ರಜನಿಕಾಂತ್ ಅಭಿನಯದ 'ಜೈಲರ್ 2' ಚಿತ್ರದಲ್ಲಿ ಮಂಗಳೂರಿನ ಯಶಸ್ವಿನಿ ದೇವಾಡಿಗ ಅವರು ನಟಿ ಬಾನಿ ಜೆ ಅವರ ಡ್ಯೂಪ್ ಆರ್ಟಿಸ್ಟ್ ಆಗಿ ನಟಿಸಿದ್ದಾರೆ. ಮಿಸ್ ಟೀನ್ ಸೂಪರ್ ಗ್ಲೋಬ್ ಕಿರೀಟ ಗೆದ್ದಿರುವ ಇವರು ಟಾಕ್ಸಿಕ್, ಡೆವಿಲ್ ಮುಂತಾದ ಚಿತ್ರಗಳಲ್ಲೂ ಬಣ್ಣ ಹಚ್ಚಿದ್ದಾರೆ.
ಮಂಗಳೂರು: ಯಶಸ್ವಿ ಪ್ರದರ್ಶನ ನೀಡುತ್ತಿರುವ ರಜನಿಕಾಂತ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಜೈಲರ್ 2’ ಚಲನಚಿತ್ರದಲ್ಲಿ ಮಂಗಳೂರು ಮೂಲದ ಯಶಸ್ವಿನಿ ದೇವಾಡಿಗ ಡ್ಯೂಪ್ ಆರ್ಟಿಸ್ಟ್ ಆಗಿ ನಟಿಸಿ, ಅಪರೂಪದ ಅವಕಾಶ ಪಡೆದು ಗಮನಸೆಳೆದಿದ್ದಾರೆ.
ಮಾಡೆಲ್ ಬಾನಿ ಜೆ ಅವರ ಡ್ಯೂಪ್ ಆರ್ಟಿಸ್ಟ್
ಜೈಲರ್ 2 ಚಿತ್ರದಲ್ಲಿ ಮಂಗಳೂರಿನ ಯಶಸ್ವಿನಿ ದೇವಾಡಿಗ ಅವರು ಬಾಲಿವುಡ್ ನಟಿ ಮತ್ತು ಮಾಡೆಲ್ ಬಾನಿ ಜೆ ಅವರ ಡ್ಯೂಪ್ ಆರ್ಟಿಸ್ಟ್ ಆಗಿ ನಟಿಸಿದ್ದಾರೆ. ಅವರ ಅಭಿನಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ. ಈ ಮೂಲಕ ಯಶಸ್ವಿನಿ ಅವರು ರಜನಿಕಾಂತ್, ಹೃತಿಕ್ ರೋಷನ್, ರಮ್ಯಾಕೃಷ್ಣನ್, ವಿದ್ಯಾಬಾಲನ್ ಅವರಂತಹ ಖ್ಯಾತರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.
ಯಶಸ್ವಿನಿ ಅವರು ಟಾಕ್ಸಿಕ್, ಡೆವಿಲ್, ಕಲ್ಟ್ ಸಿನೆಮಾಗಳಲ್ಲೂ ನಟಿಸಿದ್ದಾರೆ. ಡ್ಯೂಪ್ ಮಾತ್ರವಲ್ಲದೇ ಮುಖ ಪರಿಚಯದೊಂದಿಗೂ ಕೆಲ ಚಿತ್ರಗಳಲ್ಲಿ ನಟಿಸಿದ್ದಾರೆ.
ಮಿಸ್ ಟೀನ್ ಸೂಪರ್ ಗ್ಲೋಬ್ ವಿನ್ನರ್
ಯಶಸ್ವಿನಿ ದೇವಾಡಿಗ ಅವರು ಮಂಗಳೂರಿನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿ, 2023ರಲ್ಲಿ ಥಾಯ್ಲೆಂಡ್ನಲ್ಲಿ ನಡೆದ ಸ್ಪರ್ಧೆಯಲ್ಲಿ ಮಿಸ್ ಟೀನ್ ಸೂಪರ್ ಗ್ಲೋಬ್ ಕಿರೀಟ ಗೆದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದರು. ಸದ್ಯ ಬೆಂಗಳೂರಿನಲ್ಲಿ ಕಾನೂನು ಪದವಿ ವ್ಯಾಸಂಗ ಮಾಡುತ್ತಿದ್ದಾರೆ.







