ಬೆಂಗಳೂರು (ಜ.04):  ಕಳೆದ ವರ್ಷ ಟೂ ಆ್ಯಂಡ್‌ ಆಫ್‌ ಸೆಂಚುರಿ ಬಾರಿಸಿತು ಚಿತ್ರರಂಗ. ಅರ್ಥಾತ್  ಬರೋಬ್ಬರಿ 250 ಸಿನಿಮಾಗಳು ಬಂದು ತೆರೆಗಪ್ಪಳಿಸಿವೆ. ಕ್ರಿಕೆಟ್‌ ದೇವರು ಸಚಿನ್‌ ತೆಂಡೂಲ್ಕರ್‌ ಮ್ಯಾಚ್‌ ಮುಗಿಯುತ್ತಿರುವಾಗ ಹಠಕ್ಕೆ ಬಿದ್ದವರಂತೆ ಎರ್ರಾಬಿರ್ರಿಯಾಗಿ ರನ್‌ ಮಾಡುವಂತೆ ಗಾಂಧಿನಗರದ ನಿರ್ಮಾಪಕರೂ ವರ್ಷದ ಕೊನೆ ಕೊನೆಗೆ ವಾರಕ್ಕೆ ಐದು, ಐರು, ಏಳರಂತೆ ಸಿನಿಮಾಗಳನ್ನು ಬಿಡುಗಡೆ ಮಾಡಿದರು.

‘ಪ್ರೇಕ್ಷಕರೇ ನಾವಿಷ್ಟುಸಿನಿಮಾ ಮಾಡಿದ್ದೇವೆ, ನೀವೆಷ್ಟುನೋಡಿದ್ದೀರಿ’ ಎಂದು ಕೇಳುವ ಗೋಜಿಗೂ ಹೋಗದೆ ಬಿಡುಗಡೆಯ ಜಾತ್ರೆ ಮಾಡಿಕೊಂಡಿತು ಚಿತ್ರರಂಗಕ್ಕೆ. ಆದರೆ, ಇಷ್ಟುದೊಡ್ಡ ಸಂಖ್ಯೆಯಲ್ಲಿ ಸಿನಿಮಾಗಳು ಬಂದಾಗ ಸಾಮಾನ್ಯವಾಗಿ ಇರಲ್ಲಿ ಸ್ಟಾರ್‌ ನಟರ ಸಿನಿಮಾಗಳದ್ದೇ ದೊಡ್ಡ ಸೌಂಡು ಇರುತ್ತದೆಂಬುದು ಬಹುತೇಕರ ನಂಬಿಕೆ. ಆದರೆ, ಅಂಥ ಯಾವ ಪವಾಡವೂ 2018ರಲ್ಲಿ ನಡೆಯಲಿಲ್ಲ.

ಒಂದಿಬ್ಬರು ಸ್ಟಾರ್‌ ನಟರ ಹೊರತಾಗಿ ಕಳೆದ ವರ್ಷ ಕನ್ನಡದ ಅಷ್ಟೂಸ್ಟಾರ್‌ಗಳು ಸಾಮೂಹಿಕ ರಜೆ ಮೇಲೆ ನಾಪತ್ತೆಯಾಗಿದ್ದು, ಗಾಂಧಿನಗರದ ಕಡೆ ಮುಖ ಮಾಡಿಲ್ಲ. ಆ ಒಂದಿಬ್ಬರ ಪೈಕಿ ಬಂದ ಸುದೀಪ್‌ ಹಾಗೂ ಶಿವಣ್ಣ ನಿರಾಸೆ ಮೂಡಿಸಿದರು ಎಂಬುದು ಅವರ ಅಭಿಮಾನಿಗಳೇ ತೋಡಿಕೊಳ್ಳುವ ಬೇಸರ. ಅಲ್ಲಿಗೆ 2018 ಎಂಬುದು ಎಂಬುದು ಸ್ಟಾರ್‌ ನಟರ ಪಾಲಿಗೆ ಔಟ್‌ ಆಫ್‌ ರೀಚೇಬಲ್‌ ಆಗಿತ್ತು! ಕಳೆದ ವರ್ಷ ಹೀಗೆ ನಾಪತ್ತೆಯಾದವರಂತೆ ಕಂಡವರು 2019ರಲ್ಲಿ ‘ನಮ್ದೆ ಹವಾ...’ ಎನ್ನುವುದಕ್ಕೆ ಶುರು ಮಾಡುತ್ತಿದ್ದಾರೆ.

ಒಂದು ರೀತಿಯಲ್ಲಿ ಸುಧೀರ್ಘ ರಜೆ ಮುಗಿಸಿಕೊಂಡು ಶಾಲೆಗೆ ಮರಳಿ ಬರುವ ಮಕ್ಕಳಂತೆ ಬಿಗ್‌ಸ್ಟಾರ್‌ಗಳು ಥಿಯೇಟರ್‌ಗಳಿಗೆ ಕ್ಯೂ ಕಟ್ಟಿದ್ದಾರೆ. ಹಾಗಂತ ಇಡೀ ವರ್ಷ ಪೂರ್ತಿ ಸ್ಟಾರ್‌ಗಳು ಇರುತ್ತಾರೆಯೇ ಎನ್ನುವ ಕುತೂಹಲದ ಜತೆಗೆ ಈಗಷ್ಟೆಆಗಮಿಸಿರುವ ಹೊಸ ವರ್ಷದ ಮುಕ್ಕಾಲು ಪಾಲು ಸ್ಟಾರ್‌ ನಟರಿಗೇ ಮೀಸಲು ಎನ್ನುವಂತೆ ಅವರ ನಟನೆಯ ಸಿನಿಮಾಗಳು ಸಾಲಿನಲ್ಲಿ ನಿಂತಿವೆ.

ಅಲ್ಲಿಗೆ ತಮ್ಮ ನೆಚ್ಚಿನ ನಾಯಕ ನಟರು ತೆರೆ ಮೇಲೆ ರಂಗೇರಲಿದ್ದು, ತಾವು ಕಣ್ಣು ತುಂಬಿಕೊಳ್ಳಬಹುದು ಎನ್ನುವ ಮಹಾನ್‌ ಸಂಭ್ರಮದಲ್ಲಿ ಆಯಾ ನಟರ ಅಭಿಮಾನಿಗಳ ಸಂಭ್ರಮ ಅವರಲ್ಲಿ ಈಗಲೇ ಮನೆ ಮಾಡಿದೆ.

ಹಾಗೆ ನೋಡಿದರೆ ಜನವರಿಯಿಂದಲೇ ಕನ್ನಡ ಚಿತ್ರರಂಗದಲ್ಲಿ ಸ್ಟಾರ್‌ ನಟರ ಜಾತ್ರೆ ದೊಡ್ಡ ಮಟ್ಟದಲ್ಲೇ ಆಯೋಜನೆಗೊಳ್ಳುತ್ತಿದೆ. ಈ ಜಾತ್ರೆಯ ಮೊದಲ ಉದ್ಘಾಟರಾಗಿ ಬರುತ್ತಿರುವುದು ಶಿವರಾಜ್‌ಕುಮಾರ್‌. ಹೌದು ಸೆಂಚುರಿ ಸ್ಟಾರ್‌ ಶಿವಣ್ಣ ತಮ್ಮ ಅಭಿನಯದ ‘ಕವಚ’ ಚಿತ್ರದ ಮೂಲಕ ತಮ್ಮ ಸಮಾನ ಮನಸ್ಕರ ಅಂದರೆ ಸ್ಟಾರ್‌ ಹೀರೋಗಳಿಗೆ ಬಾಗಿಲು ತೆರೆಯಲಿದ್ದಾರೆ. ಹೀಗೆ ಒಬ್ಬರಿಂದ ವರ್ಷದ ಮೊದಲ ತಿಂಗಳು ಶುರುವಾದರೆ ಫೆಬ್ರವರಿಯಲ್ಲಿ ಮೂರು ಸ್ಟಾರ್‌ಗಳು ಸರದಿಯಂತೆ ನೋಡುಗರ ಮುಂದೆ ಪ್ರತ್ಯೇಕ್ಷಗೊಳ್ಳುತ್ತಿದ್ದಾರೆ.

ದರ್ಶನ್‌ (ಯಜಮಾನ), ಪುನೀತ್‌ ರಾಜ್‌ಕುಮಾರ್‌ (ನಟಸಾರ್ವಭೌಮ), ಉಪೇಂದ್ರ (ಐ ಲವ್‌ ಯೂ) ಅವರು ಸ್ಟಾರ್‌ಗಳ ಜಾತ್ರೆಯನ್ನು ಮತ್ತಷ್ಟುರಂಗೇರಿಸಲಿದ್ದಾರೆ. ಫೆಬ್ರವರಿ ಮತ್ತು ಮಾಚ್‌ರ್‍ ತಿಂಗಳನ್ನು ಈ ಮೂವರು ಸ್ಟಾರ್‌ಗಳು ತಮ್ಮದಾಗಿಸಿಕೊಂಡರೆ ಏಪ್ರಿಲ್‌ನಲ್ಲಿ ಮತ್ತೆ ಶಿವಣ್ಣ ಹಾಜರಿ ಹಾಕಲಿದ್ದಾರೆ.

ರವಿವರ್ಮ ನಿರ್ದೇಶನದ ‘ರುಸ್ತುಂ’ ಮೂಲಕ ಎಂಟ್ರಿಯಾಗಲಿದ್ದಾರೆ. ಶಿವಣ್ಣನ ಈ ಎಂಟ್ರಿಯನ್ನು ಈಗಾಗಲೇ ನಿರ್ದೇಶಕರೇ ಖಚಿತ ಪಡಿಸಿದ್ದಾರೆ. ಸೆಂಚುರಿ ಸ್ಟಾರ್‌ ಬಂದು ಹೋಗುತ್ತಿದ್ದಂತೆಯೇ ಸುದೀಪ್‌(ಪೈಲ್ವಾನ್‌), ದರ್ಶನ್‌ (ಕುರುಕ್ಷೇತ್ರ) ಕೂಡ ಪ್ರತ್ಯಕ್ಷಗೊಳ್ಳಲಿದ್ದಾರೆ. ಇವರಿಬ್ಬರು ಜತೆಯಾಗಿ ಮೇ ಅಥವಾ ಜೂನ್‌ ತಿಂಗಳಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ.

ಇವರೊಂದಿಗೆ ಇನ್ನೂ ಡೇಟ್‌ ಫಿಕ್ಸ್‌ ಮಾಡಿಕೊಳ್ಳದಿದ್ದರೂ ಇದೇ ವರ್ಷ ನಾವೂ ಕೂಡ ಬರುತ್ತಿದ್ದೇವೆÜ ಎನ್ನುತ್ತಿರುವುದು ಶ್ರೀಮುರಳಿ(ಭರಾಟೆ), ರಕ್ಷಿತ್‌ ಶೆಟ್ಟಿ(ಅವನೇ ಶ್ರೀಮನ್ನಾರಾಯಣ, ಚಾರ್ಲಿ), ಗಣೇಶ್‌ (ಗಿಮಿಕ್‌, ಗೀತಾ), ಧ್ರುವ ಸರ್ಜಾ (ಪೊಗರು) ಅವರು ಇದೇ ವರ್ಷ ಸದ್ದು ಮಾಡಲಿದ್ದಾರೆ. ಅಲ್ಲಿಗೆ ಕಳೆದ ವರ್ಷ ಹೆಚ್ಚು ಕಮ್ಮಿ ರಜೆ ಮೇಲೆ ಹೋದವರಿಂದ ಅಭಿಮಾನಿಗಳಿಂದ ದೂರ ಉಳಿದಿದ್ದ ಸ್ಟಾರ್‌ಗಳು 2019ರಲ್ಲಿ ಕನ್ನಡ ಚಿತ್ರರಂಗವನ್ನು ರಂಗೇರಿಸಲಿದ್ದಾರೆ.

ಮ್ಯಾನ್‌ ಆಫ್‌ ದಿ ಮ್ಯಾಚ್‌ ಯಾರು?

ಈ ಕುತೂಹಲಕ್ಕೆ ನೇರ ಉತ್ತರ ಶಿವರಾಜ್‌ಕುಮಾರ್‌. ಅವರ ನಟನೆಯ ನಾಲ್ಕು ಚಿತ್ರಗಳು ಇದೇ ವರ್ಷ ತೆರೆಗೆ ಬರುವ ಸಾಧ್ಯತೆಗಳಿವೆ. ಕವಚ, ರುಸ್ತುಂ, ದ್ರೋಣ ಹಾಗೂ ಆನಂದ್‌ ಚಿತ್ರಗಳು ಇದೇ ವರ್ಷ ಬಿಡುಗಡೆಯಾಗುತ್ತಿದೆ. ಬಹುತೇಕ ಸ್ಟಾರ್‌ಗಳದ್ದು ಒಂದು ಅಥವಾ ಎರಡು ಸಿನಿಮಾಗಳು ಬಿಡುಗಡೆಯಾದರೆ ನೂರರ ಸರದಾರ ಶಿವಣ್ಣ ಮಾತ್ರ ನಾಲ್ಕು ಚಿತ್ರಗಳನ್ನು ಅವರ ಅಭಿಮಾನಿಗಳಿಗೆ ಕೊಡಲಿದ್ದಾರೆ. ದರ್ಶನ್‌ ಅವರೂ ಸಹ ಮೂರು ಚಿತ್ರಗಳನ್ನು ತೆರೆಗೆ ತರಲಿದ್ದಾರೆ. ರಕ್ಷಿತ್‌ ಶೆಟ್ಟಿಅವರು ಎರಡು ಚಿತ್ರಗಳನ್ನು ಕೊಡಲಿದ್ದಾರೆ. ಹೀಗೆ ಯಾರೂ ಎಷ್ಟೇ ಚಿತ್ರಗಳು ಕೂಟ್ಟರೂ ಶಿವಣ್ಣ ಅವರದ್ದೇ ಸಂಖ್ಯೆಯಲ್ಲಿ ಮೇಲುಗೈ!

ಅರ್ಧ ವರ್ಷಕ್ಕೆ ಖಾಲಿ!

2019ರಲ್ಲೂ ವರ್ಷಾ ಪೂರ್ತಿ ಸ್ಟಾರ್‌ಗಳು ಚಿತ್ರರಂಗವನ್ನು ಆಳುವುದು ಅಸಾಧ್ಯ. ಯಾಕೆಂದರೆ ಈಗಾಗ ಈಗಾಗಲೇ ಆಯಾ ಚಿತ್ರಗಳ ಬಿಡುಗಡೆ ದಿನಾಂಕ ನೋಡದರೆ ಅರ್ಧ ವರ್ಷಕ್ಕೆ ಸ್ಟಾರ್‌ಗಳು ಬಂದು ಹೋಗಲಿದ್ದಾರೆ. ಜನವರಿಂದ ಶುರುವಾಗಿ ಜೂನ್‌ ಅಥವಾ ಜುಲೈ ತಿಂಗಳ ಹೊತ್ತಿಗೆ ಎಲ್ಲ ಸ್ಟಾರ್‌ಗಳು ಚಿತ್ರಮಂದಿರಕ್ಕೆ ಬಂದು ಹೋಗಲಿದ್ದಾರೆ. ಆದರೆ, ಡಿಸೆಂಬರ್‌ನಲ್ಲಿ ರಕ್ಷಿತ್‌ ಶೆಟ್ಟಿ(ಚಾರ್ಲಿ), ಆಗಸ್ಟ್‌ ನಂತರ ಸುದೀಪ್‌ (ಕೋಟಿಗೊಬ್ಬ 3) ಬರುವ ಸಾಧ್ಯತೆಗಳ ಹೊರತಾಗಿ ಮಿಕ್ಕ ಎಲ್ಲ ಸ್ಟಾರ್‌ಗಳು ಅರ್ಧ ವರ್ಷಕ್ಕೆ ತಮ್ಮ ಆಟವನ್ನು ಮುಕ್ತಾಯ ಮಾಡಲಿದ್ದಾರೆ. ಬಹುಶಃ ಆಗಸ್ಟ್‌ ತಿಂಗಳ ನಂತರ ನವತಾರೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ದೊರೆಯಲಿದೆ.

ಮೊದಲ ಬಿಡುಗಡೆಯ ಸಂಭ್ರಮ

ಅಂದಹಾಗೆ ಈ ವರ್ಷ ಮೂರು ಸಿನಿಮಾ ಕುಟುಂಬಗಳಿಂದ ಮೂವರು ನವತಾರೆಗಳು ತಮ್ಮ ಸ್ಟಾರ್‌ಗಿರಿ ಪರೀಕ್ಷೆಗೆ ಇಳಿದಿದ್ದಾರೆ. ಅಂಬರೀಶ್‌ ಪುತ್ರ ಅಭಿಷೇಕ್‌ (ಅಮರ್‌), ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಾಸ್‌ (ಪಡ್ಡೆಹುಲಿ), ರಾಮ್‌ಕುಮಾರ್‌ ಪುತ್ರ ಧೀರನ್‌ ರಾಮ್‌ಕುಮಾರ್‌ (ದಾರಿ ತಪ್ಪಿದ ಮಗ) ಅವರ ಚಿತ್ರಗಳು ಇದೇ 2019ಕ್ಕೆ ತೆರೆಗೆ ಬರಲಿದ್ದು, ಇವರು ಮುಂದಿನ ಸ್ಟಾರ್‌ ನಟರಾಗಲಿದ್ದಾರೆಯೇ? ಎಂಬುದು ಸದ್ಯದ ಲೆಕ್ಕಾಚಾರಗಳು.

- ಆರ್. ಕೇಶವಮೂರ್ತಿ