ಮಲಯಾಳಂ ಚಿತ್ರರಂಗದ ಹೆಸರಾಂತ ಗಾಯಕ ಮಧು ಬಾಲಕೃಷ್ಣ ಮತ್ತೆ ಕನ್ನಡಕ್ಕೆ ಬಂದಿದ್ದಾರೆ. ‘ಆಪ್ತಮಿತ್ರ’ ಚಿತ್ರದ ‘ಕಣ ಕಣದೆ ಶಾರದೆ..’ ಹಾಡು ಹಾಡಿ ಪ್ರಸಿದ್ಧರಾಗಿದ್ದ ಗಾಯಕರೇ ಈ ಮಧು ಬಾಲಕೃಷ್ಣ.

ಕನ್ನಡದಲ್ಲಿ ಇವರು ಸಾಕಷ್ಟು ಚಿತ್ರಗಳಿಗೆ ಹಾಡಿದ್ದಾರೆ. ಅಂಬರೀಶ, ಸಿಂಹಾದ್ರಿ, ಗಂಡುಗಲಿ ಕುಮಾರ ರಾಮ ಸೇರಿ ಅವರು ಹಾಡಿದ ಚಿತ್ರಗಳ ದೊಡ್ಡ ಪಟ್ಟಿಯೇ ಇದೆ. ಇದೀಗ ಸಂಚಾರಿ ವಿಜಯ್ ಅಭಿನಯದ ‘ಮಾಯಾವಿ’ ಚಿತ್ರದ ಒಂದು ಹಾಡನ್ನು ಹಾಡಿದ್ದಾರೆ.

ಈ ಬಾರಿ ವೀಕೆಂಡ್ ವಿತ್ ರಮೇಶ್‌ಗೆ ಬರ್ತಾರೆ ಈ ಹಾಸ್ಯನಟ

‘ಚಿತ್ರದ ಸ್ಪೆಷಲ್ ಥೀಮ್ ಸಾಂಗ್ ಇದು. ಪತ್ರಕರ್ತ ಚಂದ್ರಚೂಡ್ ಸಾಹಿತ್ಯ ಬರೆದಿದ್ದಾರೆ. ಇಡೀ ಸಿನಿಮಾದ ತಿರುಳು ಹೇಳುವಂತಹ ಹಾಡು. ಅದಕ್ಕೆ ಬೇಸ್ ವಾಯ್ಸ್ ಇರುವ ಗಾಯಕರು ಬೇಕಿತ್ತು. ಆ ನಿಟ್ಟಿನಲ್ಲಿ ನಾವು ಆಲೋಚಿಸುತ್ತಿದ್ದಾಗ ತಕ್ಷಣಕ್ಕೆ ಹೊಳೆದ ಹೆಸರು ಮಧು ಬಾಲಕೃಷ್ಣ.  ಅವರನ್ನು ಭೇಟಿ ಮಾಡಿ ಬೇಡಿಕೆ ಇಟ್ಟೆವು. ಅದೃಷ್ಟ ಎನ್ನುವ ಹಾಗೆ ಅವರು ತಕ್ಷಣವೇ ಒಪ್ಪಿಕೊಂಡರು. ಅವರಿಗೆ ಅನುಕೂಲ ಆಗಲಿ ಅಂತಲೇ ಗಾಯಕ ಹೇಮಂತ್ ಧ್ವನಿಯಲ್ಲಿ ಒಂದು ಪೈಲೆಟ್ ರೆಕಾರ್ಡಿಂಗ್ ಮಾಡಿಸಿದ್ದೆವು.

ಹಾಗೆ ಕೊಟ್ಟು ಮಾತುಕತೆ ಮುಗಿಸಿಕೊಂಡು ಬಂದ ಮರುದಿವಸವೇ ಚೆನ್ನೈನಲ್ಲಿ ಸಾಂಗ್ಸ್ ರೆಕಾರ್ಡಿಂಗ್ ಕೆಲಸ ಮುಗಿಯಿತು. ಅತ್ಯದ್ಭುತವಾಗಿ ಹಾಡಿದ್ದಾರೆ. ಇಷ್ಟರಲ್ಲೇ ಅದನ್ನು ಯುಟ್ಯೂಬ್ ಮೂಲಕ ಬಿಡುಗಡೆ ಮಾಡುತ್ತಿದ್ದೇವೆ’ ಎನ್ನುತ್ತಾರೆ
ನಿರ್ದೇಶಕ ನವೀನ್ ಕೃಷ್ಣ. ದಿವಂಗತ ಎಲ್.ಎನ್. ಶಾಸ್ತ್ರಿ ಅವರ ಸಂಗೀತ ಈ ಚಿತ್ರಕ್ಕಿದೆ.