ಅಪಾರ ಅಭಿಮಾನಿಗಳನ್ನು ಗಳಿಸಿರುವ ಕಿಚ್ಚ ಸುದೀಪ್, ಟ್ವೀಟ್ ಮೂಲಕವೇ ಪ್ರತಿಯೊಬ್ಬ ಅಭಿಮಾನಿಗೂ ಪ್ರತಿಕ್ರಿಯೆ ನೀಡುತ್ತಾರೆ. ಇದೀಗ ಪುಟ್ಟ ಅಭಿಮಾನಿಯ ಅಕಾಲಿಕ ನಿಧನಕ್ಕೆ ಸುದೀಪ್ ಮರುಗಿದ್ದು ಹೀಗೆ...
ವಯಸ್ಸಿನ ಹಂಗಿಲ್ಲದೇ ಅಪಾರ ಅಭಿಮಾನಿಗಳ ಪ್ರೀತಿ ಗಳಿಸಿರುವ ಕಿಚ್ಚ ಇದೀಗ ಪುಟ್ಟ ಅಭಿಮಾನಿಯೊಬ್ಬರನ್ನು ಕಳೆದುಕೊಂಡು ದುಃಖದಲ್ಲಿದ್ದಾರೆ. ಈ ಮೃತ ಬಾಲಕ ಬೇರೆ ಯಾರೂ ಅಲ್ಲ ‘ಆಟೋಗ್ರಾಫ್ ಪ್ಲೀಸ್’ಸಿನಿಮಾ ನಿರ್ದೇಶಕ ಭಾರತಿ ಶಂಕರ್ ಮಗ ಆದಿತ್ಯ. ಕಾರಣಾಂತರಗಳಿಂದ ಈ ಸಿನಿಮಾ ಚಿತ್ರ ತೆರೆ ಕಾಣಲೇ ಇಲ್ಲ.
ಡಿಎಂಡಿ ಎಂಬ ವಿರಳಾತೀತ ವಿರಳ ರೋಗದಿಂದ ಆದಿತ್ಯ ಬಳಲುತ್ತಿದ್ದ. ದೇಹದ ಸ್ನಾಯುಗಳನ್ನು ದುರ್ಬಲ ಮಾಡುವುದಲ್ಲದೇ, ಈ ರೋಗ ಪೀಡಿತರು ಒಂದೆಡೆ ಹೆಚ್ಚು ಕೂರಲೂ ಅಶಕ್ತರಾಗಿರುತ್ತಾರೆ. ಕೆಲ ವರ್ಷಗಳಿಂದ ಆದಿತ್ಯ ಈ ರೋಗದಿಂದ ಬಳಲುತ್ತಿದ್ದಾನೆ.
2014ರಲ್ಲಿ ಕರ್ನಾಟಕ ಪ್ರೀಮಿಯರ್ ಲೀಗ್ ಪಂದ್ಯ ಮೈಸೂರಿನಲ್ಲಿ ನಡೆದಾಗ ಈ ಬಾಲಕ ಸುದೀಪ್ ಅವರನ್ನು ಭೇಟಿಯಾಗಿದ್ದ. ಆಗನಿಂದಲೂ ಕಿಚ್ಚನ ಬಿಗ್ ಫ್ಯಾನ್ ಈ ಬಾಲಕ. ಅಷ್ಟೇ ಅಲ್ಲದೆ ತಮ್ಮಗಿರುವ ಎಲ್ಲ ಆಸೆಗಳನ್ನೂ ಸುದೀಪ್ ಮುಂದೆ ಬಿಚ್ಚಿಟ್ಟಿದ್ದನಂತೆ ಈ ಆದಿತ್ಯ. ಆದಿತ್ಯ ನಿಧನರಾದ ಸುದ್ದಿ ಕೇಳಿದ ಸುದೀಪ್ ತಮ್ಮ ಟ್ವಿಟರ್‌ನಲ್ಲಿ 'ನನಗೆ ಇದನ್ನು ಕೇಳಿ ತುಂಬಾ ಬೇಜಾರಾಗಿದೆ. ಆ ಪುಟ್ಟ ಮಗುವಿನೊಂದಿಗೆ ಸುಂದರ ಕ್ಷಣಗಳನ್ನು ಕಳೆದಿದ್ದನ್ನು ಎಂದಿಗೂ ಮರೆಯುವುದಿಲ್ಲ. ಆ ವಂಡರ್‌ಫುಲ್ ಸೋಲ್ ಗೆ ಶಾಂತಿ ಸಿಗಲಿ,’ಎಂದು ಪ್ರಾರ್ಥಿಸಿದ್ದಾರೆ.
