ಹಾಲಿವುಡ್ ನಟ ಅರ್ನಾಲ್ಡ್ ಶ್ವಾರ್ಜಿನೆಗ್ಗರ್ 'ಕಿಂಗ್ ಕೋನಾನ್' ಸೀಕ್ವೆಲ್ 2027ರಲ್ಲಿ ಶುರುವಾಗಲಿದೆ ಎಂದು ಖಚಿತಪಡಿಸಿದ್ದಾರೆ. ಕ್ರಿಸ್ಟೋಫರ್ ಮೆಕ್ವಾರಿ ಈ ಚಿತ್ರವನ್ನು ಬರೆದು ನಿರ್ದೇಶಿಸಲಿದ್ದಾರೆ. ವಯಸ್ಸಾದ, ರಾಜನಾಗಿ ಸುಖವಾಗಿದ್ದ ಕೋನಾನ್‌ನನ್ನು ಶತ್ರುಗಳು ಟಾರ್ಗೆಟ್ ಮಾಡುವುದೇ ಈ ಚಿತ್ರದ ಕಥೆ.
ಹಾಲಿವುಡ್‌ನ ಆ್ಯಕ್ಷನ್ ಹೀರೋ ಅರ್ನಾಲ್ಡ್ ಶ್ವಾರ್ಜಿನೆಗ್ಗರ್, ತಮ್ಮ ಫೇಮಸ್ ಸಿನಿಮಾ 'ಕೋನಾನ್ ದಿ ಬಾರ್ಬೇರಿಯನ್' ಸೀಕ್ವೆಲ್ ಬಗ್ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. 'ಪೀಪಲ್' ಮ್ಯಾಗಜಿನ್‌ಗೆ ನೀಡಿದ ಸಂದರ್ಶನದಲ್ಲಿ, ಬಹುನಿರೀಕ್ಷಿತ 'ಕಿಂಗ್ ಕೋನಾನ್' ಚಿತ್ರದ ಶೂಟಿಂಗ್ 2027ರಲ್ಲಿ ಶುರುವಾಗಲಿದೆ ಅಂತ ಕನ್ಫರ್ಮ್ ಮಾಡಿದ್ದಾರೆ. ಹಲವು ವರ್ಷಗಳ ಚರ್ಚೆಯ ನಂತರ ಕೊನೆಗೂ ಈ ಸಿನಿಮಾ ಸೆಟ್ಟೇರುತ್ತಿದೆ. "ಮುಂದಿನ ವರ್ಷ ನಾವು 'ಕಿಂಗ್ ಕೋನಾನ್' ಸಿನಿಮಾ ಮಾಡಲಿದ್ದೇವೆ. ಇದು ಈಗ ನಿಜವಾಗುತ್ತಿದೆ, ನನಗೆ ಬಹಳ ಖುಷಿ ಇದೆ" ಎಂದು ಅರ್ನಾಲ್ಡ್ ಹೇಳಿದ್ದಾರೆ.

ಒಂದು ದಶಕದ ಕನಸು
1982ರಲ್ಲಿ ಬಂದ 'ಕೋನಾನ್ ದಿ ಬಾರ್ಬೇರಿಯನ್' ಕಲ್ಟ್ ಕ್ಲಾಸಿಕ್ ಸಿನಿಮಾದಲ್ಲಿ ಅರ್ನಾಲ್ಡ್ ಮೊದಲ ಬಾರಿಗೆ ಕತ್ತಿ ಹಿಡಿದ ಯೋಧನಾಗಿ ಕಾಣಿಸಿಕೊಂಡಿದ್ದರು. ನಂತರ 'ಕೋನಾನ್ ದಿ ಡಿಸ್ಟ್ರಾಯರ್' ಚಿತ್ರದಲ್ಲೂ ನಟಿಸಿದ್ದರು. ಈ ಸೀಕ್ವೆಲ್‌ಗಾಗಿ ತಾನು ಕಳೆದ 10 ವರ್ಷಗಳಿಂದ ಪ್ರಯತ್ನಿಸುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ. "ಕಳೆದ ಹತ್ತು ವರ್ಷಗಳಿಂದ ನಾನು 'ಕಿಂಗ್ ಕೋನಾನ್' ಮಾಡೋಣ ಅಂತ ಹೇಳ್ತಾನೇ ಇದ್ದೀನಿ. ರಾಬರ್ಟ್ ಇ. ಹೋವರ್ಡ್ ಅವರ ಕಥೆಯನ್ನ, ಫ್ರಾಂಕ್ ಫ್ರಜೆಟ್ಟಾ ಅವರ ಆರ್ಟ್‌ವರ್ಕ್‌ನ ಚೆನ್ನಾಗಿ ಅರ್ಥ ಮಾಡಿಕೊಂಡವರು ಒಂದು ಒಳ್ಳೆ ಸ್ಕ್ರಿಪ್ಟ್ ಬರೆಯಬೇಕು ಅಂತ ಕಾಯುತ್ತಿದ್ದೆ" ಎಂದು ಅರ್ನಾಲ್ಡ್ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ತಂಡ ಮತ್ತು ಕಥೆಯ ಬಗ್ಗೆ
ಮೂಲ 'ಕೋನಾನ್' ಚಿತ್ರದ ನಿರ್ದೇಶಕ ಜಾನ್ ಮಿಲಿಯಸ್ ಈ ಹೊಸ ಚಿತ್ರಕ್ಕೆ ನಿರ್ಮಾಪಕರಾಗಿ ಬರಬೇಕು ಎಂಬುದು ನನ್ನ ಆಸೆ ಎಂದು ಅರ್ನಾಲ್ಡ್ ಹೇಳಿದ್ದಾರೆ. ಇನ್ನು, 'ಕಿಂಗ್ ಕೋನಾನ್' ಚಿತ್ರವನ್ನು ಕ್ರಿಸ್ಟೋಫರ್ ಮೆಕ್ವಾರಿ ಬರೆದು ನಿರ್ದೇಶಿಸಲಿದ್ದಾರೆ ಎಂಬುದು ಖಚಿತವಾಗಿದೆ. ಮೆಕ್ವಾರಿ ಈ ಹಿಂದೆ 'ಮಿಷನ್: ಇಂಪಾಸಿಬಲ್' ಸರಣಿಯ ಇತ್ತೀಚಿನ ಚಿತ್ರಗಳನ್ನು ನಿರ್ದೇಶಿಸಿದ್ದರು.
ಚಿತ್ರದ ಕಥೆಯ ಬಗ್ಗೆ ಸುಳಿವು ನೀಡಿದ ಅರ್ನಾಲ್ಡ್, ಈ ಸಿನಿಮಾದಲ್ಲಿ ವಯಸ್ಸಾದ ಕೋನಾನ್‌ನನ್ನು ತೋರಿಸಲಾಗುವುದು ಎಂದಿದ್ದಾರೆ. "ಹಿಂದಿನಷ್ಟು ಶಕ್ತಿ ಈಗ ಅವನಲ್ಲಿಲ್ಲ. ಈಗ ಅವನು ರಾಜ, ಹಾಗಾಗಿ ಸ್ವಲ್ಪ ಆರಾಮಾಗಿದ್ದಾನೆ. ಇದೇ ಸಮಯ ನೋಡಿ ಶತ್ರುಗಳು ಅವನನ್ನು ಮುಗಿಸಲು ಪ್ರಯತ್ನಿಸುತ್ತಾರೆ" ಎಂದು ಅರ್ನಾಲ್ಡ್ ವಿವರಿಸಿದ್ದಾರೆ. ಈ ಚಿತ್ರದ ಟೋನ್, ಕ್ಲಿಂಟ್ ಈಸ್ಟ್‌ವುಡ್ ನಟಿಸಿ, ನಿರ್ದೇಶಿಸಿದ್ದ 'ಅನ್‌ಫರ್ಗಿವನ್' ಚಿತ್ರದಂತೆಯೇ ಇರಲಿದೆ ಎಂದು ಅವರು ಹೋಲಿಸಿದ್ದಾರೆ. "ಆ ಚಿತ್ರದಂತೆಯೇ ಇರುತ್ತೆ, ಆದರೆ ಇದರಲ್ಲಿ ಭರ್ಜರಿ ಯುದ್ಧದ ದೃಶ್ಯಗಳಿರುತ್ತವೆ" ಎಂದು ಅವರು ಸೇರಿಸಿದರು.
ಇತರೆ ಜನಪ್ರಿಯ ಚಿತ್ರಗಳಲ್ಲೂ ನಟನೆ?
'ಪ್ರಿಡೇಟರ್' ಮತ್ತು 'ಕಮಾಂಡೋ' ನಂತಹ ತಮ್ಮ ಇತರ ಸೂಪರ್‌ಹಿಟ್ ಚಿತ್ರಗಳ ಸೀಕ್ವೆಲ್‌ಗಳಲ್ಲೂ ನಟಿಸುವ ಬಗ್ಗೆ ಅರ್ನಾಲ್ಡ್ ಸುಳಿವು ನೀಡಿದ್ದಾರೆ. ಈ ಚಿತ್ರಗಳಿಗಾಗಿ ಕೆಲವು ಸ್ಟುಡಿಯೋಗಳು ಹೊಸ ಸ್ಕ್ರಿಪ್ಟ್‌ಗಳೊಂದಿಗೆ ತಮ್ಮನ್ನು ಸಂಪರ್ಕಿಸಿವೆ ಎಂದು ಅವರು ತಿಳಿಸಿದ್ದಾರೆ.


