ನಿರ್ದೇಶಕ ರವಿ ಶ್ರೀವತ್ಸ ಮೇಲೆ ನಟಿ ಸಂಜನಾ ಮಾಡಿರುವ ಲೈಂಗಿಕ ಕಿರುಕುಳದ ಆರೋಪ ಪ್ರಕರಣ ತೀವ್ರ ಸ್ವರೂಪ ಪಡೆಯುತ್ತಿದೆ. ನಿರ್ದೇಶಕರ ಸಂಘಕ್ಕೆ ರವಿ ಶ್ರೀವತ್ಸ ದೂರು ನೀಡಿದ್ದಲ್ಲದೇ ಚಿತ್ರೀಕರಣದ ಸಂದರ್ಭದಲ್ಲಿ ಸಂಜನಾ ಚಿತ್ರ ತಂಡದ ಬಗ್ಗೆ ಆಡಿದ ಮಾತುಗಳನ್ನು ನಿರ್ದೇಶಕರ ಸಂಘಕ್ಕೆ ಸಲ್ಲಿಸಿ ಆರೋಪದಲ್ಲಿ ಹುರುಳಿಲ್ಲ ಎಂದು ಸಾಧಿಸಿದ್ದಾರೆ. ಇದನ್ನು ಪರಿಗಣಿಸಿದ ನಿರ್ದೇಶಕರ ಸಂಘ ಸಂಜನಾ ಅವರಿಗೆ ಶುಕ್ರವಾರದ ಒಳಗಾಗಿ ರವಿ ಶ್ರೀವತ್ಸ ಕ್ಷಮೆ ಕೇಳುವಂತೆ ಎಚ್ಚರಿಸಿದೆ. ಆದರೆ ಸಂಜನಾ ನಿಕ್ಷಮೆ ಕೇಳಲು ನಿರಾಕರಿಸಿದ್ದಾರೆ.
ಸಂಜನಾ ಆರೋಪ
ಬೇಕಿದ್ದರೆ ನಿರ್ದೇಶಕರ ಸಂಘದ ಕ್ಷಮೆ ಕೇಳುತ್ತೇನೆ. ನಿರ್ದೇಶಕರ ಮೇಲೆ ನನಗೆ ಭಾರಿ ಗೌರವ ಇದೆ. ಆದರೆ ರವಿ ಶ್ರೀವತ್ಸ ಆರಂಭದ ಹಂತದಲ್ಲಿ ನನಗೆ ಬೈದು, ಹೆದರಿಸಿ ಚಿತ್ರೀಕರಣ ನಡೆಸಿ ಮಾನಸಿಕ ಹಿಂಸೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ನಾನು ಅವರ ಕ್ಷಮೆ ಕೇಳುವುದಿಲ್ಲ.
- ‘ಗಂಡ ಹೆಂಡತಿ’ ಸಿನಿಮಾ ಒಪ್ಪಿಕೊಂಡಿದ್ದಾಗ ನನಗೆ ೧೬ ವರ್ಷ. ಆಗ ಸಿನಿಮಾದ ಗಂಧ ಗಾಳಿಯೇ ಗೊತ್ತಿರಲಿಲ್ಲ. ನನಗೆ ಬೈದು, ಹೆದರಿಸಿ, ಮಾನಸಿಕ ಹಿಂಸೆ ನೀಡಿ, ಚಿತ್ರೀಕರಣ ಮಾಡಲಾಯಿತು.
- ಒಂದೆರಡು ದೃಶ್ಯದಲ್ಲಿ ಮಾತ್ರ ಕಿಸ್ಸಿಂಗ್ ಸೀನ್ ಇರುತ್ತದೆ ಎಂದಿದ್ದ ನಿರ್ದೇಶಕರು, ಚಿತ್ರೀಕರಣಕ್ಕೆ ಹೋದಾಗ ವರಸೆ ಬದಲಿಸಿದರು. ಕಿಸ್ಸಿಂಗ್ ಸೀನ್‌ಗಳ ಸಂಖ್ಯೆ ಲೆಕ್ಕಕ್ಕೆ ಸಿಗದಂತಾಯಿತು.
- ‘ಗಂಡ ಹೆಂಡತಿ’ ಚಿತ್ರದ ಚಿತ್ರೀಕರಣದ ವೇಳೆ ಕ್ಯಾಮರಾ ಆ್ಯಂಗಲ್ ವಿಚಿತ್ರವಾಗಿರುತ್ತಿದ್ದವು. ನನಗೆ ಗೊತ್ತಿಲ್ಲದೆ ದೃಶ್ಯ ಸೆರೆಹಿಡಿಯಲಾಗುತ್ತಿತ್ತು.
- ಬ್ಯಾಂಕಾಕ್ ಚಿತ್ರೀಕರಣಕ್ಕೆ ಅಮ್ಮ ಕೂಡ ಬಂದಿದ್ದರು. ಆದರೆ, ಶೂಟಿಂಗ್ ವೆಚ್ಚ ಹೆಚ್ಚಾಗುತ್ತಿದೆ ಅಂತ ನೆಪ ಹೇಳಿ ಅರ್ಧದಲ್ಲೇ ವಾಪಸ್ ಕಳಿಸಿದ್ದರು.
- ಈ ಆರೋಪ ಪಬ್ಲಿಸಿಟಿಗಾಗಿ ಅಲ್ಲ. ಅಂತಹ ಪುಟಗೋಸಿ ಪಬ್ಲಿಸಿಟಿ ನನಗೆ ಬೇಕಾಗಿಲ್ಲ. ನನ್ನ ನೋವು ಬೇರೊಬ್ಬರಿಗೂ ಆಗಬಾರದು ಅನ್ನೋ ಕಾಳಜಿಯಷ್ಟೇ.
- ಚಿತ್ರೋದ್ಯಮದ ಎಲ್ಲಾ ನಿರ್ದೇಶಕರ ಬಗ್ಗೆ ಗೌರವವಿದೆ. ಆದರೆ ರವಿ ಶ್ರೀವತ್ಸ ಮೇಲೆ ನಾನು ಆರೋಪ ಮಾಡುತ್ತಿರುವುದಕ್ಕೆ ಕಾರಣ ಅವರ ವರ್ತನೆ.
ರವಿ ಶ್ರೀವತ್ಸ ತಿರುಗೇಟು
ನಾನೀಗ ಮಾಗಿದ್ದೇನೆ. 30 ವರ್ಷ ಸಿನಿಮಾ ಮಾಡಿದ್ದೇನೆ. ಮಾಲಾಶ್ರೀ ಸಿನಿಮಾಗಳನ್ನು ನಿರ್ದೇಶಿಸಿದ್ದೇನೆ. ಬೇಕಿದ್ದರೂ ಆ ಹಿರಿಯ ನಟಿಯರು ನಾನು ಎಂತಹವನು ಅಂತ ಸರ್ಟಿಫಿಕೇಟ್ ಕೊಡಲಿ. ಸಂಜನಾ ಕೊಡಬೇಕಿಲ್ಲ. ನನ್ನ ಗೌರವ ಹೋಗಿದೆ. ಅದಕ್ಕೆ ಬೆಲೆ ತೆರುವವರೆಗೂ ನಾನು ಬಿಡೋದಿಲ್ಲ.
- ‘ಗಂಡ ಹೆಂಡತಿ’ ಟೈಮಲ್ಲಿ ಅವರ ತಂಗಿ ನಿಕ್ಕಿ ಗಲ್ರಾನಿ ವಯಸ್ಸು ೧೭. ನಿಕ್ಕಿ ಅಕ್ಕ ಸಂಜನಾ ನಿಕ್ಕಿಗಿಂತ ದೊಡ್ಡವರಾಗಬೇಕಲ್ವೇ? ಬಲವಂತ ಮಾಡಿದ ಆರೋಪವೇ ಬಾಲಿಶಃ. ರವಿ ಶ್ರೀವತ್ಸ ಬೆಸ್ಟ್ ಡೈರೆಕ್ಟರ್ ಅಂತ ಅವರೇ ಹೇಳಿಕೆ ಕೊಟ್ಟಿದ್ದರು.
- ಅವರಿಗೆ ಪೂರ್ಣ ಪ್ರಮಾಣದ ಕತೆ ಹೇಳಿದ್ದೆ. ಮರ್ಡರ್ ರಿಮೇಕ್ ಅನ್ನೋದು ಅವರಿಗೆ ಗೊತ್ತಿತ್ತು. ಫೋಟೋಶೂಟ್‌ನಲ್ಲೂ ಪಾಲ್ಗೊಂಡಿದ್ದರು. ಆಗ ಪಾತ್ರಗಳಿಗೆ ಸ್ವಲ್ಪ ಬೆತ್ತಲಾಗುವುದು ಅನಿವಾರ್ಯ ಅಂತಲೂ ಅವರು ಹೇಳಿಕೆ ನೀಡಿದ್ದರು.
- ‘ರಾಜಾ ಸಿಂಹ’ ಚಿತ್ರದಲ್ಲಿ ಆಕೆ ನಟಿಸಿದ ಪರಿ, ಕ್ಯಾಮರಾ ಆ್ಯಂಗಲ್ ಹೇಗಿದೆ ಅಂತ ಅವರೇ ನೋಡಲಿ. ಬೇರೆ ಥರ ತೋರಿಸಿದ್ದರೆ ಚಿತ್ರ ಬೇರೆ ಆಗುತ್ತಿತ್ತು.
- ಅವರ ತಾಯಿ ಬ್ಯಾಂಕಾಕ್ ವಾತಾವರಣ ಹಿಡಿಸುತ್ತಿಲ್ಲ. ವಿಪರೀತ ವಾಸನೆ, ಸೆಕೆ ಹೆಚ್ಚಿದೆ ಅಂತೆಲ್ಲ ಹೇಳಿಕೊಂಡು ಬೆಂಗಳೂರಿಗೆ ವಾಪಸ್ ಬಂದರು.
- ನನ್ನ ವರ್ತನೆ ಸರಿ ಇಲ್ಲ ಅನ್ನೋದಾದ್ರೆ ಅಕ್ಟೋಬರ್ ೧೪ರವರೆಗೆ ನನ್ನೊಂದಿಗೆ ಮೆಸೇಜ್ ಮೂಲಕ ಮತ್ತು ನೇರವಾಗಿ ಸಂಪರ್ಕದಲ್ಲಿದ್ದದ್ದು ಯಾಕೆ?
- ಇಷ್ಟು ದಿನ ನಾನು ಚೆನ್ನಾಗಿದ್ದು, ಈಗ ನಾನು ಕೆಟ್ಟವನಾಗಿದ್ದರ ಹಿಂದಿನ ಕಾರಣ ಏನು? ಪಬ್ಲಿಸಿಟಿಗೆ ಈ ರೀತಿ ನನ್ನನ್ನು ಬಲಿಪಶು ಮಾಡಿದ್ದು ಎಷ್ಟು ಸರಿ?
ಗಂಡ ಹೆಂಡತಿ ಸಿನಿಮಾದ ಯಶಸ್ಸಿನ ರುಚಿಯನ್ನ ಇಡೀ ಸಿನಿಮಾ ತಂಡವೇ ಅನುಭವಿಸಿದೆ. ಆದರೆ ಈಗ ಅದೇ ಅಗುಳನ್ನ, ಊಟದ ತಟ್ಟೆಯಲ್ಲಿ ಉಗುಳುವ ಕೆಲಸ ಮಾಡುತ್ತಿರುವುದು ಸರಿಯಲ್ಲ. ಸಂಜನಾ ಮಾಡಿರುವ ಆರೋಪ ನಿರಾಧಾರ. ತಪ್ಪಿಗೆ ಅವರು ಬೆಲೆ ತೆರಬೇಕು. ರವಿ ಶ್ರೀವತ್ಸರಲ್ಲಿ ಕ್ಷಮೆ ಕೇಳಬೇಕು. ಕ್ಷಮೆ ಕೇಳದಿದ್ದರೆ ಹೋರಾಟ ಮಾಡಲಾಗುವುದು. - ನಾಗೇಂದ್ರ ಪ್ರಸಾದ್ ನಿರ್ದೇಶಕರ ಸಂಘದ ಅಧ್ಯಕ್ಷ
