ಸದ್ದಿಲ್ಲದೇ ಶುರುವಾದ ಸಿನಿಮಾದಂತೆ ತಣ್ಣಗಿದ್ದ ‘ಮಂಡ್ಯ ಲೋಕಸಭಾ ಕ್ಷೇತ್ರ’ ಎಂಬ ಸಿನಿಮಾ ಸದ್ಯಕ್ಕೆ ಮಲ್ಟಿಸ್ಟಾರ್ ಸಿನಿಮಾದಂತೆ ಕಾಣಿಸುತ್ತಿದೆ. ಮೊನ್ನೆ ಮೊನ್ನೆಯ ತನಕ ಮದರ್ ಕ್ಯಾರೆಕ್ಟರ್ ಸುಮಲತಾ ಏಕಾಂಗಿಯಾಗಿ ನಿಂತಿದ್ದರೆ,
ನಿಖಿಲ್ ನಾನು ನಮ್ಮಪ್ಪನ ವಿಸಿಟಿಂಗ್ ಕಾರ್ಡು ಎಂಬ ಧೋರಣೆಯಲ್ಲಿ ಕಣದಲ್ಲಿದ್ದರು.

ಈಗ ಕಹಾನಿ ಮೇ ಟ್ವಿಸ್ಟ್ ಆಗಿಬಿಟ್ಟು ಸುಮಲತಾ ಸಿನಿಮಾ ಮಲ್ಟಿ ಸ್ಟಾರ್ ಸಿನಿಮಾ ಆಗಿಬಿಟ್ಟಿದೆ. ಎಡಕ್ಕೆ ದರ್ಶನ್, ಬಲಕ್ಕೆ ಯಶ್, ಬಾಹ್ಯ ಬೆಂಬಲಕ್ಕೆ ಸುದೀಪ್, ಸಪೋರ್ಟಿಗೆ ದೊಡ್ಡಣ್ಣ ಮುಂತಾದ ಸಪೋರ್ಟಿಂಗು ಸ್ಟಾರುಗಳು ಸೇರಿಕೊಂಡು ರಾಕ್ ಲೈನ್ ವೆಂಕಟೇಶ್‌ರಂಥ ಕೋಟಿ ನಿರ್ಮಾಪಕರ ಬೆಂಬಲವೂ ಸಿಕ್ಕಿದ ಮೇಲೆ ಸುಮಲತಾ ಪಂಚಭಾಷೆಗಳಲ್ಲಿ ತೆರೆಕಾಣುವ ಸಿನಿಮಾದ ಪ್ರಚಾರಕ್ಕಿಂತ ಜೋರಾಗಿ ಪ್ರಚಾರ ಶುರುಮಾಡುವುದರಲ್ಲಿ ಸಂದೇಹವೇ ಇಲ್ಲ. ಸುಮಲತಾ ಜೊತೆಗೆ ಮರಿರೆಬೆಲ್ ಸ್ಟಾರ್ ಅಭಿಷೇಕ್ ಕೂಡ ಇದ್ದಾರೆ.

ಈಗ ಚಿತ್ರರಂಗದ ಮುಂದಿರುವ ಪ್ರಶ್ನೆ ಇದು: ಈ ಚುನಾವಣೆಯಿಂದ ಚಿತ್ರರಂಗ ಎರಡು ಭಾಗ ಆಗಲಿದೆಯಾ? ಯಾರು ಯಾರ ಪರ ಪ್ರಚಾರಕ್ಕೆ ಹೋಗುತ್ತಾರೆ. ಸುಮಲತಾ ಪರವಾಗಿ ಚಿತ್ರರಂಗದ ಮೂವರು ನಾಯಕನಟರು ನಿಂತಿದ್ದಾಗಿದೆ. ಈಗ ಮಿಕ್ಕವರು ಯಾರ ಪರ ವಹಿಸುತ್ತಾರೆ? ಎಚ್‌ಡಿಕೆ ಕೂಡ ಚಿತ್ರರಂಗದಿಂದಲೇ ಬಂದವರು ಆಗಿರುವುದರಿಂದ ಅವರಿಗೂ ಸಾಕಷ್ಟು ಮಿತ್ರರು ಚಿತ್ರರಂಗದಲ್ಲಿದ್ದಾರೆ. ಅವರಲ್ಲಿ ಯಾರು ನಿಖಿಲ್ ಜೊತೆಗೆ ನಿಲ್ಲುತ್ತಾರೆ?

ಹಾಗೆ ನೋಡಿದರೆ ಸಿನಿಮಾದವರೇ ಸಿನಿಮಾದವರನ್ನು ಎದುರಿಸುತ್ತಿರುವ ಕಷ್ಟದ ಪರಿಸ್ಥಿತಿ ಬಂದದ್ದು ಇದೇ ಮೊದಲು. ಹಾಗೆ ನೋಡಿದರೆ ಮಂಡ್ಯಕ್ಕೆ ಮೊದಲಿನಿಂದಲೂ ಚಿತ್ರರಂಗದ ನಂಟು. ಮೂರು ಬಾರಿ ಅಂಬರೀಷ್ ಗೆದ್ದ ಕ್ಷೇತ್ರದಿಂದ ರಮ್ಯ ಕೂಡ ಸ್ಪರ್ಧಿಸಿ ಗೆದ್ದಿದ್ದರು. ಈಗ ಮತ್ತೆ ಚಿತ್ರರಂಗದ ಪಾಲಾಗಿದೆ ಮಂಡ್ಯ.

ಸುಮಲತಾ ಪರವಾಗಿ ಚಿತ್ರರಂಗದ ಅನೇಕರು ಬ್ಯಾಟಿಂಗ್ ಶುರುಮಾಡಿದ್ದಾರೆ. ದರ್ಶನ್ ಆರಂಭದಿಂದಲೇ ಜತೆಗಿದ್ದರು. ದರ್ಶನ್ ಇದ್ದ ಮೇಲೆ ಬೇರೆ ಯಾರೂ ಬೇಕಿಲ್ಲ ಎಂದು ಹೇಳಿರುವ ಸುದೀಪ್ ತಾವೂ ಜೊತೆಗಿದ್ದೇವೆ ಎಂದು ಸೂಚ್ಯ ವಾಗಿ ಹೇಳಿದ್ದಾರೆ. ಯಶ್ ಬಹಿರಂಗವಾಗಿಯೇ ಬೆಂಬಲ ಘೋಷಿಸಿದ್ದಾರೆ. ದೊಡ್ಡಣ್ಣ ಜೊತೆಯಾಗಿದ್ದಾರೆ. ಕಲಾವಿದರ ಸಂಘವೇ ಅವರ ಜತೆಗಿರುವಂತೆ ಕಾಣಿಸುತ್ತಿದೆ. ನಿರ್ದೇಶಕಿ ಸುಮನ್ ಕಿತ್ತೂರು ಕೂಡ ಸುಮಲತಾಗೆ ಜೈ ಎಂದಿದ್ದಾರೆ. ಜೈಜಗದೀಶ್, ವಿಜಯಲಕ್ಷ್ಮಿ ಸಿಂಗ್ ಸುಮಲತಾ ಜೊತೆಗಿದ್ದಾರೆ.

ಸದ್ಯಕ್ಕೆ ಮೌನವಾಗಿರುವ ಭಾರತಿ ವಿಷ್ಣುವರ್ಧನ್ ಕೂಡ ಸುಮಲತಾ ಪರವಾಗಿ ಮಾತಾಡಬಹುದು ಎಂಬ ನಿರೀಕ್ಷೆಯಿದೆ. ನಾಯಕಿಯರ ಪೈಕಿ ಹರಿಪ್ರಿಯಾ ಇತ್ತೀಚೆಗಷ್ಟೇ ಸುಮಲತಾ ಜೊತೆಗೆ ನಟಿಸಿದ್ದಾರೆ. ಅವರ ಬೆಂಬಲ ಅತ್ತಕಡೆ ಸರಿಯುವ ಸಾಧ್ಯತೆ ಹೆಚ್ಚು. ಪ್ರಕಾಶ್ ರೈ ಸುಮಲತಾ ಪರವಾಗಿ ಮಾತಾಡಿದ್ದಾರೆ.

ಸದ್ಯಕ್ಕೆ ನ್ಯೂಟ್ರಲ್ ಆಗಿರುವ ಶಿವಣ್ಣ, ಪುನೀತ್, ಧ್ರುವ ಸರ್ಜಾ ಬೆಂಬಲ ಯಾರಿಗಿರುತ್ತದೆ ಅನ್ನುವುದು ಚಿತ್ರರಂಗದ ಕುತೂಹಲ. ಗಣೇಶ್ ಬೆಂಬಲ ಸುಮಲತಾ ಅವರಿಗೇ ಅನ್ನುವುದರಲ್ಲಿ ಅನುಮಾನ ಬೇಕಿಲ್ಲ. ಬಿಜೆಪಿ ಅವರನ್ನು ಬೆಂಬಲಿಸುವ ಮಾತು ಕೊಟ್ಟಿದೆ. ಮುನಿರತ್ನಂ ಏನು ಮಾಡುತ್ತಾರೆ ಅನ್ನುವುದು ಕೂಡ ಕುತೂಹಲಕಾರಿ. ನಿಖಿಲ್ ಸಿನಿಮಾ ನಾಯಕಿ ರಚಿತಾ ರಾಮ್ ತನ್ನ ನಾಯಕನ ಜೊತೆ ಕೈ ಜೋಡಿಸುತ್ತಾರಾ ಸ್ಪಷ್ಟವಿಲ್ಲ!

ಈ ಯುದ್ಧ ಸಿನಿಮಾ ಸ್ಟಾರ್ ವರ್ಸಸ್ ಪೊಲಿಟಿಕಲ್ ಸ್ಟಾರ್ ಎಂಬಂತಾಗಿದೆ. ಇಲ್ಲಿ ಸಿನಿಮಾ ದಿಗ್ಗಜರಿದ್ದರೆ ಅತ್ತ ದೇವೇಗೌಡರಿದ್ದಾರೆ. ಇತ್ತ ಸಿನಿಮಾ ರಂಗವಿದೆ. ಅತ್ತ ಸರ್ಕಾರವಿದೆ. ಇಲ್ಲಿ ಮದರ್ ಸೆಂಟಿಮೆಂಟ್ ಇದೆ. ಅಲ್ಲಿ ಮಗನ ಸೆಂಟಿಮೆಂಟ್ ಇದೆ.