾಗಿ ಬಾಲನಟನನ್ನು ನಿರ್ಮಾಪಕ ಎನ್.ವೀರಾಸ್ವಾಮಿ, ನಿರ್ದೇಶಕ ಪುಟ್ಟಣ್ಣ ಕಣಗಾಲ ಹುಡುಕಾಟ ನಡೆಸಿದ್ದರು. ನಾಗರಹಾವು ಹಿಡಿದುಕೊಂಡು ಓಡುವ ದೃಶ್ಯವನ್ನು ಬಾಲಕ ಮಾಡಬೇಕಿತ್ತು. ಆದರೆ ಇದಕ್ಕೆ ಧೈರ್ಯವಿರುವ ಬಾಲಕ ಯಾರು ಸಿಕ್ಕಿರಲಿಲ್ಲ. ಹೀಗಾಗಿ ರಂಗಣ್ಣನಿಗೆ ಈ ಬಾಲಕ ಮಾಡಬಹುದೆನ್ನಿಸಿ ಆತನನ್ನು ವೀರಾಸ್ವಾಮಿ ಅವರ ಬಳಿಗೆ ಕಳುಹಿಸಿದ್ದರಂತೆ.

ವೀರಾಸ್ವಾಮಿ ಅವರು ಹುಡುಗನನ್ನು ನೋಡಿ ಚಿತ್ರದುರ್ಗದಲ್ಲಿ ಶೂಟಿಂಗ್ ನಡೆದಿದೆ. ಅಲ್ಲಿ ಹೋಗಿ ನಿರ್ದೇಶಕರನ್ನು ಕಾಣುವಂತೆ ಹೇಳಿ ಕಳುಹಿಸಿದ್ದರು. ಚಿತ್ರದುರ್ಗಕ್ಕೆ ಹೋದಾಗ ಅಲ್ಲಿ ಶೂಟಿಂಗ್ ನಡೆಯುತ್ತಿತ್ತು. ಶೂಟಿಂಗ್ ಮುಗಿದ ಬಳಿಕ ಭೇಟಿಯಾದರಾಯಿತೆಂದು ಚಿತ್ರೀಕರಣ ವೀಕ್ಷಿಸುತ್ತಾ ಹೇಮಚಂದ್ರ ನಿಂತಿದ್ದ. ಚಿತ್ರೀಕರಣ ಮುಗಿದ ಮೇಲೆ ಈತನನ್ನು ನೋಡಿದ ಕಣಗಾಲ್ ಹತ್ತಿರಕ್ಕೆ ಕರೆದು ರಾಮಾಚಾರಿಯ ಬಾಲ್ಯದ ಪಾತ್ರ ಮಾಡುತ್ತೀಯಾ ಎಂದು ಕೇಳಿದ್ದರಂತೆ. ಇದನ್ನು ಕೇಳಿದ್ದೇ ತಡ ಹುಡುಗನಿಗೆ ಖುಷಿಯೋ ಖುಷಿ. ನಾನೇ ಅವಕಾಶ ಕೊಡಿ ಎಂದು ಕೇಳಿಕೊಂಡು ಬಂದರೆ ನಿರ್ದೇಶಕರೇ ತಾನಾಗಿಯೇ ಕೇಳುತ್ತಿದ್ದಾರೆ ಎಂದು ಸಂತಸಪಟ್ಟು ಹೂಂ ಎಂದ.

ಹಾವನ್ನೇ ಕೊಂದಿಯೆಲ್ಲೋ!:

ಮುಂದೆ ಎಂಟ್ಹತ್ತು ದಿನಗಳ ಕಾಲ ಪೂರ್ತಿ ರಾಮಾಚಾರಿಯ ಬಾಲ್ಯಾವಸ್ಥೆಯ ಚಿತ್ರೀಕರಣ. ಹೀಗೆ ಒಂದು ದೃಶ್ಯದಲ್ಲಿ ನಾಗರಹಾವನ್ನು ಹಿಡಿದುಕೊಂಡು ಓಡುವುದಿತ್ತು. ಹಾವು ಹುಷಾರು! ಎಂದು ಬಾಲಕನಿಗೆ ಚಿತ್ರೀಕರಣದ ವೇಳೆ ಕೆಲವರು ಹೆದರಿಸಿದ್ದರು. ಈ ಕಾರಣದಿಂದ ಕಚ್ಚಿತು ಎಂಬ ಭಯದಿಂದ ಬಾಲಕ ಹೇಮಚಂದ್ರ ಹಾವನ್ನು ಗಟ್ಟಿಯಾಗಿ ಹಿಡಿದುಕೊಂಡು ಸುಮಾರು ದೂರ ಓಡಿದ್ದಾನೆ. ಆ ದಿನದ ಚಿತ್ರೀಕರಣ ಮುಗಿದ ಮೇಲೆ ನೋಡಿದರೆ ಹಾವು ಕೈಯಲ್ಲೇ ಸತ್ತು ಹೋಗಿತ್ತಂತೆ. ಅದನ್ನು ಕಂಡ ಪುಟ್ಟಣ್ಣ ಕಣಗಾಲ ‘ಏನೋ ಹಾವು ಹಿಡಿದು ಓಡು ಎಂದರೆ ಅದನ್ನು ಕೊಂದೇ ಬಿಟ್ಟಿಯಲ್ಲೋ’ ಎಂದು ತಮಾಷೆ ಮಾಡಿದರು.\ ಬಳಿಕ ಮೈಸೂರಿನಿಂದ ಮತ್ತೊಂದು ಹಾವು ತರಿಸಿ ಮುಂದಿನ ಚಿತ್ರೀಕರಣ ಮಾಡಿಸಿದರು.

ನಾಲ್ಕಾರು ಸಿನಿಮಾಗಳಲ್ಲಿ ನಟನೆ:

ಮುಂದೆ ಸಂಪತ್ತಿಗೆ ಸವಾಲಿನಲ್ಲಿ ಡಾ.ರಾಜಕುಮಾರ ಅವರ ಬಾಲಾವಸ್ಥೆಯ ಪಾತ್ರಧಾರಿ, ನಂಜುಂಡ ನಕ್ಕಾಗ, ಚಾಮುಂಡೇಶ್ವರಿ ಮಹಾತ್ಮೆ, ಮೂರೂವರೆ ವಜ್ರ, ಸ್ವಯಂವರ ಹೀಗೆ ನಾಲ್ಕಾರು ಚಿತ್ರಗಳಲ್ಲಿ ಹೇಮಚಂದ್ರ ನಟಿಸಿದರು. ಬಳಿಕ ಇವರ ನಾಟಕ ಮಂಡಳಿಯೊಂದಿಗೆ ಊರೂರು ಸುತ್ತುತ್ತಿದ್ದರಿಂದ ಕೆಲವೊಂದು ಅವಕಾಶಗಳು ಇವರಿಗೆ ದಕ್ಕಲಿಲ್ಲ. ಇನ್ನು ಕೆಲವು ಅವಕಾಶಗಳನ್ನು ಇವರು ಬಿಟ್ಟುಕೊಟ್ಟರು. ನಾಟಕಗಳಿಗೆ ಬೇಡಿಕೆ ಕಡಿಮೆಯಾಗಿದ್ದರಿಂದ ನಾಟಕ ಕಂಪನಿ ಮುಚ್ಚಬೇಕಾಯಿತು.

ಕಳೆದ 16  ವರ್ಷಗಳಿಂದ ಹಾವೇರಿ ಜಿಲ್ಲೆ ಹಂಸಬಾವಿಯಲ್ಲಿ ಖಾನಾವಳಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ. ಸುಮಾರು ೫೦ಕ್ಕೂ ಹೆಚ್ಚು ನಾಟಕಗಳಲ್ಲಿ ನಟಿಸಿರುವ ಹೇಮಚಂದ್ರ, ಈಗಲೂ ಆಗೊಮ್ಮೆ ಈಗೊಮ್ಮೆ ತಮ್ಮ ತಂಡವನ್ನು ಕಟ್ಟಿಕೊಂಡು ಜಾತ್ರೆ, ಉತ್ಸವಗಳಲ್ಲಿ ಆಧ್ಯಾತ್ಮಿಕ ನಾಟಕಗಳನ್ನು ಮಾಡುತ್ತಾರೆ. ಸಸ್ಯಾಹಾರಿ ಖಾನಾವಳಿ ನಡೆಸುವ ಇವರು, ತಮ್ಮ ಖಾನಾವಳಿಯಲ್ಲಿ ಅಂಗವಿಕಲರಿಗೆ ರಿಯಾಯಿತಿ ದರದಲ್ಲಿ, ಗರ್ಭಿಣಿಯರಿಗೆ ಉಚಿತವಾಗಿ ಊಟ ನೀಡುತ್ತಿದ್ದಾರೆ. 

--ಶಿವಾನಂದ ಗೊಂಬಿ