ದರ್ಶನ್ ಜೊತೆಗಿನ ಸ್ನೇಹವನ್ನು ನೆನೆಸಿಕೊಂಡ ಕಿಚ್ಚ

Kiccha Sudeep Remember Darshan Friendship
Highlights

ಕಿಚ್ಚ ಸುದೀಪ್-ದರ್ಶನ್ ನಡುವಿನ ಸ್ನೇಹ ಸ್ಯಾಂಡಲ್ ವುಡ್’ಗೆ ಹೊಸದೇನಲ್ಲ.  ದರ್ಶನ್ ಜೊತೆ ಬೈಕ್ ರೈಡ್ ಮಾಡಿದ್ದು, ಎಂಜಾಯ್ ಮಾಡಿದ್ದನ್ನು ಸುದೀಪ್ ನೆನೆಸಿಕೊಂಡಿದ್ದಾರೆ. ಮುಂಬರುವ ಚಿತ್ರ ಪೈಲ್ವಾನ್ ಬಗ್ಗೆ ಮಾತನಾಡಿದ್ದಾರೆ. 

ಕಿಚ್ಚ ಸುದೀಪ್-ದರ್ಶನ್ ನಡುವಿನ ಸ್ನೇಹ ಸ್ಯಾಂಡಲ್ ವುಡ್’ಗೆ ಹೊಸದೇನಲ್ಲ.  ದರ್ಶನ್ ಜೊತೆ ಬೈಕ್ ರೈಡ್ ಮಾಡಿದ್ದು, ಎಂಜಾಯ್ ಮಾಡಿದ್ದನ್ನು ಸುದೀಪ್ ನೆನೆಸಿಕೊಂಡಿದ್ದಾರೆ. ಮುಂಬರುವ ಚಿತ್ರ ಪೈಲ್ವಾನ್ ಬಗ್ಗೆ ಮಾತನಾಡಿದ್ದಾರೆ. 

ಟ್ವೀಟರ್‌ನಲ್ಲಿ ಎಲ್ಲರಿಗೂ ಉತ್ತರಿಸುತ್ತೀರಿ. ಹೇಗೆ ಸಮಯ ಹೊಂದಿಸಿಕೊಳ್ಳುತ್ತೀರಿ?

ಜನಕ್ಕಾಗಿ ಒಂದಷ್ಟು ಸಮಯ ಕೊಡಬೇಕು. ನನಗೆ ತುಂಬಾ ಮೆಸೇಜ್ ಬರುತ್ತವೆ. ಸಾಧ್ಯವಾದದ್ದೆಲ್ಲಕ್ಕೂ ರಿಪ್ಲೈ ಮಾಡುತ್ತೇನೆ. ನಾನು ಟ್ವೀಟ್ ಮಾಡುವುದು ಟ್ರಾವೆಲ್ ಮಾಡುವಾಗ ಮಾತ್ರ. ಒಂದು ಗಂಟೆ ಪ್ರಯಣಿಸಿದರೆ ಅರ್ಧ ಗಂಟೆ ಟ್ವಿಟ್ಟರ್‌ನಲ್ಲಿಯೇ ಇರುತ್ತೇನೆ. ಆ ವೇಳೆ ಯಾವುದೇ ಕಾಲ್ ಬಂದರೂ ರಿಸೀವ್ ಮಾಡುವುದಿಲ್ಲ. 

ದಿನ ಕಳೆದಂತೆ ಸಣ್ಣವರಾಗುತ್ತಿದ್ದೀರಿ..

ಎಸ್. ನನಗೀಗ ಇಪ್ಪತ್ತೊಂಬತ್ತು ವರ್ಷ. ನಾನಿದರಿಂದ ಯಾವತ್ತೂ ಭಡ್ತಿ ಪಡೆಯುವುದೇ ಇಲ್ಲ. ಅದು ನನ್ನ ಇಷ್ಟ. ಯಾರು ಏನೇ  ಅಂದುಕೊಳ್ಳಲಿ ನನ್ನ ಯವಸ್ಸು ೨೯ ಅಷ್ಟೇ. ಈಗಲೂ ನನ್ನ ಮನೆಯವರು ಕೆಲವು ಸಲ ಬಯ್ಯುತ್ತಾರೆ. ಲೋ ವಯಸ್ಸು ತಲೆಯಲ್ಲಿ ಇಟ್ಕೊಳೋ ಅಂತ. ಆದರೆ ನಾನು ಅವರಿಗೆ ಹೇಳುವುದು ನನ್ನ ವಯಸ್ಸು 29 ಮಾತ್ರ ಅಂತ. ಇದು ನಾವು ಹೇಗೆ ಫೀಲ್  ಮಾಡುತ್ತೇವೆ ಎನ್ನುವುದನ್ನು ಅವಲಂಬಿಸಿರುತ್ತದೆ. ವಯಸ್ಸಾಗಬೇಕು ಎಂದು ನಿರ್ಧಾರ ಮಾಡಿದರೆ ಬೇಗನೇ ಆಗಿಬಿಡುತ್ತದೆ. ಬೇಗ ಎದ್ದೇಳಬೇಕು, ವ್ಯಾಯಾಮ ಮಾಡಬೇಕು, ಚೆನ್ನಾಗಿ ತಿನ್ನಬೇಕು, ಆ್ಯಕ್ಟಿವ್ ಆಗಿ ಇರಬೇಕು. ಆಗ ವಯಸ್ಸಾಗುವುದಿಲ್ಲ. ಈಗ ಶಿವಣ್ಣನನ್ನೇ ತೆಗೆದುಕೊಳ್ಳಿ. ಇತ್ತೀಚೆಗೆ ಅವರು ಸ್ಟೇಜ್ ಹತ್ತಿ ಆರು ಗಂಟೆ ಸ್ಪಾಟ್ ಡ್ಯಾನ್ಸ್ ಮಾಡಿದರು. ಎಂಥಾ ಎನರ್ಜಿ ಅವರದು.

ಪೈಲ್ವಾನ್ ತಯಾರಿ ಏನಿದೆ?

ಸೆಕೆಂಡ್ ಹಾಫ್ ಸ್ಟಾರ್ಟ್ ಮಾಡುತ್ತಿದ್ದೇವೆ. ಸಿನಿಮಾ ಪ್ರಾರಂಭವಾಗುವುದು ಅಲ್ಲಿಂದಲೇ. ಈ ಮಧ್ಯದಲ್ಲಿ ಒಂದು ಹೆವೀ ಟ್ರೈನಿಂಗ್ ಆಗಿದೆ. ಇದಕ್ಕಾಗಿ ತೂಕ ಇಳಿಸಲು ಎರಡು ತಿಂಗಳು ಬಹಳ ಒದ್ದಾಡಿದ್ದೇನೆ. ದಿನವೂ ಸ್ವಿಮ್ ಮಾಡುತ್ತಿದ್ದೇನೆ. ಬೆಳಿಗ್ಗೆ ಬಾಕ್ಸಿಂಗ್ ಕ್ಲಾಸ್, ಸ್ವಿಮ್ಮಿಂಗ್, ಹತ್ತೂವರೆಗೆ ಜಿಮ್, ಅಲ್ಲಿಂದ ಬಂದು ಸ್ನಾನ ಮಾಡಿ ಊಟ ಮಾಡಿ ಮಲಗುತ್ತಿದ್ದೆ. ಮತ್ತೆ ನಾಲ್ಕು ಗಂಟೆಯಿಂದ ವ್ಯಾಯಾಮ ಶುರು ಮಾಡುತ್ತಿದ್ದೆ

ಹೊಸ ಬೈಕ್ ತಗೊಂಡಿದ್ದೀರಿ. ಜನರಿಗೆ ಗೊತ್ತಾಗದಂತೆ ರೈಡಿಂಗ್ ಹೋಗ್ತೀರಿ. ಹೇಗಿತ್ತು ಅನುಭವ?

ಒಳ್ಳೆಯ ಅನುಭವ. ನಾನು ಹೆಲ್ಮೆಟ್ ಹಾಕುವುದು ಜನರಿಗೆ ಗೊತ್ತಾಗಬಾರದು ಅಂತಲ್ಲ. ಹೆಲ್ಮೆಟ್ ಹಾಕುವುದು ಸುರಕ್ಷತೆಗಾಗಿ. ತಪ್ಪಿಸಿಕೊಂಡು ಓಡಾಡಲು ಅಲ್ಲ. ಅಭಿಮಾನಿಗಳು ಸಿಕ್ಕರೆ  ಪ್ರೀತಿಯಿಂದ ಮಾತನಾಡಿಸುತ್ತಾರೆ. ನಾನೂ ಮಾತಾಡುತ್ತೇನೆ. ನಾನ್ಯಾಕೆ ಅವರಿಂದ ತಪ್ಪಿಸಿಕೊಂಡು ಓಡಾಡಲಿ. ಒಂದು ಬಾರಿ ಪ್ರೀತಿ ಸಂಪಾದನೆ ಮಾಡಲು ಪರದಾಡುವುದು, ಆ ಪ್ರೀತಿ ಸಿಕ್ಕ ಮೇಲೆ ಕಿಟಕಿಗಳನ್ನು ಬಂದ್ ಮಾಡಿಕೊಂಡು ಕೂರುವುದು ನನಗೆ ಇಷ್ಟವಿಲ್ಲ. ಸೆಕ್ಯುರಿಟಿ ರೀಸನ್ ಬರುತ್ತದೆ. ಅದಕ್ಕಾಗಿ ಸ್ವಲ್ಪ ಸುರಕ್ಷೆ ನೋಡಿಕೊಳ್ಳುತ್ತೇನೆ ಅಷ್ಟೇ. ಯಾರೂ ಕೂಡ ಅಭಿಮಾನವಿಲ್ಲದೇ, ಪ್ರೀತಿ ಇಲ್ಲದೇ ಹತ್ತಿರ ಬರುವುದಿಲ್ಲ. ಒಂದು ಕಾಲದಲ್ಲಿ ನಾನು ಬಾಗಿಲು ಓಪನ್ ಮಾಡಿದರೆ ಯಾರೂ ಇರುತ್ತಿರಲಿಲ್ಲ. ಈಗ ಅಭಿಮಾನಿಗಳು ಇರುತ್ತಾರೆ. ಖುಷಿಯಾಗುತ್ತದೆ.

ದರ್ಶನ್ ಜೊತೆಗೆಲ್ಲಾ ಬೈಕ್ ರೈಡಿಂಗ್ ಹೋಗ್ತಿದ್ರಿ..

ಒಂದು ಕಾಲದಲ್ಲಿ ನಾನೂ ದರ್ಶನ್ ಎಲ್ಲಾ ಕಡೆ ಬೈಕ್‌ನಲ್ಲಿ ಸುತ್ತಾಡುತ್ತಿದ್ದೆವು. ಆಗ ನಮ್ಮನ್ನು ನೋಡಿದ ಎಲ್ಲರೂ ಇವರು ಹೀರೋಗಳಾ ಅಂತಂದುಕೊಳ್ಳುತ್ತಿದ್ದರು. ಅದೊಂದು ಒಳ್ಳೆಯ ಫೀಲಿಂಗ್. ಚೆನ್ನಾಗಿತ್ತು ಆ ದಿನಗಳು. ದರ್ಶನ್‌ಗೆ ನಿದ್ದೆ ಜಾಸ್ತಿ. ಒಮ್ಮೆ ಮಲಗಿದ ಎಂದರೆ ಎದ್ದೇಳುತ್ತಲೇ ಇರಲಿಲ್ಲ. ಅವನ ಜೊತೆಗಿನ ಸ್ನೇಹ ಮಧುರ.

ಸಿನಿಮಾಗಾಗಿ ತುಂಬಾ ಶ್ರಮ ಹಾಕುತ್ತಿದ್ದೀರಿ..

ಹಾಗೇನಿಲ್ಲ. ರೋಡಲ್ಲಿ ಒಬ್ಬ ಕೂಲಿಯವನು ನಮಗಿಂತ ಹೆಚ್ಚು ಕಷ್ಟಪಡುತ್ತಾನೆ. ನಮಗಿಂತ ಹೆಚ್ಚು ಬೆವರು ಸುರಿಸುತ್ತಾನೆ. ಅವನ ಶ್ರಮದ ಮುಂದೆ ನಮ್ಮ ಶ್ರಮ ಏನೂ ಅಲ್ಲ. ನಮಗೆ ಇದೆಲ್ಲಾ ಲಕ್. ಯಾರಿಗಾಗಿಯೋ ಅನ್ನ ಬೆಳೆಯುವ ರೈತನ ಶ್ರಮದ ಮುಂದೆ ನಮ್ಮ ಶ್ರಮ ಏನಿದೆ.. ಹಾಗಾಗಿ ಪಾಪ್ಯುಲಾರಿಟಿಯನ್ನು ಎಂಜಾಯ್ ಮಾಡಬೇಕು. ಈ ಲೈಫ್ ನಮಗೆ ಬೋನಸ್. ಇದು ಸಿಕ್ಕಿತು ಎಂದು ಮನೆಯಲ್ಲೇ ಕೂರಬಾರದು. ಹತ್ತು ಜನರನ್ನು ಹೋಗಿ ಮಾತನಾಡಿಸಬೇಕು. ಒಬ್ಬ ಅಭಿಮಾನಿ ತನ್ನ ಮನೆಯವರನ್ನು ಇಷ್ಟಪಡುತ್ತಾನೋ ಇಲ್ಲವೋ ಗೊತ್ತಿಲ್ಲ. ಆದರೆ ನಮ್ಮನ್ನು ಇಷ್ಟಪಡುತ್ತಾರೆ. ಹಾಗಾಗಿ ನಾವೂ ಅವರನ್ನು ಪ್ರೀತಿ ಮಾಡಬೇಕು. ಇಲ್ಲದೇ ಹೋದರೆ ನಮಗೆ ಬೆಲೆ ಸಿಕ್ಕುವುದಿಲ್ಲ.

ಒಬ್ಬ ಅಭಿಮಾನಿ ಬೀದಿಯಲ್ಲಿ ನಿಂತು, ನನ್ನವರಿಗಿಂತ ನಿನ್ನನ್ನು ಹೆಚ್ಚು ಇಷ್ಟಪಡುತ್ತೇನೆ. ನನ್ನ ಜೊತೆ ಹತ್ತು ನಿಮಿಷ ಮಾತನಾಡಲು ನಿನಗೇನು ದಾಡಿ ಎಂದು ಪ್ರಶ್ನೆ ಮಾಡಿದರೆ ನಾವು ಏನು ಉತ್ತರ ಕೊಡುವುದು? ಹತ್ತು ವರ್ಷದ ನಂತರ ಪರಿಸ್ಥಿತಿ  ಹೇಗಿರುತ್ತದೋ ಗೊತ್ತಿಲ್ಲ. ಆದರೆ ಈಗ ಮಾತ್ರ ನಮಗೆ ಪ್ರೀತಿ ಸಿಕ್ಕುತ್ತಿದೆ. ಅದನ್ನು ಎಂಜಾಯ್ ಮಾಡಬೇಕು. ದೇವರು ನಮಗೆ ಇದನ್ನೆಲ್ಲಾ ಕೊಟ್ಟಿದ್ದಾನೆ. ಇದರ ಮೇಲೆ ನಾವು ದೇವರನ್ನು  ಇನ್ನೇನನ್ನೂ ಕೇಳಬಾರದು. ಏನಾದರೂ ಬೇಕು ಎಂದರೆ ಸಾಧನೆ ಮಾಡಬೇಕು. ನಾನಂತೂ ಈಗ ನನಗಾಗಿ ದೇವರನ್ನು ಪ್ರಾರ್ಥನೆ ಮಾಡುವು ದನ್ನು ಬಿಟ್ಟಿದ್ದೇನೆ. ನಾನೀಗ ಪ್ರಾರ್ಥನೆ
ಮಾಡುವುದು ಬೇರೆಯವರಿಗಾಗಿ ಮಾತ್ರ.

ಈ ಸಂತೃಪ್ತಿಯ ಮಟ್ಟ ತಲುಪುವುದು ಕಷ್ಟ ಅಲ್ಲವೇ?

ಕೆಲವರ ಸಿನಿಮಾ ನೋಡಿದರೆ ಭಯವಾಗುತ್ತೆ. ಅವರ ಒದ್ದಾಟ, ಶ್ರಮ ಎಲ್ಲವನ್ನೂ ನೋಡಿದರೆ ಜನ ನಮ್ಮನ್ನು ಹೇಗೆ ಒಪ್ಪಿಕೊಂಡರು ಎನ್ನಿಸುತ್ತೆ. ಕೆಲವರನ್ನು ನೋಡಿದರೆ ನಮಗಿಂತಲೂ ಚೆನ್ನಾಗಿದ್ದಾನೆ, ಚೆನ್ನಾಗಿ ಡ್ಯಾನ್ಸ್ ಮಾಡುತ್ತಾನೆ, ಮೈಕಟ್ಟು ಚೆನ್ನಾಗಿದೆ. ಚೆನ್ನಾಗಿ ಆ್ಯಕ್ಟ್ ಮಾಡುತ್ತಾನೆ. ಆದರೆ ಸಿನಿಮಾಗಳು ಓಡುತ್ತಿಲ್ಲ. ಇದನ್ನೆಲ್ಲಾ ನೋಡಿದರೆ ನಮ್ಮ ಅದೃಷ್ಟವೇ ನಮ್ಮನ್ನು ಗೆಲ್ಲಿಸಿದೆ ಅನ್ನಿಸುತ್ತದೆ. ಹಾಗಾಗಿ ಸಂತೃಪ್ತಿ ತನ್ನಿಂದ ತಾನೇ ಬರುತ್ತದೆ.

ಕಿರುತೆರೆಯಲ್ಲಿ ಬಿಗ್‌ಬಾಸ್ ಹೊರತಾಗಿ ಬೇರೆ ಕಾರ್ಯಕ್ರಮ ಮಾಡುತ್ತೀರಾ?

ಸಹವಾಸವೇ ಬೇಡ. ನನಗೆ ಅದನ್ನು ಹ್ಯಾಂಡಲ್ ಮಾಡಲು ಬರುವುದಿಲ್ಲ. ಬಿಗ್‌ಬಾಸ್ ಮಾಡುತ್ತೇನೆ ಅಷ್ಟೇ. ಬಿಗ್‌ಬಾಸ್ ಹೊರತಾಗಿ ಬೇರೆ ಆಫರ್‌ಗಳು ಬಂದಿವೆ. ಸಾಕಷ್ಟು ದೊಡ್ಡ ಆಫರ್ಗಳು ಅವು. ಆದರೆ ಅದನ್ನು ಒಪ್ಪಿಕೊಂಡರೆ ಬಿಗ್‌ಬಾಸ್‌ಗೆ ಮೋಸ ಮಾಡಿದಂತೆ ಆಗುತ್ತದೆ. ಹಾಗಾಗಿ ಬೇಡ. ಬಿಗ್‌ಬಾಸ್‌ಗೆ ತುಂಬಾ ಅಭಿಮಾನಿಗಳಿದ್ದಾರೆ. ವರ್ಷದವರೆಗೂ ಕಾಯುತ್ತಾರೆ.  ಅಪಾರವಾದ ಅಭಿಮಾನ ತೋರುತ್ತಾರೆ ಅದನ್ನೆಲ್ಲಾ ನೋಡಿದಾಗ ದುಡ್ಡಿಗಾಗಿ ಅವರ ಅಭಿಮಾನಕ್ಕೆ ಭಂಗ ಮಾಡಬಾರದು ಮಾಡಬಾರದು ಎನ್ನಿಸುತ್ತದೆ. ಹಾಗಾಗಿ ಬಿಗ್‌ಬಾಸ್ ಬಿಟ್ಟು ಬೇರೆ  ಏನೂ ಮಾಡುವುದಿಲ್ಲ. 

ಚೆನ್ನಾಗಿ ಮಾತನಾಡುತ್ತೀರಿ. ಓದುವ ಹವ್ಯಾಸ ಇದ್ಯಾ?

ಓದುವ ಹವ್ಯಾಸವೇ ಇಲ್ಲ. ಒಂದು ಒಂದೂವರೆ ಗಂಟೆ ಕೂತು ಕತೆ ಕೇಳುತ್ತೇನೆ ಅಷ್ಟೇ. ಓದಿ ಎಂದರೆ ಕಷ್ಟವಾಗುತ್ತೆ. ನಾನು ಒಬ್ಬರನ್ನು ನೋಡಿದರೆ ಚೆನ್ನಾಗಿ ಜ್ಞಾಪಕ ಇಟ್ಟುಕೊಳ್ಳುತ್ತೇನೆ. ಆದರೆ ಅವರ ಹೆಸರನ್ನು ಜ್ಞಾಪಕ ಇಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ. ನನಗೆ ಹೆಸರು ಮತ್ತು ಬರ್ತ್‌ಡೇಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಕಷ್ಟ. ನನ್ನ ಬಳಿ ಬಂದು ಬರ್ತ್‌ಡೇಗೆ ವಿಶ್ ಮಾಡಿದರೆ ಕೋಪ ಬರುತ್ತದೆ. ಮಿಕ್ಕ ದಿನ ಬಿಟ್ಟು ಹುಟ್ಟಿದ ದಿನಕ್ಕೆ ಪ್ರಾಮುಖ್ಯತೆ  ಕೊಡುವುದು ಸರಿಯಲ್ಲ. ಎಲ್ಲಾ ದಿನಗಳೂ ಮುಖ್ಯವೇ. ನಮ್ಮ ಮುಂದೆ ಯಾರಿರುತ್ತಾರೋ ಅವರಿಗೆ ಪ್ರಾಮುಖ್ಯತೆ ಕೊಡಬೇಕು. ಹಾಗೆ ಯಾವ ದಿನವಿದೆಯೋ ಆ ದಿನಕ್ಕೆ ಪ್ರಾಮುಖ್ಯತೆ ಕೊಡಬೇಕು. ನಾನು ವರ್ಕ್‌ನಲ್ಲಿ ಇದ್ದಾಗ ಯಾರ ಫೋನ್‌ಗಳನ್ನೂ ರಿಸೀವ್ ಮಾಡುವುದಿಲ್ಲ. ನಮ್ಮ ಮುಂದೆ ಇರುವವರಿಗೆ ಬೆಲೆ ಕೊಡಬೇಕು. ಅವರ ಸಮಯಕ್ಕೂ ಬೆಲೆ ಇರುತ್ತದೆ ಅಲ್ಲವೇ.?

 

loader