Asianet Suvarna News Asianet Suvarna News

ಗಾಂಧೀನಗರದಲ್ಲಿ ನಾಗರ ಪಂಚಮಿ!

ನಿದ್ದೆಗಣ್ಣಿನಲ್ಲಿ ಎದ್ದು ಕಣ್ಣು ಉಜ್ಜಿಕೊಂಡಂತೆ ಕನ್ನಡ ಚಿತ್ರರಂಗ ನಿಬ್ಬೆರಗಾಗಿದೆ. ಸ್ಟಾರ್‌ಗಳು ಬೆಚ್ಚಿಬಿದ್ದಿದ್ದಾರೆ. ಇದೆಲ್ಲ ಸಾಧ್ಯವೇ ಅಂತ ಗುಣಾಕಾರ, ಭಾಗಾಕಾರ ಹಾಕಿ ಮೂಗು ಮುರಿದವರಿಗೆ ಹೊಟ್ಟೆ ತೊಳೆಸಿದಂತಾಗಿದೆ. ನಂಬಲು ಆಗುತ್ತಿಲ್ಲ ಎನ್ನುತ್ತಲೇ ಕೆಲವರು ಎದುರಿನ ಸತ್ಯಕ್ಕೆ ಸೈಲೆಂಟಾಗಿದ್ದಾರೆ.

Nagarahavu film  creates history by crossing 3 crores
Author
Bengaluru, First Published Jul 27, 2018, 11:08 AM IST

ಏಕಾಏಕಿ ಇವರೇಕೆ ಹೀಗಾಡುತ್ತಿದ್ದಾರೆ? ಅದ್ಯಾವ ಮಹಾ ಮನ್ವಂತರಕ್ಕೆ ಇಷ್ಟಗಲ ಕಣ್ಣು ಬಿಟ್ಟು ಪಿಳಿಪಿಳಿ ನೋಡುತ್ತಿದೆ ಚಿತ್ರರಂಗ? ಕಾರಣ, ಹಿಸ್ಟರಿ ರಿಪಿಟ್ ಆಗಿದೆ ! ಇಷ್ಟು ಹೇಳಿದ ಮೇಲೆ ಸದ್ಯ ಚಂದನವನದಲ್ಲಿ ಏನಾಗಿದೆ, ಆಗುತ್ತಿದೆ ಅಂತ ವಿವರಿಸಿ ಹೇಳಬೇಕಿಲ್ಲ. ಯಾಕಂದ್ರೆ ಸತ್ಯ ಕಣ್ಣೆದುರೇ ನಿಂತಿದೆ. ‘ನಾಗರ ಹಾವು’ ಅಬ್ಬರಿಸುತ್ತಿದೆ. ಬೆಳ್ಳಿತೆರೆಗೆ ಪುಟ್ಟಣ್ಣ ಕಣಗಾಲ್ ತಂದು ಬಿಟ್ಟ ನಾಗರಹಾವಿನ ಅಬ್ಬರ ಈಗ ಜೋರಾಗಿದೆ. ಭೌತಿಕವಾಗಿ ಈಗಿಲ್ಲವಾದರೂ ವಿಷ್ಣುದಾದಾನ ಮೆರವಣಿಗೆ ಹೊರಟಿದೆ. ಸಾಹಸ ಸಿಂಹನ ಸ್ಟಾರ್‌ಗಿರಿ ರಾರಾಜಿಸುತ್ತಿದೆ. ನಯಾ ನಾಗರ ಗೆದ್ದು ನಗುತ್ತಿದೆ. ಆಷಾಢದಲ್ಲೂ ಜನರು ನಾಗರಹಾವಿಗೆ ಹಾಲೆರೆದು ಸಂಭ್ರಮಿಸುತ್ತಿದ್ದಾರೆ. ಈಗಲೂ ಪುಟ್ಟಣ್ಣ, ವಿಷ್ಣುವರ್ಧನ್ ಜೋಡಿಯ ಮೋಡಿಗೆ ಮನಸೋತ ಪ್ರೇಕ್ಷಕ ವರ್ಗ ಇದಪ್ಪಾ ಅಸಲಿ ಹೀರೋ ಖದರ್.. ಎನ್ನುತ್ತಿದೆ. ಎಲ್ಲದ್ದಕ್ಕೂ ಕಾರಣ ಈ ನಯಾ ನಾಗರ ಮಹಾತ್ಮೆ.

ಹೌಸ್‌ಫುಲ್ ಬೋರ್ಡು ಬಿತ್ತು!

ಇಲ್ಲಿಗೆ ೪೬ ವರ್ಷ. ಪುಟ್ಟಣ್ಣ ಕಣಗಾಲ್ ‘ನಾಗರಹಾವು’ ಚಿತ್ರವನ್ನು ನಿರ್ದೇಶಿಸಿ, ತೆರೆಗೆ ತಂದ ವರುಷ ೧೯೭೨. ಹಲವು ಸ್ಟಾರ್‌ಗಳ ಪರಿಚಯ, ಹಲವು ಪ್ರಥಮಗಳ ದಾಖಲೆ, ಅದೆಲ್ಲ ನಾಗರಹಾವು ಸೃಷ್ಟಿಸಿದ ವಿಷಯ. ಅದೆಲ್ಲಕ್ಕೂ ಇತಿಹಾಸ ಬರೆದ ಆ ‘ನಾಗರಹಾವು’ ಈಗ ಹೊಸ ಅವತಾರದೊಂದಿಗೆ ಚಿತ್ರಮಂದಿರಕ್ಕೆ ದಾಳಿಯಿಟ್ಟಿದೆ. ಕಲರ್ ಜತೆಗೆ ೭.೧ ಸೌಂಡ್ ಎಫೆಕ್ಟ್‌ನಲ್ಲಿ ಸಂಪೂರ್ಣ ಡಿಜಿಟಲೀಕರಣಗೊಂಡಿದೆ. ಈಶ್ವರಿ ಸಂಸ್ಥೆ ಅದರ ರೀ ಕ್ರಿಯೇಷನ್ ಕೆಲಸಕ್ಕೆ ಸಾಕಷ್ಟು ಖರ್ಚು ಮಾಡಿದೆ. ಅದು ಹಾಗೆ ಹೊಸ ಅವತಾರದೊಂದಿಗೆ ಬರುತ್ತಿದೆ ಅಂದಾಗ ಅಪಸ್ವರಗಳೇನು ಕಮ್ಮಿ ಇರಲಿಲ್ಲ. ಈ ಕಾಲಕ್ಕೆ ಅದೆಲ್ಲ ಸಾಧ್ಯವೇ ಅಂತೆಂದುಕೊಂಡವರೇ ಅಧಿಕ. ಆದ್ರೆ, ನಯಾ ನಾಗರದ ಟ್ರೇಲರ್‌ನಲ್ಲಿ ಈಶ್ವರಿ ಸಂಸ್ಥೆ ದಾಖಲಿಸಿದಂತೆ ಹಿಸ್ಟರಿ ರಿಪೀಟ್ ಆಗಿದೆ. ರಾಜ್ಯಾದ್ಯಂತ ಮೊದಲ ವಾರ ‘ನಾಗರಹಾವು’ ತೆರೆ ಕಂಡಿದ್ದು ೧೫೦ ಚಿತ್ರಮಂದಿರಗಳಿಗೂ ಹೆಚ್ಚು. ಅಸಲಿಗೆ ಅಂದಿನಿಂದಲೇ ಹಾವು ಬುಸುಗುಡತೊಡಗಿತು. ಬೆಂಗಳೂರಿನಲ್ಲಿ ಮಾತ್ರವಲ್ಲ, ಅದು ರಿಲೀಸ್ ಆದ ಎಲ್ಲಾ ಕಡೆಗಳಲ್ಲೂ ವಿಷ್ಣುವರ್ಧನ್ ಅಭಿಮಾನಿ ಸಂಘಗಳು ಮೈ ಕೊಡವಿ ಎದ್ದು ನಿಂತವು. ತಮ್ಮ ನೆಚ್ಚಿನ ನಟ ವಿಷ್ಣು ದಾದಾನಿಗೆ ಜಯಕಾರ ಹಾಕಿದವು. ಹೂವು, ಹಣ್ಣು, ಪಟಾಕಿ...ಎಲ್ಲವೂ ವಿಷ್ಣುವರ್ಧನ್ ಆಳೆತ್ತರದ ಕಟೌಟ್‌ಗೆ ಸಮರ್ಪಿತವಾದವು. ಈ ಅಭಿಮಾನದ ಹೊಳೆ ಹೇಗಿತ್ತೆಂದರೆ ಚಿತ್ರದಲ್ಲಿ ರಾಮಾಚಾರಿ ಎಂಟ್ರಿಯಾದಾಗ ಸಮ್ಮೋಹನಕ್ಕೆ ಸಿಕ್ಕಂತಿತ್ತು ಆ ಪ್ರೀತಿ. ಅಸಲಿಗೆ ನಯಾ ನಾಗರದ ಅರ್ಭಟ ಅಲ್ಲಿಂದಲೇ ಶುರುವಾಯಿತು. ಬಾಕ್ಸಾಫೀಸ್ ಧೂಳಿಪಟಕ್ಕೆ ಅದೇ ಅಭಿಮಾನ ನಾಂದಿ ಹಾಡಿತು.

ಕಲೆಕ್ಷನ್ ಮೂರು ಕೋಟಿ ದಾಟಿತು!

ಒಂದಲ್ಲ ಎರಡಲ್ಲ ಅದು ತೆರೆಕಂಡ ಅಷ್ಟೂ ಚಿತ್ರ ಮಂದಿರಗಳಲ್ಲೂ ದೊಡ್ಡ ಹವಾ ಶುರುವಾಗಿದೆ. ಜನರು ಎದ್ದೇನೋ ಬಿದ್ದೇನೋ ಅಂತ ಓಡಿ ಹೋಗಿ ಚಿತ್ರವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಗಳಿಕೆಯಲ್ಲೂ ಚಿತ್ರ ಕಮಾಲ್ ಮಾಡುತ್ತಿದೆ. ಸದ್ಯಕ್ಕೆ ಈ ತನಕ ಆಗಿದ್ದು ಇಂತಿಷ್ಟೇ ಕಲೆಕ್ಷನ್ ಎನ್ನುವ ಅಂಕಿ ಅಂಶ ಹೊರಬಿದ್ದಿಲ್ಲ. ಬಾಯ್ಬಿಟ್ಟರೆ ಕಷ್ಟ ಅಂತ ಬಾಲಾಜಿ ‘ಮೌನಂ ಶರಣಂ ಗಚ್ಚಾಮಿ’ಎನ್ನುವಂತಿದ್ದಾರೆ. ಆದರೆ, ಅವರ ಮುಖದಲ್ಲಿನ ನಗು ಮಾತ್ರ, ಅಸಲಿ ಕತೆ ಹೇಳುತ್ತಿದೆ. ಈ ತನಕ ಕಲೆಕ್ಷನ್ ಮೊತ್ತ ಮೂರು ಕೋಟಿಗೂ ಅಧಿಕ ಎನ್ನುತ್ತಿವೆ ಮೂಲಗಳು. ಮತ್ತೊಂದೆಡೆ ಚಿತ್ರ ಮಂದಿರಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ವಾರಕ್ಕೆ ರಾಜ್ಯದಲ್ಲಿ ಒಟ್ಟು ಚಿತ್ರಮಂದಿರಗಳ ಸಂಖ್ಯೆ ೨೦೦ರ ಗಡಿ ತಲುಪಲಿದೆಯಂತೆ. ಎಲ್ಲಾ ಕಡೆಗಳಿಂದಲೂ ಬೇಡಿಕೆ ಶುರುವಾಗಿದೆ. ಹಾಗೇನೆ, ಹೈದರಾಬಾದ್, ಅಹಮದಾಬಾದ್‌ಗಳಲ್ಲೂ ಬಿಡುಗಡೆ ಆಗುತ್ತಿದೆ. ವಿದೇಶಕ್ಕೂ ಹಾರುತ್ತಿದೆ. ಅಮೆರಿಕ, ಆಸ್ಟ್ರೇಲಿಯಾ ಹಾಗೂ ದುಬೈಗಳಲ್ಲಿ ‘ ನಾಗರಹಾವು ’ ರಿಲೀಸ್‌ಗೆ ಸಿದ್ಧತೆ ನಡೆದಿವೆ ಎನ್ನುವುದು ಅಧಿಕೃತ ಮಾಹಿತಿ. ಇಷ್ಟಾದ್ರೆ ಇದೇನು ತಮಾಷೆಯ ಸಂಗತಿ ಅಲ್ಲ. ಹಳೇ ಸಿನಿಮಾವೊಂದು ಈ ರೀತಿಯ ಹವಾ ಸೃಷ್ಟಿಸುತ್ತಿದೆ ಅಂದ್ರೆ, ಅದು ವಿಷ್ಣು ಮೇಲಿರುವ ಅಭಿಮಾನದ ಜತೆಗೆ ಪ್ರೇಕ್ಷಕ ಮಹಾಪ್ರಭುವಿನ ಸಿನಿಮಾ ಅಭಿರುಚಿಗೂ ದಿಕ್ಸೂಚಿ!

ಅಭಿಮಾನ ಮತ್ತು ಅಭಿರುಚಿ

ಹೊಸ ಅಲೆಯಲ್ಲೂ ಜನರು ಹಳೇ ‘ನಾಗರಹಾವು’ ಚಿತ್ರವನ್ನು ಈ ಪರಿ ಯಾಕೆ ನೋಡುತ್ತಿದ್ದಾರೆ? ಪುಟ್ಟಣ್ಣ ಕಣಗಾಲ್, ವಿಜಯ ಭಾಸ್ಕರ್, ವೀರಾಸ್ವಾಮಿ, ವಿಷ್ಣುವರ್ಧನ್, ಅಂಬರೀಷ್, ಆರತಿ, ಜಯಂತಿ, ಲೀಲಾವತಿ, ಅಶ್ವತ್ಥ್, ಅಂಕಲ್ ಲೋಕನಾಥ್.. ಇತ್ಯಾದಿ. ಅಲ್ಲಿ ಹೇಳುವುದಕ್ಕೆ ಒಂದಲ್ಲ ಹಲವು ಕಾರಣಗಳಿವೆ. ಹಾಗಂತ ಬರೀ ಅಭಿಮಾನವೇ? ಅದೆಷ್ಟೋ ಜನರು ಇವತ್ತು ಫ್ಯಾಮಿಲಿ ಸಮೇತ ಚಿತ್ರಮಮಂದಿರಕ್ಕೆ ಹೋಗಿ ಸಿನಿಮಾ ನೋಡಿ ಬರುತ್ತಿದ್ದಾರೆ. ಅದಕ್ಕೆಲ್ಲ ವಿಷ್ಣುವರ್ಧನ್ ಅವರ ಮೇಲಿನ ಅಭಿಮಾನ, ಪುಟ್ಟಣ್ಣ ನಿರ್ದೇಶನ ಸಿನಿಮಾ ಎನ್ನುವ ಪ್ರೀತಿಯ ಜತೆಗೆ ಸಾಹಿತಿ ತರಾಸು ಅವರ ಕಾದಂಬರಿ ಆಧರಿಸಿ ತೆರೆಗೆ ಬಂದ ‘ನಾಗರಹಾವು ’ಚಿತ್ರಕತೆ, ಮನ ಮುಟ್ಟುವ ಹಾಡುಗಳು ಮುಂತಾದ ಸಂಗತಿಗಳೂ ಮುಖ್ಯ. ಅದು ಈಗಿನ ಸಿನಿಮಾಗಳಲ್ಲಿ ಸಿಕ್ಕಿದ್ದರೆ, ಆ ಸಿನಿಮಾಗಳನ್ನು ಜನರು ನೋಡದೆ ಇರುತ್ತಿದ್ದರಾ? ‘ನಾಗರ ಹಾವು’ ಅಬ್ಬರದೊಂದಿಗೆ ಶುರುವಾದ ಪ್ರಶ್ನೆಯಿದು. 

Follow Us:
Download App:
  • android
  • ios