ಊಟಿ(ಜು.10): ಅತ್ಯಾಚಾರ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಪಡೆದಿರುವ ಖ್ಯಾತ ನಟ ಮಿಥುನ್ ಚಕ್ರವರ್ತಿ ಪುತ್ರ ಮಹಾಕ್ಷಯ್ ಇಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.  

ಮಹಾಕ್ಷಯ್ -ಮಾದಲಸಾ ಶರ್ಮಾ ಹಸೆಮಣೆ ಏರಿದ್ದು ಊಟಿಯಲ್ಲಿನ ಹೋಟೆಲ್ ನಲ್ಲಿ ವಿವಾಹ ಕಾರ್ಯಕ್ರಮ ಸರಳವಾಗಿ ನೆರವೇರಿತು. ಕಳೆದ ಶನಿವಾರ ಊಟಿಯಲ್ಲಿನ ಮಿಥುನ್ ಚಕ್ರವರ್ತಿ ಒಡೆತನದ ಐಷಾರಾಮಿ ಹೋಟೆಲ್ ನಲ್ಲಿ ಏರ್ಪಾಡಾಗಿದ್ದ ಮದುವೆ ಕಡೆ ಕ್ಷಣದಲ್ಲಿ ರದ್ದಾಗಿತ್ತು. 

ಯುವತಿಯೊಬ್ಬರು ಮಹಾಕ್ಷಯ್ ತನ್ನನ್ನು ಮದುವೆಯಾಗುವುದಾಗಿ ವಂಚಿಸಿದ್ದಾನೆ ಎಂದು ಆರೊಪಿಸಿದ ಹಿನ್ನೆಲೆಯಲ್ಲಿ ಪೋಲೀಸರು ಮದುವೆಯನ್ನು ರದ್ದು ಮಾಡಿದ್ದರು.

ಆದರೆ ಪೋಲೀಸರು ನಿರ್ಗಮಿಸಿದ ಬಳಿಕ ರಿಜಿಸ್ಟರ್ ವಿವಾಹವಾಗಿದ್ದ ಮಹಾಕ್ಷಯ್ -ಮಾದಲಸಾ ಶರ್ಮಾ, ನ್ಯಾಯಾಲಯದಿಂದ ಜಾಮೀನು ದೊರೆತ ಬಳಿಕ ಇಂದು ಶಾಸ್ತ್ರೋಕ್ತವಾಗಿ ಮದುವೆ ಆಗಿ ದಾಂಪತ್ಯ ಜೀವನ ಪ್ರಾರಂಭಿಸಿದ್ದಾರೆ.