ನಾಗಣ್ಣ ನಿರ್ದೇಶನದ ‘ಮುನಿರತ್ನ ಕುರುಕ್ಷೇತ್ರ’ ಬಿಡುಗಡೆಗೆ ಹತ್ತಿರವಾಗುತ್ತಿರುವ ಹೊತ್ತಿನಲ್ಲಿ ನಿಖಿಲ್‌ ಕುಮಾರ್‌ ತಮ್ಮ ಅಭಿಮನ್ಯು ಪಾತ್ರಕ್ಕೆ ಡಬ್‌ ಮಾಡಿದ್ದಾರೆ. ಈ ನಡುವೆ ಏನೆಲ್ಲ ಗುಸುಗುಸು- ಗಾಸಿಪ್‌ ಸುದ್ದಿಗಳು ಹಬ್ಬಿದ್ದು, ಆ ಎಲ್ಲದಕ್ಕೂ ನಿಖಿಲ್‌ ಅವರೇ ಇಲ್ಲಿ ಉತ್ತರಿಸಿದ್ದಾರೆ.

ಯಾಕೆ ಇಷ್ಟು ತಡವಾಗಿ ಡಬ್ಬಿಂಗ್‌ ಮಾಡುತ್ತಿದ್ದೀರಿ?

ನಾನು ಚುನಾವಣೆಯಲ್ಲಿ ಬ್ಯುಸಿ ಆಗಿದ್ದೆ. ಆ ನಂತರ ನಡೆದ ಕೆಲ ರಾಜಕೀಯ ಬೆಳವಣಿಗೆಗಳಿಂದ ನಾನು ಪಕ್ಷ ಸಂಘಟನೆಯಲ್ಲಿ ತೊಡಗಿದ್ದೆ. ಹೀಗಾಗಿ ಅಂದುಕೊಂಡ ಸಮಯಕ್ಕೆ ನನ್ನ ಪಾತ್ರಕ್ಕೆ ಡಬ್ಬಿಂಗ್‌ ಮಾಡಲಿಕ್ಕೆ ಆಗಲಿಲ್ಲ.

ಕುರುಕ್ಷೇತ್ರ ವಿವಾದಕ್ಕೆ ತೆರೆ; ಡಬ್ಬಿಂಗ್ ಶುರು ಮಾಡಿದ ನಿಖಿಲ್ ಕುಮಾರಸ್ವಾಮಿ

ಟ್ರೈಲರ್‌ನಲ್ಲಿ ನಿಮ್ಮ ಪಾತ್ರದ ಧ್ವನಿ ಕೇಳಿದ ಮೇಲೆ ಡಬ್ಬಿಂಗ್‌ ಮಾಡಲು ಬಂದಿದ್ದಾರೆ ಅನ್ನೋ ಮಾತಿದೆ?

ಖಂಡಿತ ಇಲ್ಲ. ಬೇರೆ ಯಾವುದೇ ಉದ್ದೇಶದಿಂದ ನಾನು ಡಬ್ಬಿಂಗ್‌ ತಡ ಮಾಡಿಲ್ಲ. ಆದರೂ ಟ್ರೈಲರ್‌ನಲ್ಲಿ ಪಾತ್ರಕ್ಕೆ ಕೊಟ್ಟಿರುವ ವಾಯ್‌್ಸ ಕೇಳಿದ ಮೇಲೆ ನನಗೆ ಬೇಸರವಾಯಿತು. ನನ್ನ ಪಾತ್ರಕ್ಕೆ ನನ್ನದೇ ವಾಯ್‌್ಸ ಇರಬೇಕಿತ್ತು. ಸಮಯಕ್ಕೆ ಸರಿಯಾಗಿ ಬಂದು ಡಬ್ಬಿಂಗ್‌ ಮಾಡದೆ ಇದ್ದಿದ್ದೇ ಇದಕ್ಕೆ ಕಾರಣ. ಈ ಕಾರಣಕ್ಕೆ ನಾನು ಎಲ್ಲರಲ್ಲೂ ಕ್ಷಮೆ ಕೋರುತ್ತೇನೆ.

ಅಭಿಮನ್ಯು ಪಾತ್ರ ನಿಮ್ಮ ವರೆಗೂ ಬಂದಿದ್ದು ಹೇಗೆ?

ಇಷ್ಟುಬೇಗ ನನಗೆ ಕುರುಕ್ಷೇತ್ರದಂತಹ ದೊಡ್ಡ ಚಿತ್ರದಲ್ಲಿ ಅವಕಾಶ ಸಿಗುತ್ತದೆ ಅಂತ ಭಾವಿಸಿರಲಿಲ್ಲ. ಆದರೂ ನನಗೆ ಪಾತ್ರ ಸಿಕ್ಕಿದೆ ಅಂದರೆ ಅದಕ್ಕೆ ಕಾರಣ ನಿರ್ದೇಶಕರು ಮತ್ತು ನಿರ್ಮಾಪಕರು. ಇವರಿಬ್ಬರು ಬಂದು ನನ್ನನ್ನೇ ದೃಷ್ಟಿಯಲ್ಲಿಟ್ಟುಕೊಂಡೇ ಅಭಿಮನ್ಯು ಪಾತ್ರ ರೂಪಿಸಿದ್ದೇವೆ ಎಂದಾಗ ಖುಷಿಯಿಂದ ನಾನು ಒಪ್ಪಿಕೊಂಡೆ. ಪೌರಾಣಿಕ ಚಿತ್ರ ಮಾಡಬೇಕು ಎಂಬುದು ನನ್ನ ತಂದೆ ಕನಸು ಹಾಗೂ ಡಾ ರಾಜ್‌ಕುಮಾರ್‌ ಅವರ ಪೌರಾಣಿಕ ಹಾಗೂ ಭಕ್ತಿ ಪ್ರಧಾನ ಚಿತ್ರಗಳೇ ಸ್ಫೂರ್ತಿ.

ನಿಮ್ಮ ಪಾತ್ರ ಎಷ್ಟುದಿನ ಶೂಟಿಂಗ್‌ ಮಾಡಲಾಯಿತು, ತೆರೆ ಮೇಲೆ ನಿಮ್ಮನ್ನು ನೀವು ನೋಡಿಕೊಂಡಾಗ ಏನನಿಸಿತು?

ಒಟ್ಟು 28 ದಿನ ಚಿತ್ರೀಕರಣ ಮಾಡಿದ್ದೇವೆ. ಒಂದು ತಿಂಗಳಿಗೂ ಹೆಚ್ಚು ಕಾಲ ಪೂರ್ವ ತಯಾರಿ ಮಾಡಿಕೊಳ್ಳಲಾಯಿತು. ಡಬ್‌ ಮಾಡುವಾಗ ನನ್ನ ಪಾತ್ರವನ್ನು ತೆರೆ ಮೇಲೆ ನೋಡಿ ‘ವಾವ್‌್ಹ...’ ಅನಿಸಿತು. ತುಂಬಾ ರೋಚಕವಾಗಿ ಬಂದಿದೆ. ವಿರಾಮದ ನಂತರ 20 ನಿಮಿಷಕ್ಕೂ ಹೆಚ್ಚು ಕಾಲ ಬರುವ ನನ್ನ ಪಾತ್ರದ ಸಾಹಸ ದೃಶ್ಯಗಳು ಚಿತ್ರದ ಹೈಲೈಟ್‌. ನಾನು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಾಗಿಯೇ ಸಿನಿಮಾ ಬಂದಿದೆ ಎನಿಸುತ್ತಿದೆ.

ಕುರುಕ್ಷೇತ್ರ ,ಕೆಂಪೇಗೌಡ-2 ಎರಡು ನಮ್ದೇ: ದರ್ಶನ್‌ ಅಭಿಮಾನಿಗಳು ಸಾಥ್!

ಕುರುಕ್ಷೇತ್ರ ನಿಮಗೆ ಒಡ್ಡಿದ ಸವಾಲು ಹಾಗೂ ಮರೆಯಲಾಗದ ಘಟನೆ ಏನು?

ಈಗ ಡಬ್ಬಿಂಗ್‌ ಮಾಡುವಾಗ ಕೆಲ ಪದಗಳ ಉಚ್ಛಾರಣೆ ಮಾಡುವುದು ಕಷ್ಟವಾಗುತ್ತಿದೆ. ಆದರೂ ಸಮಯ ತೆಗೆದುಕೊಂಡೇ ಡಬ್‌ ಮಾಡುತ್ತಿರುವೆ. ಅಂಬರೀಶ್‌ ಅವರ ಮುಂದೆ ನಿಂತು ನಟಿಸುವಾಗ ಭಯ ಆಯ್ತು. ಅಷ್ಟುದೊಡ್ಡ ಕಲಾವಿದರ ಮುಂದೆ ನಿಲ್ಲುವುದೇ ದೊಡ್ಡದು. ಅವರು ನನ್ನ ತಾತ ಭೀಷ್ಮ, ನಾನು ಅವರ ಮೊಮ್ಮಗನ ಪಾತ್ರ. ಅವರ ಮುಂದೆ ನಟಿಸುವುದಕ್ಕೆ ತಡವರಿಸುತ್ತಿದ್ದಾಗ ‘ನಾನು ಅಂಬರೀಶ್‌ ಅನ್ನೋದನ್ನ ಮರೆತುಬಿಡಿ. ನಾನು, ನೀವು ಇಲ್ಲಿ ಪಾತ್ರಧಾರಿಗಳು ಅಷ್ಟೆ’ ಎಂದು ನನಗೆ ಧೈರ್ಯ ತುಂಬಿದ್ದು ಮರೆಯಲಾರೆ.

ನಿಮ್ಮ ದರ್ಶನ್‌ ಅವರ ನಡುವೆ ಭಿನ್ನಾಭಿಪ್ರಾಯಗಳು, ವೈಮನಸ್ಸು ಯಾಕೆ?

ನಮ್ಮಿಬ್ಬರ ಮಧ್ಯೆ ವೈಮನಸ್ಸು ಇದೆ ಅಂತ ಹೇಳಿದ್ದು ಯಾರು? ಏನೇ ಸುದ್ದಿಗಳು ಹರಡಿದ್ದರೂ ಅದೆಲ್ಲವೂ ಸುಳ್ಳು. ಕಲಾವಿದರಾಗಿ ಅವರಿಗೂ, ನನಗೂ ಯಾವುದೇ ದ್ವೇಷ ಇಲ್ಲ. ಅವರು ನನಗಿಂತ ದೊಡ್ಡ ಕಲಾವಿದರು. ಅವರ ಮೇಲೆ ನಾನೂ ಯಾಕೆ ದ್ವೇಷ, ಭಿನ್ನಾಭಿಪ್ರಾಯ ಇಟ್ಟುಕೊಳ್ಳಲಿ? ಆದರೆ, ನನ್ನ ಬಳಿ ಅವರ ನಂಬರ್‌ ಇಲ್ಲ. ಅವರ ಬಳಿ ನನ್ನ ನಂಬರ್‌ ಇಲ್ಲದಿರಬಹುದು. ದಿನಾ ಇಬ್ಬರು ಭೇಟಿಯಾಗಿ ಮಾತನಾಡುತ್ತಿಲ್ಲ. ವೈಯಕ್ತಿಕವಾಗಿ ಕ್ಲೋಸ್‌ ಇಲ್ಲ. ಹಾಗಂತ ಅವರು ನಾನು ಶತ್ರುಗಳು ಅನ್ನೋದಕ್ಕೆ ಆಗುತ್ತದೆಯೇ? ಚಿತ್ರರಂಗಕ್ಕೆ ದರ್ಶನ್‌ ಅವರ ಕೊಡುಗೆ ದೊಡ್ಡದು.

ಹಾಗಾದರೆ ಇದುವರೆಗೂ ಇಬ್ಬರು ‘ಮುನಿರತ್ನ ಕುರುಕ್ಷೇತ್ರ’ ಕಾರ್ಯಕ್ರದ ವೇದಿಕೆಗಳಲ್ಲಿ ಕಾಣಿಸಿಲ್ಲ?

ಅದಕ್ಕೆ ಕಾರಣ ರಾಜಕೀಯ ಬೆಳವಣಿಗೆಗಳು. ಯಾಕೆಂದರೆ ಅಷ್ಟುಹೊತ್ತಿಗೆ ನನಗೆ ಜೆಡಿಎಸ್‌ನಲ್ಲಿ ಯುವ ಘಟಕದ ರಾಜ್ಯಾಧ್ಯಕ್ಷನ ಸ್ಥಾನ ಕೊಟ್ಟಿದ್ದರು. ಅದೇ ಸಮಯಕ್ಕೆ ನಡೆದ ರಾಜಕೀಯ ಬೆಳವಣಿಗೆಗಳಿಂದ ನಾನು ಬೆಂಗಳೂರಿನ ಕೋರಮಂಗಲದಲ್ಲಿ ಹಾಗೂ ಹೈದರಾಬಾದ್‌ನಲ್ಲಿ ನಡೆದ ಚಿತ್ರದ ಪ್ರಚಾರಕ್ಕೆ ಹೋಗಲಿಕ್ಕೆ ಆಗಲಿಲ್ಲ. ಆ ಕ್ಷಣಕ್ಕೆ ನನಗೆ ಪಕ್ಷಕ್ಕೆ ನಿಷ್ಠವಾಗಿರುವ ನಿರ್ಧಾರ ಕೈಗೊಂಡೆ.

ಮುಂದೆಯೂ ಹೀಗೆ ಪಕ್ಷಕ್ಕೆ ನಿಷ್ಠವಾಗುತ್ತೀರಾ ಅಥವಾ ಚಿತ್ರದ ಪ್ರಚಾರಕ್ಕೆ ಬರುತ್ತೀರಾ?

ಈಗ ಬಂದು ಮಾತನಾಡುತ್ತಿದ್ದೇನೆ ಅಂದರೆ ನಾನು ಸಿನಿಮಾ ಜತೆಗೆ ಇದ್ದೀನಿ ಎಂದರ್ಥ. ಮುಂದೆಯೂ ನಾನು ಮತ್ತು ದರ್ಶನ್‌ ಅವರು ಕುರುಕ್ಷೇತ್ರ ಚಿತ್ರದ ಪ್ರಚಾರವನ್ನು ಜಂಟಿಯಾಗಿಯೇ ಮಾಡುತ್ತೇವೆ. ಇದರಲ್ಲಿ ಅನುಮಾನ ಬೇಡ. ನಿರ್ದೇಶಕರು ಬಂದು ಎಲ್ಲಿಗೆ ಕರೆದರೂ ಬರುತ್ತೇನೆ.

ಸಿನಿಮಾ ಮತ್ತು ರಾಜಕೀಯ ಎರಡನ್ನೂ ಹೇಗೆ ನಿಭಾಯಿಸುತ್ತೀರಿ?

ಸಿನಿಮಾ ನನ್ನ ಪ್ಯಾಶನ್‌, ರಾಜಕೀಯ ಪಕ್ಷ ಕೊಟ್ಟಿರುವ ಜವಾಬ್ದಾರಿ. ಎರಡೂ ನನಗೆ ಮುಖ್ಯ. ಎಲ್ಲಿವರೆಗೂ ನನ್ನಲ್ಲಿ ಸಿನಿಮಾ ಪ್ಯಾಶನ್‌ ಜೀವಂತವಾಗಿರುತ್ತದೋ ಅಲ್ಲಿಯವರೆಗೂ ಸಿನಿಮಾ ಮಾಡುತ್ತೇನೆ. ಹಾಗಂತ ಸಿನಿಮಾಗಳಿಂದ ಸಿಗುವ ಜನಪ್ರಿಯತೆ ರಾಜಕೀಯಕ್ಕೆ ಪೂರಕವಾಗುತ್ತದೆಂಬ ಭ್ರಮೆ ನನಗೆ ಇಲ್ಲ.

ನಿಮ್ಮ ಮುಂದಿನ ಚಿತ್ರಗಳು ಯಾವುದು?

ಈಗ ಅಧಿಕೃತವಾಗಿ ಒಪ್ಪಿಕೊಂಡಿರುವುದು ಲೈಕಾ ಕಂಪನಿ ನಿರ್ಮಾಣದ ಸಿನಿಮಾ. ಕತೆ ಹಾಗೂ ನಿರ್ದೇಶಕರು ಓಕೆ ಆಗಿದ್ದಾರೆ. ಕನ್ನಡದವರೇ ನಿರ್ದೇಶಕರಾಗುತ್ತಾರೆ. ಸದ್ಯದಲ್ಲೇ ಆ ಬಗ್ಗೆ ಹೇಳುತ್ತೇನೆ. ತೆಲುಗಿನ ನಿರ್ದೇಶಕರು ಇದಕ್ಕೆ ಬರುತ್ತಿಲ್ಲ. ಕನ್ನಡದಲ್ಲೇ ಪ್ರತಿಭಾವಂತ ನಿರ್ದೇಶಕರು ಇದ್ದಾರೆ.

ಈ ಚಿತ್ರದ ನಂತರ ನಿಮ್ಮ ಸಂಸ್ಥೆಯ ನಿರ್ಮಾಣದ ಸಿನಿಮಾ ಬರುತ್ತದೆಯೇ?

ಇನ್ನೂ ಮುಂದೆ ನಮ್ಮ ಪ್ರೊಡಕ್ಷನ್‌ನಲ್ಲಿ ನಾನು ಸಿನಿಮಾ ನಿರ್ಮಿಸಲ್ಲ. ಯಾಕೆಂದರೆ ಪ್ರೊಡಕ್ಷನ್‌ ಅಂದರೆ ವಿಲನ್‌ ರೀತಿ ನೋಡುತ್ತಾರೆ. ಜತೆಗೆ ನನಗೆ ನನ್ನ ಪ್ರೊಡಕ್ಷನ್‌ನಲ್ಲಿ ಸಿನಿಮಾ ಮಾಡುವುದು ಅಷ್ಟುಸೂಕ್ತ ಅನಿಸುತ್ತಿಲ್ಲ. ಬೇರೆ ಬ್ಯಾನರ್‌ನಲ್ಲಿ ಸಿನಿಮಾ ಮಾಡುತ್ತೇನೆ.

1. ರಾಮನಗರದಲ್ಲಿ ನಡೆದ ಕರಗ ಉತ್ಸವದಲ್ಲಿ ದರ್ಶನ್‌ ಹಾಗೂ ಯಶ್‌ ನಟನೆಯ ಚಿತ್ರದ ಹಾಡುಗಳು ಹಾಡದಂತೆ ಬ್ಯಾನ್‌ ಮಾಡಿದ್ದೇವೆಂಬ ಸುದ್ದಿ ಸತ್ಯಕ್ಕೆ ದೂರವಾದದ್ದು. ಅಷ್ಟುಸಣ್ಣತನ ಪ್ರದರ್ಶಿಸುವ ಮನಸ್ಸು ನಮಗಿಲ್ಲ. ಇದಕ್ಕೆ ಯಾರಿಂದ ಬೇಕಾದರೂ ಸ್ಪಷ್ಟೀಕರಣ ಕೊಡಿಸಬಲ್ಲೆ. ನಮ್ಮ ತಂದೆ ಕೂಡ ನಿರ್ಮಾಪಕರು, ವಿತರಕರು. ಕಲಾವಿದರ ಮೇಲೆ ಅವರಿಗೆ ಗೌರವ ಇದೆ.

2. ನಾನು ಮತ್ತು ಅಭಿಷೇಕ್‌ ಈಗಲೂ ಒಳ್ಳೆಯ ಸ್ನೇಹಿತರು. ರಾಜಕೀಯ ಕಾರಣಕ್ಕೆ ನನ್ನ ಸ್ನೇಹ ದೂರ ಮಾಡಲ್ಲ. ಕಲಾವಿದರಾಗಿ ನಾವು ಜತೆಗೆ ಇರುತ್ತೇವೆ. ಹೀಗಾಗಿ ಅವರ ಮೊದಲ ಚಿತ್ರಕ್ಕೆ ನಾನು ಕೂಡ ಶುಭ ಕೋರಿದ್ದೆ.

3. ನಾನು ರಾಜಕೀಯ ಕುಟುಂಬದಿಂದ ಬಂದಿದ್ದೇನೆ ನಿಜ. ಹಾಗಂತ ಚಿತ್ರರಂಗದಲ್ಲೂ ನನ್ನ ರಾಜಕೀಯದವನು ಅಂತ ನೋಡಬೇಡಿ. ಹಾಗೆ ನೋಡುವುದರಿಂದಲೇ ತುಂಬಾ ತಪ್ಪು ಸಂದೇಶಗಳು ಹೋಗುತ್ತಿವೆ. ನನ್ನ ಕಲಾವಿದ ಅಂತ ನೋಡಿ. ನಾನೂ ಮತ್ತು ಶಾಸಕ ಮುನಿರತ್ನ ಅವರು ಈಗಲೂ ಚೆನ್ನಾಗಿದ್ದೇವೆ.

4. ನಾನು ಮದುವೆ ಆಗದೆ ಇರಲ್ಲ. ಖಂಡಿತ ಆಗುತ್ತೇನೆ. ಆದರೆ ಹೆಣ್ಣು, ಹೊನ್ನು ಮತ್ತು ಮಣ್ಣು ಹಣೆ ಮೇಲೆ ಬರೆದಿರಬೇಕು. ಲವ್‌ ಮಾಡಕ್ಕೆ ಟೈಮ್‌ ಇಲ್ಲ. ಹೀಗಾಗಿ ಮನೆಯವರು ತೋರಿಸಿದ ಹುಡುಗಿಯನ್ನು ವರಿಸುವುದಕ್ಕೆ ಕಾಯುತ್ತಿದ್ದೇನೆ.